ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನದ ಜಾಗದಲ್ಲಿ ಮೌಢ್ಯಗಳೇ ತುಂಬಿವೆ: ವಿಷಾದ

Last Updated 18 ಜನವರಿ 2021, 13:43 IST
ಅಕ್ಷರ ಗಾತ್ರ

ಮಂಡ್ಯ: ‘ಆದರ್ಶ ವ್ಯಕ್ತಿಗಳ ತತ್ವ, ಜೀವನದ ಸಂದೇಶಗಳನ್ನು ಓದುವುದಕ್ಕೆ ಸೀಮಿತಗೊಳಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಸೋತಿದ್ದೇವೆ. ಇದರಿಂದ ಎಷ್ಟೇ ಓದಿದರೂ ಜ್ಞಾನದ ಜಾಗದಲ್ಲಿ ಮೌಢ್ಯತೆ ತುಂಬಿದೆ ಎಂದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ ಜಿ.ಎನ್‌.ಕೆಂಪರಾಜು ವಿಷಾದಿಸಿದರು.

ಜಿಲ್ಲಾಡಳಿತ, ಸರ್ಕಾರಿ ಮಹಿಳಾ ಕಾಲೇಜು, ನೆಲದನಿ ಬಳಗದ ವತಿಯಿಂದ ಕಾಲೇಜಿನಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

‘ಭಾರತ ಮೌಢ್ಯ, ಕಂದಾಚಾರದಿಂದ ತುಂಬಿ ತುಳುಕುತ್ತಿತ್ತು. ಯೂರೋಪ್‌ ದೇಶಗಳಲ್ಲಿ ಭಾರತದವರನ್ನು ಹಾವಾಡಿಗರ ದೇಶ ಎಂದು ಕರೆಯುತ್ತಿದ್ದರು. ಷಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಭಾರತದ ಕೀರ್ತಿಯನ್ನು ಜಗದಗಲಕ್ಕೂ ಪಸರಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ನಮ್ಮೊಳಗಿನ ಮೌಢ್ಯತೆಯನ್ನು ತೆಗೆದರೆ ಮಾತ್ರ ಸ್ವಾಮಿ ವಿವೇಕಾನಂದರನ್ನು ಕಾಣಲು ಸಾಧ್ಯ’ ಎಂದರು.

‘ಕಲಿತದ್ದು ಜ್ಞಾನವಾದಾಗ ಮಾತ್ರ ಅದಕ್ಕೆ ನಿಜವಾದ ಅರ್ಥ ಬರುತ್ತದೆ. ಹೋಲಿಕೆ, ಇನ್ನೊಬ್ಬರನ್ನು ಅನುಸರಿಸುವುದನ್ನು ಮೊದಲು ಬಿಡಬೇಕು. ಕತ್ತಲನ್ನು ಹೋಗಲಾಡಿಸಲು ದೀಪ ಹಚ್ಚಬೇಕೆ ವಿನಹ ಬೆಳಕಿನಲ್ಲಿ ದೀಪ ಹಚ್ಚಬಾರದು. ಬೆಳಕಿನಲ್ಲಿ ದೀಪ ಹಚ್ಚುತ್ತೇವೆ ಎಂದರೆ ನಮ್ಮ ಮನಸ್ಸು ಇನ್ನೂ ಕತ್ತಲೆಯಲ್ಲಿದೆ ಎಂದರ್ಥ. ಮೌಢ್ಯತೆ ಹೋಗಲಾಡಿಸದೆ ಪ್ರಖರತೆ ಬೆಳಗುವುದಿಲ್ಲ. ಮಹನೀಯರ ಹೋರಾಟದ ಪ್ರಖರತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದೇವೆ’ ಎಂದರು.

‘ನಮ್ಮ ಮನಸ್ಸಿನ ಮಾತುಗಳನ್ನು ಕೇಳಲು ದಿನದಲ್ಲಿ ಕೆಲ ಸಮಯವನ್ನು ನಮಗಾಗಿ ಮೀಸಲಿಡಬೇಕು. ಆಗ ಮಾತ್ರ ನಮ್ಮನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳಲು ಸಾಧ್ಯ. ಕನ್ಯಾಕುಮಾರಿಯ ಬಂಡೆಯಲ್ಲಿ ಸ್ವಾಮಿ ವಿವೇಕಾನಂದರೂ ಇದನ್ನೇ ಮಾಡಿದರು. ತಮ್ಮನ್ನು ತಾವು ಅರ್ಥೈಸಿಕೊಂಡ ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ಸಾರಿದರು. ಇದರಿಂದ ಸ್ವಜಾತಿ, ವಿಜಾತಿಯವರಿಂದ ತೊಂದರೆಗೆ ಒಳಪಡೆಬೇಕಾಯಿತು’ ಎಂದರು.

‘ಮೌಢ್ಯತೆ ವಿರುದ್ಧ ಎಚ್ಚೆತ್ತುಕೊಳ್ಳದಿದ್ದರೆ ಸಮಾನತೆ, ಸಹಿಷ್ಣುತೆ, ಸಹೋದರ ಭಾವನೆ ಎಲ್ಲವೂ ಬರೀ ಕಾಗದದ ಕಾನೂನಿನಲ್ಲಿರುತ್ತದೆ. ಅದು ನೈಜವಾಗಿ ಜಾರಿಗೆ ಬರಬೇಕು ಎಂದರೆ ಮೌಢ್ಯತೆಯಿಂದ ಹೊರಬರಬೇಕು. ಮೌಢ್ಯತೆ ವಿರುದ್ಧ ಭಾಷಣ ಮಾಡಿ ಅದನ್ನು ಅನುಸರಿಸಿದರೆ ಆತ್ಮಕ್ಕೆ ದ್ರೋಹ ಬಗೆದಂತಾಗುತ್ತದೆ’ ಎಂದರು.

ಶಾಸಕ ಎಂ.ಶ್ರೀನಿವಾಸ್‌, ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು, ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ, ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಎಂ.ಕೆಂಪಮ್ಮ, ನೆಲದನಿ ಬಳಗದ ಎಂ.ಸಿ.ಲಂಕೇಶ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್‌.ಅನಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT