ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಪಡೆಯುತ್ತ ಕಲಾ ನೈಪುಣ್ಯದಿಂದ ಹಣ ಗಳಿಸುವ ಸುಚಿತ್ರಾ!

ಮಹಿಳೆಯರ ಮನಕ್ಕೊಪ್ಪುವಂತೆ ಸೀರೆಗಳಿಗೆ ಕುಚ್ಚು ಹಾಕುವ ವಿದ್ಯಾರ್ಥಿನಿ
Last Updated 10 ಮೇ 2019, 20:01 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಮೊಬೈಲ್ ಫೋನ್‌ ಮತ್ತು ಟಿವಿ ವೀಕ್ಷಣೆಯ ಗೀಳು ಜಾಡ್ಯವಾಗಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿನಿಯೊಬ್ಬರು ಶಿಕ್ಷಣ ಪಡೆಯುತ್ತಲೇ ಸೀರೆಗಳಿಗೆ ಕುಚ್ಚು ಹಾಕಿ, ನೂಲಿನಿಂದ ಅಲಂಕಾರಿಕ ಉತ್ಪನ್ನ ಸಿದ್ಧಪಡಿಸಿ ಹಣ ಗಳಿಸುತ್ತಿದ್ದಾರೆ.

ಗಂಜಾಂ ನಿಮಿಷಾಂಬ ದೇವಾಲಯದ ಅರ್ಚಕ ಎಂ.ಕೆ. ಭಟ್ ಅವರ ಪುತ್ರಿ ಸುಚಿತ್ರಾ ಎಂ. ಭಟ್ ಸೀರೆಗಳಿಗೆ ಕುಚ್ಚು ಹಾಕುವ ಮತ್ತು ನೂಲಿನಿಂದ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ದ್ವಿತೀಯ ಪಿಯುಸಿ ಮುಗಿಸಿ ಪದವಿ ಶಿಕ್ಷಣ ಪಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಅವರು ತಿಂಗಳಲ್ಲಿ 10–12 ಸೀರೆಗಳಿಗೆ ಕುಚ್ಚು ಹಾಕಿ ಹಣ ಸಂಪಾದಿಸುತ್ತಿದ್ದಾರೆ.

ಕುಚ್ಚುಗಳ ಶೈಲಿ ಆಧರಿಸಿ ಒಂದು ಸೀರೆಗೆ ₹ 200ರಿಂದ ₹1 ಸಾವಿರದವರೆಗೆ ಹಣ ಪಡೆಯುತ್ತಿದ್ದಾರೆ. ಮಹಿಳೆಯರ ಮನಕ್ಕೊಪ್ಪುವಂತೆ ಮಣಿ ಮತ್ತು ಹರಳುಗಳಿಂದ ಆಕರ್ಷಕ ಕುಚ್ಚು ಹಾಕುತ್ತಾರೆ. ₹ 1 ಸಾವಿರದಿಂದ ₹ 50 ಸಾವಿರ ಬೆಲೆಯ ಸೀರೆಗಳನ್ನು ಮಹಿಳೆಯರು ಸುಚಿತ್ರಾ ಅವರಿಗೆ ಕೊಟ್ಟು ಕುಚ್ಚು ಹಾಕಿಸಿಕೊಳ್ಳುತ್ತಾರೆ.

ಮನೆಯ ಅಂದ ಹೆಚ್ಚಿಸುವ ವಿವಿಧ ಅಲಂಕಾರಿಕ ವಸ್ತುಗಳು ಸುಚಿತ್ರಾ ಕೈಯಲ್ಲಿ ಸೃಷ್ಟಿಯಾಗುತ್ತವೆ. ವ್ಯಾನಿಟಿ ಬ್ಯಾಗ್, ಟೀ ಕಪ್, ನೆಲಹಾಸು, ಪರ್ಸ್‌, ಬಾಗಿಲು ಮತ್ತು ದೇವರ ಮನೆಗಳ ತೋರಣಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ಬಿಡುವಿನ ವೇಳೆಯಲ್ಲಿ ಕುಚ್ಚು ಹಾಕುವ ಮತ್ತು ಅಲಂಕಾರಿಕ ವಸ್ತುಗಳನ್ನು ಸಿದ್ಧದಪಡಿಸುವ ಕೆಲಸ ಮಾಡಿ ಮಾಸಿಕ ₹ 3ರಿಂದ 4 ಸಾವಿರ ಹಣ ಸಂಪಾದಿಸುತ್ತಿದ್ದಾರೆ. ಒಂದು ತಿಂಗಳಲ್ಲಿ ₹ 10 ಸಾವಿರ ಸಂಪಾದನೆಯಾದ ಉದಾಹರಣೆಯೂ ಉಂಟು.

‘ಪಕ್ಕದ ಮನೆಯ ಮಹಿಳೆಯರಿಂದ ಕುಚ್ಚು ಹಾಕುವ ಮತ್ತು ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸುವ ಕಲೆಯನ್ನು ಹಂತ ಹಂತವಾಗಿ ಕಲಿತಿದ್ದೇನೆ. ನೂರಾರು ಸೀರೆಗಳಿಗೆ ಕುಚ್ಚು ಹಾಕಿಕೊಟ್ಟಿದ್ದೇನೆ. 50ಕ್ಕೂ ಹೆಚ್ಚು ವಿನ್ಯಾಸದ ಕುಚ್ಚು ಹಾಕುತ್ತೇನೆ. 20ಕ್ಕೂ ಹೆಚ್ಚು ಬಗೆಯ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಬಲ್ಲೆ’ ಎಂದು ಸುಚಿತ್ರಾ ಹೇಳುತ್ತಾರೆ.

‘ಕಲಿಯುತ್ತ ಗಳಿಸಬೇಕು ಎಂಬುದು ಗಾಂಧೀಜಿ ಅವರ ಮೂಲ ಶಿಕ್ಷಣ ಪರಿಕಲ್ಪನೆಯ ಪ್ರಧಾನ ಅಂಶ. ಅದರಂತೆ ನಮ್ಮ ಮಗಳು ಕಳೆದ 4 ವರ್ಷಗಳಿಂದ ಶಿಕ್ಷಣ ಪಡೆಯುತ್ತ ಹಣ ಸಂಪಾದಿಸುತ್ತಿರುವುದು ಸಂತಸ ತಂದಿದೆ. ಸಾಕಷ್ಟು ಬಾರಿ ಆಕೆ ದುಡಿದ ಹಣದಿಂದಲೇ ಮನೆಯ ಖರ್ಚು ಭರಿಸಿದ್ದೇನೆ’ ಎಂದು ಸುಚಿತ್ರಾ ತಂದೆ ಮಹಾಬಲೇಶ್ವರ ಕೆ. ಭಟ್ ಸಂತಸ ವ್ಯಕ್ತಪಡಿಸುತ್ತಾರೆ.

ಐಎಎಸ್ ಕನಸು

2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸುಚಿತ್ರ ಶೇ 97.12 ಅಂಕ ಪಡೆದು ತಾಲ್ಲೂಕಿಗೇ ಪ್ರಥಮ ಸ್ಥಾನ ಪಡೆದಿದ್ದಾರೆ. ಮೈಸೂರಿನ ವಿಜಯ ಚೇತನ ಕಾಲೇಜಿನಲ್ಲಿ ಪ್ರಸಕ್ತ ವರ್ಷ ದ್ವಿತೀಯ ಪಿಯು ಮುಗಿಸಿದ್ದು, ಶೇ 93 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಐಎಎಸ್ ಅಧಿಕಾರಿ ಆಗುವ ಮಹದಾಸೆ ಹೊಂದಿರುವ ಸುಚಿತ್ರಾ ಪದವಿ ಪಡೆಯುವ ಮುನ್ನವೇ ಯುಪಿಎಸ್ಸಿ ಪರೀಕ್ಷೆ ಎದುರಿಸುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT