ಸೋಮವಾರ, ಸೆಪ್ಟೆಂಬರ್ 20, 2021
24 °C
ಪ್ರಭಾವಿಗಳಿಂದಲೇ ಶಿಕ್ಷಣ ಸಂಸ್ಥೆಯ ಜಾಗ ಕಬಳಿಕೆ, ಜಿಲ್ಲಾಧಿಕಾರಿ ಮಧ್ಯಪ್ರವೇಶಕ್ಕೆ ಒತ್ತಾಯ

ಮಂಡ್ಯ ವಿವಿ ಜಾಗ ಒತ್ತುವರಿ ತೆರವು ಯವಾಗ?

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಐತಿಹಾಸಿಕ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ರ) ಈಗ ಏಕೀಕೃತ ಮಂಡ್ಯ ವಿಶ್ವವಿದ್ಯಾಲಯವಾಗಿ ಅಸ್ಥಿತ್ವಕ್ಕೆ ಬಂದಿದ್ದು ಎಲ್ಲಾ ಚರಾಸ್ಥಿ, ಸ್ಥಿರಾಸ್ತಿ ನೂತನ ವಿವಿ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಲಾಗಿದೆ. ಆದರೆ, ವಿವಿಯ ಜಾಗ ವಿವಿಧೆಡೆ ಒತ್ತವರಿಯಾಗಿದ್ದು ಅದನ್ನು ತೆರವುಗೊಳಿಸುವುದು ನೂತನ ವಿಶ್ವವಿದ್ಯಾಲಯಕ್ಕೆ ಸವಾಲಾಗಿ ಪರಿಣಮಿಸಿದೆ.

ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವ ಸರ್ಕಾರಿ ಮಹಾವಿದ್ಯಾಲಯ ಜಿಲ್ಲೆಯ ಜ್ಞಾನಕೇಂದ್ರವಾಗಿತ್ತು. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ದೊಡ್ಡ ಸ್ಥಾನದಲ್ಲಿದ್ದಾರೆ. ಒಂದು ಕಾಲದಲ್ಲಿ ಸಾಮಾಜಿಕ, ರೈತ ಹೋರಾಟದ ಪ್ರಮುಖ ಕೇಂದ್ರವಾಗಿತ್ತು. ಸಂಸ್ಥೆಯ ಹಿನ್ನೆಲೆ ಪರಿಗಣಿಸಿ ರಾಜ್ಯ ಸರ್ಕಾರ 2019–20ನೇ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯವನ್ನಾಗಿ ರೂಪಿಸಿದೆ.

ಸರ್ಕಾರಿ ಮಹಾವಿದ್ಯಾಲಯ ಮಂಡ್ಯ ವಿವಿ ಜೊತೆ ವಿಲೀನಗೊಂಡಿದ್ದು ಕಾಲೇಜು ಶಿಕ್ಷಣ ಇಲಾಖೆ ಸೂಚನೆಯ ಮೇರೆಗೆ ಎಲ್ಲಾ ಸ್ಥಿರಾಸ್ತಿ ಚಾರಾಸ್ತಿಯನ್ನು ವಿವಿಗೆ ಹಸ್ತಾಂತರ ಮಾಡಲಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಮಂಡ್ಯ ವಿವಿ ವ್ಯಾಪ್ತಿಯಲ್ಲಿ 31.8 ಎಕರೆ ಜಾಗವಿದೆ. ಆದರೆ ವಾಸ್ತವವಾಗಿ ಇಷ್ಟು ಜಾಗ ಇಲ್ಲದಿರುವುದು ನೂತನ ವಿಶ್ವವಿದ್ಯಾಲಯದ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.

ಸರ್ಕಾರಿ ಮಹಾವಿದ್ಯಾಲಯ ಒತ್ತುವರಿ ವಿಚಾರ ಇಂದು ನಿನ್ನೆಯದಲ್ಲ. ಈ ಬಗ್ಗೆ ದಶಕಗಳ ಹಿಂದೆಯೇ ಹಲವು ಹೋರಾಟಗಳು ನಡೆದಿವೆ. ಜಾಗ ಒತ್ತುವರಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಈಗ ಎಲ್ಲಾ ಪ್ರಕರಣಗಳಲ್ಲಿ ಕಾನೂನು ಹೋರಾಟ ನಡೆಸಬೇಕಾದ ಜವಾಬ್ದಾರಿ ವಿಶ್ವವಿದ್ಯಾಲಯದ ಮೇಲೆ ಬಂದಿದೆ. ಸಂಸ್ಥೆ ಕಟ್ಟುವ ಜೊತೆಗೆ ಸರ್ಕಾರಿ ಭೂಮಿ ಉಳಿಸಿಕೊಳ್ಳಬೇಕಾದ ಹೊಣೆಗಾರಿಗೆ ವಿವಿ ಕುಲಪತಿ, ಕುಲಸಚಿವರ ಮೇಲೆ ಬಿದ್ದಿದೆ.

‘ಮಿಮ್ಸ್‌ ಆಸ್ಪತ್ರೆ ಜಾಗ ಒತ್ತುವರಿಯಾಗಿರುವ ಕಾರಣ ಇಡೀ ಆಸ್ಪತ್ರೆ ಆವರಣ ಕಿಷ್ಕಿಂದೆಯಾಗಿದೆ, ಅಭಿವೃದ್ಧಿ ಅಸಾಧ್ಯವಾಗಿದೆ. ಇಂಥದ್ದೇ ಪರಿಸ್ಥಿತಿ ಮಂಡ್ಯ ವಿವಿಗೂ ಬರುವ ಸಾಧ್ಯತೆ ಇದೆ. ಈಗಿರುವ ಮೈದಾನವನ್ನು ಉಳಿಸಿಕೊಂಡು ವಿವಿಗೆ ರೂಪಕೊಡುವುದು ಅಸಾಧ್ಯ. ಹೀಗಾಗಿ ಸಂಸ್ಥೆಯ ಸುತ್ತಲೂ ಒತ್ತುವರಿಯಾಗಿರುವ ಭೂಮಿಯನ್ನು ಕೂಡಲೇ ತೆರವುಗೊಳಿಸಬೇಕು. ಎಲ್ಲಾ ಪ್ರಕರಣಗಳು ತ್ವರಿತವಾಗಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಸರ್ಕಾರಿ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಮಂಜುನಾಥ್‌ ತಿಳಿಸಿದರು.

ಒತ್ತುವರಿ ಮಾಡಿಕೊಂಡವರು ಯಾರು: ವಿಶ್ವವಿದ್ಯಾಲಯದ ಆವರಣದ ಸುತ್ತಲೂ ಹಲವು ಪ್ರಭಾವಿ ವ್ಯಕ್ತಿಗಳು, ವಿವಿಧ  ಸಂಸ್ಥೆಗಳ ಮಾಲೀಕರು ಜಾ ಒತ್ತುವರಿ ಮಾಡಿಕೊಂಡಿದ್ದಾರೆ. ಕೆಲವರು ಕಲ್ಯಾಣ ಮಂಟಪ, ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಾಣ, ಇತರ ಸಂಘಸಂಸ್ಥೆ ನಿರ್ಮಾಣ ಮಾಡಿಕೊಂಡಿದ್ದಾರೆ. ತಾವು ಹಣ ಕೊಟ್ಟು ಭೂಮಿ ಖರೀದಿ ಮಾಡಿಕೊಂಡಿರುವುದಾಗಿ ಒತ್ತುವರಿದಾರರು ವಾದ ಮಾಡುತ್ತಿದ್ದಾರೆ.

ಒತ್ತುವರಿ ತೆರವಿನ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲದ ಕಾರಣ ಸಮಸ್ಯೆ ಕಗ್ಗಂಟಾಗಿ ಉಳಿದಿದೆ. ಸರ್ಕಾರಿ ಜಾಗ ರಕ್ಷಣೆ ಮಾಡುವವರೇ ಇಲ್ಲವಾಗಿದ್ದಾರೆ ಎಂದು ವಿದ್ಯಾಲಯದ ಹಳೇ ವಿದ್ಯಾರ್ಥಿಗಳು ಆರೋಪಿಸುತ್ತಾರೆ.

ಸರ್ಕಾರಿ ಮಹಾವಿದ್ಯಾಲಯದಕ್ಕೆ ಭೂಸ್ವಾಧೀನ ಮಾಡಿಕೊಂಡ ದಾಖಲಾತಿ ಪ್ರಕಾರ ಒತ್ತುವರಿಗೆ ಒಳಗಾಗಿರುವ ಕೆಲ ಭೂಮಿಗೂ ಆರ್‌ಟಿಸಿ ಬರುತ್ತಿದ್ದು ಅದರ ಆಧಾರದ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಇನ್ನೂ ಕೆಲ ಭೂಮಿಯ ವಿವರ ಸ್ವಾಧೀನ ದಾಖಲಾತಿಯಲ್ಲಿದ್ದು ಆರ್‌ಟಿಸಿ ಬರುತ್ತಿಲ್ಲ, ಆದರೂ ಹಕ್ಕುಸ್ವಾಮ್ಯ ದಾವೆ ಹೂಡಲಾಗಿದೆ.

‘ವಿವಿ ಭೂಮಿ ವಾಪಸ್‌ ಪಡೆಯುವಲ್ಲಿ ಜಿಲ್ಲಾಡಳಿತದ ಜವಾಬ್ದಾರಿ ದೊಡ್ಡದಿದೆ. ಜೊತೆಗೆ ಜಿಲ್ಲಾ ಮಟ್ಟದಲ್ಲಿರುವ ಸರ್ಕಾರಿ ಅಭಿಯೋಜಕರು ಪ್ರಕರಣದ ವಸ್ತುಸ್ಥಿತಿಯ ಬಗ್ಗೆ ಆಗಿಂದಾಗ್ಗೆ ನಿಗಾ ವಹಿಸಿ ಪ್ರಕರಣ ಬೇಗ ಇತ್ಯರ್ಥವಾಗುವಂತೆ ನೋಡಿಕೊಳ್ಳಬೇಕು’ ಎಂದು ಹಿರಿಯ ವಕೀಲ ಬಿ.ಟಿ.ವಿಶ್ವನಾಥ್‌ ಹೇಳಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಜಿಲ್ಲಾಧಿಕಾರಿ ಎಸ್‌.ಅಶ್ವತಿ ಅವರಿಗೆ ಕರೆ ಮಾಡಲಾಯಿತು, ಆದರೆ ಅವರು ಕರೆ ಸ್ವೀಕರಿಸಲಿಲ್ಲ.

********

ಕಂದಾಯ ಇಲಾಖೆಯ ನಿರ್ಲಕ್ಷ್ಯ

ಜಾಗ ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ದಾಖಲಾತಿಗಳ ವಿಚಾರದಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವಂತೆ ಮೊದಲು ಸರ್ಕಾರಿ ಮಹಾವಿದ್ಯಾಲಯ, ಈಗ ಮಂಡ್ಯ ವಿವಿ ಸಿಬ್ಬಂದಿ ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳ ಧೋರಣೆಯಿಂದಾಗಿ ಹಲವು ದಶಕಗಳಿಂದ ಗೊಂದಲ ಹಾಗೆಯೇ ಉಳಿದಿದೆ.

‘ಸರ್ಕಾರಿ ಮಹಾವಿದ್ಯಾಲಯದಿಂದ  ಎಲ್ಲಾ ದಾಖಲಾತಿಗಳು ವಿವಿಗೆ ಹಸ್ತಾಂತರವಾಗಿವೆ. ಜಾಗ ಒತ್ತುವರಿ ಪ್ರಕರಣದ ಕಡತಗಳನ್ನೂ ನಾವು ಪಡೆದಿದ್ದೇವೆ. ವಿವಿ ಜಾಗ ರಕ್ಷಣೆಗಾಗಿ ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ. ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಮಂಡ್ಯ ವಿವಿ ಕುಲಸಚಿವ (ಆಡಳಿತ) ರಾಮೇಗೌಡ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು