ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಒಂದೇ ಕಡೆ ವಾಹನ ನಿಲುಗಡೆ; ತಪ್ಪಿದ ಕಿರಿಕಿರಿ

ಲಾಕ್‌ಡೌನ್‌ ಅವಧಿಯಲ್ಲಿ ಹೊಸ ನಿಯಮ ಜಾರಿಗೊಳಿಸಿದ ಪೊಲೀಸ್‌ ಇಲಾಖೆ
Last Updated 14 ಜೂನ್ 2020, 19:30 IST
ಅಕ್ಷರ ಗಾತ್ರ

ಮಂಡ್ಯ: ನಗರದ ವಿವಿ ರಸ್ತೆ ಹಾಗೂ ಪೇಟೆಬೀದಿ ಮುಖ್ಯರಸ್ತೆಯಲ್ಲಿ ಒಂದೇ ಕಡೆ ವಾಹನ ನಿಲುಗಡೆ ವ್ಯವಸ್ಥೆ ಜಾರಿಗೊಳಿಸಲಾಗಿದ್ದು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಲಾಕ್‌ಡೌನ್‌ ಅವಧಿ ಸಡಿಲಗೊಳ್ಳುತ್ತಲೇ ನೂತನ ವ್ಯವಸ್ಥೆ ಕಾರ್ಯರೂಪಕ್ಕೆ ಬಂದಿದೆ.

ವಿವಿ ರಸ್ತೆ ಹಾಗೂ ಪೇಟೆಬೀದಿ ರಸ್ತೆಗಳು ನಗರದ ಅತ್ಯಂತ ಪ್ರಮುಖ ವಾಣಿಜ್ಯ ಚಟುವಟಿಕೆಗಳ ತಾಣವಾಗಿವೆ. ಪೇಟೆಬೀದಿ ರಸ್ತೆ ಅತ್ಯಂತ ಕಿರಿದಾಗಿದ್ದು ವಾಹನ ಸಂಚಾರ ಸವಾಲಾಗಿತ್ತು. ಎರಡೂ ಕಡೆ ವಾಹನ ನಿಲ್ಲಿಸುವ ಕಾರಣ ದೊಡ್ಡ ವಾಹನಗಳನ್ನು ಓಡಿಸುವುದು ಸಾಹಸವೇ ಆಗಿತ್ತು. ಸಮೀಪದಲ್ಲೇ ಇರುವ ತರಕಾರಿ ಮಾರುಕಟ್ಟೆಗೆ ತೆರಳುವ ವಾಹನಗಳ ಚಾಲಕರು ಗಾಡಿ ಓಡಿಸಲು ಕಷ್ಟಪಡುತ್ತಿದ್ದರು. ಆದರೆ ಈಗ ರಸ್ತೆಯ ಒಂದೇ ಕಡೆ ವಾಹನ ನಿಲುಗಡೆ ಮಾಡುತ್ತಿರುವ ಕಾರಣ ವಾಹನಗಳ ಸಂಚಾರ ಸುಲಭವಾಗಿದೆ.

ಪೇಟೆಬೀದಿ ರಸ್ತೆಯ ವಿಸ್ತರಣಾ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಅಲ್ಲಿಯ ಅಂಗಡಿ ಮಾಲೀಕರ ಅಸಹಕಾರದಿಂದಾಗಿ ರಸ್ತೆ ವಿಸ್ತರಣೆ ಕಂಡಿಲ್ಲ. ಎರಡೂ ಕಡೆ ವಾಹನ ನಿಲ್ಲಿಸುತ್ತಿದ್ದ ಕಾರಣ ಇಡೀ ರಸ್ತೆ ಕಿಷ್ಕಿಂದೆಯಂತಾಗಿತ್ತು. ಜನರು, ವ್ಯಾಪಾರಿಗಳು ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿದ್ದರು. ಆದರೆ ಈಗ ಪೊಲೀಸ್‌ ಇಲಾಖೆ ಕಟ್ಟುನಿಟ್ಟಾಗಿ ಒಂದು ಕಡೇ ವಾಹನ ನಿಲ್ಲಿಸುವಂತೆ ಸೂಚಿಸಿದೆ.

ವಿವಿ ರಸ್ತೆಯಲ್ಲಿ ಕೂಡ ಒಂದೇ ಕಡೆ ಕಡೆ ವಾಹನಗಳು ನಿಲ್ಲುತ್ತಿರುವ ಕಾರಣ ಈಗ ರಸ್ತೆ ಕೊಂಚ ಅಗಲವಾದಂತೆ ಕಾಣುತ್ತಿದೆ. ಮೊದಲು ಜನರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿದ್ದರು. ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ವಾಹನಗಳು ಒಂದಕ್ಕೊಂದು ಗುದ್ದಿಕೊಳ್ಳುತ್ತಿದ್ದವು. ಈಗ ಒಂದೇ ಕಡೆ ಕಟ್ಟುನಿಟ್ಟಾಗಿ ವಾಹನ ನಿಲ್ಲಿಸುತ್ತಿರುವ ಕಾರಣ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.

ದಿನಬಿಟ್ಟು ದಿನ ಬದಲಿಯಾಗಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಒಂದು ದಿನ ಎಡಭಾಗದಲ್ಲಿ ವಾಹನ ನಿಲುಗಡೆಯಾದರೆ ಇನ್ನೊಂದು ದಿನ ಬಲಭಾಗದಲ್ಲಿ ವಾಹನ ನಿಲ್ಲಿಸಲಾಗುತ್ತಿದೆ. ಇದರಿಂದ ರಸ್ತೆಯ ಸೌಂದರ್ಯ ಕಾಪಾಡಿಕೊಳ್ಳಲು ಅನುಕೂಲವಾಗಿದೆ. ಜೊತೆಗೆ ವಾಹನ ಓಡಾಟಕ್ಕೂ ತೊಂದರೆ ಕಡಿಮೆಯಾಗಿದೆ.

ಕಠಿಣ ಕ್ರಮ: ಒಂದೇ ಕಡೆ ವಾಹನ ನಿಲುಗಡೆ ವ್ಯವಸ್ಥೆಯನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ನಿತ್ಯ ಪೊಲೀಸ್‌ ಸಿಬ್ಬಂದಿ ಬೆಳಿಗ್ಗೆ 8 ಗಂಟೆಯಿಂದಲೇ ಹೊಸ ನಿಯಮ ಜಾರಿ ಕುರಿತು ಅರಿವು ಮೂಡಿಸುತ್ತಿದ್ದಾರೆ. ರಸ್ತೆಯುದ್ದಕ್ಕೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ನಿಯಮ ಉಲ್ಲಂಘಿಸಿ ವಾಹನ ನಿಲ್ಲಿಸಿದರೆ ಗಾಡಿಗಳನ್ನು ಜಪ್ತಿ ಮಾಡಲಾಗುತ್ತಿದೆ. ಜೊತೆಗೆ ವಾಹನಗಳ ಹವಾ ಬಿಡುವ, ಬೀಗ ಹಾಕುವ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.

‘ಆರಂಭದಲ್ಲಿ ನಿಯಮ ಜಾರಿ ಸ್ವಲ್ಪ ಕಷ್ಟವಾಗಿತ್ತು, ಜನರು ಮಾತು ಕೇಳುತ್ತಿರಲಿಲ್ಲ. ನಂತರ ಜನರು ಸಹಕಾರ ನೀಡುತ್ತಿದ್ದಾರೆ. ಸ್ವಯಂಪ್ರೇರಿತವಾಗಿ ಒಂದೇ ಕಡೆ ನಿಲ್ಲಿಸುತ್ತಿದ್ದಾರೆ’ ಎಂದು ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಹೇಳಿದರು.

‘ಇದೇ ನಿಯಮವನ್ನು ಕೆ.ಆರ್‌ ರಸ್ತೆಯಲ್ಲೂ ಜಾರಿಗೊಳಿಸಬೇಕು. ಕೆನರಾ, ಕಾರ್ಪೊರೇಷನ್‌ ಬ್ಯಾಂಕ್‌ ಮುಂದೆ ವಾಹನ ನಿಲುಗಡೆಯಲ್ಲಿ ಶಿಸ್ತು ಪಾಲಿಸುತ್ತಿಲ್ಲ. ಅಲ್ಲಿಯ ಟ್ರಾಫಿಕ್‌ ಕಿರಿಕಿರಿ ತಪ್ಪಿಸಬೇಕು’ ಎಂದು ಸುಭಾಷ್‌ ನಗರದ ಮಂಜುನಾಥ್‌ ಒತ್ತಾಯಿಸಿದರು.

***

ತಿರುವುಗಳಲ್ಲಿ ಟ್ರಾಫಿಕ್‌ ಜಾಮ್‌

ವಿವಿ ರಸ್ತೆಯಲ್ಲಿ ಒಂದೇ ಕಡೆ ವಾಹನ ನಿಲ್ಲಿಸುತ್ತಿರುವ ಕಾರಣ ನಾಲ್ಕು ಚಕ್ರಗಳ ವಾಹನ ನಿಲುಗಡೆಗೆ ಜಾಗ ದೊರೆಯುತ್ತಿಲ್ಲ. ರಸ್ತೆಯುದ್ದಕ್ಕೂ ಬಹುತೇಕ ಬೈಕ್‌ಗಳೇ ಸಾಲುಗಟ್ಟಿ ನಿಂತಿರುತ್ತವೆ. ಇದರಿಂದಾಗಿ ಅಶೋಕ್‌ನಗರದ ತಿರುವುಗಳಲ್ಲಿ ಕಾರ್‌ಗಳನ್ನು ನಿಲ್ಲಿಸಲಾಗುತ್ತಿದೆ.

ಅಶೋಕ್‌ ನಗರ 1, 2ನೇ ಕ್ರಾಸ್‌ಗಳಲ್ಲಿ ರಸ್ತೆಯುದ್ದಕ್ಕೂ ಕಾರ್‌ಗಳು ನಿಂತಿರುತ್ತವೆ. ಎಂ.ವಿ.ಜಿ ಬೇಕರಿ ಇರುವ 2ನೇ ಕ್ರಾಸ್‌ನಲ್ಲಿ ನಿತ್ಯ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಎರಡೂ ಕಡೆ ವಾಹನ ನಿಲ್ಲಿಸುತ್ತಿರುವ ಕಾರಣ ಕಾರ್‌ಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಹಲವು ಬಾರಿ ಬೈಕ್‌ಗಳಿಗೆ ಗುದ್ದಿವೆ. ಬೇಕರಿ ಮುಂದಿನ ಟ್ರಾಫಿಕ್‌ ಕಿರಿಕಿರಿಯನ್ನು ತಪ್ಪಿಸಬೇಕು ಎಂದು ನಾಗರಿಕರು ಪೊಲೀಸರನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT