ಬುಧವಾರ, ಆಗಸ್ಟ್ 4, 2021
27 °C
ಪಾಳು ಕೊಂಪೆಯಂತಾದ ಮೈಷುಗರ್‌ ಕಾರ್ಖಾನೆ ಆವರಣ, ಸರ್ಕಾರಿ ಆಸ್ತಿಗೆ ರಕ್ಷಣೆ ಇಲ್ಲ

ಷುಗರ್‌ ಟೌನ್‌: ಕಬ್ಬಿಣ, ಶೀಟ್‌, ಕಾಯಿ ಲೂಟಿ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

ಮಂಡ್ಯ: ಮೈಷುಗರ್‌ ಕಾರ್ಖಾನೆಯ ಕಾರ್ಮಿಕರಿಗಾಗಿ ನಿರ್ಮಾಣ ಮಾಡಿರುವ ಷುಗರ್‌ ಟೌನ್‌ ಆವರಣದಲ್ಲಿ ಕಳ್ಳಕಾಕರ ಹಾವಳಿ ವಿಪರೀತವಾಗಿದ್ದು ಬೆಲೆಬಾಳುವ ಕಬ್ಬಿಣದ ಉಪಕರಣಗಳು, ಮನೆಯ ಸಾಮಗ್ರಿಗಳು ಲೂಟಿಕೋರರ ಪಾಲಾಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಒಂದು ಕಾಲದಲ್ಲಿ ಷುಗರ್‌ ಟೌನ್‌ ಎಂದರೆ ಜಿಲ್ಲೆಯ ಜನರಿಗೆ ಹೆಮ್ಮೆಯ ವಿಚಾರವಾಗಿತ್ತು. ಅಲ್ಲಿ ಐತಿಹಾಸಿಕ ಕಾರ್ಖಾನೆಯ ಕಾರ್ಮಿಕರಿಗೆ ಸಕಲ ಸೌಲಭ್ಯ ಒದಗಿಸಲಾಗಿತ್ತು. ಬಡಾವಣೆಯಲ್ಲಿ ಸುಸಜ್ಜಿತ ಈಜುಕೊಳ, ಉದ್ಯಾನ, ಶಾಲೆ, ಆಸ್ಪತ್ರೆ, ಕಲ್ಯಾಣಮಂಟಪ, ಬ್ಯಾಂಕ್‌, ಅಂಚೆ ಕಚೇರಿ, ಸಹಕಾರ ಸಂಘಗಳು, ಕ್ಲಬ್‌ಗಳಿದ್ದವು. ಆವರಣದಲ್ಲಿ 400 ಮನೆಗಳಲ್ಲಿ ಕಾರ್ಮಿಕರು ವಾಸವಿದ್ದರು.

ಆದರೆ ಮೈಷುಗರ್‌ ಕಾರ್ಖಾನೆ ರೋಗಗ್ರಸ್ತಗೊಂಡ ನಂತರ ಷುಗರ್‌ ಟೌನ್‌ ಪಾಳು ಕೊಂಪೆಯಂತಾಗಿದೆ. ಇತ್ತೀಚೆಗಷ್ಟೇ ಜಾರಿಗೊಳಿಸಿದ ಸ್ವಯಂ ನಿವೃತ್ತಿ ಯೋಜನೆಯಡಿ 200 ಕಾರ್ಮಿಕರು ಕಡ್ಡಾಯ ನಿವೃತ್ತಿ ಪಡೆದಿದ್ದಾರೆ. ಅವರೆಲ್ಲರೂ ಷುಗರ್‌ ಟೌನ್‌ ಖಾಲಿ ಮಾಡಿದ್ದಾರೆ. ಈಗ ಕೇವಲ 30 ಮಂದಿ ಕಾರ್ಮಿಕರು ಕಾರ್ಖಾನೆ ಆವರಣದಲ್ಲಿ ಇದ್ದು ಇಡೀ ಆವರಣ ಕತ್ತಲಲ್ಲಿ ಮುಳುಗಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕೆಲ ಕಿಡಿಗೇಡಿಗಳು ಆವರಣದಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದಾರೆ.

ಕೆಲವು ಮನೆಗಳು ಬೀಳುವ ಸ್ಥಿತಿಯಲ್ಲಿ ಅವುಗಳನ್ನು ತೆರವುಗೊಳಿಸಲಾಗುತ್ತಿದೆ. ಅಲ್ಲಿರುವ ಶೀಟ್‌ಗಳು, ಮರದ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಮೈಷುಗರ್‌ ಆವರಣ ನೋಡಿಕೊಳ್ಳಲು ಎಸ್ಟೇಟ್‌ ಆಧಿಕಾರಿ ಇದ್ದಾರೆ, ಕಾವಲುಗಾರರೂ ಇದ್ದಾರೆ. ಆದರೆ ಕಳ್ಳಕಾಕರ ಹಾವಳಿಯನ್ನು ತಡೆಯಲು ಸಾಧ್ಯವಾಗಿಲ್ಲ. ಆ ಭಾಗದಲ್ಲಿ ಪೊಲೀಸ್‌ ಭದ್ರತೆಯೂ ಸರಿಯಾಗಿ ಇಲ್ಲದ ಕಾರಣ ಮೈಷುಗರ್‌ ಆವರಣದಲ್ಲಿ ನಡೆಯುತ್ತಿರುವ ಕಳ್ಳರ ಆಟಾಟೋಪ ಸಾರ್ವಜನಿಕರಿಗೆ ಗೊತ್ತಾಗುತ್ತಿಲ್ಲ.

‘ಸದ್ಯ ವಸತಿಗೃಹಗಳಲ್ಲಿ ವಾಸವಾಗಿರುವ ಕೆಲವು ಕಾರ್ಮಿಕರು ಕೂಡ ಕಳ್ಳತನದಲ್ಲಿ ಶಾಮೀಲಾಗಿದ್ದಾರೆ. ಅವರಿಗೆ ಗೊತ್ತಿಲ್ಲದೇ ಯಾವುದೇ ಘಟನೆ ನಡೆಯುವುದಿಲ್ಲ. ಕಾರ್ಮಿಕರನ್ನು ವಿಚಾರಣೆ ನಡೆಸಿದರೆ ಕಳ್ಳರು ಸಿಕ್ಕಿಹಾಕಿಕೊಳ್ಳುತ್ತಾರೆ’ ಎಂದು ಮೈಷುಗರ್‌ ನಿವೃತ್ತ ಕಾರ್ಮಿಕರೊಬ್ಬರು ಹೇಳಿದರು.

ತೆಂಗಿನ ಕಾಯಿ ಕಳ್ಳತನ: ಬೆಲೆಬಾಳುವ ವಸ್ತುಗಳು ಮಾತ್ರವಲ್ಲದೇ ಮೈಷುಗರ್‌ ಆವರಣದಲ್ಲಿ 400ಕ್ಕೂ ಹೆಚ್ಚು ತೆಂಗಿನ ಮರಗಳಿವೆ. ಮರದಿಂದ ಬೀಳುವ ತೆಂಗಿನಕಾಯಿ ಕೂಡ ಲೂಟಿಕೋರರ ಪಾಲಾಗುತ್ತಿವೆ. ಕೆಲವು ಕಾರ್ಮಿಕರು ಮುಂದೆ ನಿಂತು ಕಾಯಿ ಕೀಳಿಸಿ ಬಹಿರಂಗವಾಗಿಯೇ ಮಾರಾಟ ಮಾಡುತ್ತಿದ್ದಾರೆ. ಸರ್ಕಾರಿ ಆಸ್ತಿಗೆ ರಕ್ಷಣೆ ಇಲ್ಲವಾಗಿದೆ. ಅಲ್ಲಿ ಹೇಳುವವರು ಕೇಳುವವರೇ ಇಲ್ಲವಾಗಿದ್ದಾರೆ ಎಂದು ನಿವೃತ್ತ ಕಾರ್ಮಿಕರು ಆರೋಪಿಸುತ್ತಾರೆ.

ಷುಗರ್‌ ಟೌನ್‌ನಲ್ಲಿ ಕಳ್ಳಕಾಕರ ಹಾವಳಿ ಹೆಚ್ಚಾಗಿದೆ. ಜೊತೆಗೆ ಕುಡುಕರ ಹಾವಳಿಯೂ ಹೆಚ್ಚಾಗಿದೆ. ಮದ್ಯದ ಬಾಟಲಿಗಳು, ಪ್ಲಾಸ್ಟಿಕ್‌ ವಸ್ತುಗಳು ಚೆಲ್ಲಾಡುತ್ತಿವೆ. ಆ ಭಾಗದಲ್ಲಿ ಜನರು ಒಂಟಿಯಾಗಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

‘ಷುಗರ್‌ಟೌನ್‌ನಲ್ಲಿ ಕಳ್ಳತನವಾಗಿರುವ ವಿಚಾರ ನಮಗೂ ಗೊತ್ತಾಗಿದ್ದು ಈಗಾಗಲೇ ಪೊಲೀಸ್‌ ದೂರು ನೀಡಲಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ನಾಲ್ವರನ್ನು  ಬಂಧಿಸಲಾಗಿದೆ. ಈ ಕುರಿತು ಸಭೆ ನಡೆಸಲಾಗಿದ್ದು 10 ಮಂದಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯಿನ್ನು ನೇಮಕ ಮಾಡಲು ನಿರ್ಧಾರ ಮಾಡಲಾಗಿದೆ’ ಎಂದು ಮೈಷುಗರ್‌ ಅಧ್ಯಕ್ಷ ಶಿವಲಿಂಗೇಗೌಡ ಹೇಳಿದರು.

ನಿವೃತ್ತಿ ನಂತರವೂ ವಾಸ
ಷುಗರ್‌ ಟೌನ್‌ನಲ್ಲಿ ಸದ್ಯ 30 ಮಂದಿ ಕಾರ್ಮಿಕರು ವಾಸ ಮಾಡುತ್ತಿದ್ದಾರೆ. ಅವರಲ್ಲಿ ಬಹುತೇಕ ಮಂದಿ ನಿವೃತ್ತರಾಗಿ ಹಲವು ವರ್ಷ ಕಳೆದರೂ ಅಲ್ಲೇ ವಾಸ ಮಾಡುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಪ್ರಭಾವ ಬಳಸಿ ಅವರು ಅಲ್ಲೇ ವಾಸವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿವೃತ್ತರು ವಾಸಿಸುತ್ತಿರುವ ಮನೆಗಳ ವಿದ್ಯುತ್‌ ಬಿಲ್‌, ನೀರಿನ ಬಿಲ್‌ಗಳನ್ನು ಕಾರ್ಖಾನೆ ವತಿಯಿಂದಲೇ ಪಾವತಿ ಮಾಡಬೇಕಿದೆ. ನಿವೃತ್ತರನ್ನು ಷುಗರ್‌ಟೌನ್‌ನಿಂದ ಖಾಲಿ ಮಾಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು