ಬುಧವಾರ, ಮೇ 12, 2021
18 °C
ಯುಗಾದಿ; ತರಕಾರಿ ಮಾರುಕಟ್ಟೆಯಲ್ಲಿ ಜನಜಾತ್ರೆ, ಕೋವಿಡ್‌ ನಿಯಮ ಲೆಕ್ಕಕ್ಕಿಲ್ಲ

ಖರೀದಿಯಲ್ಲಿ ಮೈಮರೆಯುತ್ತಿರುವ ಜನ: ತರಕಾರಿ ಮಾರುಕಟ್ಟೆಯಲ್ಲಿ ಜನಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೋವಿಡ್‌ 2ನೇ ಅಲೆ ಹೆಚ್ಚುತ್ತಿದ್ದರೂ ಜನರು ಯುಗಾದಿ ಸಂಭ್ರಮದಲ್ಲಿ ಮೈಮರೆಯುತ್ತಿದ್ದಾರೆ. ನಗರದ ತರಕಾರಿ ಮಾರುಕಟ್ಟೆಯಲ್ಲಿ ಜನರು ಖರೀದಿಯಲ್ಲಿ ತೊಡಗಿದ್ದು ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.

ಮಂಗಳವಾರ ನಡೆಯುವ ಯುಗಾದಿ ಹಬ್ಬಕ್ಕಾಗಿ ಜನರು ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಮಾರುಕಟ್ಟೆಗೆ ಬರುತ್ತಿದ್ದಾರೆ. ಹಬ್ಬಗಳನ್ನು ಸರಳವಾಗಿ ಆಚರಣೆ ಮಾಡುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದ್ದರೂ ಅದನ್ನು ಮೀರಿ ಮಾರುಕಟ್ಟೆಗಳಿಗೆ ದಾಂಗುಡಿ ಇಡುತ್ತಿದ್ದಾರೆ. ನಗರದ ತರಕಾರಿ ಮಾರುಕಟ್ಟೆಯಲ್ಲಿ ಜನಜಾತ್ರೆಯೇ ನೆರೆದಿದ್ದು ಬಹುತೇಕ ಮಂದಿ ಮಾಸ್ಕ್‌ ಧರಿಸದ ಕಾರಣ ಕೊರೊನಾ ಸೋಂಕಿನ ನಿಯಂತ್ರಣ ಸವಾಲಾಗಿದೆ.

ಕಳೆದ ವರ್ಷ ಕೋವಿಡ್‌ ನಿಯಂತ್ರಿಸಲು ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲಾಗಿತ್ತು. ಕಿರಿದಾದ ಜಾಗದಲ್ಲಿ ಅಂತರ ಕಾಯ್ದುಕೊಳ್ಳುವುದು ಕಷ್ಟ ಎಂಬ ಕಾರಣಕ್ಕೆ ಜಿಲ್ಲಾ ಕ್ರೀಡಾಂಗಣವನ್ನೇ ತರಕಾರಿ ಮಾರುಕಟ್ಟೆಯನ್ನಾಗಿ ಪರಿವರ್ತಿಸಲಾಗಿತ್ತು. ಜೊತೆಗೆ ಸಂಚಾರ ಮಾರುಕಟ್ಟೆ (ಆಟೊ ಸಂಚಾರ) ನಡೆಸುವ ವರ್ತಕರಿಗೆ ಪ್ರೋತ್ಸಾಹ ನೀಡಲಾಗಿತ್ತು. ಈಗ ತರಕಾರಿ ಮಾರುಕಟ್ಟೆ ಎಂದಿನಂತೆ ನಡೆಯುತ್ತಿದ್ದು ಜನಜಂಗುಳಿ ಹೆಚ್ಚಾಗುತ್ತಿದೆ.

ಹಬ್ಬದ ಅಂಗವಾಗಿ ನಗರದ ಬಹುತೇಕ ಕಡೆಗಳಲ್ಲಿ ಜನರು ಸೇರುತ್ತಿದ್ದಾರೆ. ಬಾಳೆದಿಂಡು, ಮಾವಿನ ಸೊಪ್ಪು, ಕಬ್ಬಿನ ಜಲ್ಲೆ ಮುಂತಾದ ಸಾಮಗ್ರಿಗಳ ಮಾರಾಟ ನಗರದ ವಿವಿಧೆಡೆ ನಡೆಯಲಿದೆ. ನೂರು ಅಡಿ ರಸ್ತೆ, ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ, ವಿವಿ ರಸ್ತೆ, ಆರ್‌.ಪಿ ರಸ್ತೆ ಮುಂತಾದೆಡೆ ಮಾರಾಟ ನಡೆಯಲಿದ್ದು ಜನರು ಮುಗಿಬೀಳಲಿದ್ದಾರೆ. ಇದನ್ನು ಪೊಲೀಸರು ನಿಯಂತ್ರಣ ಹೇರಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

‘ಕೋವಿಡ್‌ 2ನೇ ಅಲೆ ತೀವ್ರವಾಗಿ ಹರಡುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಹೀಗಾಗಿ ಜನರು ಸ್ವಯಂ ನಿಯಂತ್ರಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಅಗತ್ಯವಿದ್ದರೆ ಮಾತ್ರ ಖರೀದಿಗೆ ತೆರಳಬೇಕು. ಮನೆಗೇ ಸಾಮಗ್ರಿಗಳನ್ನು ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹೇಳಿದರು.

ಕಳೆದೊಂದು ವಾರದಿಂದ ಹೆಲ್ಮೆಟ್‌ ಜಾಗೃತಿ ಮೂಡಿಸುವ ಅಭಿಯಾನ ನಡೆಯುತ್ತಿದೆ. ನಗರದ ವಿವಿಧೆಡೆ ಪೊಲೀಸರ ತಂಡ ಹೆಲ್ಮೆಟ್‌ ಹಾಕದ ದ್ವಿಚಕ್ರವಾಹನ ಸವಾರರನ್ನು ಹಿಡಿದು ದಂಡ ವಿಧಿಸುತ್ತಿದ್ದಾರೆ. ಆದರೆ ಈಗಿನ ಸಂದರ್ಭದಲ್ಲಿ ಹೆಲ್ಮೆಟ್‌ಗಿಂತ ಮಾಸ್ಕ್‌ ಅತ್ಯಂತ ಪ್ರಮುಖವಾಗಿದ್ದು ಮಾಸ್ಕ್‌ ಧರಿಸದ ಜನರಿಗೆ ದಂಡ ವಿಧಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

‘ನಗರದ ಹೊರವಲಯದಲ್ಲಿ ಮರೆಯಲ್ಲಿ ನಿಂತು ಪೊಲೀಸರು ಹೆಲ್ಮೆಟ್‌ ಧರಿಸದ ವಾಹನ ಸವಾರರನ್ನು ಹಿಡಿದು ದಂಡ ವಿಧಿಸುತ್ತಿದ್ಧಾರೆ. ಆದರೆ ಮಾಸ್ಕ್‌ ಧರಿಸದ ಜನರಿಗೆ ದಂಡ ವಿಧಿಸುವುದು ಕಾಣುತ್ತಿಲ್ಲ. ಕೂಡಲೇ ಮಾಸ್ಕ್‌ ಧರಿಸದವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ವಕೀಲ ರಾಮಯ್ಯ ಒತ್ತಾಯಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು