ಮಂಗಳವಾರ, ಮಾರ್ಚ್ 9, 2021
31 °C
ನೋಟಿಸ್‌ಗೆ ಬೆದರದ ಆಲೆಮನೆ ಮಾಲೀಕರು, ಪ್ರಕರಣ ದಾಖಲಿಸದ ಅಧಿಕಾರಿಗಳು

ಮಂಡ್ಯ: ರಾತ್ರಿಯ ವೇಳೆ ಪ್ಲಾಸ್ಟಿಕ್‌, ರಬ್ಬರ್‌ ತ್ಯಾಜ್ಯ ದಹನ

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ದಾಳಿ, ಗ್ರಾಮ ಪಂಚಾಯಿತಿ ಪಿಡಿಒಗಳ ನೋಟಿಸ್‌ಗೂ ಬೆದರದ ಆಲೆಮನೆ ಮಾಲೀಕರು ವಿಷಕಾರಿ ಪ್ಲಾಸ್ಟಿಕ್‌, ರಬ್ಬರ್‌ ತ್ಯಾಜ್ಯ ದಹನ ಮಾಡುವುದನ್ನು ಮುಂದುವರಿಸಿದ್ದಾರೆ.

ಕೇರಳದಿಂದ ಬರುತ್ತಿರುವ ವಿಷಕಾರಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ದಹನ ಮಾಡುತ್ತಿರುವ ವಿಷಯ ಕುರಿತು ‘ಪ್ರಜಾವಾಣಿ’ ಹಲವು ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದಾಳಿ ನಡೆಸಿ ಆಲೆಮನೆ ಮಾಲೀಕರಿಗೆ ನೋಟಿಸ್‌ ಕೊಟ್ಟಿದ್ದರು. ಮುಂದೆ ಪ್ಲಾಸ್ಟಿಕ್‌ ಬಳಸಿದರೆ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ತಾಲ್ಲೂಕಿನ ಎಚ್‌.ಮಲ್ಲಿಗೆರೆ ಗ್ರಾಮ ಪಂಚಾಯಿತಿಯ ಪಿಡಿಒ ಕೂಡ ಆಲೆಮನೆಗಳಿಗೆ ನೋಟಿಸ್‌ ಕೊಟ್ಟಿದ್ದರು. ಇಷ್ಟಾದರೂ ಹಲವೆಡೆ ಆಲೆಮನೆ ಮಾಲೀಕರು ವಿಷಕಾರಿ ತ್ಯಾಜ್ಯವನ್ನು ಬಚ್ಚಿಟ್ಟುಕೊಂಡು ಕಳ್ಳತನದಿಂದ ದಹನ ಮಾಡುತ್ತಿದ್ದಾರೆ.

ಈಗ ಹಗಲಿನಲ್ಲಿ ಪ್ಲಾಸ್ಟಿಕ್‌ ಸುಡುವುದನ್ನು ಬಿಟ್ಟಿದ್ದು ರಾತ್ರಿಯ ವೇಳೆ ದಹನ ಮಾಡುತ್ತಿದ್ದಾರೆ. ಪ್ಲಾಸ್ಟಿಕ್‌, ರಬ್ಬರ್‌ ದಹಿಸಿದರೆ ಕೆಲವೇ ಗಂಟೆಗಳಲ್ಲಿ ಬೆಲ್ಲ ತೆಗೆಯಬಹುದು. ಹೀಗಾಗಿ ಮಾಲೀಕರು ಯಾವುದೇ ನೋಟಿಸ್‌ಗೆ ಹೆದರದೆ ತ್ಯಾಜ್ಯ ಬಳಕೆ ಮುಂದುವರಿಸಿದ್ದಾರೆ ಎಂದು ತಾಲ್ಲೂಕಿನ ಜೀಗುಂಡಿಪಟ್ಟಣದ ಗ್ರಾಮಸ್ಥರು ತಿಳಿಸಿದರು.

ಪ್ರಜಾವಾಣಿಗೆ ಚಿತ್ರ ಕಳುಹಿಸಿದ ಜನ: ತಾಲ್ಲೂಕಿನ ವಿವಿಧೆಡೆ ತ್ಯಾಜ್ಯ ಬಳಸುತ್ತಿರುವ ಬಗ್ಗೆ ಗ್ರಾಮಸ್ಥರು ‘ಪ್ರಜಾವಾಣಿ’ಗೆ ಚಿತ್ರ ತೆಗೆದು ಕಳುಹಿಸುತ್ತಿದ್ದಾರೆ. ತಾಲ್ಲೂಕಿನ ಕೊಡಹಳ್ಳಿ ಗೇಟ್‌ ಬಳಿ ಮುಖ್ಯರಸ್ತೆಯ ಬಲಭಾಗಕ್ಕಿರುವ ಆಲೆಮನೆಯಲ್ಲಿ ಬಹಿರಂಗವಾಗಿ ತ್ಯಾಜ್ಯ ದಹನ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಚಿತ್ರ ಹಳುಹಿಸಿದ್ದರು. ಆ ಆಲೆಮನೆಗೆ ಭೇಟಿ ನೀಡಿದಾಗ ರಾಶಿಗಟ್ಟಲೆ ತ್ಯಾಜ್ಯ ಬಿದ್ದಿತ್ತು. ಈ ಕುರಿತು ಮಾಲೀಕನನ್ನು ಪ್ರಶ್ನಿಸಿದಾಗ ಅವರು ಬೇರೆಯದ್ದೇ ಉತ್ತರ ಕೊಟ್ಟರು.

‘ನಾವು ಮೊದಲು ತ್ಯಾಜ್ಯ ಬಳಸುತ್ತಿದ್ದೆವು, ಈಗ ಬಳಕೆ ಮಾಡುತ್ತಿಲ್ಲ. ತ್ಯಾಜ್ಯವನ್ನು ತೆರವು ಮಾಡಲು ಆಲೆಮನೆ ಮುಂದೆ ಸುರಿದಿದ್ದೇವೆ’ ಎಂದು ಮಾಲೀಕ ಹೇಳಿದರು. ಆದರೆ ಅವರ ವಾದವನ್ನು ಗ್ರಾಮಸ್ಥರು ನಿರಾಕರಿಸಿದರು. ‘ರಾತ್ರಿಯ ವೇಳೆ ಅವರು ತ್ಯಾಜ್ಯ ಬಳಸುತ್ತಿದ್ದಾರೆ. ರಾತ್ರಿಯಿಡೀ ವಿಷಕಾರಿ ಹೊಗೆ ಚಿಮಣಿಯಿಂದ ಹೊರಬರುತ್ತದೆ. ಗ್ರಾಮದಲ್ಲಿ ಬದುಕುವುದೇ ಕಷ್ಟವಾಗಿದೆ. ಮಕ್ಕಳ ಆರೋಗ್ಯ ಹಾಳಾಗುತ್ತಿದೆ. ಗೋಪಾಲಪುರದವರೆಗೂ ಹೊಗೆ ಹರಡಿರುತ್ತದೆ. ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಕೋಡಹಳ್ಳಿ, ಗೋಪಾಲಪುರ ಗ್ರಾಮಸ್ಥರು ಒತ್ತಾಯಿಸಿದರು.

ಕೆ.ಆರ್‌.ಪೇಟೆ ತಾಲ್ಲೂಕಿನಲ್ಲೂ ಹಾವಳಿ: ಮೊದಲು ಮಂಡ್ಯ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ಪ್ಲಾಸ್ಟಿಕ್‌ ಹಾಗೂ ರಬ್ಬರ್‌ ತ್ಯಾಜ್ಯ ವಿಪರೀತವಾಗಿತ್ತು. ಗ್ರಾಮ ಪಂಚಾಯಿತಿಗಳು ಮಾಲೀಕರಿಗೆ ನೋಟಿಸ್‌ ನೀಡಿದ ಪರಿಣಾಮ ಈಗ ತ್ಯಾಜ್ಯವನ್ನು ಹೆಚ್ಚಾಗಿ ಕೆ.ಆರ್‌.ಪೇಟೆ ತಾಲ್ಲೂಕಿನ ಆಲೆಮನೆಗಳತ್ತ ಸಾಗಿಸುತ್ತಿರುವುದು ಕಂಡು ಬಂದಿದೆ.

‘ಪಾಂಡವಪುರ ತಾಲ್ಲೂಕಿಗೂ ಪ್ಲಾಸ್ಟಿಕ್‌ ತ್ಯಾಜ್ಯ ರವಾನೆಯಾಗುತ್ತಿದೆ. ಕೇರಳದಿಂದ ಬರುವ ತ್ಯಾಜ್ಯವನ್ನು ನಾಗಮಂಗಲದ ಗೋದಾಮಿನಲ್ಲಿ ಸಂಗ್ರಹವಾಗುತ್ತದೆ. ತ್ಯಾಜ್ಯ ಅಲ್ಲಿಗೆ ಬರುವುದನ್ನು ಮೊದಲು ತಪ್ಪಿಸಬೇಕು’ ಎಂದು ರೈತ ಮುಖಂಡ ನಾಗರಾಜ್‌ ಒತ್ತಾಯಿಸಿದರು.

**********

ಪ್ರಕರಣ ದಾಖಲಿಸಲು ಹಿಂದೇಟು
ಜಿಲ್ಲೆಯ ವಿವಿಧೆಡೆ ಆಲೆಮೆನೆಗಳಲ್ಲಿ ತ್ಯಾಜ್ಯ ಬಳಸುತ್ತಿದ್ದರೂ ಅಧಿಕಾರಿಗಳು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ ತ್ಯಾಜ್ಯ ತಡೆಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

‘ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ತ್ಯಾಜ್ಯದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೇವಲ ನೋಟಿಸ್‌ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಪ್ರಕರಣ ದಾಖಲು ಮಾಡಿದರೆ ಮಾತ್ರ ಮಾಲೀಕರಿಗೆ ಬುದ್ಧಿ ಕಲಿಸಬಹುದು’ ಎಂದು ಗೋಪಾಲಪುರ ಗ್ರಾಮಸ್ಥ ಶ್ರೀನಿವಾಸ್‌ ಹೇಳಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಸವಿತಾ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು