ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರರಾಜ್ಯ: ಬೇಡಿಕೆ ಕಳೆದುಕೊಂಡ ಮಂಡ್ಯ ಬೆಲ್ಲ

‘ಆತ್ಮನಿರ್ಭರ ಭಾರತ’ಕ್ಕೆ ಮಂಡ್ಯ ಬೆಲ್ಲ ಆಯ್ಕೆ, ರಾಸಾಯನಿಕ ಬಳಕೆಗೆ ಮುಕ್ತಿ ಯಾವಾಗ?
Last Updated 27 ಜನವರಿ 2021, 19:30 IST
ಅಕ್ಷರ ಗಾತ್ರ

ಮಂಡ್ಯ: ಆತ್ಮನಿರ್ಭರ ಭಾರತ ಯೋಜನೆಯಡಿ ಕೇಂದ್ರ–ರಾಜ್ಯ ಸರ್ಕಾರಗಳು ಆಲೆಮನೆಗಳಿಗೆ ಪುನಶ್ಚೇತನ ನೀಡಲು ಮುಂದಾಗಿವೆ. ಆದರೆ ಜಿಲ್ಲೆಯಲ್ಲಿ ತಯಾರಾಗುತ್ತಿರುವ ಬೆಲ್ಲ ಗುಣಮಟ್ಟ ಕಳೆದುಕೊಂಡಿದ್ದು ಶುದ್ಧ ಬೆಲ್ಲ ತಯಾರಿಕೆಗೆ ಆದ್ಯತೆ ನೀಡುವುದು ತುರ್ತು ಅಗತ್ಯವಾಗಿದೆ.

ಒಂದು ಕಾಲಕ್ಕೆ ಜಿಲ್ಲೆಯ ಆಲೆಮನೆಗಳಲ್ಲಿ ತಯಾರಾಗುತ್ತಿದ್ದ ಬೆಲ್ಲಕ್ಕೆ ಹೊರರಾಜ್ಯಗಳಲ್ಲಿ ಅಪಾರ ಬೇಡಿಕೆ ಇತ್ತು. ಆದರೆ ಇತ್ತೀಚೆಗೆ ರಾಸಾಯನಿಕ ಬಳಕೆ ವಿಪರೀತವಾಗಿರುವ ಕಾರಣ ಗುಜರಾತ್‌, ರಾಜಸ್ತಾನ, ಅಸ್ಸಾಂ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳ ವರ್ತಕರು ಮಂಡ್ಯ ಬೆಲ್ಲ ಖರೀದಿಯನ್ನು ನಿರಾಕರಿಸುತ್ತಿದ್ದಾರೆ. ಗುಜರಾತ್‌ ಸರ್ಕಾರ ಅಧಿಕೃತವಾಗಿ ನಿಷೇಧ ಹೇರಿದ್ದು ಮಾನವ ಬಳಕೆಗೆ ಯೋಗ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಬೆಲ್ಲಕ್ಕೆ ಬಿಳಿ ಬಣ್ಣ ನೀಡುವ ಉದ್ದೇಶದಿಂದ ಹೆಚ್ಚಾಗಿ ಸಕ್ಕರೆ ಹಾಗೂ ರಾಸಾಯನಿಕಗಳ ಬಳಕೆ ಮಾಡುತ್ತಿರುವ ಕಾರಣ ಬೆಲ್ಲ ಶುದ್ಧತೆ ಕಳೆದುಕೊಂಡಿದೆ. ದಶಕದ ಹಿಂದೆ ನಿತ್ಯ ನೂರಾರು ಹೊರರಾಜ್ಯಗಳ ವರ್ತಕರು ಆಲೆಮನೆಗೇ ಬಂದು ಬೆಲ್ಲ ಖರೀದಿ ಮಾಡುತ್ತಿದ್ದರು. ಬೆಲ್ಲ ತಯಾರಾದ ತಕ್ಷಣವೇ ಅದನ್ನು ಕೊಳ್ಳುತ್ತಿದ್ದರು. ಆದರೆ ಈಗ ಬೆಲ್ಲವನ್ನು ಕೇಳುವವರೇ ಇಲ್ಲವಾಗಿದ್ದಾರೆ. ರೈತರು ಎಪಿಎಂಸಿಗೆ ತಂದು ವಾರಗಟ್ಟೆಲೆ ಕಾದು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

‘ಚಿನ್ನದಂತಹ ಹೊಳಪು ನೀಡಲು ಆಲೆಮನೆ ಮಾಲೀಕರು ಸೋಡಿಯಂ ಸಾಫೊಲೈಟ್‌, ಟಾಯ್ಲೆಟ್‌ಗೆ ಬಳಸುವಂತಹ ಬ್ಲೀಚಿಂಗ್‌ ಪೌಡರ್‌ ಹಾಕಿ ಬೆಲ್ಲ ತೆಗೆಯುತ್ತಾರೆ. ಈ ಬೆಲ್ಲವನ್ನು ಹೆಚ್ಚುದಿನ ಇಡಲು ಬರುವುದಿಲ್ಲ. ಎಲ್ಲಾ ಆಲೆಮನೆ ಮಾಲೀಕರೂ ಬಣ್ಣಕ್ಕೆ ಮರುಳಾಗಿದ್ದಾರೆ. ಇದೊಂದು ಕೆಟ್ಟ ವ್ಯವಸ್ಥೆಯಾಗಿದ್ದು ಇದನ್ನು ಶುದ್ಧ ಮಾಡದ ಹೊರತು ಆತ್ಮನಿರ್ಭರ ಭಾರತ ಯೋಜನೆಯಡಿ ಆಲೆಮನೆ ಸ್ವಚ್ಛ ಮಾಡುವುದು ಕಷ್ಟ’ ಎಂದು ರಾಸಾಯನಿಕ ಮುಕ್ತ ಬೆಲ್ಲ ತಯಾರಕ ಸೋಮುಶಂಕರೇಗೌಡ ಹೇಳಿದರು.

ಹೊರರಾಜ್ಯಗಳ ಕಾರ್ಮಿಕರು: ಜಿಲ್ಲೆಯ ರೈತರು ಆಲೆಮನೆ ನಿರ್ವಹಣೆ ಮಾಡುವ ಸಂದರ್ಭದಲ್ಲಿ ಮಂಡ್ಯ ಬೆಲ್ಲ ಶುದ್ಧವಾಗಿಯೇ ಇತ್ತು. ಆದರೆ ಬಹುತೇಕ ರೈತರು ಆಲೆಮನೆ ಕಾಯಕ ಬಿಟ್ಟಿದ್ದಾರೆ. ಇದರಿಂದ ಉತ್ತರಪ್ರದೇಶ, ಬಿಹಾರದ ಕಾರ್ಮಿಕರು ಇಲ್ಲಿಯ ಆಲೆಮನೆಗಳನ್ನು ಗುತ್ತಿಗೆ ಪಡೆದು ನಡೆಸುತ್ತಿದ್ದಾರೆ. ಅಲ್ಲಿಂದೀಚೆಗೆ ಬೆಲ್ಲಕ್ಕೆ ಸಕ್ಕರೆ ಹಾಗೂ ರಾಸಾಯನಿಕ ಬೆರೆಸುವ ಪ್ರಕ್ರಿಯೆ ಆರಂಭಗೊಂಡಿದೆ. ಅವರಿಗೆ ಲಾಭವೇ ಮುಖ್ಯವಾಗಿದ್ದು ಬೆಲ್ಲದ ಗುಣಮಟ್ಟ ಹಳ್ಳ ಹಿಡಿದಿದೆ.

‘ಈಚೆಗೆ ಮಂಡ್ಯ ಬೆಲ್ಲ ಯುಪಿ ಬೆಲ್ಲ ಎಂದೇ ಪ್ರಸಿದ್ದಿ ಪಡೆದಿದೆ. ಇಲ್ಲಿ ಉತ್ತರ ಪ್ರದೇಶದ ಗುತ್ತಿಗೆದಾರರು ಆಲೆಮನೆ ನಡೆಸುತ್ತಿದ್ಧಾರೆ. ಕಬ್ಬು ನಮ್ಮದು, ಜಾಗ ನಮ್ಮದು, ಪರಿಕರ ನಮ್ಮವು. ಕೇವಲ ನಿರ್ವಹಣೆ ಮಾಡುವುದಷ್ಟೇ ಅವರ ಜವಾಬ್ದಾರಿ. ಹಣದ ಆಸೆಗೆ ಬಿದ್ದು ಬೆಲ್ಲವನ್ನು ವಿಷಯುಕ್ತಗೊಳಿಸಿದ್ಧಾರೆ. ಈಗಲೂ ಮಂಡ್ಯ ರೈತ ಆಲೆಮನೆ ನಿರ್ವಹಣೆ ಮಾಡಲು ನಿಂತರೆ ಬೆಲ್ಲ ಶುದ್ಧವಾಗುತ್ತದೆ’ ಎಂದು ರೈತ ಹೊಳಲು ನಾಗರಾಜ್‌ ಹೇಳಿದರು.

‘ಒಂದು ಜಿಲ್ಲೆ ಒಂದು ಉತ್ಪನ್ನ’ ಮಾದರಿ ಅಡಿಯಲ್ಲಿ ಜಿಲ್ಲೆಯ ಬೆಲ್ಲದ ಉತ್ಪಾದನೆ ಉತ್ತೇಜಿಸಲು ಆತ್ಮನಿರ್ಭರ ಭಾರತ ಯೋಜನೆ ಆಲೆಮನೆಗಳಿಗೆ ಸಹಾಯಧನ, ಸಾಲ ಸೌಲಭ್ಯ ಒದಗಿಸಲಿದೆ. ಮಾರುಕಟ್ಟೆ ವಿಸ್ತಾರಗೊಂಡು ಹೊರದೇಶಗಳಿಗೆ ರಫ್ತು ಮಾಡುವ ಉದ್ದೇಶವಿದೆ.

ಜಿಲ್ಲೆಯಲ್ಲಿ 42,500 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಸದ್ಯ ಸಾವಿರಕ್ಕೂ ಹೆಚ್ಚು ಆಲೆಮನೆಗಳಿವೆ. ಇಲ್ಲಿ ಉತ್ಪತ್ತಯಾಗುವ ಬೆಲ್ಲವನ್ನು ಮೌಲ್ಯವರ್ಧನೆಗೊಳಿಸುವುದು ಯೋಜನೆಯ ಗುರಿಯಾಗಿದೆ.

****

ಪ್ಲಾಸ್ಟಿಕ್‌ ದಹನವೂ ಅಂತ್ಯಗೊಳ್ಳಲಿ

ಜಿಲ್ಲೆಯ ಬಹಳಷ್ಟು ಆಲೆಮನೆಗಳಲ್ಲಿ ಉರುವಲಾಗಿ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಬಳಕೆ ಮಾಡುತ್ತಿರುವ ವಿಷಯ ಗುಟ್ಟಾಗಿ ಉಳಿದಿಲ್ಲ. ಹೊರರಾಜ್ಯಗಳ ಲೆದರ್‌ ಕಂಪನಿಗಳಿಂದ ಜಿಲ್ಲೆಗೆ ತ್ಯಾಜ್ಯ ಸರಬರಾಜಾಗುತ್ತಿದೆ. ಆತ್ಮನಿರ್ಭರ ಯೋಜನೆ ಯಶಸ್ವಿಯಾಗಬೇಕಾದರೆ ಪ್ಲಾಸ್ಟಿಕ್‌ ಬಳಕೆ ಅಂತ್ಯಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಹೇಳುತ್ತಾರೆ.

‘ಪ್ಲಾಸ್ಟಿಕ್‌ ಹಾವಳಿ ತಪ್ಪಿಸುವಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವಿಫಲವಾಗಿದೆ. ಈ ಯೋಜನೆ ಜಾರಿಯಿಂದಾದರೂ ಪ್ಲಾಸ್ಟಿಕ್‌ ಹಾವಳಿ ನಿಲ್ಲಬೇಕು’ ಎಂದು ಪರಿಸರ ಪ್ರೇಮಿ ಜಯಶಂಕರ್‌ ಹೇಳಿದರು.

***

ರಾಸಾಯನಿಕಮುಕ್ತ ಬೆಲ್ಲ ತಯಾರಿಕೆಗಾಗಿ ಆಲೆಮನೆ ಮಾಲೀಕರಿಗೆ ಜಾಗೃತಿ ಮೂಡಿಸಲಾಗುವುದು. ಸಾವಯವ ಬೆಲ್ಲ ತಯಾರಿಕೆಯ ತರಬೇತಿ ನೀಡಲಾಗುವುದು

–ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT