ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಕೆರೆ ನೀರು ಖಾಲಿ; ಅಧಿಕಾರಿಗಳ ಕೆಸರೆರಚಾಟ

ಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆ, ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ
Published 6 ಏಪ್ರಿಲ್ 2024, 5:31 IST
Last Updated 6 ಏಪ್ರಿಲ್ 2024, 5:31 IST
ಅಕ್ಷರ ಗಾತ್ರ

ಮಂಡ್ಯ: ಗುತ್ತಲು ಕೆರೆ ಕಲುಷಿತಗೊಂಡು ಸುತ್ತಮುತ್ತಲಿನ ಬಡಾವಣೆ, ಹಳ್ಳಿಗಳ ಜನರು ದುರ್ವಾಸನೆ ಜೊತೆ ಬದುಕುವಂತಾಗಿದೆ. ಆದರೆ, ಜನರ ಸಮಸ್ಯೆ ಪರಿಹರಿಸಬೇಕಾದ ವಿವಿಧ ಇಲಾಖೆ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಾ ನಿರ್ಲಕ್ಷ್ಯ ಪ್ರದರ್ಶಿಸಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಕೆರೆಯಲ್ಲಿ ನೀರು ಖಾಲಿಯಾಗಿ ಕೊಳಚೆಯಷ್ಟೇ ಉಳಿದಿದ್ದು 3 ಕಿ.ಮೀ.ವರೆಗೂ ದುರ್ವಾಸನೆ ಬೀರುತ್ತಿದೆ. ಲಕ್ಷಾಂತರ ಮೀನು ಮೃತಪಟ್ಟಿದ್ದು ಯತ್ತಗದಹಳ್ಳಿ, ಆಲಹಳ್ಳಿ, ತಾವರಗೆರೆ, ಗುತ್ತಲು ನಿವಾಸಿಗಳು ರೋಗಭೀತಿಯಿಂದ ಒದ್ದಾಡುತ್ತಿದ್ದಾರೆ. ಕುಡಿಯುವ ನೀರಿನಲ್ಲೂ ವಾಸನೆ ಇದ್ದು ಜನರು ಆರ್‌ಒ ನೀರು ತಂದು ಕುಡಿಯುತ್ತಿದ್ದಾರೆ. ಮಕ್ಕಳಿಗೆ ಶೀತಜ್ವರ ಕಾಡುತ್ತಿದೆ, ವೃದ್ಧರಿಗೆ ಆಸ್ತಮಾ ಹೆಚ್ಚಾಗಿದೆ.

ಕಳೆದೊಂದು ವಾರದಿಂದ ಇಷ್ಟೆಲ್ಲಾ ಸಮಸ್ಯೆಯಾಗಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ. ನೀರಿನ ಮಾದರಿ ಕೊಂಡೊಯ್ದ ಅಧಿಕಾರಿಗಳು ಮತ್ತೆ ಕೆರೆ ಕಡೆಗೆ ತಿರುಗಿ ನೋಡಿಲ್ಲ. ಜನರ ಆರೋಗ್ಯ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಡೇ ಪಕ್ಷ ದುರ್ವಾಸನೆ ಕಡಿಮೆ ಮಾಡುವ ಯಾವುದೇ ರಾಸಾಯನಿಕ ಸಿಂಪಡಿಸಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮುಳುಗಿ ಹೋಗಿರುವ ಅಧಿಕಾರಿಗಳು ಜನರ ಸಂಕಷ್ಟದ ಕಡೆಗೆ ನೋಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೆರೆಯ ನೀರು ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಕೊಟ್ಟಿದ್ದಾರೆ. ಆಮ್ಲಜನಕ ಕೊರತೆಯೇ ಮೀನುಗಳ ಸಾವಿಗೆ ಕಾರಣ ಎಂದು ತಿಳಿಸಿದ್ದಾರೆ. ಆದರೆ ದುರ್ವಾಸನೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದ ಅವರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳತ್ತ ಬೊಟ್ಟು ಮಾಡಿ ತೋರಿಸುತ್ತಾರೆ.

‘ಮಾಲಿನ್ಯ ನಿಯಂತ್ರಣ ಮಂಡಳಿ ಮಾಲೀಕತ್ವದಲ್ಲಿ ಗುತ್ತಲು ಕೆರೆ ಇಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ನೀರು ಖಾಲಿ ಮಾಡಿದ್ದು ಏಕೆ? ದುರ್ವಾಸನೆ ನಿಯಂತ್ರಣ ಮಾಡುವ ಜವಾಬ್ದಾರಿ ನಮ್ಮದಲ್ಲ. ನಗರಸಭೆ, ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿ ಹೇಮಾ ಹೇಳಿದರು.

‘ಮಂಡ್ಯ ತಾಲ್ಲೂಕಿನಲ್ಲಿ ಒಂದೂ ಕೆರೆಯೂ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಇಲ್ಲ’ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೈತೊಳೆದುಕೊಳ್ಳುತ್ತಾಳೆ. ಗುತ್ತಲು ಕೆರೆಯು ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುತ್ತಿದ್ದು ನಿಗಮದ ಅಧಿಕಾರಿಗಳು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರಸಭೆ ಅಧಿಕಾರಿಗಳ ಕಡೆಗೆ ಬೆರಳು ತೋರಿಸುತ್ತಾರೆ.

‘ನಾವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ, ನಮ್ಮ ಕಾರು ಚಾಲಕ ವಾಸನೆ ತಡೆಯಲಾಗದೇ ವಾಂತಿ ಮಾಡಿಕೊಂಡಿದ್ದಾನೆ. ದುರ್ವಾಸನೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆ ಪೌರಾಯುಕ್ತ ಹಾಗೂ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದೇವೆ’ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ನಂಜುಂಡೇಗೌಡ ಹೇಳಿದರು.

ಈ ಕುರಿತು ನಗರಸಭೆ ಅಧಿಕಾರಿಗಳನ್ನು ಕೇಳಿದರೆ ಬೇರೆಯದ್ದೇ ಕತೆ ಹೇಳುತ್ತಾರೆ. ‘ಕೊಳಚೆ ನೀರು ಶುದ್ಧೀಕರಣ ಘಟಕ ಸರಿಯಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳುತ್ತಾರೆ. ಆದರೆ ಸ್ಥಳೀಯರು ಇದನ್ನು ನಿರಾಕರಿಸುತ್ತಾರೆ.

‘ಶುದ್ಧೀಕರಣ ಘಟಕ ಹಾಳಾಗಿದ್ದು ನಗರಸಭೆ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ನಗರಸಭೆ ಪೌರಾಯುಕ್ತರು ಸೇರಿ ಅಧಿಕಾರಿಗಳು ಕೆರೆ ಬಳಿ ಬಂದು ಪರಿಶೀಲನೆ ನಡೆಸಿ ತಕ್ಷಣಕ್ಕೆ ದುರ್ವಾಸನೆ ಕಡಿಮೆ ಮಾಡುವ ಕ್ರಮ ಕೈಗೊಳ್ಳಬೇಕು’ ಎಂದು ಗತ್ತಲು ಬಡಾವಣೆಯ ಇಂದಿರಾ ಕಾಲೊನಿ ನಿವಾಸಿಗಳು ಒತ್ತಾಯಿಸಿದರು.

ಗುತ್ತಲು ಕೆರೆ ಕಲುಷಿತಗೊಂಡಿರುವುದು
ಗುತ್ತಲು ಕೆರೆ ಕಲುಷಿತಗೊಂಡಿರುವುದು
ನಾವು ನೀರಿನ ಮಾದರಿ ಪರೀಕ್ಷಿಸಿದ್ದು ಆಮ್ಲಜನಕ ಕೊರತೆಯಿಂದ ಮೀನು ಮೃತಪಟ್ಟಿವೆ. ಕೆರೆ ನೀರನ್ನು ರೈತರಿಗೆ ಹರಿಸಿದ್ದೇ ಮೀನುಗಳ ಸಾವಿಗೆ ಕಾರಣ
–ಹೇಮಾ ಜಿಲ್ಲಾ ಪರಿಸರ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT