ಸೋಮವಾರ, ಆಗಸ್ಟ್ 2, 2021
28 °C
ಮುಖ್ಯಮಂತ್ರಿಗೆ ಜಿಲ್ಲಾಧಿಕಾರಿ ವಿವರಣೆ

ಕೊರೊನಾ ಸೋಂಕು ನಿಯಂತ್ರಣದಲ್ಲಿ ಯಶಸ್ವಿ; ಮಂಡ್ಯಕ್ಕೆ ಲಾಕ್‌ಡೌನ್‌ ಅಗತ್ಯವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದ್ದು ಲಾಕ್‌ಡೌನ್‌ ಅವಶ್ಯಕತೆ ಇಲ್ಲ. ಕಟ್ಟುನಿಟ್ಟಿನ ಕ್ವಾರಂಟೈನ್‌ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣ ಮಾಡಲಾಗಿದೆ’ ಎಂದು ಸೋಮವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ನಡೆದ ವಿಡಿಯೊ ಕಾನ್ಫೆರೆನ್ಸ್‌ನಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ನಿತ್ಯ 500–600 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಈವರೆಗೆ 22 ಸಾವಿರ ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಆರಂಭದಲ್ಲಿ ಹೆಚ್ಚಿನ ಜನರು ಮುಂಬೈನಿಂದ ಬಂದ ಕಾರಣ ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು. ಅವರೆಲ್ಲರಿಗೂ ಕಟ್ಟುನಿಟ್ಟಾಗಿ ಕ್ವಾರಂಟೈನ್‌ ಮಾಡಲಾಯಿತು. ಬೆಂಗಳೂರಿನಿಂದ ಬಂದ ವಲಸಿಗರನ್ನೂ ಗುರುತಿಸಿ ಪರೀಕ್ಷೆ ನಡೆಸುತ್ತಿರುವ ಕಾರಣ ಸೋಂಕು ನಿಯಂತ್ರಿಸಲಾಗಿದೆ’ ಎಂದು ವಿವರಿಸಿದರು.

ವಿವಿಧ ಕ್ರಮ: ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ‘ರಾಜ್ಯದ ವಿವಿಧೆಡೆ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರುವ ಕಾರಣ ಅಂತರ ರಾಜ್ಯ, ಅಂತರಜಿಲ್ಲಾ ವಲಸಿಗರ ಬಗ್ಗೆ ನಿಗಾ ವಹಿಸಬೇಕು. ಯಾರೇ ಹೊರಗಿನಿಂದ ಬಂದರೆ ಸ್ಥಳೀಯ ಆಶಾ ಕಾರ್ಯಕರ್ತರಿಗೆ ಮಾಹಿತಿ ನೀಡಬೇಕು. ಸ್ವಯಂಪ್ರೇರಿತವಾಗಿ ಅವರ ಮಾಹಿತಿ ನೀಡಬೇಕು. ಹೋಂ ಕ್ವಾರಂಟೈನ್‌ ಮಾಡಲು ಕ್ರಮ ಕೈಗೊಳ್ಳಬೇಕು. ತುರ್ತು ಸಂದರ್ಭದಲ್ಲಿ ಬೇಕಾಗುವ ಎಲ್ಲಾ ವೈದ್ಯಕೀಯ ಚಿಕಿತ್ಸೆಗೆ ಜಿಲ್ಲಾಡಳಿತ ಸಿದ್ಧವಾಗಿದ್ದು ಅಗತ್ಯ ಯೋಜನೆ ಕೈಗೊಳ್ಳಲು ಅಧಿಕಾರಿಗಳು ಸಿದ್ಧರಾಗಬೇಕು’ ಎಂದರು.

‘ಅತಿ ಹೆಚ್ಚು ಪ್ರಕರಣ ಕಂಡು ಬಂದ ತಾಲ್ಲೂಕುಗಳಲ್ಲಿ ವಿಶೇಷ ವೀಕ್ಷಣ ಅಧಿಕಾರಿಗಳನ್ನು ನೇಮಿಸಿ ಸಮುದಾಯಕ್ಕೆ ಹರಡದಂತೆ ನಿಯಂತ್ರಿಸಬೇಕಾಗಿದೆ. ಜನಸಾಮಾನ್ಯರು ವ್ಯಾಪಾರ ವಹಿವಾಟುಗಳಲ್ಲಿ  ಅಂತರ  ಕಾಯ್ದುಕೊಳ್ಳಬೇಕು. ಅಗತ್ಯವಿದ್ದಲ್ಲಿ ಮಾತ್ರ ಪ್ರಯಾಣ ಬೆಳೆಸಬೇಕು, ಕಡ್ಡಾಯವಾಗಿ ಪ್ರತಿಯೊಬ್ಬರೂ ಮುಖಗವಸು ಬಳಸಬೇಕು’ ಎಂದು ತಿಳಿಸಿದರು.

‘ಜನಸಾಮಾನ್ಯರು ಯಾವುದೇ ರೀತಿಯಲ್ಲೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಏಕೆಂದರೆ ಜಿಲ್ಲಾಡಳಿತ ಸೋಂಕು ನಿಯಂತ್ರಣಕ್ಕೆ ಬೇಕಾಗಿರುವ ಎಲ್ಲಾ ಮುಂಜಾಗೃತಾ ಕ್ರಮ ಅನುಸರಿಸಲಾಗುತ್ತಿದೆ. ನಗರದ ವ್ಯಾಪಾರಿಗಳು ಅಂತರಕ್ಕೆ ಆದ್ಯತೆ ನೀಡಬೇಕು. ಅಂಗಡಿಗಳಿಗೆ ಬರುವ ಗ್ರಾಹಕರು ಕಡ್ಡಾಯವಾಗಿ ಮುಖಗವಸು ಹಾಕುವಂತೆ ನೋಡಿಕೊಳ್ಳಬೇಕು. ಅವರಿಗೆ ಸ್ಯಾನಿಟೈಸರ್‌ ನೀಡಬೇಕು’ ಎಂದು ಹೇಳಿದರು.

ಎಸ್‌ಪಿ ಕಚೇರಿ ಸ್ಯಾನಿಟೈಸ್‌: ಡಿ ಗ್ರೂಪ್‌ ನೌಕರರೊಬ್ಬರಿಗೆ ಕೋವಿಡ್‌– 19 ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯನ್ನು ಸೋಮವಾರ ಸ್ಯಾನಿಟೈಸ್‌ ಮಾಡಲಾಯಿತು. ನೌಕರ ಓಡಾಡುತ್ತಿದ್ದ ವಿಭಾಗಗಳನ್ನು ಬಂದ್‌ ಮಾಡಲಾಗಿದೆ.

718ಕ್ಕೆ ಏರಿಕದ ಸೋಂಕಿತರ ಸಂಖ್ಯೆ

ಸೋಮವಾರ ಒಂದೇದಿನ 30 ಮಂದಿಯಲ್ಲಿ ಕೋವಿಡ್‌–19 ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಒಟ್ಟು ರೋಗಿಗಳ ಸಂಖ್ಯೆ 718ಕ್ಕೆ ಏರಿಕೆಯಾಗಿದೆ.

ಕೋವಿಡ್‌ನಿಂದ ಗುಣಮುಖರಾದ 42 ಮಂದಿಯನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇಲ್ಲಿಯವರೆಗೆ ಒಟ್ಟು 505 ಮಂದಿ ಗುಣಮುಖರಾಗಿದ್ದು 213 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು