ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ಅಂದ ಕಳೆದುಕೊಂಡ ಸಾಲು ಉದ್ಯಾನಗಳು

ಸೋಮಾರಿಗಳ ಆಶ್ರಯ ತಾಣ, ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ, ನಗರಸಭೆಗೆ ಕಣ್ಣಿಲ್ಲ
Last Updated 25 ಜನವರಿ 2021, 7:31 IST
ಅಕ್ಷರ ಗಾತ್ರ

ಮಂಡ್ಯ: ನಗರದ ಹೃದಯ ಭಾಗ, ಮೈಸೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಂತಿರುವ ಸಾಲು ಉದ್ಯಾನಗಳ ಅಂದ ಹಾಳಾಗಿ ಹಲವು ವರ್ಷಗಳೇ ಕಳೆದಿವೆ. ನಗರಸಭೆ, ಜಿಲ್ಲಾಡಳಿತದ ನಿರಾಸಕ್ತಿಯಿಂದಾಗಿ ಹೆದ್ದಾರಿ ಬದಿಯಲ್ಲಿರುವ ಉದ್ಯಾನಗಳಿಗೆ ಹೊಸ ರೂಪ ನೀಡಲು ಸಾಧ್ಯವಾಗಿಲ್ಲ.

ನಗರಸಭೆ ಕಚೇರಿ ಎದುರಿನಲ್ಲೇ ಗಾಂಧಿ ಉದ್ಯಾನವಿದೆ. ಸಿಲ್ವರ್‌ ಜ್ಯೂಬಿಲಿ ಉದ್ಯಾನ, ನಾಡಪ್ರಭು ಕೆಂಪೇಗೌಡ ಸಾಲು ಉದ್ಯಾನಗಳು ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಮಳೆ ಬಂದರೆ ಗಾಂಧಿ ಉದ್ಯಾನ ಕೆರೆಯಂತಾಗುತ್ತದೆ. ಕೊಳಚೆ ನೀರು ಸಂಗ್ರಹವಾಗಿ ದುರ್ವಾಸನೆ ಬೀರುತ್ತದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುವ ಪ್ರಯಾಣಿಕರು, ಪ್ರವಾಸಿಗರ ಉದ್ಯಾನಗಳ ಸ್ಥಿತಿ ಕಂಡು ಮರಗುತ್ತಾರೆ. ಗಾಂಧಿ ಪಾರ್ಕ್‌ನಲ್ಲಿ ಕಸದ ರಾಶಿಯನ್ನು ಗುಡ್ಡೆ ಹಿಡಿಯಲಾಗಿದ್ದು, ಅದರ ಪಕ್ಕದಲ್ಲೇ ಮಲ ವಿಸರ್ಜನೆ ಮಾಡಲಾಗಿದೆ. ಸ್ವಚ್ಛ ನಗರ ಎಂಬುದು ಬರೀ ದಾಖಲೆಗಳಲ್ಲಿ ಇದೆ. ನಗರಸಭೆ ಕಚೇರಿ ಎದುರಲ್ಲೇ ಅಶುಚಿತ್ವ ತಾಂಡವ ಆಡುತ್ತಿರುವುದು ಸ್ವಚ್ಛ ಭಾರತ ಅಭಿಯಾನ ಅಣಕ ಮಾಡುತ್ತಿದೆ.

ಗಾಂಧಿ ಉದ್ಯಾನದಲ್ಲಿ ವಾಯುವಿಹಾರ ಮಾಡಲು ಪಥ ಇರುವುದು ಸಮಾಧಾನಕರ ವಿಚಾರ. ಹಸಿರು ಹಾಸಿನಲ್ಲಿ ತಿಂದು ಬಿಸಾಡಿದ ಪಾರ್ಸೆಲ್‌ ಕವರ್‌ಗಳು, ಕುಡಿದು ಬಿಸಾಡಿದ ನೀರಿನ ಬಾಟಲಿಗಳು ಕಣ್ಣಿಗೆ ರಾಚುತ್ತವೆ. ನೀರಿನ ಟ್ಯಾಂಕ್‌ಗಳು ಕುಡಿದು ಒಡೆದು ಹಾಕಿದ ಮದ್ಯದ ಬಾಟಲಿಗಳು ಕಾಣ ಸಿಗುತ್ತದೆ.

ಉದ್ಯಾನಕ್ಕೆ ಹೊಂದಿಕೊಂಡಂತಿರುವ ಕಾಂಪೌಂಡ್‌ ಮೂತ್ರ ವಿಸರ್ಜನೆ ತಾಣವಾಗಿದೆ. ರೈಲ್ವೆ ಹಳಿಯಿಂದ ಉದ್ಯಾನಕ್ಕೆ ಅಕ್ರಮವಾಗಿ ಪ್ರವೇಶಿಸಬಹುದಾಗಿದ್ದು, ಉದ್ಯಾನದ ನೀರಿನ ಟ್ಯಾಂಕ್‌ ಬಳಿಯ ಸ್ಥಳ ಮಲ ವಿಸರ್ಜನೆ ತಾಣವಾಗಿ ದುರ್ವಾಸನೆ ಬೀರುತ್ತದೆ. ಸೋಮಾರಿಗಳ ವಿಶ್ರಾಂತಿ ಸ್ಥಳವಾಗಿದೆ. ಇದಲ್ಲದೆ ಆಕರ್ಷಣೀಯವಾಗಿ ಗಮನ ಸೆಳೆಯುತ್ತಿದ್ದ ಡೈನೋಸಾರ್‌ ಪ್ರತಿಮೆ ಕುಸಿದಿದ್ದು, ನೆಲಕ್ಕೆ ಉರುಳುವುದೊಂದು ಬಾಕಿ ಇದೆ.

ಅನ್ಯ ಕೆಲಸಗಳಿಗೆ ಜ್ಯೂಬಿಲಿ ಪಾರ್ಕ್‌ ಬಳಕೆ: ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ 1935ರಲ್ಲಿ ಸ್ಥಾಪಿಸಲಾಗಿದ್ದು, ಇದು ಹೆಸರಿಗಷ್ಟೇ ಪಾರ್ಕ್‌. ಪಾರ್ಕ್‌ ಎಂದು ಕರೆಸಿಕೊಳ್ಳುವ ಯಾವುದೇ ಕುರುಹುಗಳು ಇಲ್ಲಿಲ್ಲ. ಲಾರಿ, ಕ್ಯಾಂಟರ್‌ ವಾಹನಗಳ ನಿಲುಗಡೆ ಸ್ಥಳವಾಗಿದ್ದು, ಆಗಾಗ್ಗೆ ಪ್ರತಿಭಟನಾ ಸಭೆಗಳು, ರ‍್ಯಾಲಿಗಳು ಇಲ್ಲಿಂದಲೇ ಹೊರಡುತ್ತವೆ. ಬೈಕ್‌, ಕಾರು ಪ್ರದರ್ಶನ ಸ್ಥಳವಾಗಿ ಮಾರ್ಪಟ್ಟಿರುತ್ತದೆ.

ಡೀಸೆಲ್‌ ಉಳಿಸಲು ಪಾರ್ಕ್‌ನಲ್ಲೇ ಲಾರಿಗೆ ಕಸ ಲೋಡಿಂಗ್‌: ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಸ್‌ಬೇ ಹಿಂದಿನ ಪಾರ್ಕ್‌ ಜಾಗದಲ್ಲಿ ಡೀಸೆಲ್‌ ಉಳಿಸುವ ಸಲುವಾಗಿ ನಗರಸಭೆಯ ಕಸ ಸಾಗಿಸುವ ಲಾರಿಗಳಿಗೆ ಸಣ್ಣ ವಾಹನಗಳಿಂದ ಕಸವನ್ನು ತುಂಬಲಾಗುತ್ತದೆ. ಇಲ್ಲಿಂದ ಕಾಳೇನಹಳ್ಳಿಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಕೊಂಡೊಯ್ಯಲಾಗುತ್ತದೆ.

ಸನಿಹದಲ್ಲೇ ಬಸ್‌ ಬೇ ಇದ್ದು, ಬೆಂಗಳೂರಿಗೆ ನಿತ್ಯ ನೂರಾರು ಕೆಎಸ್‌ಆರ್‌ಟಿಸಿ ಬಸ್‌ಗಳು ಹಾದು ಹೋಗುತ್ತವೆ. ಇಲ್ಲಿ ಅಕ್ರಮವಾಗಿ ಫಾಸ್ಟ್‌ ಫುಡ್‌ ಕೇಂದ್ರಗಳಿದ್ದು, ಅಲ್ಲೇ ಸನಿಹದಲ್ಲಿ ಮೂತ್ರ ವಿಸರ್ಜನಾ ಸ್ಥಳವಾಗಿ ಮಾರ್ಪಟ್ಟಿದೆ. ಬಸ್‌ ಬೇಗೆ ಹೊಂದಿಕೊಂಡಂತೆ ಶೌಚಾಲಯ ಇದ್ದರೂ ತೆರೆದ ಸ್ಥಳವೇ ಮೂತ್ರ ವಿಸರ್ಜನೆಗೆ ಬಳಕೆಯಾಗುತ್ತಿದೆ. ಉಳಿದಂತೆ ಕೆಂಪೇಗೌಡ ಉದ್ಯಾನ ಅದರ ಪಕ್ಕದಲ್ಲೇ ಇದ್ದು, ಸೋಮಾರಿಗಳ ನಿದ್ರಾ ಸ್ಥಳವಾಗಿದೆ.

ತಂತಿ ಬೇಲಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮರಗಳನ್ನು ಅಡ್ಡಲಾಗಿ ನಿಲ್ಲಿಸಿ ತಡೆಯಲಾಗಿದೆ. ಇದು ರಸ್ತೆಯಲ್ಲಿ ಸಂಚರಿಸುವವರಿಗೆಲ್ಲಾ ಕಣ್ಣಿಗೆ ಕಾಣಿಸುತ್ತದೆ. ನಗರದಲ್ಲಿ 42 ಉದ್ಯಾನಗಳಿದ್ದು, 11 ಪಾರ್ಕ್‌ಗಳಲ್ಲಿ ಮಕ್ಕಳ ಆಟಿಕೆಗಳಿವೆ. ಉಳಿದಂತೆ 15 ಕಡೆ ವಾಕಿಂಗ್‌ ಪಾಥ್‌ಗಳು ಇವೆ.

‘ಬಾಲಭವನ, ಸಿದ್ಧಗಂಗಾ ಶ್ರೀಗಳ, ಹೊಸಹಳ್ಳಿ ಉದ್ಯಾನವನ್ನು ನಗರಸಭೆ ಅಭಿವೃದ್ಧಿಪಡಿಸಿದ್ದು, ಖಾಸಗಿ ಅವರು ನಿರ್ವಹಣೆ ಮಾಡುತ್ತಿದ್ದಾರೆ. ಚಳಿಗಾಲ ಮುಗಿದಿದ್ದು, ಎಲೆಗಳು ಹೆಚ್ಚಾಗಿ ಉದುರುತ್ತಿವೆ. ವಾರಕ್ಕೊಮ್ಮೆ ತ್ಯಾಜ್ಯ ವಿಲೇವಾರಿ ಮಾಡಿದರೂ, ಕಸ ಹೆಚ್ಚಾಗುತ್ತಲೇ ಇದೆ. ಆಗಾಗ್ಗೆ ಶುಚಿಗೊಳಿಸಲು ಕ್ರಮವಹಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಎಸ್‌.ಲೋಕೇಶ್‌ ಹೇಳಿದರು.

ಹಾಳಾಗುತ್ತಿದೆ ಆನೆ ಪಾರ್ಕ್‌

ಬಾಲಭವನ ಉದ್ಯಾನವನ್ನು (ಆನೆ ಪಾರ್ಕ್‌) 19ನೇ ವಾರ್ಡ್‌ ನಾಗರಿಕರ ವೇದಿಕೆ ನಿರ್ವಹಣೆ ಮಾಡುತ್ತಿತ್ತು. ವೇದಿಕೆ ಸದಸ್ಯರಿಗೆ ನಗರಸಭೆ ಸಿಬ್ಬಂದಿ ಸರಿಯಾದ ರೀತಿಯಲ್ಲಿ ಸಹಕಾರ ನೀಡದ ಕಾರಣ ಈಗ ಉದ್ಯಾನ ಹಾಳಾಗುತ್ತಿದೆ.

ಸುಂದರವಾಗಿದ್ದ ಉದ್ಯಾನದಲ್ಲಿ ಸೌಲಭ್ಯಗಳ ಕೊರತೆ ಇದೆ. ಉದ್ಯಾನದ ಸುತ್ತಲೂ ಇದ್ದ ದೀಪಗಳನ್ನು ಕಳವು ಮಾಡಲಾಗಿದೆ. ಆವರಣದಲ್ಲಿರುವ ಶೌಚಾಲಯಕ್ಕೆ ಸರಿಯಾಗಿ ನೀರು ಸರಬರಾಜಾಗುತ್ತಿಲ್ಲ. ಸ್ವಚ್ಛತೆ ಕೊರತೆಯಿಂದಾಗಿ ಜನರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಮಧುಮೇಹ ಇರುವ ನಾಗರಿಕರು ವಿಹಾರಕ್ಕೆ ಬರುತ್ತಾರೆ. ಅವರಿಗೆ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಪರಿತಪಿಸುವಂತಾಗಿದೆ.

‘ಸುಶೀಲಮ್ಮ ಪಾರ್ಕ್‌ ಸೇರಿದಂತೆ ಆಟಿಕೆಗಳು ಇರುವ ಪಾರ್ಕ್‌ನಲ್ಲಿ ಜೋಕಾಲಿ ಸೇರಿದಂತೆ ಮಕ್ಕಳ ಆಟಿಕೆಗಳನ್ನು ವಯಸ್ಕರು ಆಗಾಗ್ಗೆ ಉಪಯೋಗಿಸುತ್ತಿದ್ದು, ಹಾಳಾಗುತ್ತಿವೆ. ಅದನ್ನು ಮಕ್ಕಳು ಆಡಲೆಂದು ರೂಪಿಸಲಾಗಿದ್ದು, ವಯಸ್ಕರು ಕುಳಿತುಕೊಳ್ಳುವುದರಿಂದ ಅದರ ಸಾಮರ್ಥ್ಯ ಕುಂದಿ, ಬೇಗನೇ ಹಾಳಾಗುತ್ತಿದೆ’ ಎಂದು ವಿದ್ಯಾನಗರದ ನಿವಾಸಿ ಸೋಮಯ್ಯ ಹೇಳಿದರು.

ಖಾಸಗಿ ನಿರ್ವಹಣೆಗೆ ಉದ್ಯಾನಗಳು

ಉದ್ಯಾನಗಳನ್ನು ಶುಚಿಯಾಗಿಡಲು ಸಾಕಷ್ಟು ಶ್ರಮಿಸಲಾಗುತ್ತಿದೆ. ಆದರೂ ಸಾಕಷ್ಟು ದೂರುಗಳು ಕೇಳಿ ಬರುತ್ತಲೇ ಇವೆ. ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದರಿಂದ, ತಿಂದು ಬೀಸಾಡುವುದು ಸೇರಿದಂತೆ ಕಸ ಹೆಚ್ಚಾಗುವುದನ್ನು ತಡೆಯಬಹುದು. ಯಾರಾದರೂ ಮುಂದೆ ಬಂದರೆ ಎಲ್ಲಾ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಿ ಖಾಸಗಿ ಸಂಸ್ಥೆಗೆ ನಿರ್ವಹಣೆ ಮಾಡಲು ನೀಡಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಎಸ್‌.ಲೋಕೇಶ್ ಹೇಳಿದರು.

ಜನಾಭಿಪ್ರಾಯ

ಆಟಿಕೆ ಮಕ್ಕಳಿಗಿರಲಿ

ಉದ್ಯಾನಗಳ ಮಕ್ಕಳ ಆಟಿಕೆಗಳಲ್ಲಿ ದೊಡ್ಡವರು ಆಡುತ್ತಿರುತ್ತಾರೆ. ಮಕ್ಕಳಿಗಾಗಿ ಇರುವುದು ಎಂದು ಅರ್ಥೈಸಿಕೊಂಡು ಸುಮ್ಮನಿದ್ದರೆ ಅವರಿಗೂ ಗೌರವ. ಇದರಿಂದ ಮಕ್ಕಳ ಆಟಿಕೆ ಸಾಕಷ್ಟು ದಿನ ಬಾಳಿಕೆ ಬರುತ್ತದೆ.

-ಜಿ.ವರ್ಷಾ, ಮರಿಗೌಡ ಬಡಾವಣೆ

ಸೂಕ್ತ ನಿರ್ವಹಣೆ ಇಲ್ಲ

ಉದ್ಯಾನಗಳು ಮನಸ್ಸಿಗೆ ಮುದ ನೀಡುವ ತಾಣಗಳಾಗಿರದೆ, ಅವ್ಯವಸ್ಥೆಯ ಆಗರಗಳಾಗಿವೆ. ನಗರದಲ್ಲಿ ಒಂದೆರಡು ಉದ್ಯಾನಗಳನ್ನು ಹೊರತುಪಡಿಸಿದರೆ ಬಹುತೇಕ ಉದ್ಯಾನಗಳು ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು.

-ಎಚ್.ಬಿ.ಮನೋಜ್ ಕುಮಾರ್, ಸುಭಾಷ್ ನಗರ

ಯುವಜನರ ಅಸಭ್ಯ ವರ್ತನೆ

ಮಹಿಳೆಯರು, ಮಕ್ಕಳು ವಾಯುವಿಹಾರಕ್ಕೆ ಬರುತ್ತಾರೆ ಎಂಬುದನ್ನು ಅರಿಯದೆ ಜಿಲ್ಲಾಧಿಕಾರಿ ಕಚೇರಿ ಉದ್ಯಾನ ಸೇರಿದಂತೆ ಇತರ ಉದ್ಯಾನಗಳಲ್ಲಿ ಯುವಜನರು ಅಸಭ್ಯವಾಗಿ ವರ್ತಿಸುತ್ತಾರೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

–ಎನ್. ದಿವ್ಯಶ್ರೀ, ಶಂಕರ್ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT