ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ– ಡಿಸಿಎಂ ಕಿತ್ತಾಟದಲ್ಲಿ ಕಾವೇರಿ ಪೋಲು: ಲಕ್ಷ್ಮಿನಾರಾಯಣ ಆರೋಪ

ಮುಂದುವರಿದ ಹೋರಾಟ; ಬಿಜೆಪಿ ಮುಖಂಡ ಎಂ.ಡಿ.ಲಕ್ಷ್ಮಿನಾರಾಯಣ ಆರೋಪ
Published 3 ಅಕ್ಟೋಬರ್ 2023, 15:38 IST
Last Updated 3 ಅಕ್ಟೋಬರ್ 2023, 15:38 IST
ಅಕ್ಷರ ಗಾತ್ರ

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಅಧಿಕಾರದ ಕಿತ್ತಾಟ ತೀವ್ರಗೊಂಡಿದ್ದು ಕಾವೇರಿ ನೀರಿನ ಸಮಸ್ಯೆಯನ್ನು ಮರೆತಿದ್ದಾರೆ. ಹೀಗಾಗಿ ಅಪಾರ ಪ್ರಮಾಣ ನೀರು ತಮಿಳುನಾಡಿಗೆ ಹರಿದು ಪೋಲಾಗಿದೆ’ ಎಂದು ಬಿಜೆಪಿ ಮುಖಂಡ ಎಂ.ಡಿ.ಲಕ್ಷ್ಮಿನಾರಾಯಣ ಆರೋಪಿಸಿದರು.

ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿವ ಹೋರಾಟ ಬೆಂಬಲಿಸಿ ಅವರು ಮಂಗಳವಾರ ಮಾತನಾಡಿದರು.

‘ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿರುವ ನಾಲ್ಕೂ ಜಲಾಶಯಗಳು ನೀರಿಲ್ಲದೇ ಒಣಗುತ್ತಿವೆ. ರೈತರು ಕುಡಿಯುವ ನೀರಿಗೂ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ರೈತರ ಹಿತ ಕಾಯುವಲ್ಲಿ ಸಂಪೂರ್ಣವಾಗಿ ಸೋತಿದೆ. ತಮಿಳುನಾಡಿನಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಅಲ್ಲಿಯ ಜಲಾಶಯಗಳಲ್ಲಿ ನೀರು ತುಂಬಿ ತುಳುಕುತ್ತಿದ್ದು ರೈತರ ಸ್ಥಿತಿ ಚೆನ್ನಾಗಿದೆ’ ಎಂದರು.

‘ನೀರಿನ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು, ಆ ಮೂಲಕ ರಾಜಕೀಯ ಬದ್ಧತೆಯನ್ನು ಪ್ರದರ್ಶನ ಮಾಡಬೇಕು. ತಮಿಳುನಾಡಿನಲ್ಲಿ ಭಾಷಾಭಿಮಾನ, ರಾಜಕೀಯ ಬದ್ಧತೆ ಚೆನ್ನಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ರಾಜ್ಯದ ಎಲ್ಲಾ ಎಂ.ಪಿಗಳು ಪ್ರಧಾನಮಂತ್ರಿಗಳ ಜೊತೆ ಮಾತನಾಡಿ ಸಮಸ್ಯೆಯನ್ನು ಸ್ನೇಹಯುತವಾಗಿ ಬಗೆಹರಿಸುವಂತೆ ಮನವಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ರಾಜ್ಯದ ಪರ ವಾದ ಮಾಡುತ್ತಿರುವ ವಕೀಲರ ತಂಡಕ್ಕೆ ಈಗಾಗಲೇ ₹ 125 ಕೋಟಿ ಹಣ ಖರ್ಚು ಮಾಡಲಾಗಿದೆ. ಆದರೂ ರಾಜ್ಯದ ಪರ ಯಾವುದೇ ಆದೇಶ ಬರುತ್ತಿಲ್ಲ. ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಏಕೆ ಖರ್ಚು ಮಾಡಬೇಕು? ಸರ್ಕಾರ ಈ ಬಗ್ಗೆ ಪರಿಶೀಲನೆ ಮಾಡಬೇಕು. ರಾಜ್ಯದ ರೈತರ, ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಯಲು ಮುಂದಾಗಬೇಕು’ಎಂದು ಒತ್ತಾಯಿಸಿದರು.

ಜೆಡಿಎಸ್‌ ಮುಖಂಡ ಕೆ.ಅನ್ನದಾನಿ ಮಾತನಾಡಿ ‘ಕಳೆದ 29 ದಿನಗಳಿಂದಲೂ ರೈತರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೂ ಹೋರಾಟ ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲ. ಮಂಡ್ಯ ಜಿಲ್ಲೆಯ ರೈತರ ತಾಳ್ಮೆ ಕೆಣಕುತ್ತಿರುವ ಸರ್ಕಾರ ಸರ್ವನಾಶವಾಗಲಿದೆ. 135 ಸ್ಥಾನಗಳನ್ನು ಗೆದ್ದಿದ್ದೇವೆ ಎಂದು ಬೀಗುತ್ತಿರುವ ಕಾಂಗ್ರೆಸ್‌ ಮುಖಂಡರು ರೈತರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕುತ್ತಿದ್ದಾರೆ’ ಎಂದರು.

‘ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಾವೇರಿ ವಿಚಾರವಾಗಿ ಪ್ರಧಾನಿಗಳಿಗೆ ಪತ್ರ ಬರೆದಿದ್ದು ಪ್ರಧಾನಿಗಳು ಈ ವಿಚಾರವಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗುತ್ತೇವೆ ಎಂದು ಕಾಲಹರಣ ಮಾಡುತ್ತಿದ್ದಾರೆ. ಜಿಲ್ಲೆಯ ಜನರು ಕಾಂಗ್ರೆಸ್‌ಗೆ 6 ಸ್ಥಾನ ಕೊಟ್ಟಿದ್ದಾರೆ, ಡಿಕೆಶಿ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ರಾಜ್ಯ ಸರ್ಕಾರ ಮಂಡ್ಯ ರೈತರ ಅನ್ನದ ಕಾಳಿಗೆ ಮಣ್ಣು ಹಾಕಿದ್ದಾರೆ. ಜನರು ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತಿದ್ದಾರೆ. ಆದರೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಯಾವುದೂ ಕೇಳಿಸುತ್ತಿಲ್ಲ. ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದಾ ಜಯರಾಂ, ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್‌, ಮಂಜುನಾಥ್‌, ಕುರಿ ಮತ್ತು ಉಣ್ಣೆ ಸಹಕಾರ ಬ್ಯಾಂಕ್‌ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಕೆಂಪೇಗೌಡ ಯುವ ಸೇನೆಯ ಮುಖಂಡ ಪ್ರದೀಪ್‌ ಇದ್ದರು.

ಚಡ್ಡಿ, ಬಾಟಲ್‌ ಪ್ರದರ್ಶನ: ವಿವಿಧ ಸಂಘಟನೆಗಳ ಮುಖಂಡರು ಪಟಾಪಟಾ ಚಡ್ಡಿ, ಮದ್ಯದ ಬಾಟಲಿ ಪ್ರದರ್ಶನ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ರೈತರಿಗೆ ನೀರಿನ ಚಿಂತೆಯಾಗಿದ್ದರೆ ಸರ್ಕಾರಕ್ಕೆ ಮದ್ಯದಂಗಡಿ ಸ್ಥಾಪಿಸುವ ಚಿಂತೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಬೀಳುವುದು ನಿಶ್ಚಿತ; ಅನ್ನದಾನಿ ‘ಬಡವರಿಗೆ ರೈತರಿಗೆ ಮಾರಕವಾಗಿರುವ ಕಾಂಗ್ರೆಸ್‌ ಸರ್ಕಾರ ಕೆಲವೇ ದಿನಗಳಲ್ಲಿ ಬಿದ್ದು ಹೋಗುವುದು ನಿಶ್ಚಿತ. ಇಂತಹ ಸರ್ಕಾರ ನಾಶವಾಗಬೇಕು ಇರಬಾರದು’ ಎಂದು ಕೆ.ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು. ‘ನಾವು ಜೆಡಿಎಸ್‌ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡುತ್ತಿಲ್ಲ. ಚುನಾವಣೆಗೆ ಮಾತ್ರ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಪಕ್ಷದ ಜಾತ್ಯತೀತ ಸಿದ್ಧಾಂತ ನಮ್ಮ ಪಕ್ಷದಲ್ಲೇ ಇರುತ್ತದೆ. ನಮ್ಮ ಪಕ್ಷಕ್ಕೆ ಮುಸ್ಲಿಮರ ಬೆಂಬಲ ಇದ್ದೇ ಇದೆ’ ಎಂದರು. ‘ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡುತ್ತೇವೆ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದರು. ಆದರೆ ಈವರೆಗೂ ಮೀಸಲಾತಿ ನೀಡಿಲ್ಲ. ಚುನಾವಣಾ ಕಣದಲ್ಲಿ ಎಲ್ಲಾ ಸಮುದಾಯದವರ ಅವಶ್ಯಕತೆ ಇದೆ. ಕಸ ಗುಡಿಸುವವರಿಂದ ದೊಡ್ಡ ಅಧಿಕಾರಿಗಳವರೆಗೆ ವಿಶ್ವಾಸ ಮುಖ್ಯವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT