ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಮೈಷುಗರ್‌ ಸ್ಥಳಾಂತರ ಕಾರ್ಯ ಸಾಧುವಲ್ಲ

Published 6 ಮೇ 2024, 6:16 IST
Last Updated 6 ಮೇ 2024, 6:16 IST
ಅಕ್ಷರ ಗಾತ್ರ

ಮಂಡ್ಯ: ಶತಮಾನದಂಚಿನ ಐತಿಹಾಸಿಕ ಮೈಷುಗರ್‌ ಕಾರ್ಖಾನೆ ಸ್ಥಳಾಂತರದ ಮಾತುಗಳು ಜಿಲ್ಲೆಯಾದ್ಯಂತ ಹೊಸ ಚರ್ಚೆ ಹುಟ್ಟುಹಾಕಿವೆ. ಆದರೆ, ದಶಕಗಳ ಹಿಂದೆಯೇ ‘ಸಮಗ್ರ ಸೌಲಭ್ಯಗಳ ಸಕ್ಕರೆ ಕಾರ್ಖಾನೆ’ (ಇಂಟಿಗ್ರೇಟೆಡ್‌ ಶುಗರ್‌ ಮಿಲ್) ಎನಿಸಿಕೊಂಡಿದ್ದ ಮೈಷುಗರ್‌ ಸ್ಥಳಾಂತರ ಮಾಡುವುದಾಗಲೀ, ಹೊಸದಾಗಿ ನಿರ್ಮಾಣ ಮಾಡುವುದಾಗಲೀ ಕಾರ್ಯಸಾಧುವಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಮೈಷುಗರ್‌ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದರು. ಈ ಘೋಷಣೆ ಬೆನ್ನಲ್ಲೇ ಮಂಡ್ಯ ಶಾಸಕ ಗಣಿಗ ರವಿಕುಮಾರ್‌ ಅವರು ‘ಮೈಷುಗರ್‌ ಕಾರ್ಖಾನೆಯನ್ನು ಸಾತನೂರು ಫಾರಂಗೆ ಸ್ಥಳಾಂತರ ಮಾಡಲಾಗುವುದು, ಶೀಘ್ರವೇ ಹೊಸ ಕಾರ್ಖಾನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು, ಈಗಿನ ಮೈಷುಗರ್‌ ಜಾಗದಲ್ಲಿ ಐಟಿ ಪಾರ್ಕ್‌ ನಿರ್ಮಿಸಲಾಗುವುದು’ ಎಂದು ಹೇಳಿಕೆ ಕೊಟ್ಟರು.

ಈ ಹೇಳಿಕೆ ನಂತರ ರೈತರು, ರೈತ ಮುಖಂಡರು ಆತಂಕಕ್ಕೀಡಾಗಿದ್ದು ಐತಿಹಾಸಿಕ ಪರಂಪರೆ ಹೊಂದಿರುವ ಕಾರ್ಖಾನೆಯ ಸ್ಥಳಾಂತರ ಎಷ್ಟು ಸರಿ ಎಂಬ ಪ್ರಶ್ನೆ ಎತ್ತಿದ್ದಾರೆ. ಕಾರ್ಖಾನೆ ಜಾಗದಲ್ಲಿ ಐಟಿ ಪಾರ್ಕ್‌ ನಿರ್ಮಿಸುವ ಮಾತುಗಳ ಬಗ್ಗೆ ಮುಖಂಡರು ಅನುಮಾನ ವ್ಯಕ್ತಪಡಿಸಿದ್ದು ಅಸಿಟೇಟ್‌ ಕಾರ್ಖಾನೆ ಮಾದರಿಯಲ್ಲೇ ಮೈಷುಗರ್‌ ಆಸ್ತಿಯೂ ಅನ್ಯರ ಪಾಲಾದರೆ ಏನು ಗತಿ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

94 ವರ್ಷಗಳಿಂದ ಮಂಡ್ಯ ಜಿಲ್ಲೆಯ ಜೀವನಾಡಿಯಾಗಿರುವ ಮೈಷುಗರ್‌ ಕಾರ್ಖಾನೆ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆಯಾಗಿ ಗುರುತಿಸಿಕೊಂಡಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌, ಲೆಸ್ಲಿ ಕೋಲ್ಮನ್‌, ಮಿರ್ಜಾ ಇಸ್ಮಾಯಿಲ್‌ ಅವರ ಮುನ್ನೋಟದೊಂದಿಗೆ ನಿರ್ಮಾಣಗೊಂಡ ಕಾರ್ಖಾನೆಗೆ ಬಲುದೊಡ್ಡ ಹಿನ್ನೆಲೆ ಇದೆ.

ಈಗ ಬದಲಾದ ಪರಿಸ್ಥಿತಿಯಲ್ಲಿ ರೈತ ಮುಖಂಡರ ಹೋರಾಟದಿಂದಾಗಿ ಕಾರ್ಖಾನೆ ಖಾಸಗೀಕರಣಗೊಳ್ಳುವುದು ನಿಂತಿದೆ. ಇಂತಹ ಕಾರ್ಖಾನೆ ಸ್ಥಳಾಂತರದ ಹೆಸರೆತ್ತಿದರೆ ಐತಿಹಾಸಿಕ ಪರಂಪರೆಗೆ ಮಸಿ ಬಳಿದಂತಾಗುತ್ತದೆ. ಹೀಗಾಗಿ ಇರುವ ಕಾರ್ಖಾನೆಯನ್ನೇ ಮೇಲ್ದರ್ಜೇಗಿಸುವ ಮೂಲಕ ಐತಿಹಾಸಿಕ ಪರಂಪರೆಯನ್ನು ಸರಂಕ್ಷಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸುತ್ತಾರೆ.

ತಜ್ಞರ ಅಭಿಪ್ರಾಯ: ಮೈಷುಗರ್‌ ಕಾರ್ಖಾನೆಯನ್ನು ಸ್ಥಳಾಂತರ ಮಾಡುವುದು ಎಷ್ಟು ಸರಿ ಪ್ರಶ್ನೆ ಕುರಿತಂತೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಮುಖಂಡರು ಸಕ್ಕರೆ ಕಾರ್ಖಾನೆ ತಜ್ಞರ ಅಭಿಪ್ರಾಯ ಪಡೆದಿದ್ದಾರೆ. ತಾಲ್ಲೂಕಿನ ಕೀಲಾರ ಗ್ರಾಮ ಮೂಲದವರೇ ಆದ ಹಿರಿಯ ಬಾಯ್ಲರ್‌ ತಜ್ಞ ಕೆ.ವಿ.ಚಂದ್ರಮೌಳಿ ಅವರು ಈ ಕುರಿತು ಸಮಗ್ರ ವರದಿಯನ್ನೇ ನೀಡಿದ್ದು  ಮೈಷುಗರ್‌ ಕಾರ್ಖಾನೆಯನ್ನು ಸ್ಥಳಾಂತರ ಮಾಡುವುದು ಕಾರ್ಯಸಾಧುವಲ್ಲ ಎಂದು ಸ್ಪಷ್ಟವಾದ ವರದಿ ನೀಡಿದ್ದಾರೆ.

‘ಸಕ್ಕರೆ ಕಾರ್ಖಾನೆಯು ಸಹವಿದ್ಯುತ್‌ ಘಟಕ, ಎಥೆನಾಲ್‌ ಘಟಕ, ಡಿಸ್ಟಲರಿ ಹೊಂದಿದ್ದರೆ ಅದನ್ನು ಸಮಗ್ರ ಸೌಲಭ್ಯಗಳ ಸಕ್ಕರೆ ಕಾರ್ಖಾನೆ ಎನ್ನುವರು. ಈ ಎಲ್ಲಾ ಸೌಲಭ್ಯಗಳೂ ಮೈಷುಗರ್‌ ಕಾರ್ಖಾನೆಯಲ್ಲಿರುವ ಕಾರಣ ಇದನ್ನು ಸ್ಥಳಾಂತರ ಮಾಡುವುದು, ಹೊಸದಾಗಿ ನಿರ್ಮಿಸುವುದು ಸರಿಯಲ್ಲ. ಮೈಷುಗರ್‌ನಲ್ಲಿರುವ ಬಿ ಮಿಲ್‌ ಹಳೆಯದಾಗಿದ್ದು ಅದನ್ನು ಹೊಸದಾಗಿ ನಿರ್ಮಿಸಿದರೆ ಅಷ್ಟೇ ಸಾಕು, ಈಗಲೂ ಕಾರ್ಖಾನೆ ಮೊದಲಿನಿಂತೆಯೇ ದಕ್ಷಿಣ ಭಾರತದಲ್ಲಿ ಮಾದರಿಯಾಗಿ ನಡೆಯುತ್ತದೆ’ ಎಂದು ಚಂದ್ರಮೌಳಿ ಹೇಳುತ್ತಾರೆ.

ಶಿಫಾರಸುಗಳೇನು; ಕೆ.ವಿ.ಚೌಂದ್ರಮೌಳಿ ಅವರು ಸಲ್ಲಿಸಿರುವ ವರದಿಯಲ್ಲಿ ಮೈಷುಗರ್‌ ಕಾರ್ಖಾನೆಯ ಅಭಿವೃದ್ಧಿಗೆ ಅವಶ್ಯವಿರುವ ಹಲವು ಶಿಫಾರಸುಗಳನ್ನು ಮಾಡಿದ್ದಾರೆ.

ಮೈಷುಗರ್‌ನಲ್ಲಿ ತಯಾರಾಗುತ್ತಿದ್ದ ಮದ್ಯಸಾರ, ಚಾಕೊಲೇಟ್‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿತ್ತು. ಆದರೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮದ ಪ್ರಕಾರ ಮೈಷುಗರ್‌ ಡಿಸ್ಟೆಲರಿಯು ‘ಶೂನ್ಯ ದ್ರವ ತ್ಯಾಜ್ಯ ಬಿಡುಗಡೆ’ (ಜಿರೊ ಲಿಕ್ವಿಡ್‌ ಡಿಸ್‌ಚಾರ್ಜ್‌) ಸಾಧಿಸಲು ಸಾಧ್ಯವಾಗದ ಕಾರಣ ಮದ್ಯಸಾರ ಘಟಕ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು.

ಆದರೆ, ಈಗ ಡಿಸ್ಟಲರಿ ತಂತ್ರಜ್ಞಾನ ಅಭಿವೃದ್ಧಿಗೊಂಡಿದ್ದು ಅತ್ಯಾಧುನಿಕ ಬಾಯ್ಲರ್‌ (ಸ್ಲಾಪ್‌ ಫೈಯರ್ಡ್‌ ಬಾಯ್ಲರ್‌)  ಸ್ಥಾಪಿಸಿ ಶೂನ್ಯ ದ್ರವ ತ್ಯಾಜ್ಯ ಬಿಡುಗಡೆ ಸಾಧಿಸಲು ಸಾಧ್ಯವಿದೆ. ಹೀಗಾಗಿ ಮೈಷುಗರ್‌ ಕಾರ್ಖಾನೆಯಲ್ಲಿ ಮತ್ತೆ ಡಿಸ್ಟೆಲರಿ ಸ್ಥಾಪನೆಗೆ ಎಲ್ಲಾ ಅವಕಾಶಗಳಿದ್ದು ಐತಿಹಾಸಿಕ ಪರಂಪರೆಗೆ ಹೊಸ ಸ್ಪರ್ಶ ನೀಡಬಹುದು ಎಂದು ಚಂದ್ರಮೌಳಿ ಶಿಫಾರಸು ಮಾಡಿದ್ದಾರೆ.

ದೇಶದಲ್ಲಿ 328 ಡಿಸ್ಟೆಲರಿಗಳು ದಿನಕ್ಕೆ 6 ದಶಲಕ್ಷ ಲೀಟರ್‌ ಮದ್ಯಸಾರ ಉತ್ಪಾದನೆ ಮಾಡುತ್ತಿವೆ. ಅದರಲ್ಲಿ 1.8 ದಶಲಕ್ಷ ಲೀಟರ್‌ ಸಕ್ಕರೆ ಕಾರ್ಖಾನೆಗಳಿಂದಲೇ ಉತ್ಪಾದನೆಯಾಗುತ್ತಿದೆ. ದೇಶದ 160 ಸಕ್ಕರೆ ಕಾರ್ಖಾನೆಗಳು 2.3 ದಶಲಕ್ಷ ಲೀಟರ್‌ ಮದ್ಯಸಾರ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಮೈಷುಗರ್‌ನಲ್ಲಿ ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ಹೊಸದಾಗಿ ಡಿಸ್ಟೆಲರಿ ಆರಂಭಿಸಿದರೆ ಕಾರ್ಖಾನೆ ದೇಶದಲ್ಲೇ ಮಾದರಿಯಾಗಿ ಮುನ್ನಡೆಯುತ್ತದೆ ಎಂದು ಅವರು ತಿಳಿಸಿದ್ದಾರೆ.

ಮೈಷುಗರ್‌ ಕಾರ್ಖಾನೆಯ ಸಹವಿದ್ಯುತ್‌ ಘಟಕ 2023– 24ನೇ ಸಾಲಿನಲ್ಲಿ 12,21,000 ಯೂನಿಟ್‌ ವಿದ್ಯುತ್‌ ಉತ್ಪಾದನೆ ಮಾಡಿದೆ. ಅದರಲ್ಲಿ 4,93,200 ಯೂನಿಟ್‌ ವಿದ್ಯುಚ್ಛಕ್ತಿಯನ್ನು ಗ್ರಿಡ್‌ಗೆ ಒದಗಿಸಲಾಗಿದೆ. ಕಾರ್ಖಾನೆಯಲ್ಲಿ 30 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಯ ಘಟಕವಿದ್ದು 66 ಕೆವಿಎ ಸಾಮರ್ಥ್ಯದ ಸರಬರಾಜು ಲೈನ್‌ ಹೊಂದಿದೆ. ಇಲ್ಲಿ ಉತ್ಪಾದನೆಯಾದ ವಿದ್ಯುಚ್ಛಕ್ತಿಯನ್ನು ಸರ್ಕಾರಕ್ಕೆ ಮಾರಾಟ ಮಾಡಿ ಲಾಭ ಗಳಿಸಬಹುದು ಎಂದು ತಿಳಿಸಿದ್ದಾರೆ.

‘ಎಥೆನಾಲ್‌ ಘಟಕದ ಸ್ಥಾಪನೆ, ಮಡ್‌ ಪ್ರೆಸ್‌ ತಂತ್ರಜ್ಞಾನದಿಂದ ರಸಗೊಬ್ಬರ ತಯಾರಿಕೆ, ಉಪ ಉತ್ಪನ್ನಗಳ ತಯಾರಿಕೆಯಿಂದ ಕಾರ್ಖಾನೆಗೇ ಆಧುನಿಕ ಸ್ಪರ್ಶ ನೀಡಬಹುದು. ಕಾರ್ಖಾನೆಯನ್ನು ಸ್ಥಳಾಂತರಿಸುವ ಮಾತುಗಳನ್ನು ಯಾರೂ ಆಡಬಾರದು. ಹೊಸ ಕಾರ್ಖಾನೆ ನಿರ್ಮಾಣ ಮಾಡಬಹುದು, ಆದರೆ ಮತ್ತೊಮ್ಮೆ ಮೈಷುಗರ್‌ ಕಾರ್ಖಾನೆ ಕಟ್ಟಲು ಸಾಧ್ಯವಿಲ್ಲ’ ಎಂದು ಚಂದ್ರಮೌಳಿ ಅವರು ತಿಳಿಸಿದರು.

‘ಹೊಸ ಮಿಲ್‌ ಬೇಕು’

ಮೈಷುಗರ್ ಕಾರ್ಖಾನೆಯಲ್ಲಿ ಎ ಹಾಗೂ ಬಿ ಎಂಬ 2 ಮಿಲ್‌ಗಳಿವೆ. ಎ ಮಿಲ್‌ ಚೈನ್ನೈನ ಕಂಪನಿ ತಯಾರಿಸಿ ಸ್ಥಾಪನೆ ಮಾಡಿದೆ. ಇದರ ಕಬ್ಬು ಅರೆಯುವ ಸ್ಥಾಪರ್ಥ್ಯ ದಿನಕ್ಕೆ 3,500 ಮೆಟ್ರಿಕ್‌ ಟನ್‌ ಆಗಿತ್ತು. ಇದನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು ಇದರ ಸಾಮರ್ಥ್ಯ ಈಗ ದಿನಕ್ಕೆ 5 ಸಾವಿರ ಮೆಟ್ರಿಕ್‌ ಟನ್‌ ಇದೆ.

ಇಂಗ್ಲೆಂಡಿನ ಮಿರ್ಲೆಸ್‌ ವಾಟ್ಸನ್‌ ಕಂಪನಿಯಿಂದ ತಯಾರಾದ ಬಿ ಮಿಲ್‌ ಈಗ ಹಳೆಯದಾಗಿದೆ.  ಇದರ ಸಲಕರಣೆಗಳು ದೊರೆಯುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಹೊಸದಾಗಿ ಒಂದು ಮಿಲ್‌ ಸ್ಥಾಪಿಸಿದರೆ ಕಾರ್ಖಾನೆಯ ಸಾಮರ್ಥ್ಯ ಮತ್ತಷ್ಟು ಹೆಚ್ಚುತ್ತದೆ ಎಂದು ತಜ್ಞರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT