ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಜಾನೆ ಧಾವಂತ, ಮಧ್ಯಾಹ್ನ ಸ್ತಬ್ಧ

ಲಾಕ್‌ಡೌನ್‌ ಕಟ್ಟುನಿಟ್ಟಿನ ಜಾರಿ, ಖರೀದಿ ಅವದಿಯಲ್ಲಿ ನಿಯಮ ಉಲ್ಲಂಘಿಸಿದ ಜನರು
Last Updated 28 ಏಪ್ರಿಲ್ 2021, 13:50 IST
ಅಕ್ಷರ ಗಾತ್ರ

ಮಂಡ್ಯ: ಬುಧವಾರದಿಂದ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರದ ನಿಯಮದನ್ವಯ ಲಾಕ್‌ಡೌನ್‌ ಜಾರಿಗೊಳಿಸಲಾಗಿದ್ದು, ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿದಂತೆ ಮಿಕ್ಕೆಲ್ಲ ಅಂಗಡಿ–ಮುಂಗಟ್ಟು ಬಂದ್‌ ಆಗಿದ್ದವು.

ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು. ಆ ಸಮಯದಲ್ಲಿ ಸಾರ್ವಜನಿಕರು ಧಾವಂತದಿಂದ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ವಿವಿಧೆಡೆ ಮಾಡಲಾಗಿರುವ ಮಾರುಕಟ್ಟೆಯಲ್ಲಿ ಜನಜಂಗುಳಿ ಇತ್ತು. ಕೆಲವೆಡೆ ಜನರು ಕೋವಿಡ್‌ ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂತು. ವರ್ತಕರು ಬೆಳಿಗ್ಗೆ 5 ಗಂಟೆಯಿಂದಲೇ ವಸ್ತುಗಳನ್ನು ತಂದು ಮಾರಾಟಕ್ಕೆ ಸಿದ್ಧವಾಗುತ್ತಿದ್ದರು. ಅವರ ಮೊಗದಲ್ಲೂ ಧಾವಂತ ಇತ್ತು.

9.30 ಆಗುತ್ತಿದ್ದಂತೆ ಪೊಲೀಸರು ರಸ್ತೆಗಿಳಿದರು. ಅಂಗಡಿ ಮುಚ್ಚಿಸುವ ಚಟುವಟಿಕೆ ನಡೆಸಿದರು. ಮಧ್ಯಾಹ್ನದ ವೇಳೆಗೆ ಇಡೀ ನಗರದ ಚಟುವಟಿಕೆ ಸ್ತಬ್ಧಗೊಂಡಿತ್ತು, ಮೌನಕ್ಕೆ ಶರಣಾಗಿತ್ತು. ಔಷಧ ಅಂಗಡಿಗಳು, ಆಸ್ಪತ್ರೆ ಸೇರಿದಂತೆ ವೈದ್ಯಕೀಯ ಸೇವೆಗಳು ಎಂದಿನಂತೆ ಇದ್ದವು.

ನಗರದ ಹಲವೆಡೆ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸಿ ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ದಂಡ ವಿಧಿಸಿದರು. ಜಿಲ್ಲಾಧಿಕಾರಿ ಎಸ್‌.ಅಶ್ವಥಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ಅವರು ನಗರದ ಹೊಳಲು ವೃತ್ತ, ಮಹಾವೀರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕರ್ಫ್ಯೂ ಪರಿಶೀಲಿಸಿದರು. ನಿಗಮ, ಖಾಸಗಿ ಬಸ್‌ಗಳು, ಆಟೊ ಸಂಚಾರ ಬಂದ್‌ ಆಗಿತ್ತು.

ಅನಗತ್ಯ ಓಡಾಟ ತಡೆಗಟ್ಟಲು ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಿದ್ದರೂ, ವಾಹನ ಪರಿಶೀಲಿಸದೆ ಸುಮ್ಮನೆ ನಿಂತಿದ್ದ ಕಾರಣ ಬೈಕ್‌, ಕಾರುಗಳು ಆಗಿಂದಾಗ್ಗೆ ರಸ್ತೆಗಳಲ್ಲಿ ಸಂಚರಿಸುತ್ತಿದ್ದವು. ‘ಪೊಲೀಸರು ಕಟ್ಟುನಿಟ್ಟಾಗಿ ವಾಹನಗಳನ್ನು ತಪಾಸಣೆ ಮಾಡಿದಾಗ ಜನರು ಭಯದಿಂದ ಅನವಶ್ಯಕವಾಗಿ ತಿರುಗಾಡುವುದನ್ನು ಕಡಿಮೆ ಮಾಡುತ್ತಾರೆ. ಕಟ್ಟುನಿಟ್ಟಾಗಿ ವಾಹನಗಳನ್ನು ತಪಾಸಣೆ ಮಾಡಬೇಕು’ ಎಂದು ಒತ್ತಾಯಿಸುತ್ತಾರೆ ಸುಭಾಷ್‌ನಗರದ ನಿವಾಸಿ ಸೋಮಶೇಖರ್‌.

ಮದ್ಯದಂಗಡಿ ಖಾಲಿ ಖಾಲಿ: ಒಂದೆಡೆ ಮದ್ಯ ಪ್ರಿಯರಿಗೆ ಬೇಸರವಾಗದ ರೀತಿಯಲ್ಲಿ ಬೆಳಿಗ್ಗೆ 10ರವರೆಗೆ ತೆರೆಯಲು ಅವಕಾಶ ನೀಡಲಾಗಿತ್ತು. ನಗರದ ನೂರಡಿ ರಸ್ತೆ ಸೇರಿದಂತೆ ಹಲವೆಡೆ ಮದ್ಯದಂಗಡಿಗಳನ್ನು ತೆರೆದಿದ್ದರೂ ಗ್ರಾಹಕರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿತ್ತು. ಮಂಗಳವಾರವೇ ಖರೀದಿಸಿದ್ದ ಕಾರಣ ಬೆಳಿಗ್ಗೆ ಮದ್ಯದಂಗಡಿ ಬಳಿ ಗ್ರಾಹಕರು ಇರಲಿಲ್ಲ.

‘ಮದ್ಯದಂಗಡಿಗೆ ಅವಕಾಶ ನೀಡಿರುವುದೇನೋ ಖುಷಿಯ ವಿಷಯವಾದರೂ ಬೆಳಿಗ್ಗೆಯೇ ಮದ್ಯ ಖರೀದಿಸಲು ಆಗುವುದಿಲ್ಲ. ಕೆಲಸ ಕಾರ್ಯಗಳಿರುತ್ತವೆ. ಸಂಜೆ ಕೆಲಸ ಮುಗಿದ ನಂತರ ಮದ್ಯ ಖರೀದಿಸುತ್ತಿದ್ದೆ. ಆದರೆ ಈಗ ಅದು ಸಾಧ್ಯವಿಲ್ಲ. ಆದ್ದರಿಂದ ಬೆಳಿಗ್ಗೆಯೇ ಮದ್ಯ ಖರೀದಿಸುತ್ತಿದ್ದೇನೆ’ ಎಂದು ಕಟ್ಟಡ ಕಾರ್ಮಿಕರೊಬ್ಬರು ತಿಳಿಸಿದರು.

ಹೊಸಹಳ್ಳಿ ವೃತ್ತ ಮಾರುಕಟ್ಟೆಯೇ?

ನಗರದಲ್ಲಿ 3 ಕಡೆ ತರಕಾರಿ ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಹೊಸಹಳ್ಳಿ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಮಾರುಕಟ್ಟೆಯ ವಾತಾವರಣ ನಿರ್ಮಾಣವಾಗಿತ್ತು. ವ್ಯಾಪಾರಿಗಳು ತರಕಾರಿ ಸೇರಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು, ಜನರು ಮುಗಿಬಿದ್ದಿದ್ದರು.

ಒಂದೇ ಕಡೆ 6 ರಸ್ತೆಗಳು ಕೂಡುವುದರಿಂದ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಇಂತಹ ಕಡೆ ಮಾರುಕಟ್ಟೆ ನಡೆಯಬಾರದು, ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ಇಂತಹ ಪರಿಸ್ಥಿತಿ ಇದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.

‘ಗುರುವಾರದಿಂದ ಹೊಸಹಳ್ಳಿ ವೃತ್ತದಲ್ಲಿ ರಸ್ತೆ ಬದಿ ಮಾರಾಟ ಮಾಡುವ ವ್ಯಾಪಾರಿಗಳನ್ನು ತೆರವುಗೊಳಿಸಲಾಗುವುದು. ನಿಗದಿತ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಮಾಡುವಂತೆ ಸೂಚಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಎಸ್‌.ಲೋಕೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT