ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ಆಸ್ಪತ್ರೆ ಆವರಣದಲ್ಲೊಂದು ಆರೋಗ್ಯಧಾಮ

ಜಿಲ್ಲಾಧಿಕಾರಿ ಕುಮಾರ ಅವರ ವಿಶೇಷ ಕಾಳಜಿ, ಸಿಎಸ್‌ಆರ್‌ ಅಡಿ ಸಿದ್ಧಗೊಳ್ಳುತ್ತಿದೆ ವಿಶ್ರಾಂತಿ ತಾಣ
Published 21 ಮೇ 2024, 5:44 IST
Last Updated 21 ಮೇ 2024, 5:44 IST
ಅಕ್ಷರ ಗಾತ್ರ

ಮಂಡ್ಯ: ಮಿಮ್ಸ್‌ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ನೋಡಿಕೊಳ್ಳಲು ಬಂದವರ ವಿಶ್ರಾಂತಿಗಾಗಿ ಆಸ್ಪತ್ರೆ ಆವರಣದಲ್ಲೊಂದು ‘ಆರೋಗ್ಯಧಾಮ’ ತಲೆ ಎತ್ತುತ್ತಿದೆ. ಜಿಲ್ಲಾಧಿಕಾರಿ ಕುಮಾರ ಅವರ ವಿಶೇಷ ಸಾಮಾಜಿಕ ಕಾಳಜಿಯಿಂದ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಇನ್ನೆರಡು ತಿಂಗಳಲ್ಲಿ ವಿಶ್ರಾಂತಿಯ ತಾಣ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.

ಕಳೆದ ಹಲವು ವರ್ಷಗಳಿಂದಲೂ ಮಿಮ್ಸ್‌ ಆವರಣದಲ್ಲಿ ರೋಗಿಗಳ ಜೊತೆ ಬಂದವರಿಗೆ ವಿಶ್ರಾಂತಿ ತಾಣವೇ ಇಲ್ಲ. ರಕ್ತನಿಧಿ ಕೇಂದ್ರದ ಪಕ್ಕದಲ್ಲೇ ಇದ್ದ ತಂಗುದಾಣವನ್ನು ಮಿಮ್ಸ್‌ ಅಧಿಕಾರಿಗಳು ಖಾಸಗಿ ಹೋಟೆಲ್‌ಗೆ ಕೊಟ್ಟಿದ್ದರು. ನಂತರ ಅದನ್ನು ತೆರವುಗೊಳಿಸದರೂ ಅಲ್ಲಿ ಯಾವುದೇ ಸೌಲಭ್ಯ ಇರಲಿಲ್ಲವಾದ್ದರಿಂದ ರೋಗಿಗಳ ಜೊತೆ ಬಂದವರಿಗೆ ಸರಿಯಾಗಿ ಬಳಕೆಯಾಗುತ್ತಿಲ್ಲ.

ಬಹುತೇಕ ಎಲ್ಲಾ ವಾರ್ಡ್‌ಗಳಲ್ಲೂ ರೋಗಿಗಳ ಜೊತೆ ತಂಗಲು ಸಂಬಂಧಿಕರಿಗೆ ಅವಕಾಶವಿಲ್ಲ. ಅನಿವಾರ್ಯವಾಗಿ ರಸ್ತೆ ಬದಿಯಲ್ಲಿ, ಕಲ್ಲು ಬೆಂಚುಗಳ ಮೇಲೆ, ಆಸ್ಪತ್ರೆಯ ಕಾರಿಡಾರ್‌ನಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಎಲ್ಲೆಂದರಲ್ಲಿ ಚಾಪೆ ಹಾಸಿ ಮಲಗುತ್ತಿದ್ದಾರೆ. ಮಳೆ ಬಂದರೆ ಅವರಿಗೆ ಆಶ್ರಯವೇ ಇರಲಿಲ್ಲ. ಬಿಸಿಲಿಗೆ ನೆರಳಿನ ವ್ಯವಸ್ಥೆಯೂ ಇಲ್ಲ.

ಗಂಭೀರ ಆರೋಗ್ಯ ಸಮಸ್ಯೆಯುಳ್ಳ ರೋಗಿಗಳು ಹಲವು ತಿಂಗಳುಗಳವರೆಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಾರೆ. ಇಂತಹ ಸಂದರ್ಭದಲ್ಲಿ ಜೊತೆಯಲ್ಲಿ ಬಂದವರಿಗೆ ವಿಶ್ರಾಂತಿ ಸಿಗುವುದಿಲ್ಲ. ಶೌಚಾಲಯ, ಸ್ನಾನದ ಸೌಲಭ್ಯವೂ ಇಲ್ಲದ ಕಾರಣ ಪರಿತಪಿಸುವ ಸ್ಥಿತಿ ಇದೆ. ಆರೋಗ್ಯ ಸುಧಾರಣೆಂದು ಬಂದವರು ರೋಗ ಹತ್ತಿಸಿಕೊಂಡು ಹೋಗುವ ಸ್ಥಿತಿ ಇದೆ.

ಬಿಸಿಲು, ಮಳೆ, ಚಳಿಯಲ್ಲಿ ಪರಿತಪಿಸುತ್ತಿದ್ದ ಜನರಿಗೆ ಜಿಲ್ಲಾಧಿಕಾರಿ ಕುಮಾರ ಅವರು ‘ಆರೋಗ್ಯಧಾಮ’ ನಿರ್ಮಾಣ ಮಾಡುತ್ತಿದ್ದಾರೆ. ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಸ್ಥಾಪಿಸಿ, ವಿವಿಧೆಡೆಯಿಂದ ಸಹಾಯ ಪಡೆದು ಆ ಹಣದಿಂದಲೇ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಕಾಮಗಾರಿ ಶೇ 30ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಆರೋಗ್ಯಧಾಮ ಕಟ್ಟಡ ₹ 45 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಸಿಎಸ್‌ಆರ್‌ ನಿಧಿಯಲ್ಲಿ ಈಗಾಗಲೇ ₹ 35 ಲಕ್ಷ ಸಂಗ್ರವಾಗಿದೆ. ವಿವಿಧ ಕಂಪನಿಗಳು, ಬ್ಯಾಂಕ್‌ಗಳು ಕುಮಾರ ಅವರ ಸಾಮಾಜಿಕ ಕಾಳಜಿಗೆ ಧನ ಸಹಾಯ ಮಾಡುತ್ತಿದ್ದು ಕಟ್ಟಡ ನಿರ್ಮಾಣಕ್ಕೆ ಬೆಂಬಲವಾಗಿ ನಿಂತಿವೆ. ಜಿಲ್ಲಾಧಿಕಾರಿಗಳು ಇದಕ್ಕೆ ಸಮಿತಿಯೊಂದರನ್ನು ರಚಿಸಿದ್ದು ಆ ನಿಗಾದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

100 ಜನರು ವಿಶ್ರಾಂತಿ ಪಡೆಯುವಷ್ಟು ಸಾಮರ್ಥ್ಯದ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಕಟ್ಟಡದಲ್ಲಿ 2 ಭಾಗವಿದ್ದು ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ಹಾಗೂ ಸ್ನಾನದ ಕೊಠಡಿಗಳೂ ಇರಲಿವೆ. ಈಚೆಗೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.

ಕಟ್ಟಡ ಸಿದ್ಧವಾದ ನಂತರವೂ ಆರೋಗ್ಯಧಾಮ ಸಮಿತಿಯೇ ಕಟ್ಟಡವನ್ನು ನಿರ್ವಹಣೆ ಮಾಡಲಿದೆ. ಸರ್ಕಾರಕ್ಕೆ ಹೊರೆಯಾಗದಂತೆ ಸಿಎಸ್‌ಆರ್‌ ನಿಧಿಯನ್ನೇ ಬಳಸಿ ಕಟ್ಟಡವನ್ನು ನಿರ್ವಹಣೆ ಮಾಡಲು ಜಿಲ್ಲಾಧಿಕಾರಿ ಕುಮಾರ ಅವರು ಯೋಜನೆ ರೂಪಿಸಿದ್ದಾರೆ. ಕಟ್ಟಡಕ್ಕೆ ಭದ್ರತಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿಯನ್ನು ನೇಮಕ ಮಾಡಿ ಸಮರ್ಪಕವಾಗಿ ನಿರ್ವಹಿಸುವ ಗುರಿ ಇಟ್ಟುಕೊಂಡಿದ್ದಾರೆ.

‘ಹಲವು ವರ್ಷಗಳಿಂದಲೂ ವಿಶ್ರಾಂತಿ ತಾಣ ನಿರ್ಮಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದೆವು, ಆದರೆ ಬೇಡಿಕೆ ಬೇಡಿಕೆಯಾಗಿಯೇ ಉಳಿದಿತ್ತು. ಆದರೆ ಜಿಲ್ಲಾಧಿಕಾರಿ ಕುಮಾರ ಅವರಿಗೆ ಬಡವರ ಕಷ್ಟ ಅರ್ಥವಾಗಿದ್ದು  ಆರೋಗ್ಯಧಾಮ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ರೋಗಿಯ ಸಂಬಂಧಿಯೊಬ್ಬರು ತಿಳಿಸಿದರು.

₹ 45 ಲಕ್ಷ ವೆಚ್ಚದಲ್ಲಿ ಆರೋಗ್ಯದಾಮ ನಿರ್ಮಾಣ ರೋಗಿಗಳ ಸಂಬಂಧಿಗಳಿಗೆ ಇಲ್ಲದ ವಿಶ್ರಾಂತಿ ತಾಣ ಸಾಮಾಜಿಕ ಕಾಳಜಿಗೆ ಕಂಪನಿ, ಬ್ಯಾಂಕ್‌ಗಳ ಸಹಾಯ

ಮಧ್ಯರಾತ್ರಿ ಕಂಡ ದೃಶ್ಯಗಳು...

‘ಅಪಘಾತ ಪ್ರಕರಣ ಸಂಭವಿಸಿದಾಗ ಒಂದೆರಡು ಬಾರಿ ನಾನು ಮಧ್ಯರಾತ್ರಿ ಮಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಆಗ ಜನರು ಎಲ್ಲೆಂದರಲ್ಲಿ ಮಲಗಿದ್ದ ದೃಶ್ಯಗಳನ್ನು ಕಂಡು ಮನಸ್ಸಿಗೆ ಬಹಳ ನೋವಾಯಿತು. ಮಕ್ಕಳು ಮಹಿಳೆಯರು ಅನಾರೋಗ್ಯ ಸ್ಥಿತಿಯಲ್ಲಿ ಮಲಗಿದ್ದರು. ಅಂದೇ ನಾನು ಆರೋಗ್ಯಧಾಮ ನಿರ್ಮಿಸುವ ನಿರ್ಧಾರ ಕೈಗೊಂಡೆ’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು. ‘ಆರೋಗ್ಯಧಾಮದ ನಿರ್ಮಾಣವಷ್ಟೇ ಅಲ್ಲ ಅದನ್ನು ಸಮರ್ಪಕವಾಗಿ ಸ್ವಚ್ಛವಾಗಿ ನಿರ್ವಹಣೆ ಮಾಡುವ ಮುನ್ನೋಟದೊಂದಿಗೆ ಕಟ್ಟಡ ನಿರ್ಮಿಸಲಾಗುತ್ತಿದೆ. ರೋಗಿಗಳು ಚಿಕಿತ್ಸೆ ಪಡೆಯುವಾಗ ಅವರ ಜೊತೆ ಬಂದವರಿಗೆ ವಿಶ್ರಾಂತಿ ಅತ್ಯಾವಶ್ಯವಾಗಿರುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT