ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ| ಅಂಡರ್‌ಪಾಸ್‌ಗಾಗಿ ಹೋರಾಟ: ಹೆದ್ದಾರಿ 2 ಗಂಟೆ ಬಂದ್, ಸಂಚಾರ ಅಸ್ತವ್ಯಸ್ತ

Last Updated 20 ಫೆಬ್ರುವರಿ 2023, 7:47 IST
ಅಕ್ಷರ ಗಾತ್ರ

ಮಂಡ್ಯ: ತಾಲ್ಲೂಕಿನ ಹನಕೆರೆ ಬಳಿ ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಸುತ್ತಮುತ್ತಲಿನ ಗ್ರಾಮಗಳ ಜನರು, ರೈತಸಂಘದ ಸದಸ್ಯರು ಸೋಮವಾರ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೈವೆಯನ್ನು 2 ಗಂಟೆಗೂ ಹೆಚ್ಚುಕಾಲ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ಹೆದ್ದಾರಿ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು ಇದೇ ಮೊದಲ ಬಾರಿಗೆ ಗ್ರಾಮಸ್ಥರು ದೊಡ್ಡ ಮಟ್ಟದಲ್ಲಿ ಬಂದ್‌ ನಡೆಸಿ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿಯ ಎರಡೂ ಕಡೆ ಎತ್ತಿನ ಗಾಡಿ, ಟ್ರ್ಯಾಕ್ಟರ್‌ ಹಾಗೂ ಜಾನುವಾರುಗಳನ್ನು ನಿಲ್ಲಿಸಿದ್ದ ಕಾರಣ ಸಂಚಾರ ಅಸ್ತವ್ಯವಸ್ತಗೊಂಡಿತ್ತು. 2 ಕಿ.ಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಹಿಂದೆ ಮುಂದೆ ತೆರಳಲಾಗದೇ, ಸರ್ವೀಸ್‌ ರಸ್ತೆಗೂ ಹೋಗಲು ಸಾಧ್ಯವಾಗದೇ ಬಿಸಿಲಿನಲ್ಲಿ ವಾಹನ ಸವಾರರು ಪರದಾಡಿದರು. ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಪೊಲೀಸರ ವಿರುದ್ಧ ಕೆಂಡಾಮಂಡಲರಾದ ಪ್ರತಿಭಟನಾಕಾರರು ಸಂಜೆಯವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೊಲೀಸರು ಮಂಡ್ಯ ಹಾಗೂ ಮದ್ದೂರಿನಲ್ಲಿಯೇ ವಾಹನ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಿದರು. ಆದರೆ, ಹನಕೆರೆ ಬಳಿ ಇದ್ದ ವಾಹನಗಳು ನಿಂತಲ್ಲೇ ನಿಂತಿದ್ದವು.

ಕೆಳಸೇತುವೆ ಬೇಕು: ಹನಕೆರೆ ಹೊರವಲಯದಲ್ಲಿ ನಿರ್ಮಿಸಿರುವ ಕೆಳಸೇತುವೆ ಗ್ರಾಮದ ಹೊರಗಿದ್ದು ಅದು ಯಾರ ಉಪಯೋಗಕ್ಕೂ ಬರುತ್ತಿಲ್ಲ. ಇದರಿಂದ ಐದಾರು ಹಳ್ಳಿಗಳ ಜನರಿಗೆ ತೊಂದರೆಯಾಗಿದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಬರಲು 2 ಕಿ.ಮೀ ತೆರಳಬೇಕು. ಗ್ರಾಮದ ಬಳಿಯಲ್ಲೇ ಕೆಳಸೇತುವೆ ನಿರ್ಮಾಣ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಾಮಗಾರಿ ಆರಂಭವಾದ ದಿನದಿಂದಲೇ ಕೆಳಸೇತುವೆ ನಿರ್ಮಾಣಕ್ಕಾಗಿ ಒತ್ತಾಯಿಸಲಾಗುತ್ತಿದೆ, ಲಿಖಿತ ಮನವಿ ಸಲ್ಲಿಸಲಾಗಿದೆ. ಆದರೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮನವಿಗೆ ಸ್ಪಂದಿಸುತ್ತಿಲ್ಲ. ಹೆದ್ದಾರಿ ಕಾಮಗಾರಿ ಮುಗಿಯುತ್ತಿದ್ದು ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೆಳಸೇತುವೆ ಕಾಮಗಾರಿ ಆರಂಭವಾಗದಿದ್ದರೆ ಹೆದ್ಧಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಬಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ‘ಅನುಮತಿ ಸಿಕ್ಕಕೂಡಲೇ ಕೆಳಸೇತುವೆ ನಿರ್ಮಿಸಿಕೊಡಲಾಗುವುದು, ಈಗ ಪ್ರತಿಭಟನೆ ಕೈಬಿಡಿ’ ಎಂದು ಮನವಿ ಮಾಡಿದರು. ಈ ಕುರಿತು ಕಳೆದ ಡಿಸೆಂಬರ್‌ನಲ್ಲಿ ಸಲ್ಲಿಸಿದ್ದ ಪತ್ರ ತೋರಿಸಿದರು. ಎಂಜಿನಿಯರ್‌ ತಂದಿದ್ದ ಪತ್ರ ಕಿತ್ತುಕೊಂಡ ಹೋರಾಟಗಾರರು ಅದನ್ನು ಹರಿದುಹಾಕಿದರು, ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಈ ಸಂದರ್ಭದಲ್ಲಿ ಅಧಿಕಾರಿಗಳು, ಪೊಲೀಸರು ಹಾಗೂ ಪ್ರತಿಭಟಕಾರರ ನಡುವೆ ವಾಗ್ವಾದ, ತಳ್ಳಾಟ, ನೂಕಾಟ ನಡೆಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಶೀಘ್ರ ಕೆಳಸೇತುವೆ ಕಾಮಗಾರಿ ಆರಂಭಿಸಲಾಗುವುದು ಎಂದು ಪ್ರಾಧಿಕಾರಿದ ಅಧಿಕಾರಿಗಳು ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು.

ಇಬ್ಬರು ವಶಕ್ಕೆ: ಪ್ರತಿಭಟನೆ ಸಂಘಟಿಸಿದ್ದ ರೈತಸಂಘ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಎಸ್‌.ಸಿ.ಮಧುಚಂದನ್‌ ಹಾಗೂ ಮುಖಂಡ ಪ್ರಸನ್ನ ಗೌಡ ಅವರನ್ನು ವಶಕ್ಕೆ ಪಡೆದ ಪೊಲೀಸರು ಗ್ರಾಮಾಂತರ ಪೊಲೀಸ್‌ ಠಾಣೆಗೆ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT