ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಗ್ಗತ್ತಲಲ್ಲಿ ಹಾಲಹಳ್ಳಿ: ಕರೆಂಟ್‌ ಇಲ್ಲ- ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ ಇಲ್ಲ!

ಕಗ್ಗತ್ತಲಲ್ಲಿ ಹಾಲಹಳ್ಳಿ ಕೊಳೆಗೇರಿ ಮಕ್ಕಳ ಬದುಕು, ಮೊಬೈಲ್‌ ಛಾರ್ಜ್‌ ಮಾಡಿಕೊಳ್ಳಲೂ ತೊಂದರೆ
Last Updated 24 ಆಗಸ್ಟ್ 2020, 20:00 IST
ಅಕ್ಷರ ಗಾತ್ರ

ಮಂಡ್ಯ: ಹಾಲಹಳ್ಳಿ ಕೊಳೆಗೇರಿ ಶೆಡ್‌ಗಳಿಗೆ ನೀಡಿದ್ದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಇಡೀ ಕಾಲೊನಿ ಕತ್ತಲಲ್ಲಿ ಮುಳುಗಿದೆ. ಮೊಬೈಲ್‌ ಛಾರ್ಜ್‌ ಕೂಡ ಮಾಡಿಕೊಳ್ಳಲಾಗದ ಸ್ಥಿತಿ ಇದ್ದು ಮಕ್ಕಳು ಆನ್‌ಲೈನ್‌ ತರಗತಿಯಿಂದ ವಂಚಿತರಾಗುತ್ತಿದ್ದಾರೆ.

ಕೊಳೆಗೇರಿ ನಿವಾಸಿಗಳಿಗಾಗಿ ಹೊಸ ಮನೆಗಳ ಕಟ್ಟಡ ಕಾಮಗಾರಿ ಆರಂಭಗೊಳ್ಳುತ್ತಿದ್ದಂತೆ ಹಳೆಯ ಕಟ್ಟಡ ತೆರವುಗೊಳಿಸಿ ತಾತ್ಕಾಲಿಕವಾಗಿ ಶೆಡ್‌ ನಿರ್ಮಿಸಿ ಕೊಡಲಾಯಿತು. 80ರ ದಶಕದಲ್ಲಿ ನಿರ್ಮಾಣಗೊಂಡಿದ್ದ ಕಟ್ಟಡ ಬೀಳುವ ಸ್ಥಿತಿ ತಲುಪಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಬ್ಬಿಣದ ತಗಡು ಬಳಸಿ ಶೆಡ್‌ ನಿರ್ಮಿಸಲಾಯಿತು. ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಹಳೆಯ ಮನೆಗೆ ನೀಡಲಾಗಿದ್ದ ವಿದ್ಯುತ್‌ ಮೀಟರ್‌ಗಳನ್ನು ಸೆಸ್ಕ್‌ಗೆ ವಾಪಸ್‌ ನೀಡಿದರು. ಹೊಸದಾಗಿ ಶೆಡ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಯಿತು.

ಹಳೆಯ ಮನೆಯಲ್ಲಿ ಬಾಕಿ ಉಳಿದಿದ್ದ ₹ 5 ಲಕ್ಷ ಬಿಲ್‌ ಬಾಕಿ ಹಣವನ್ನು ಸೆಸ್ಕ್‌ಗೆ ತಾವೇ ಪಾವತಿ ಮಾಡುವುದಾಗಿ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಒಪ್ಪಿಕೊಂಡಿದ್ದರು. 2017, ಫೆಬ್ರುವರಿ ತಿಂಗಳಲ್ಲಿ ನಿವಾಸಿಗಳು ಹೊಸ ಶೆಡ್‌ಗಳಿಗೆ ಸ್ಥಳಾಂತರಗೊಂಡರು. ಇದಾಗಿ ಮೂರು ವರ್ಷ ಕಳೆದರೂ ಹಳೆ ಮನೆಯ ವಿದ್ಯುತ್‌ ಬಾಕಿ ಹಣವನ್ನು ಮಂಡಳಿ ಸೆಸ್ಕ್‌ಗೆ ಪಾವತಿ ಮಾಡಿಲ್ಲ. ಹೀಗಾಗಿ ಸೆಸ್ಕ್‌ ಸಿಬ್ಬಂದಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ.

‘ವಿದ್ಯುತ್‌ ಮೀಟರ್‌ಗಳನ್ನು ಸೆಸ್ಕ್‌ಗೆ ವಾಪಸ್‌ ಕೊಟ್ಟನಂತರ ಬಾಕಿ ಬಿಲ್‌ ಪಾವತಿ ಮಾಡುವ ಜವಾಬ್ದಾರಿ ಮಂಡಳಿಯದ್ದೇ ಆಗಿತ್ತು. ಆದರೆ ಇಲ್ಲಿಯವರೆಗೂ ಬಾಕಿಯನ್ನೂ ಕೊಟ್ಟಿಲ್ಲ, ಶಾಶ್ವತ ವಿದ್ಯುತ್‌ ಸಂಪರ್ಕವನ್ನೂ ಕಲ್ಪಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಕಾಲೊನಿಯ ಜನರು ಸೌಲಭ್ಯವಂಚಿತರಾಗಿ ಬದುಕುತ್ತಿದ್ದಾರೆ’ ಎಂದು ಜನಶಕ್ತಿ ಸಂಘಟನೆಯ ಕಾರ್ಯದರ್ಶಿ ಸಿದ್ದರಾಜು ಆರೋಪಿಸಿದರು.

ಮೊಬೈಲ್‌ ಛಾರ್ಚ್‌ಗೂ ತತ್ವಾರ: ಕಾಲೊನಿಯಲ್ಲಿ 400 ಹೆಚ್ಚು ಮಕ್ಕಳು ಸುತ್ತಮುತ್ತಲ ವಿವಿಧ ಶಾಲೆಗಳಲ್ಲಿ ಓದುತ್ತಿದ್ದಾರೆ. ಕಡುಬಡವರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದರೆ, ಕೊಂಚ ಅನುಕೂಲಸ್ಥರು ಖಾಸಗಿ ಶಾಲೆಗಳಿಗೆ ದಾಖಲು ಮಾಡಿದ್ದಾರೆ. ಶೆಡ್‌ಗಳಲ್ಲಿ ಕರೆಂಟ್‌ ಇಲ್ಲದ ಕಾರಣ ಮೊಬೈಲ್‌ ಛಾರ್ಜ್‌ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಕ್ಕಳು ಆನ್‌ಲೈನ್‌ ತರಗತಿಯಿಂದ ವಂಚಿತವಾಗುವಂತಾಗಿದೆ. ದೂರದರ್ಶನ ವಾಹಿನಿಯಲ್ಲಿ ಬರುತ್ತಿರುವ ಶೈಕ್ಷಣಿಕ ಕಾರ್ಯಕ್ರಮಗಳನ್ನೂ ಇಲ್ಲಿಯ ಮಕ್ಕಳು ಕಳೆದುಕೊಂಡಿದ್ದಾರೆ.

‘ಅಂಗಡಿಗಳಲ್ಲಿ ಹಣ ಕೊಟ್ಟು ಮೊಬೈಲ್‌ ಛಾರ್ಜ್‌ ಮಾಡಿಕೊಳ್ಳಬೇಕಾಗಿದೆ. ಮನೆಯಲ್ಲಿ ಮಿಕ್ಸಿ, ಟಿವಿ, ಫ್ಯಾನ್‌ಗಳಿದ್ದರೂ ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ’ ಎಂದು ಕಾಲೊನಿ ನಿವಾಸಿ ಪ್ರಶಾಂತ್‌ ಹೇಳಿದರು.

ಶೆಡ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸದ ಕಾರಣ ಕೆಲವು ನಿವಾಸಿಗಳು ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದಾರೆ. ಸೆಸ್ಕ್‌ ಸಿಬ್ಬಂದಿ ಹಲವು ಬಾರಿ ಸಂಪರ್ಕ ಕಿತ್ತು ಹಾಕುತ್ತಿದ್ದರೂ ರಾತ್ರಿಯ ವೇಳೆ ಜನರು ವೈರ್‌ ನೇತು ಹಾಕಿಕೊಂಡು ಸಂಪರ್ಕ ಪಡೆಯುತ್ತಿದ್ದಾರೆ. ಕೊಳಚೆ ನಿರ್ಮೂಲನಾ ಮಂಡಳಿ ವಿದ್ಯುತ್‌ ಸೌಲಭ್ಯ ನೀಡದ ಕಾರಣ ಕೊಳೆಗೇರಿ ನಿವಾಸಿಗಳು ಹಾಗೂ ಸೆಸ್ಕ್‌ ಇಲಾಖೆ ಸಿಬ್ಬಂದಿ ಸಮಸ್ಯೆಯಲ್ಲಿ ನರಳುವಂತಾಗಿದೆ.

'ಸೆಸ್ಕ್‌ ಸಿಬ್ಬಂದಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿರುವ ವಿಚಾರ ಗಮನಕ್ಕೆ ಬಂದಿದೆ. ತಾತ್ಕಾಲಿಕವಾಗಿ ಮೀಟರ್‌ ಅಳವಡಿಸುವಂತೆ ಸೆಸ್ಕ್‌ ಅಧಿಕಾರಿಗಳಿಗೆ ಪ್ರಸ್ತಾವ ಕಳುಹಿಸಲಾಗಿದೆ'ಕೊಳಚೆ ನಿರ್ಮೂಲನಾ ಮಂಡಳಿ ಎಇಇ ರಾಮಚಂದ್ರ ಪ್ರತಿಕ್ರಿಯಿಸಿದರು.

ಮಹಿಳೆಯರ ಗೋಳು

ಮಿಕ್ಸಿ ಓಡಕ್ಕಿಲ್ಲಾ ಸಾಮಿ....

‘ಕರೆಂಟ್‌ ಇಲ್ಲದ ಕಾರಣ ನಮ್ಮ ಶೆಡ್‌ನಲ್ಲಿ ಮಿಕ್ಸರ್‌ ಓಡಕ್ಕಿಲ್ಲಾ ಸಾಮಿ. ಕಲ್ಲಿನಲ್ಲಿ ಮಸಾಲೆ ಕೆಚ್ಚಿಕೊಂಡು ಅಡುಗೆ ಮಾಡಿಕೊಳ್ಳುತ್ತಿದ್ದೇವೆ. ಮನೆಯ ಮುಂದೆ ಬೆಳಕಿಲ್ಲದೆ ಹಲವು ಬಾರಿ ಮಕ್ಕಳು ಚರಂಡಿಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಆದಷ್ಟು ಬೇಗ ಮನೆಗಳಿಗೆ ಲೈಟ್‌ ಹಾಕಿಸಿಕೊಡಿ ಸಾಮಿ.–ಕಾಶಿಯಮ್ಮ, ಕೊಳೆಗೇರಿ ನಿವಾಸಿ

ಸೀಮೆಎಣ್ಣೆ ಬುಡ್ಡಿಯೇ ಗತಿ

ಸೀಮೆ ಎಣ್ಣೆ ಬುಡ್ಡಿಯ ಬೆಳಕಿನಲ್ಲಿ ಬದುಕಬೇಕಾಗಿದೆ. ಇದರಿಂದ ಕಣ್ಣುಗಳು ಮಂಜಾಗುತ್ತಿವೆ. ಮನೆಗಳಿಗೆ ಬೆಂಕಿ ಹೊತ್ತಿಕೊಂಡರೆ ಏನು ಗತಿ ಎಂಬ ಭಯವೂ ಕಾಡುತ್ತಿದೆ. ಒಂದು ವರ್ಷದಲ್ಲಿ ಹೊಸ ಮನೆ ಕೊಡುತ್ತೇವೆ ಎಂದರು. ಆರು ವರ್ಷದಿಂದ ಕತ್ತಲಲ್ಲಿ ಬದುಕುತ್ತಿದ್ದೇವೆ. ನಮ್ಮ ಕಷ್ಟಕ್ಕೆ ಕೊನೆ ಎಂದು? –ಸಾಹಿರಾ ಭಾನು, ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT