ಶನಿವಾರ, ಮೇ 28, 2022
31 °C
ಸರ್ಕಾರವೇ ಕಾರ್ಖಾನೆ ನಡೆಸಲು ಶಿಫಾರಸು

ಮಂಡ್ಯ | ಮೈಷುಗರ್: ಗುಜರಾತ್‌ ಸಹಕಾರ ಸಕ್ಕರೆ ಕಾರ್ಖಾನೆಗಳ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸುವ ನಿರ್ಧಾರ ಪ್ರಕಟಿಸಿರುವ ಈ ಸಂದರ್ಭದಲ್ಲಿ ಭಾರತೀಯ ಸಂಪನ್ಮೂಲ ಮಾಹಿತಿ ಮತ್ತು ಆಡಳಿತ ತಂತ್ರಜ್ಞಾನ ಸಂಸ್ಥೆ (ಐಎನ್‌–ಆರ್‌ಎಂಐಟಿ) ನೀಡಿರುವ ವರದಿಯ ಶಿಫಾರಸುಗಳು ಕಾರ್ಖಾನೆ ಪುನಶ್ಚೇತನ ಪ್ರಯತ್ನಕ್ಕೆ ಸಹಕಾರಿಯಾಗಿ ನಿಲ್ಲುತ್ತವೆ.

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಸಹಯೋಗದಂದಿಗೆ 2015ರಲ್ಲೇ ಐಎನ್‌–ಆರ್‌ಐಎಂಟಿ ವರದಿ ನೀಡಿದೆ. ಆದರೆ ಖಾಸಗಿ ಗುತ್ತಿಗೆ ಪರ ಇದ್ದ ಸರ್ಕಾರ ಈ ವರದಿಗೆ ಯಾವುದೇ ಕಿಮ್ಮತ್ತು ನೀಡದ ಕಾರಣ ಇಲ್ಲಿಯವರೆಗೂ ಅನುಷ್ಠಾನ ಸಾಧ್ಯವಾಗಿಲ್ಲ. ಸದ್ಯ ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸುವ ಕುರಿತು ಮುಖ್ಯಮಂತ್ರಿಗಳು ನಿರ್ಧಾರ ಪ್ರಕಟಿಸಿರುವ ಕಾರಣ ಈ ವರದಿಯ ಶಿಫಾರಸುಗಳು ಈಗ ಪ್ರಸ್ತುತ ಎನಿಸುತ್ತವೆ. ವರದಿಯ ಪ್ರತಿ ‘ಪ್ರಜಾವಾಣಿ’ಗೆ ಸಿಕ್ಕಿದೆ.

ಗುಜರಾತ್‌ ರಾಜ್ಯದಲ್ಲಿರುವ ಸಹಕಾರ ಸಕ್ಕರೆ ಕಾರ್ಖಾನೆಗಳ ಸಮಗ್ರ ವ್ಯವಸ್ಥೆಯನ್ನು ಮೈಷುಗರ್‌ ಪುನಶ್ಚೇತನಕ್ಕೂ ಜಾರಿಗೊಳಿಸಬೇಕು ಎಂದು ವರದಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಇಡೀ ದೇಶದಲ್ಲೇ ಗುಜರಾತ್‌ ಸಕ್ಕರೆ ಕಾರ್ಖಾನೆಗಳು ಹೆಚ್ಚು ಲಾಭದಲ್ಲಿವೆ, ಕಬ್ಬಿಗೆ ಹೆಚ್ಚಿನ ಬೆಲೆ ನೀಡುತ್ತಿವೆ.

ಅದಕ್ಕೆ ಪ್ರಮುಖ ಕಾರಣ ಆ ರಾಜ್ಯದಲ್ಲಿರುವ ರಾಜಕೀಯ ಹಸ್ತಕ್ಷೇಪ ರಹಿತವಾದ ಕಾರ್ಖಾನೆಗಳ ಆಡಳಿತ ವ್ಯವಸ್ಥೆ. ಆಡಳಿತ ಪಕ್ಷದ ಮುಖಂಡರಿಗೆ ಅಲ್ಲಿ ಯಾವುದೇ ಹುದ್ದೆ ಇಲ್ಲ. ನಮ್ಮಲ್ಲಿ ಐಎಎಸ್‌ ಅಧಿಕಾರಿಗಳಿಗೆ ವ್ಯವಸ್ಥಾಪಕ ಹುದ್ದೆ ನೀಡಲಾಗುತ್ತದೆ. ಬಹುತೇಕ ಅಧಿಕಾರಿಗಳಿಗೆ ಸಕ್ಕರೆ ಕಾರ್ಖಾನೆಗಳ ಕಾರ್ಯವೈಖರಿ ತಿಳಿದಿರುವುದಿಲ್ಲ. ಕಾರ್ಖಾನೆ ನಷ್ಟದ ಹಾದಿ ಹಿಡಿಯಲು ಇದೂ ಪ್ರಮುಖ ಕಾರಣ.

ಕಾರ್ಖಾನೆಗಳನ್ನು ಬಲಿಷ್ಠಗೊಳಿಸಲು ಗುಜರಾತ್‌ನಲ್ಲಿ ಸಕ್ಕರೆ ಕಾರ್ಖಾನೆ ತಂತ್ರಜ್ಞಾನದಲ್ಲಿ ಪರಿಣತಿ ಪಡೆದಿರುವ ತಂತ್ರಜ್ಞರನ್ನೇ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಇದರ ಜೊತೆಗೆ ಆಡಳಿತ ಮಂಡಳಿಯಲ್ಲಿ ಕೃಷಿ ಇಲಾಖೆ ಆಯುಕ್ತರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತರು, ಸಕ್ಕರೆ ಆಯುಕ್ತರು, ಹಣಕಾಸು ಇಲಾಖೆ ಕಾರ್ಯದರ್ಶಿ, ನುರಿತ ಲೆಕ್ಕಪರಿಶೋಧಕರನ್ನು ನೇಮಕ ಮಾಡಲಾಗಿದೆ. ಇದರಿಂದಾಗಿ ಅಲ್ಲಿಯ ಕಾರ್ಖಾನೆಗಳು ನಷ್ಟ ಹೊಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

‘ಮೈಷುಗರ್‌ ಪುನಶ್ಚೇತನ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಸಮಿತಿಯ ಸದಸ್ಯರನ್ನು ಸರ್ಕಾರ ಗುಜರಾತ್‌ಗೆ ಕಳುಹಿಸಿ ಅಲ್ಲಿಯ ಸಕ್ಕರೆ ಕಾರ್ಖಾನೆಗಳ ವ್ಯವಸ್ಥೆಯನ್ನು ಅಧ್ಯಯನ ಮಾಡಿಸಬೇಕು’ ಎಂದು ರೈತ ಮುಖಂಡರು ಒತ್ತಾಯಿಸಿದರು.

ವರದಿಯ ಮುಖ್ಯಾಂಶಗಳು: ಕಾರ್ಖಾನೆಗೆ ಶಾಶ್ವತ ಪುನಶ್ಚೇತನ ನೀಡಲು ಐಎನ್‌–ಆರ್‌ಎಂಐಟಿ ಹಲವು ಶಿಫಾರಸುಗಳನ್ನು ಪಟ್ಟಿ ಮಾಡಿದೆ. ಅವುಗಳಲ್ಲಿ ಮುಖ್ಯವಾಗಿ ಕಾರ್ಖಾನೆಯ 2 ಮಿಲ್‌ಗಳ ಪೈಕಿ ಒಂದೇ ಮಿಲ್‌ಅನ್ನು ನಿರಂತರವಾಗಿ 2 ವರ್ಷಗಳವರೆಗೆ ಓಡಿಸಬೇಕು. ಮದ್ಯ ತಯಾರಿಕಾ ಘಟಕವನ್ನು ಕಾರ್ಖಾನೆ ಆರಂಭವಾಗ ಒಂದು ವರ್ಷದೊಳಗೆ ಆರಂಭಿಸಬೇಕು. ಎಥೆನಾಲ್‌ ತಯಾರಿಸಿದರೆ ಕಂಪನಿಗೆ ವರ್ಷಕ್ಕೆ ಕನಿಷ್ಠ 2.5 ಕೋಟಿ ಆದಾಯ ಬರುತ್ತದೆ ಎಂಬ ಸಲಹೆಗಳಿವೆ.

ಸಹ ವಿದ್ಯುತ್‌ ಘಟಕ ಆರಂಭಿಸಿ ಹೆಚ್ಚುವರಿ ವಿದ್ಯುಚ್ಛಕ್ತಿಯನ್ನು ಗ್ರಿಡ್‌ಗೆ ಮಾರಾಟ ಮಾಡಬೇಕು. ದೀರ್ಘ ಕಾಲದವರೆಗೆ ಪ್ರಧಾನ ವ್ಯವಸ್ಥಾಪಕ, ಮುಖ್ಯ ಎಂಜಿನಿಯರ್‌, ಮುಖ್ಯ ಕೆಮಿಸ್ಟ್‌ಗಳನ್ನು ನೇಮಕ ಮಾಡಿಕೊಳ್ಳಬೇಕು. ಇವರೆಲ್ಲರೂ ತಂತ್ರಜ್ಞಾನದಲ್ಲಿ ಪರಿಣತಿ ಪಡೆದವರೇ ಆಗಿರಬೇಕು. ಮುಖ್ಯವಾಗಿ ಮುಖ್ಯ ಆರ್ಥಿಕ ಅಧಿಕಾರಿ, ಲೆಕ್ಕ ಪರಿಶೋಧಕರನ್ನು ಒಳಗೊಂಡ ಪ್ರತ್ಯೇಕ ಹಣಕಾಸು ವಿಭಾಗವನ್ನು ರೂಪಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆಸ್ತಿ ಲೇಔಟ್‌ ಅಭಿವೃದ್ಧಿಗೆ ಸಲಹೆ

ಶ್ರೀನಿವಾಸಪುರ ಹಾಗೂ ಸಾತನೂರು ಗ್ರಾಮಗಳ ಬಳಿ ಇರುವ ಮೈಷುಗರ್‌ ಫಾರಂಗಳನ್ನು ಲೇಔಟ್‌ಗಳನ್ನಾಗಿ ಪರಿವರ್ತಿಸಿ ನಿವೇಶನ ಮಾರಾಟ ಮಾಡಿದರೆ ₹ 100 ಕೋಟಿಗೂ ಹೆಚ್ಚು ಆದಾಯ ಬರುತ್ತದೆ. ಈ ಹಣವನ್ನು ಡಿಸ್ಟೆಲರಿ, ಸಹವಿದ್ಯುತ್‌ ಘಟಕ ಪುನಶ್ಚೇತನಕ್ಕೆ ಬಳಸಬಹುದು ಎಂದೂ ಐಎನ್‌–ಆರ್‌ಐಎಂಟಿ ತನ್ನ ವರದಿಯಲ್ಲಿ ತಿಳಿಸಿದೆ.

ಜೊತೆಗೆ ಮೈಷುಗರ್‌ ಉಗ್ರಾಣದಲ್ಲಿ ಅಪಾರ ಪ್ರಮಾಣದ ಯಂತ್ರೋಪಕರಣಗಳಿವೆ. ಅಧಿಕಾರಿಗಳು ಹೊಸ ಹೊಸ ಯಂತ್ರಗಳನ್ನು ಖರೀದಿಸಿ ಬಳಸದೇ ಬದಲಾವಣೆ ಮಾಡಿದ್ದಾರೆ. ಸುಸ್ಥಿತಿಯಲ್ಲಿರುವ ಯಂತ್ರಗಳನ್ನು ಮಾರಾಟ ಮಾಡಿದರೆ ಕೋಟ್ಯಂತರ ರೂಪಾಯಿ ಹಣ ಬರಲಿದ್ದು ಅದನ್ನೂ ಕಾರ್ಖಾನೆಗೆ ಜೀವ ನೀಡಲು ಉಪಯೋಗಿಸಬಹುದು ಎಂದು ಸಲಹೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು