ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಷುಗರ್‌: ಆದೇಶದ ಪ್ರತಿ ಹರಿದು ಪ್ರತಿಭಟನೆ

ವಿಧಾನಸೌಧದ ಮುಂದೆ ಧರಣಿ ನಡೆಸುವುದಾಗಿ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಎಚ್ಚರಿಕೆ
Last Updated 11 ಡಿಸೆಂಬರ್ 2020, 13:09 IST
ಅಕ್ಷರ ಗಾತ್ರ

ಮಂಡ್ಯ: ಐತಿಹಾಸಿಕ ಮೈಷುಗರ್‌ ಕಾರ್ಖಾನೆಯನ್ನು 40 ವರ್ಷಗಳವರೆಗೆ ಖಾಸಗಿ ಹೊರಗುತ್ತಿಗೆಗೆ ನೀಡುವ ಬಗ್ಗೆ ಸರ್ಕಾರ ಹೊರಡಿಸಿರುವ ಆದೇಶ ಪ್ರತಿಯನ್ನು ಸುಟ್ಟು ಶುಕ್ರವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಜೀವನಾಡಿಯಾಗಿರುವ ಮೈಷುಗರ್‌ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಸಂಚು ರೂಪಿಸಲಾಗಿದೆ. ಕಬ್ಬು ಬೆಳೆಗಾರರ ಹಿತ ರಕ್ಷಿಸಬೇಕಾದ ಸರ್ಕಾರ ಖಾಸಗಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಹೊರಟಿದೆ. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ಮಾದರಿಯಲ್ಲಿ 40 ವರ್ಷಗಳವರೆಗೆ ಗುತ್ತಿಗೆ ನೀಡಲು ಕೈಗೊಂಡಿರುವ ತೀರ್ಮಾನವನ್ನು ರೈತರು ಎಂದಿಗೂ ಒಪ್ಪುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರೈತರೊಂದಿಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾರ್ಖಾನೆಯನ್ನು ಸರ್ಕಾರದ ಸ್ವಾಮ್ಯದಲ್ಲೇ ಉಳಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಈಗ ಏಕಾಏಕಿ ಖಾಸಗಿ ಗುತ್ತಿಗೆಗೆ ನೀಡುವ ಕುರಿತು ಆದೇಶ ಹೊರಡಿಸಲಾಗಿದೆ. ಸಚಿವ ಸಂಪುಟದಲ್ಲಿ ನಿರ್ಣಯದ ಕೈಗೊಳ್ಳಲಾಗಿದೆ ಎಂಬ ನೆಪ ಹೇಳಿ ರೈತರಿಗೆ ಅನ್ಯಾಯ ಮಾಡಲಾಗಿದೆ. ಸರ್ಕಾರ ಕೂಡಲೇ ಗುತ್ತಿಗೆ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಆದೇಶದ ಹಿನ್ನೆಲೆಯಲ್ಲಿ ಸರ್ಕಾರ ಹೊರಗುತ್ತಿಗೆ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಬಾರದು. ಕಾರ್ಮಿಕರನ್ನು ತರಾತುರಿಯಲ್ಲಿ ಕಡ್ಡಾಯ ನಿವೃತ್ತಿ ನೀಡಿ ಕಳುಹಿಸಬಾರದು. ಮೈಷುಗರ್‌ ಆಸ್ತಿಯ ಸರ್ವೆ ಮುಂತಾದ ಯಾವುದೇ ಚಟುವಟಿಕೆಯನ್ನು ಮಾಡಬಾರದು. ಸಕ್ಕರೆ ಸಂಗ್ರಹ ಮಾರಾಟ, ಪರಿಕರಗಳ ಪರಿಶೀಲನೆ ಮುಂತಾದ ಚಟುವಟಿಕೆ ಮಾಡಬಾರದು. ಇದಕ್ಕೆ ರೈತರು ಅವಕಾಶ ನೀಡುವುದಿಲ್ಲ. ಕಾರ್ಖಾನೆ ಸರ್ಕಾರದ ಸುಪರ್ದಿಯಲ್ಲೇ ಉಳಿಯಬೇಕು ಎಂದು ಒತ್ತಾಯಿಸಿದರು.

ಧರಣಿ ಎಚ್ಚರಿಕೆ: ಇದಕ್ಕೂ ಮೊದಲ ಸಮಿತಿಯ ಅಧ್ಯಕ್ಷ ಜಿ. ಮಾದೇಗೌಡ ನೇತೃತ್ವದಲ್ಲಿ ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಮುಖಂಡರ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾದೇಗೌಡರು ಜಿಲ್ಲೆಯ ಶಾಸಕರ ಜೊತೆ ದೂರವಾಣಿ ಮೂಲಕ ಮಾತನಾಡಿದರು. ಮೇಲುಕೋಟೆ ಶಾಸಕ ಸಿ.ಎಸ್‌.ಪುಟ್ಟರಾಜು, ಸಮಿತಿಯ ಮುಖಂಡರನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಭೇಟಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

‘ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ಗುತ್ತಿಗೆ ನೀಡಬಾರದು. ಮುಖ್ಯಮಂತ್ರಿಯನ್ನು ಶೀಘ್ರ ಭೇಟಿ ಮಾಡಿ ಸರ್ಕಾರದ ಆದೇಶದ ವಿರುದ್ಧ ನಮ್ಮ ಪ್ರತಿಭಟನೆ ದಾಖಲು ಮಾಡಲಾಗುವುದು. ಕಾರ್ಖಾನೆ ಖಾಸಗೀಕರಣಕ್ಕೆ ಅವಕಾಶ ನೀಡುವುದಿಲ್ಲ. ಸಚಿವ ಸಂಪುಟದಲ್ಲಿ ಕೈಗೊಂಡಿರುವ ನಿರ್ಣಯವನ್ನು ರದ್ದು ಮಾಡಬೇಕು. ಇಲ್ಲದಿದ್ದರೆ ವಿಧಾನಸೌಧದ ಮುಂದೆ ಧರಣಿ ಕೂರಲಾಗುವುದು’ ಎಂದು ಜಿ.ಮಾದೇಗೌಡ ಎಚ್ಚರಿಕೆ ನೀಡಿದರು.

ಸಮಿತಿಯ ನಾಯಕಿ ಸುನಂದಾ ಜಯರಾಂ ಮಾತನಾಡಿ ‘40 ವರ್ಷಗಳವರೆಗೆ ಗುತ್ತಿಗೆ ನೀಡಿರುವುದನ್ನು ಸಾರ್ವಜನಿಕರೂ ಒಪ್ಪುತ್ತಿಲ್ಲ. ತಲೆಮಾರುಗಳವರೆಗೆ ಗುತ್ತಿಗೆ ನೀಡುವ ಸರ್ಕಾರದ ನಿರ್ಧಾರ ಅನುಮಾನಾಸ್ಪದವಾಗಿದೆ. ಕಳೆದೊಂದು ವರ್ಷದಿಂದ ನಡೆಯುತ್ತಿರುವ ಹೋರಾಟವನ್ನು ಈಗ ತೀವ್ರಗೊಳಿಸುವ ಅನಿವಾರ್ಯತೆ ಇದೆ. ವಿವಿಧ ಸಂಘಟನೆಗಳು ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸುತ್ತಿವೆ. ಹೊರಗುತ್ತಿಗೆ ನಿರ್ಣಯವನ್ನು ವಾಪಸ್‌ಪಡೆಯುವರೆಗೂ ಹೋರಾಟ ನಡೆಸಲಾಗುವುದು’ ಎಂದರು.

ಸಮಿತಿಯ ಮುಖಂಡರಾದ ಕೆ.ಬೋರಯ್ಯ, ಎಂ.ಬಿ.ಶ್ರೀನಿವಾಸ್‌, ಸಿ.ಕುಮಾರಿ, ಇಂಡವಾಳು ಚಂದ್ರಶೇಖರ್‌, ಕೀಲಾರ ಕೃಷ್ಣ, ಪಿ.ಕೆ.ನಾಗಣ್ಣ, ಸೋಮಶೇಖರ್‌, ಮುದ್ದೇಗೌಡ ಇದ್ದರು.

ಮೈಷುಗರ್‌ ಮಾರಟಕ್ಕಿಲ್ಲ: ನಿರಂತರ ಹೋರಾಟ

ಹೊರಗುತ್ತಿಗೆ ಆದೇಶ ವಾಪಸ್‌ ಪಡೆಯುವವರೆಗೂ ‘ಮೈಷುಗರ್‌ ಕಾರ್ಖಾನೆ ಮಾರಾಟಕ್ಕಿಲ್ಲ’ ಎಂಬ ಘೋಷಣೆಯೊಂದಿಗೆ ಜಿಲ್ಲೆಯಾದ್ಯಂತ ಹೋರಾಟ ರೂಪಿಸಲು ಜಿಲ್ಲಾ ರೈತಹಿತರಕ್ಷಣಾ ಸಮಿತಿ ನಿರ್ಧರಿಸಿದೆ.

ಗ್ರಾಮ ಪಂಚಾಯಿತಿ ಚುನಾವಣೆ ಪೂರ್ಣಗೊಂಡ ನಂತರ ಗೋಡೆ ಬರಹ, ಫ್ಲೆಕ್ಸ್‌ ಅಳವಡಿಕೆ, ಭಿತ್ತಿಪತ್ರಗಳಲ್ಲಿ ಕಾರ್ಖಾನೆ ಮಾರಾಟಕ್ಕಿಲ್ಲ ಎಂಬ ಸಂದೇಶ ಬರೆಯುವ ಮೂಲಕ ಪ್ರತಿಭಟನೆ ನಡೆಸಲು ಚಿಂತಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿ ನಂತರ ಬೆಂಗಳೂರಿಗೆ ತೆರಳಿ ವಿಧಾನಸೌಧದ ಮುಂದೆಯೂ ಹೋರಾಟ ಮಾಡುವುದಾಗಿ ರೈತ ಮುಖಂಡರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT