ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 ಮರೆಯುವ ಮುನ್ನ | ಮಂಡ್ಯ: ಹೆಚ್ಚಾಯ್ತು ರೈತ ಹೋರಾಟದ ಕಿಚ್ಚು

ಭ್ರೂಣ ಹತ್ಯೆಯ ಕಳಂಕ; ಸಂಕೀರ್ತನಾ ಯಾತ್ರೆ ಸದ್ದು
ಆರ್‌. ಜಿತೇಂದ್ರ
Published 30 ಡಿಸೆಂಬರ್ 2023, 6:52 IST
Last Updated 30 ಡಿಸೆಂಬರ್ 2023, 6:52 IST
ಅಕ್ಷರ ಗಾತ್ರ

ಮಂಡ್ಯ: ಸಕ್ಕರೆ ನಾಡಿಗೆ 2023ರ ವರ್ಷ ಸಿಹಿ–ಕಹಿ ಎರಡನ್ನೂ ಹೊತ್ತು ತಂದಿತ್ತು. ಕೃಷಿಯೇ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಈ ವರ್ಷ ಬರಗಾಲದಿಂದಾಗಿ ರೈತರು ಸಂಕಷ್ಟ ಅನುಭವಿಸಿದ್ದು, ಕಾವೇರಿ ಕಿಚ್ಚು ಹೆಚ್ಚಾಯಿತು.

ಕಾವೇರಿ ಮಂಡ್ಯ ಜಿಲ್ಲೆಯ ಜನರ ಜೀವನಾಡಿ. ನದಿಯಲ್ಲಿ ಸಮೃದ್ಧವಾಗಿ ನೀರು ಹರಿದಷ್ಟು ಹೊಲಗಳಲ್ಲಿನ ಫಸಲು ಸಮೃದ್ಧವಾಗಿದ್ದು, ಜಿಲ್ಲೆಯ ಜನರ ಬದುಕು ಹಸನಾಗಿರುತ್ತದೆ. ಆದರೆ ಈ ವರ್ಷ ವರುಣ ಮುನಿಸಿಕೊಂಡ ಕಾರಣಕ್ಕೆ ಜೂನ್‌ನಿಂದಲೇ ಜಿಲ್ಲೆಯಲ್ಲಿ ಬರದ ಛಾಯೆ ಕಾಣಿಸಿಕೊಂಡಿತ್ತು. ಮುಂಗಾರು ವೈಫಲ್ಯದಿಂದಾಗಿ ಜಿಲ್ಲೆಯ ಏಳು ತಾಲ್ಲೂಕುಗಳು ಬರಪೀಡಿತವಾದವು. ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಅರ್ಪಿಸುವ ಯೋಗ ಕೂಡಿ ಬರಲಿಲ್ಲ. ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದಾಗ್ಯೂ ತಮಿಳುನಾಡಿಗೆ ನಿರಂತರ ನೀರು ಹರಿಸಬೇಕೆಂಬ ನ್ಯಾಯಾಧೀಕರಣ ಹಾಗೂ ನ್ಯಾಯಾಲಯದ ಆದೇಶಗಳು ರೈತರನ್ನು ಬೀದಿಗೆ ಇಳಿಯುವಂತೆ ಮಾಡಿದವು. ಜುಲೈ ಅಂತ್ಯದಿಂದಲೇ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು ಸೇರಿದಂತೆ ಎಲ್ಲೆಡೆ ರೈತರು ಪ್ರತಿಭಟನೆ ಆರಂಭಿಸಿದರು. ಬಂದ್ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನವೂ ನಡೆಯಿತು.

ಮಂಡ್ಯದ ಸರ್‌.ಎಂ. ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಆರಂಭಿಸಿದ ಹೋರಾಟವು ಈಗಾಗಲೇ ನೂರು ದಿನ ಪೂರೈಸಿ ವರ್ಷಾಂತ್ಯದಲ್ಲೂ ಮುಂದುವರಿದಿದೆ. ಈ ನಡುವೆ, ಸಮಿತಿಯು ಆರಂಭಿಸಿದ ಉಪವಾಸ ಸತ್ಯಾಗ್ರಹವೂ ತಿಂಗಳು ಪೂರೈಸಿದ್ದು, ಜಿಲ್ಲೆ ಮಾತ್ರವಲ್ಲದೇ ನಾಡಿನ ವಿವಿಧ ಭಾಗಗಳಿಂದಲೂ ಜನ ಭಾಗಿಯಾಗಿ ಬೆಂಬಲ ಸೂಚಿಸಿದ್ದಾರೆ. ಆದಾಗ್ಯೂ ಸರ್ಕಾರ ತಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ ಎನ್ನುವುದು ಸಮಿತಿ ಸದಸ್ಯರ ಆಕ್ಷೇಪ.

ಬರದ ಹಿನ್ನೆಲೆಯಲ್ಲಿ ಈ ವರ್ಷ ಕೃಷಿ ಚಟುವಟಿಕೆ ಉತ್ತಮವಾಗಿಲ್ಲ. ಕಟ್ಟು ನೀರು ಪದ್ಧತಿ ಅನುಸರಿಸಿ ರೈತರು ಭತ್ತ ಬೆಳೆದಿದ್ದಾರೆ. ರಾಗಿ ಫಸಲು ಅಷ್ಟು ಆಶಾದಾಯಕವಾಗಿಲ್ಲ. ಕೆಆರ್‌ಎಸ್‌ ಒಣಗಿಸುವ ಕಾರಣ ಕಬ್ಬಿಗೆ ನೀರಿನ ಕಥೆ ಏನು ಎಂಬ ಚಿಂತೆ ರೈತರದ್ದು.

ಸಂಕೀರ್ತನಾ ಯಾತ್ರೆ ಸದ್ದು: ಡಿ. 24ರಂದು ಶ್ರೀರಂಗಪಟ್ಟಣದಲ್ಲಿ ನಡೆದ ಹನುಮಾಮಾಲೆ ವಿಸರ್ಜನೆ ಹಾಗೂ ಸಂಕೀರ್ತನಾ ಯಾತ್ರೆ ಇನ್ನೂ ಸದ್ದು ಮಾಡತೊಡಗಿದೆ. ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವು ಸಂಘಟನೆಯ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿ ಆಯಿತು. ಈ ಸಂದರ್ಭ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ರ ಪ್ರಚೋದನಾಕಾರಿ ಭಾಷಣವು ಮುಸ್ಲಿಂ ಹಾಗೂ ಪ್ರಗತಿಪರ ಸಂಘಟನೆಗಳನ್ನು ಕೆರಳಿಸಿದ್ದು, ಶ್ರೀರಂಗಪಟ್ಟಣದಲ್ಲಿ ಪ್ರಕರಣವೂ ದಾಖಲಾಯಿತು. ಜಿಲ್ಲೆಯಾದ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.

ಪ್ರತಿಭಟನೆಗಳ ಕಾವು:
ಜಿಲ್ಲೆಯಲ್ಲಿ ಈ ವರ್ಷ ಕಾವೇರಿ ಹೋರಾಟದ ಜೊತೆಜೊತೆಗೆ ಸಾಲು ಪ್ರತಿಭಟನೆಗಳು ಗಮನ ಸೆಳೆದವು. ಸೇವೆ ಕಾಯಂಗೆ ಒತ್ತಾಯಿಸಿ ಜಿಲ್ಲೆಯ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಸರ್‌ ಎಂ.ವಿ. ಪ್ರತಿಮೆ ಎದುರು ನಡೆಸಿರುವ ಧರಣಿಯು ಈಗಾಗಲೇ ತಿಂಗಳು ತಲುಪಿದ್ದು, ಇನ್ನೂ ಮುಂದುವರಿದಿದೆ. ರೈತರ ಕುರಿತು ಕೃಷಿ ಸಚಿವರ ಉಡಾಫೆಯ ಹೇಳಿಕೆ ಅನ್ನದಾತರನ್ನು ಕೆರಳಿಸಿದ್ದು, ಇನ್ನೂ ಪ್ರತಿಭಟನೆಗಳು ಮುಂದುವರಿದಿವೆ.

ವನ್ಯಜೀವಿ ಸಂಘರ್ಷ:
ಜಿಲ್ಲೆಯಲ್ಲಿ ಬರ ಹೆಚ್ಚಿದಷ್ಟು ವನ್ಯಜೀವಿ ಸಂಘರ್ಷವೂ ಹೆಚ್ಚಾಗುತ್ತಲೇ ಇದೆ. ಕಾವೇರಿ ವನ್ಯಜೀವಿಧಾಮಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿತ್ತು. ಕಾಡಾನೆಗಳ ಹಿಂಡು ಮದ್ದೂರು, ಮಳವಳ್ಳಿ, ಹಲಗೂರು, ಶ್ರೀರಂಗಪಟ್ಟಣದವರೆಗೂ ಓಡಾಡುತ್ತ ಆತಂಕ ಮೂಡಿಸಿದವು. ಇದರಿಂದಾಗಿ ಸಾಕಷ್ಟು ಬೆಳೆ ನಷ್ಟವೂ ಆಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಯಿತು. ಅನೇಕ ಸಾವು–ನೋವು ಉಂಟಾಯಿತು. ನ.19ರಂದು ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಬಳಿಯ ಲಾಳನಕೆರೆ– ಪೀಹಳ್ಳಿ ಬಳಿ ಭಾನುವಾರ ಕೃಷಿ ಕೆಲಸಕ್ಕೆ ತೆರಳುತ್ತಿದ್ದ ಲಾಳನೆಕೆರೆ ಗ್ರಾಮದ ಸಾಕಮ್ಮ ಕಾಡಾನೆ ದಾಳಿಯಿಂದ ಸ್ಥಳದಲ್ಲೇ ಮೃತಪಟ್ಟರು.

ಚಿರತೆಗಳ ಓಡಾಟವು ಈ ವರ್ಷ ಜನರನ್ನು ಆತಂಕಕ್ಕೆ ದೂಡಿತು. ಜೂನ್‌–ಜುಲೈನಲ್ಲಿ ಜಿಲ್ಲೆಯ ‍ಪ್ರಮುಖ ಪ್ರವಾಸಿ ತಾಣವಾಗಿರುವ ಕೆಆರ್‌ಎಸ್‌ ಸುತ್ತಲೂ ಚಿರತೆ ಓಡಾಟ ಕಂಡುಬಂದ ಹಿನ್ನೆಲೆಯಲ್ಲಿ 15 ದಿನಕ್ಕೂ ಹೆಚ್ಚು ಕಾಲ ಪ್ರವಾಸಿ ತಾಣ ಬಂದ್ ಆಗಿದ್ದು, ₹60 ಲಕ್ಷಕ್ಕೂ ಅಧಿಕ ನಷ್ಟವಾಯಿತು. ಬೃಂದಾವನ ನೋಡಲೆಂದು ಬಂದ ಪ್ರವಾಸಿಗರೂ ನಿರಾಸೆ ಅನುಭವಿಸಿದರು.

ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಚಳವಳಿಯು ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು
ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಚಳವಳಿಯು ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು
ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ನಡೆದಿದೆ ಎನ್ನಲಾದ ಹಾಡ್ಯ–ಹುಳ್ಳೇನಹಳ್ಳಿ ನಡುವೆ ಇರುವ ಆಲೆಮನೆ
ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ನಡೆದಿದೆ ಎನ್ನಲಾದ ಹಾಡ್ಯ–ಹುಳ್ಳೇನಹಳ್ಳಿ ನಡುವೆ ಇರುವ ಆಲೆಮನೆ

ಭ್ರೂಣಹತ್ಯೆಯ ನಂಟು ಜಿಲ್ಲೆಯಲ್ಲಿ ಈ ವರ್ಷದ ನವೆಂಬರ್‌ನಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆಯ ಸಂಗತಿ ಹೆಚ್ಚು ಸದ್ದು ಮಾಡಿತು. ಮಂಡ್ಯ ತಾಲ್ಲೂಕಿನ ಹಾಡ್ಯ–ಹುಳ್ಳೇನಹಳ್ಳಿ ನಡುವಿನ ಆಲೆಮನೆಯೊಂದರಲ್ಲಿ ಸ್ಕ್ಯಾನಿಂಗ್‌ ಯಂತ್ರ ಇಟ್ಟುಕೊಂಡು ಗರ್ಭಿಣಿಯರ ತಪಾಸಣೆ ಮೂಲಕ ಲಿಂಗ ಪತ್ತೆ ಹಾಗೂ ಹೆಣ್ಣುಭ್ರೂಣದ ಹತ್ಯೆ ನಡೆದಿತ್ತು ಎನ್ನುವ ಸಂಗತಿ ಜನರನ್ನು ಬೆಚ್ಚಿ ಬೀಳಿಸಿತು. ನಂತರದಲ್ಲಿ ಸಚಿವರು ವಿವಿಧ ಆಯೋಗಗಳ ಅಧ್ಯಕ್ಷರು ವಿಪಕ್ಷ ನಾಯಕರಾದಿಯಾಗಿ ಎಲ್ಲರೂ ಭೇಟಿ ಕೊಟ್ಟು ಘಟನೆ ಖಂಡಿಸಿದರು. ತಡವಾಗಿ ಎಚ್ಚೆತ್ತುಕೊಂಡ ಅಧಿಕಾರಿಗಳು ಜಿಲ್ಲೆಯಲ್ಲಿನ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳ ಶೋಧ ಆರಂಭಿಸಿದ್ದು ಈಗಾಗಲೇ ಹಲವು ಕೇಂದ್ರಗಳ ಬಾಗಿಲು ಮುಚ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT