ಶನಿವಾರ, ಮೇ 21, 2022
25 °C
ಜಾಗ ವಶಕ್ಕೆ ಪಡೆದ ಪೊಲೀಸ್‌ ಇಲಾಖೆ

ಮಂಡ್ಯ: ಕಸಾಪ–ಪೊಲೀಸರ ನಡುವೆ ಜಟಾಪಟಿ, ರಾತ್ರೋರಾತ್ರಿ ತಲೆ ಎತ್ತಿದ ವಿಶ್ರಾಂತಿ ಧಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್‌ ಗ್ರಂಥಾಲಯ, ನಿವೃತ್ತ ಪೊಲೀಸ್‌ ಅಧಿಕಾರಿಗಳ ಸಂಘದ ಕಚೇರಿ ಆವರಣ ಸೋಮವಾರ ರಾತ್ರೋರಾತ್ರಿ ‘ಪೊಲೀಸ್‌ ವಿಶ್ರಾಂತಿ ಮತ್ತು ಆರೋಗ್ಯ ಧಾಮ’ವಾಗಿ ತಲೆ ಎತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಖಾಲಿ ಇದ್ದ ಸರ್ಕಾರಿ ಕಟ್ಟಡವನ್ನು 2013ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಚಟುವಟಿಕೆಗಳಿಗೆ ನೀಡಲಾಗಿತ್ತು. ಕಸಾಪ ಅಲ್ಲಿ ವಾಚನಾಲಯ ಸ್ಥಾಪಿಸಿತ್ತು. ನಂತರ ಅಲ್ಲೇ ಇದ್ದ ಇನ್ನೊಂದು ಕೊಠಡಿಯನ್ನು ಪೊಲೀಸ್‌ ಅಧಿಕಾರಿಗಳ ಸಂಘಕ್ಕೂ ನೀಡಲಾಗಿತ್ತು. ಇಲ್ಲಿಯವರೆಗೂ ಎರಡೂ ಸಂಘಟನೆಗಳು ಅಲ್ಲಿದ್ದವು.

ಈಚೆಗೆ ಕಸಾಪ ಪದಾಧಿಕಾರಿಗಳು ಕಟ್ಟಡದ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಸಣ್ಣದೊಂದು ವೇದಿಕೆ ನಿರ್ಮಿಸಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಅದಕ್ಕಾಗಿ ಕಚೇರಿ ಮುಂದಿನ ಬೇಲಿ ತೆರವುಗೊಳಿಸಿದ್ದರು. ಇದಕ್ಕೆ ನಿವೃತ್ತ ಪೊಲೀಸ್‌ ಅಧಿಕಾರಿಗಳ ಸಂಘದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು, ಸರ್ಕಾರಿ ಜಾಗವನ್ನು ಕಸಾಪ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.

ಇಡೀ ಆವರಣ ಗೊಂದಲಗಳಿಗೆ ಕಾರಣವಾದ ಹಿನ್ನೆಲೆಯಲ್ಲಿ ಕಸಾಪ ಹಾಗೂ ನಿವೃತ್ತ ಪೊಲೀಸರ ಸಂಘ ಎರಡೂ ಕಚೇರಿಗಳನ್ನು ಪೊಲೀಸ್‌ ಇಲಾಖೆ ವಶಕ್ಕೆ ಪಡೆದಿದೆ. ಒಂದು ಡಿಎಆರ್‌ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದ್ದು ಕಸಾಪ ವಾಚನಾಲಯ ಜಾಗ, ನಿವೃತ್ತರ ಪೊಲೀಸರ ಸಂಘದ ಕಚೇರಿ ಎರಡನ್ನೂ ವಶಪಡಿಸಿಕೊಳ್ಳಲಾಗಿದೆ.

ಹಲವು ಅನುಮಾನ: ಆವರಣ ವಶಕ್ಕೆ ಪಡೆದ ಪೊಲೀಸರು ಅಲ್ಲಿ ‘ಪೊಲೀಸ್‌ ವಿಶ್ರಾಂತಿ ಮತ್ತು ಆರೋಗ್ಯ ಧಾಮ’ ಎಂದು ಫಲಕ ಹಾಕಿರುವುದು ಅನುಮಾನಗಳಿಗೆ ಕಾರಣವಾಗಿದೆ. ಕಟ್ಟಡ ಕಸಾಪಕ್ಕೂ ಸೇರಿಲ್ಲ, ನಿವೃತ್ತ ಪೊಲೀಸರ ಸಂಘಕ್ಕೂ ಸೇರಿಲ್ಲ. ಆದರೆ ನಿವೃತ್ತ ಪೊಲೀಸರ ಸಂಘದ ಆರೋಗ್ಯಧಾಮ ಎಂಬರ್ಥದಲ್ಲಿ ಫಲಕ ಹಾಕಿರುವುದು ವಿವಾದಾತ್ಮಕವಾಗಿದೆ. ಪೊಲೀಸ್‌ ಇಲಾಖೆಯು ನಿವೃತ್ತ ಸಿಬ್ಬಂದಿಯ ಪರ ನಿಂತಿದೆ ಎಂಬ ಆರೋಪ ವ್ಯಕ್ತವಾಗಿದೆ.

‘ವಾಚನಾಲಯ ಜಾಗದಲ್ಲಿ ಕಸಾಪ ಮುಖಂಡರು ಬೇಲಿ ತೆರವುಗೊಳಿಸಿದ್ದು, ವೇದಿಕೆ ನಿರ್ಮಾಣ ಮಾಡಿದ್ದು ತಪ್ಪು. ಆದರೆ ಪೊಲೀಸ್‌ ಇಲಾಖೆಯು ಇಲ್ಲದ ಆರೋಗ್ಯಧಾಮ ಹುಟ್ಟುಹಾಕಿದ್ದು ಏಕೆ? ಆರೋಗ್ಯಧಾಮದ ದಾಖಲೆ ಇದ್ದರೆ ತೋರಿಸಲಿ. ಈ ವಿಷಯದಲ್ಲಿ ಪೊಲೀಸರು ಗೊಂದಲ ಸೃಷ್ಟಿಸಬಾರದು’ ಎಂದು ಸಾಹಿತಿ ಜಿ.ಟಿ.ವೀರಪ್ಪ ಹೇಳಿದರು.

ಕನ್ನಡದ ಮೇಲೆ ದೌರ್ಜನ್ಯ: ಕಸಾಪ ಪದಾಧಿಕಾರಿಗಳು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವ ಸರ್ಕಾರದ ಅಂಗಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್‌ ವಿರುದ್ಧ ಪೊಲೀಸರು ಬಲಪ್ರಯೋಗ ಮಾಡುತ್ತಿದ್ದಾರೆ. ಇಲ್ಲಸಲ್ಲದ ಆರೋಪ ಮಾಡಿ ಪ್ರಕರಣ ದಾಖಲು ಮಾಡುವ ಬೆದರಿಕೆ ಹಾಕುತ್ತಿದ್ಧಾರೆ. ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ವಾಚನಾಲಯ ಉಳಿಸಬೇಕು’ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ್ ಚಾಮಲಾಪುರ ಒತ್ತಾಯಿಸಿದರು.

‘ಮೀರಾ ಶಿವಲಿಂಗಯ್ಯ ಅವರು ಅಧ್ಯಕ್ಷರಾಗಿದ್ದಾಗ ಆ ಜಾಗದಲ್ಲಿ ವಾಚನಾಲಯ ಉದ್ಘಾಟನೆಗೊಂಡಿತ್ತು. ನಂತರ ನಿವೃತ್ತ ಪೊಲೀಸ್‌ ಅಧಿಕಾರಿಗಳ ಸಂಘಕ್ಕೂ ಜಾಗ ನೀಡಲಾಯಿತು. ಇದು ಸರ್ಕಾರಿ ಜಾಗವಾಗಿದೆ, ಪೊಲೀಸ್‌ ಇಲಾಖೆಗೆ ಸೇರಿದ ಬಗ್ಗೆ ದಾಖಲೆಗಳಿಲ್ಲ’ ಎಂದರು.

ಸಾಹಿತಿಗಳಾದ ತೈಲೂರು ವೆಂಕಟಕೃಷ್ಣ, ಡಾ.ಪ್ರದೀಪ್‌ ಕುಮಾರ್‌ ಹೆಬ್ರಿ, ಮಾಜಿ ಕಸಾಪ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಪದಾಧಿಕಾರಿಗಳಾದ ಬಿ.ಎಂ.ಅಪ್ಪಾಜಪ್ಪ, ಎಂ.ವಿ.ಧರಣೇಂದ್ರಯ್ಯ ಇದ್ದರು.

ಆರೋಗ್ಯಧಾಮ ಫಲಕ ತೆಗೆಸುವೆ: ಎಸ್ಪಿ
‘ಅದು ಪೊಲೀಸ್‌ ಇಲಾಖೆಯ ಸ್ವತ್ತಾಗಿದ್ದು ತಾತ್ಕಾಲಿಕವಾಗಿ ಕಸಾಪ ವಾಚನಾಲಯ ಹಾಗೂ ನಿವೃತ್ತ ಪೊಲೀಸ್‌ ಅಧಿಕಾರಿಗಳ ಸಂಘಕ್ಕೆ ನೀಡಲಾಗಿತ್ತು. ಕಸಾಪ ಸದಸ್ಯರು ನಿಯಮಬಾಹಿರವಾಗಿ ಕಾಂಪೌಂಡ್‌ ಒಡೆದು, ವೇದಿಕೆ ನಿರ್ಮಾಣ ಮಾಡಿಕೊಂಡಿದ್ದಕ್ಕೆ ಅದನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲಿ ಆರೋಗ್ಯ ಮತ್ತು ವಿಶ್ರಾಂತಿ ಧಾಮ ಇರಲಿಲ್ಲ. ಆ ಫಲಕ ತೆಗೆಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ತಿಳಿಸಿದರು.

ಉಪವಾಸ ಸತ್ಯಾಗ್ರಹ: ಕಸಾಪ
‘ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಚಿವ ಕೆ.ಸಿ.ನಾರಾಯಣಗೌಡ ಮಧ್ಯ ಪ್ರವೇಶ ಮಾಡಿ ಸರ್ಕಾರಿ ಜಾಗದಲ್ಲಿ ಕನ್ನಡ ಚಟುವಟಿಕೆ ನಡೆಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ವಾಚನಾಲಯ ತೆರವುಗೊಳಿಸಲು ಯತ್ನಿಸುತ್ತಿರುವ ಪೊಲೀಸ್ ಇಲಾಖೆಯ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುತ್ತೇವೆ’ ಎಂದು ಕಸಾಪ ಪದಾಧಿಕಾರಿಗಳು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು