ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಬೆಂಬಲ ಬೆಲೆ ಭತ್ತ ಕದ್ದ ರೈಸ್‌ ಮಿಲ್‌ ಮಾಲೀಕರು

2 ಗಿರಣಿಗಳ ವಿರುದ್ಧ ಎಫ್‌ಐಆರ್‌, ಕೋಟ್ಯಂತರ ರೂಪಾಯಿ ಅವ್ಯವಹಾರ, ತನಿಖೆಗೆ ಆಗ್ರಹ
Last Updated 2 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಮಂಡ್ಯ: ಬೆಂಬಲ ಬೆಲೆ ಯೋಜನೆ (ಎಂಎಸ್‌ಪಿ) ಅಡಿ ಖರೀದಿಸಿ ಸಂಗ್ರಹಿಸಲಾಗಿದ್ದ ಅಪಾರ ಪ್ರಮಾಣದ ಭತ್ತವನ್ನು ಅಕ್ಕಿ ಗಿರಣಿ ಮಾಲೀಕರು ಕಳ್ಳಸಾಗಣೆ ಮಾಡಿರುವುದು ಪತ್ತೆಯಾಗಿದ್ದು 2 ಅಕ್ಕಿ ಗಿರಣಿಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಬೆಂಬಲ ಬೆಲೆ ಯೋಜನೆ ಅಡಿ ಏಪ್ರಿಲ್‌ ತಿಂಗಳವರೆಗೆ 9 ಲಕ್ಷ ಕ್ವಿಂಟಲ್‌ ಭತ್ತ ಖರೀದಿ ಮಾಡಲಾಗಿತ್ತು. ಖರೀದಿ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಅಕ್ಕಿ ಗಿರಣಿ ಮಾಲೀಕರಿಗೆ ವಹಿಸಿತ್ತು. ಅದಕ್ಕೆ ನೋಡೆಲ್‌ ಏಜೆನ್ಸಿಯಾಗಿ ರಾಜ್ಯ ಸಹಕಾರ ಮಹಾಮಂಡಳವನ್ನು ನೇಮಕ ಮಾಡಲಾಗಿತ್ತು. ಜಿಲ್ಲೆಯ 87 ಅಕ್ಕಿ ಗಿರಣಿಗಳು ಭತ್ತ ಸಂಗ್ರಹ ಮಾಡಿದ್ದವು.

ಆದರೆ ಬಹುತೇಕ ಅಕ್ಕಿ ಗಿರಣಿ ಮಾಲೀಕರು ಪರಿವರ್ತಿತ ಅಕ್ಕಿ ಪೂರೈಸದೇ ಮೀನಾಮೇಷ ಎಣಿಸುತ್ತಿದ್ದು ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹಲ್ಲಿಂಗ್‌ ನಂತರ ಭತ್ತದ ಪ್ರಮಾಣದಲ್ಲಿ ಶೇ 67ರಷ್ಟು ಅಕ್ಕಿ ಸರಬರಾಜು ಮಾಡಬೇಕು. ಅದರಂತೆ 6 ಲಕ್ಷ ಕ್ವಿಂಟಲ್‌ ಅಕ್ಕಿ ನೀಡಬೇಕು.

ಆದರೆ ಇಲ್ಲಿಯವರೆಗೆ 3.5 ಲಕ್ಷ ಕ್ವಿಂಟಲ್‌ ಅಕ್ಕಿ ಸರಬರಾಜು ಮಾಡಿದ್ದು ಇನ್ನೂ ಶೇ 45ರಷ್ಟು ಅಕ್ಕಿ ಬರಬೇಕಿದೆ. ಹಲವು ಅಕ್ಕಿ ಗಿರಣಿ ಮಾಲೀಕರು ತಪ್ಪು ಲೆಕ್ಕ ತೋರಿಸಿದ್ದು ಸಂಗ್ರಹ ಮಾಡಿದ್ದ ಅಕ್ಕಿಯನ್ನು ಮಾರಾಟ ಮಾಡಿರುವ ಹಲವು ದೂರುಗಳು ದಾಖಲಾಗಿವೆ.

ಪಾಂಡವಪುರದ ಎಂ.ಆರ್‌.ರೈಸ್‌ ಮಿಲ್‌ ಬೆಂಬಲ ಬೆಲೆ ಯೋಜನೆ ಅಡಿ ಸಂಗ್ರಹಿಸಿದ್ದ 22 ಸಾವಿರ ಕ್ವಿಂಟಲ್‌ ಭತ್ತವನ್ನು ಕಳ್ಳ ಸಾಗಣೆ ಮಾಡಿರುವುದು ಪತ್ತೆಯಾಗಿದ್ದು ಮಾಲೀಕರ ವಿರುದ್ಧ ಪಾಂಡವಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಪಾಂಡವಪುರ ತಾಲ್ಲೂಕು, ಚಿಕ್ಕಬ್ಯಾಡರಹಳ್ಳಿಯ ಅಕ್ಕಿ ಗಿರಣಿಯೊಂದರ ಮೇಲೂ ಎಫ್‌ಐಆರ್‌ ದಾಖಲಾಗಿದೆ. ಅನ್ನಭಾಗ್ಯ ಅಕ್ಕಿ ಸಂಗ್ರಹ ಮಾಡಿರುವ ಕುರಿತಂತೆ ದೂರು ದಾಖಲು ಮಾಡಲಾಗಿದೆ. ಈ ಪ್ರಕರಣದಲ್ಲಿ ಜಪ್ತಿ ಮಾಡಲಾಗಿದ್ದ ಅಕ್ಕಿ ಅನ್ನಭಾಗ್ಯದ ಅಕ್ಕಿ ಅಲ್ಲ ಎಂದು ವರದಿ ನೀಡಿದ್ದಾರೆ ಎಂಬ ಆರೋಪದ ಮೇಲೆ ಆಹಾರ ಇಲಾಖೆ ಉಪ ನಿರ್ದೇಶಕಿ ಕುಮುದಾ ಅವರನ್ನು ಅಮಾನತು ಮಾಡಲಾಗಿತ್ತು. ಇಲಾಖಾ ತನಿಖೆಯ ನಂತರ ಅವರನ್ನು ಸದ್ಯ ಮೈಸೂರು ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

ರೈತರಿಗೆ ಅನ್ಯಾಯ: ಬೆಂಬಲಬೆಲೆ ಯೋಜನೆಯಡಿ ಅಕ್ಕಿ ಗಿರಣಿ ಮಾಲೀಕರು ಮೊದಲಿನಿಂದಲೂ ರಾಮಕೃಷ್ಣ ಲೆಕ್ಕ ತೋರಿಸುತ್ತಲೇ ಬಂದಿದ್ದಾರೆ. ಬಹಳ ತಡವಾಗಿ ಬೆಂಬಲ ಬೆಲೆ ಘೋಷಣೆ ಮಾಡಿದ ಕಾರಣ ಬಹುತೇಕ ರೈತರು ಮುಕ್ತ ಮಾರುಕಟ್ಟೆಯಲ್ಲೇ ಭತ್ತ ಮಾರಾಟ ಮಾಡಿಕೊಂಡಿದ್ದರು.

ದಲ್ಲಾಳಿಗಳು ಆರ್‌ಟಿಸಿ ದುರುಪಯೋಗ ಮಾಡಿಕೊಂಡು ರೈತರ ಹೆಸರಿನಲ್ಲಿ ಬೆಂಬಲ ಬೆಲೆಗೆ ಭತ್ತ ಮಾರಾಟ ಮಾಡಿರುವ ಪ್ರಕರಣವೂ ಬೆಳಕಿಗೆ ಬಂದಿತ್ತು. ಈ ಬಗ್ಗೆ ರೈತರು ಆಗಿಂದಾಗ್ಗೆ ದೂರು ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದ ಕಾರಣ ಗಿರಣಿ ಮಾಲೀಕರು ಮತ್ತೆ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ರೈತರು ಆರೋಪಿಸುತ್ತರೆ.

‘ಅಕ್ಕಿ ಖರೀದಿ ಜವಾಬ್ದಾರಿಯನ್ನು ರೈಸ್‌ಮಿಲ್‌ ಮಾಲೀಕರಿಗೆ ವಹಿಸಿದ್ದೇ ದೊಡ್ಡ ತಪ್ಪು. ಮೊದಲಿನಿಂದಲೂ ರೈಸ್‌ ಮಿಲ್‌ ಮಾಲೀಕರು ರೈತರಿಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಭತ್ತ ಖರೀದಿಯಲ್ಲೂ ರೈತರಿಗೆ ಮೋಸ ಮಾಡಿದ್ದಾರೆ, ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಈಗ ಖರೀದಿ ಮಾಡಿಕೊಂಡ ಭತ್ತವನ್ನೂ ಕಳ್ಳ ಸಾಗಣೆ ಮಾಡಿದ್ದಾರೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಯಬೇಕು’ ಎಂದು ರೈತಸಂಘ, ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಒತ್ತಾಯಿಸಿದರು.

ಮಾಲೀಕರ ಆಸ್ತಿ ಜಪ್ತಿ
ಪಾಂಡವಪುರದ ಎಂ.ಆರ್‌.ರೈಸ್‌ ಮಿಲ್‌ ಮಾಲೀಕ ಅಝೀಜ್‌ ಕೋವಿಡ್‌–19ನಿಂದ ಮೃತಪಟ್ಟಿದ್ದಾರೆ. ಅವರು ಮೃತಪಟ್ಟ ನಂತರ ಅವರ ಕುಟುಂಬ ಸದಸ್ಯರು ಭತ್ತ ಕಳ್ಳ ಸಾಗಣೆ ಮಾಡಿದ್ದಾರೆ. ಆ ಹಣಕ್ಕೆ ರೈಸ್‌ ಮಿಲ್‌ ಮಾಲೀಕರ ಆಸ್ತಿ ಜಪ್ತಿ ಮಾಡಿ, ನಷ್ಟದ ಹಣ ಭರಿಸಿಕೊಳ್ಳಲು ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

**

ರೈಸ್‌ಮಿಲ್‌ ಮಾಲೀಕರು ಸಂಗ್ರಹ ಮಾಡಿರುವ ಭತ್ತ, ಪರಿವರ್ತಿತ ಅಕ್ಕಿ ಸರಬರಾಜು ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು
–ಎಸ್‌.ಅಶ್ವತಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT