ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ ಗಲಭೆ | ಪರಿಹಾರ ಕೊಡಿಸಲು ಸಿಎಂ ಒಪ್ಪಿಸಿದ್ದೇನೆ: ಸಚಿವ ಚಲುವರಾಯಸ್ವಾಮಿ

Published : 14 ಸೆಪ್ಟೆಂಬರ್ 2024, 10:20 IST
Last Updated : 14 ಸೆಪ್ಟೆಂಬರ್ 2024, 10:20 IST
ಫಾಲೋ ಮಾಡಿ
Comments

ಮಂಡ್ಯ: ‘ಕಾನೂನಿನಲ್ಲಿ ನಷ್ಟ ಪರಿಹಾರ ನೀಡಲು ಅವಕಾಶವಿಲ್ಲ. ಆದರೂ ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಪರಿಹಾರ ಕೊಡಿಸಲು ಮುಖ್ಯಮಂತ್ರಿ ಅವರನ್ನು ಒಪ್ಪಿಸಿದ್ದೇನೆ. ನಷ್ಟ ಪ್ರಮಾಣದ ವರದಿ ಬಂದ ನಂತರ ಸರ್ಕಾರದಿಂದ ಪರಿಹಾರ ಕೊಡಿಸುವ ಜತೆಗೆ ವೈಯಕ್ತಿಕವಾಗಿಯೂ ಪರಿಹಾರ ನೀಡುತ್ತೇನೆ. ಕುಮಾರಸ್ವಾಮಿ ಅವರು ಪರಿಹಾರ ಕೊಟ್ಟಿದ್ದು ತಪ್ಪಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. 

ನಾಗಮಂಗಲದಲ್ಲಿ ಶನಿವಾರ ಶಾಂತಿಸಭೆ ನಡೆಸಲು ಬಂದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ‘ಗಲಭೆಗೆ ಸರ್ಕಾರವೇ ಕಾರಣ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿಯವರು ಕೂಡ ಅದನ್ನೇ ಹೇಳಿದ್ದಾರೆ. ಹೊರಗಡೆಯವರು ಏನೇ ಮಾತನಾಡಲಿ. ನನಗೆ ನಾಗಮಂಗಲ ಜನರು ಬೇಕು. ಯಾರು ಮೊದಲು ಬೆಂಕಿ ಹಾಕಿದ್ರು? ಎಂಬ ಮಾಹಿತಿ ಇದೆ. ಆದರೆ, ಈ ಸಂದರ್ಭದಲ್ಲಿ ಪಕ್ಷ ಹಾಗೂ ಸಮುದಾಯದ ಬಗ್ಗೆ ಮಾತನಾಡಲ್ಲ. ನನಗೆ ಕ್ಷೇತ್ರದ ಕಾನೂನು ಸುವ್ಯವಸ್ಥೆ ಸರಿಯಾಗಬೇಕು. ಅಗತ್ಯಬಿದ್ದರೆ ವಿಶೇಷ ತನಿಖೆಯನ್ನೂ ಮಾಡಿಸೋಣ’ ಎಂದರು. 

ಚನ್ನಪಟ್ಟಣದ ಉಪಚುನಾವಣೆಗಾಗಿ ಗಲಭೆ ಸೃಷ್ಟಿ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಎರಡು ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿಗೆ ನಾನು ಉತ್ತರ ಕೊಡಬೇಕಾ? ನಾಗಮಂಗಲಕ್ಕೆ ಬಂದವರು ಜನರಿಗೆ ಏನು ಸಂದೇಶ ಕೊಟ್ಟಿದ್ದಾರೆ? ಸಿಎಂ ಇಳಿಸಲು ಕುತಂತ್ರ ಅನ್ನೋದು ಸರಿಯಲ್ಲ. ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡದಿರುವುದೇ ಉತ್ತಮ’ ಎಂದರು. 

ಅಮಾಯಕರನ್ನು ಕೈಬಿಡಲು ಸೂಚನೆ

ಗಲಭೆ ಪ್ರಕರಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕೈಬಿಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಗಲಭೆಯಲ್ಲಿ ರಾಜೇಶ್ ಭಾಗವಹಿಸಿರಲಿಲ್ಲ. ಸಿಸಿಟಿವಿ ಕ್ಯಾಮೆರಾ ನೋಡಿಕೊಂಡು ಬಂಧಿಸಿದರೆ 500 ಜನ ಆಗುತ್ತಾರೆ. ಗಣೇಶ ಮೆರವಣಿಗೆ ‌ತಂಡದಲ್ಲಿ ರಾಜೇಶ್ ಪುತ್ರ ಇದ್ದ ಕಾರಣಕ್ಕೆ ಆತನನ್ನು ಬಂಧಿಸಿದ್ದಾರೆ. ತಪ್ಪು ಮಾಡಿದ ಯಾರನ್ನೂ‌ ರಕ್ಷಣೆ ಮಾಡಲ್ಲ. ಕೆಲವು ಅಮಾಯಕರನ್ನ ಬಂಧಿಸಿರುವುದು‌ ನಿಜ. ಚಾರ್ಜ್‌ಶೀಟ್‌ನಲ್ಲಿ ‌ಕೈಬಿಡಲು ಸೂಚನೆ ‌ನೀಡಿದ್ದೀನಿ. ಇಡೀ ಪ್ರಕರಣಕ್ಕೆ‌ ಕಾರಣಕರ್ತ ಯಾರೆಂದು ಪತ್ತೆ ಹಚ್ಚಿ ಬಂಧಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT