ಮಂಗಳವಾರ, ಅಕ್ಟೋಬರ್ 26, 2021
23 °C
ಪೊಲೀಸ್ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಚಾಲನೆ; ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿಕೆ

₹ 200 ಕೋಟಿ ವೆಚ್ಚದಲ್ಲಿ 100 ಠಾಣೆ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಕೇವಲ ಒಂದು ವರ್ಷದಲ್ಲಿ ರಾಜ್ಯದಾದ್ಯಂತ ₹ 200 ಕೋಟಿ ವೆಚ್ಚದಲ್ಲಿ 100 ಪೊಲೀಸ್‌ ಠಾಣೆ ನಿರ್ಮಾಣ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಬಂದ ನಂತರ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಲಾಖೆಗೆ ಹೆಚ್ಚು ಹಣ ನೀಡಲಾಗಿದೆ’ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಗರದ ಡಿಎಆರ್‌ ಮೈದಾನದಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ಬುಧವಾರ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ವರ್ಷದಲ್ಲಿ 4–5 ಪೊಲೀಸ್‌ ಠಾಣೆ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ನಮ್ಮ ಸರ್ಕಾರ ಪೊಲೀಸ್‌ ಇಲಾಖೆಗೆ ಹೆಚ್ಚು ಸೌಲಭ್ಯ ಒದಗಿಸಿದ್ದು 100 ಪೊಲೀಸ್‌ ಠಾಣೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಪೊಲೀಸ್‌ ವಸತಿಗೃಹಗಳ ಕೊರತೆ ಇತ್ತು. ಈಗಾಗಲೇ 11 ಸಾವಿರ ವಸತಿಗೃಹಗಳ ಕಾಮಗಾರಿ ಪೂರ್ಣಗೊಂಡಿದ್ದು ಸಿಬ್ಬಂದಿಗೆ ವಿತರಣೆ ಮಾಡಲಾಗುತ್ತಿದೆ. ಮತ್ತೆ 10 ಸಾವಿರ ವಸತಿಗೃಹ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದ ಹೇಳಿದರು.

‘ಕಾನ್‌ಸ್ಟೆಬಲ್‌ಗಳಿಗೆ ಇದೂವರೆಗೆ 1 ಕೊಠಡಿಯ ವಸತಿಗೃಹ ನಿರ್ಮಾಣ ಮಾಡಲಾಗುತ್ತಿತ್ತು, ಈಗ 2 ಕೊಠಡಿಗಳ ಮನೆ ನಿರ್ಮಾಣ ಮಾಡಲಾಗುತ್ತಿದೆ. ಪೊಲೀಸರ ಕೌಟುಂಬಿಕ ಜೀವನವೂ ನೆಮ್ಮದಿಯಿಂದ ಇರಬೇಕು, ಅವರ ಕರ್ತವ್ಯ ನಿರ್ವಹಿಸುವ ಪೊಲೀಸ್‌ ಠಾಣೆಗಳು ಅತ್ಯುತ್ತಮವಾಗಿರಬೇಕು. ಕಳೆದ 2 ವರ್ಷಗಳಿಂದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರ ಪೊಲೀಸ್‌ ಇಲಾಖೆಗೆ ಕೊಟ್ಟಷ್ಟು ಹಣವನ್ನು ಬೇರೆ ಯಾವ ಸರ್ಕಾರವೂ ಕೊಟ್ಟಿಲ್ಲ’ ಎಂದು ಹೇಳಿದರು.

‘ಈ ವರ್ಷ 140 ಪೊಲೀಸ್‌ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಪಿಎಸ್‌ಐ ಇರುವಂತಹ ಠಾಣೆಗಳನ್ನು ಸಿಪಿಐ ಠಾಣೆಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. ಸೈಬರ್ ವಿಭಾಗವನ್ನು ಶಕ್ತಿಯುತಗೊಳಿಸುವ ಕೆಲಸ ಮಾಡಲಾಗುತ್ತಿದೆ. ಪ್ರಕರಣಗಳು ನಡೆದಾಗ ವಿಶೇಷ ತಜ್ಞರ ಅವಶ್ಯಕತೆ ಇರುತ್ತದೆ. ಅದಕ್ಕಾಗಿ 250 ಮಂದಿ ತಜ್ಞರನ್ನು ನೇಮಕ ಮಾಡಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಗುಜರಾತ್‌ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡು ನಮ್ಮ ಸಿಬ್ಬಂದಿಯನ್ನು ತರಬೇತಿಗೆ ಕಳುಹಿಸಲಾಗುವುದು’ ಎಂದರು.

‘ಜನರ ಪ್ರಾಣ, ಮಾನ, ಸ್ವತ್ತು ಕಾಪಾಡುವಲ್ಲಿ ಪೊಲೀಸರ ಕರ್ತವ್ಯ ಬಲುಮುಖ್ಯವಾಗಿದೆ. ಪೊಲೀಸ್‌ ಇಲಾಖೆಯನ್ನು ಬಲಪಡಿಸುವುದು ನಮ್ಮ ಕರ್ತವ್ಯವಾಗಿದೆ. ಮಂಡ್ಯ ವಸತಿಗೃಹಕ್ಕೆ ₹ 10 ಕೋಟಿ, ಆಡಳಿತ ಕಚೇರಿಗೆ ₹ 2.10 ಕೋಟಿ, ಶ್ವಾನದಳ ಕಟ್ಟಡ ಮತ್ತು ಮಂಡ್ಯ ಕೇಂದ್ರ ಠಾಣೆಗೆ ₹ 2.10, ಮಳವಳ್ಳಿ ಪೊಲೀಸ್‌ ಠಾಣೆಗೆ ₹ 2.25 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಅಪರಾಧ ಪ್ರಮಾಣ ತಗ್ಗಿಸಲು ಸಮರ್ಪಕವಾಗಿ ಕೆಲಸ ಮಾಡಲಾಗುವುದು. ಕೆಲವು ಲೋಪದೋಷಗಳಿರಬಹುದು, ಅವುಗಳನ್ನು ಸರಿಪಡಿಸಿಕೊಂಡು ಮುನ್ನಡೆಯಲಾಗುವುದು. ಪೊಲೀಸ್‌ ಇಲಾಖೆ ಒಳ್ಳೆಯ ಕೆಲಸ ಮಾಡುತ್ತಿರುವ ಕಾರಣದಿಂದ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ’ ಎಂದರು.

‘ರಾಜ್ಯದಲ್ಲಿ ಔರಾದ್ಕರ್‌ ವರದಿಯನ್ನು ಜಾರಿ ಮಾಡಲಾಗಿದೆ. ಶೇ 80ರಷ್ಟು ಪೊಲೀಸ್‌ ಸಿಬ್ಬಂದಿಗೆ ಅದರಿಂದ ಲಾಭವಾಗಿದೆ. ಶೇ 20ರಷ್ಟು ಸಿಬ್ಬಂದಿ ಹಿಂದೆ ನೇಮಕಗೊಂಡ ಕಾರಣ ಕೆಲವರಿಗೆ ಲಾಭ ಸಿಕ್ಕಿಲ್ಲ. ಅಂಥವರಿಗೆ ವಿವಿಧ ಭತ್ಯೆಗಳನ್ನು ನೀಡಿ ಅದನ್ನು ಸರಿದೂಗಿಸಲಾಗುತ್ತಿದೆ. ಸಬ್‌ಇನ್‌ಸ್ಪೆಕ್ಟರ್‌ ಹುದ್ದೆವರಗೆ ಪ್ರತಿ ತಿಂಗಳು ಭತ್ಯೆ ನೀಡಲಾಗುತ್ತಿದೆ’ ಎಂದರು.

‘ವರದಿಯನ್ನು ಪೂರ್ವನ್ವಯ ರೀತಿಯಲ್ಲಿ ಜಾರಿ ಮಾಡಿಲ್ಲ, ಹೀಗಾಗಿ ಸಮಸ್ಯೆ ಆಗಿದೆ. ನಾನು ಗೃಹಸಚಿವನಾಗಿ ಕಾನ್‌ಸ್ಟೆಬಲ್‌ಗಳೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆ ಅರಿತುಕೊಂಡಿದ್ದೇನೆ. ಆರ್ಥಿಕ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಸಿಬ್ಬಂದಿಗೆ ಸಹಾಯ ಮಾಡಲಾಗುವುದು’ ಎಂದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕರಾದ ಎಂ.ಶ್ರೀನಿವಾಸ್‌, ಎನ್‌.ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ನಗರಸಭಾ ಅಧ್ಯಕ್ಷ ಎಚ್‌.ಎಸ್‌.ಮಂಜು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ ಇದ್ದರು.

*****

‘3 ವರ್ಷಗಳ ಹಿಂದೆ ಪೊಲೀಸ್ ಇಲಾಖೆಯಲ್ಲಿ 30 ಸಾವಿರ ಹುದ್ದೆಗಳು ಖಾಲಿ ಉಳಿದಿದ್ದವು. ಆದರೆ ಈಗ  16 ಸಾವಿರ ಹುದ್ದೆಗಳು ಮಾತ್ರ ಖಾಲಿ ಇವೆ. ಈ ವರ್ಷ 4 ಸಾವಿರ ಕಾನ್‌ಸ್ಟೆಬಲ್‌, ಪಿಎಸ್‌ಐಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ನೇಮಕಾತಿ ಯಾವ ಇಲಾಖೆಯಲ್ಲಿ ಆಗದಿದ್ದರೂ ಪೊಲೀಸ್‌ ಇಲಾಖೆಯಲ್ಲಿ ಪ್ರತಿವರ್ಷ ನಡೆಯುತ್ತದೆ’ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.

‘ಈಗ 309 ಸಿಬ್ಬಂದಿ ತರಬೇತಿ ಪೂರ್ಣಗೊಳಿಸಿದ್ದು ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಒಂದು ವರ್ಷದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಳು ಖಾಲಿ ಉಳಿಯದಂತೆ ನೇಮಕಾತಿ ಮಾಡಿಕೊಳ್ಳಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು