ಮಂಡ್ಯ: ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ, ಕೃಷಿ, ವಿಜ್ಞಾನ, ವಿಸ್ಮಯಗಳಿಂದ ಪರಿಸರ ಫೋಟೊಗ್ರಫಿಯ ತನಕ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ನುಡಿಗಳ ತೋರಣ ಕಟ್ಟಿದರು. ತೇಜಸ್ವಿ ಪುಸ್ತಕಗಳ ಮಾರಾಟ, ಅಪರೂಪದ ಛಾಯಾಚಿತ್ರ ಪ್ರದರ್ಶನ ಸೇರಿದಂತೆ ‘ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ’ ಎಂಬ ವಿಶಿಷ್ಟ ಕಾರ್ಯಕ್ರಮ ಪ್ರೇಕ್ಷಕರನ್ನು ಸಂಪ್ರೀತಗೊಳಿಸಿತು.
ಚಿತ್ರಕೂಟ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ‘ಪೂರ್ಣಚಂದ್ರ ತೇಜಸ್ವಿ–86’ ಕಾರ್ಯಕ್ರಮ ನಗರದ ವಿ.ವಿ. ರಸ್ತೆಯ ಜನತಾ ಬಜಾರ್ ಕಾಂಪ್ಲೆಕ್ಸ್‌ನ ಅಂತರಂಗ ಆಡಿಟೋರಿಯಂನಲ್ಲಿ ನಡೆಯಿತು.
ಚಿತ್ರಕಲಾವಿದ ಸೋಮವರದ ಅವರು ಸ್ಥಳದಲ್ಲೇ ತೇಜಸ್ವಿ ಅವರ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಅತಿಥಿಗಳು ಕ್ಯಾನ್ವಾಸ್ ಮೇಲೆ ಸಹಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಶುಭ ಕೋರಿದರು.
ತೇಜಸ್ವಿ ಬರವಣಿಗೆಯೇ ಸೋಜಿಗ:
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಮಾತನಾಡಿ, ‘ತೇಜಸ್ವಿ ಅವರು ಎಲ್ಲರ ಜೊತೆ ಬೆರೆಯುತ್ತಿರಲಿಲ್ಲ. ಆದರೆ, ಅವರ ಕಾರ್ಯಕ್ರಮಕ್ಕೆ ಎಲ್ಲರೂ ಸೇರುತ್ತಾರೆ. ತೇಜಸ್ವಿ ಎಂದರೆ ವಿಸ್ಮಯ. ತಮ್ಮ ಆಕರ್ಷಕ ಬರಹದಿಂದ ತರುಣ–ತರುಣಿಯರನ್ನು ಸೂಜಿಗಲ್ಲಿನಂತೆ ಸೆಳೆದಿದ್ದಾರೆ’ ಎಂದರು.
ಕುವೆಂಪು ಅವರ ಕಲಾತ್ಮಕತೆ, ಕಾರಂತರ ಜೀವನ ದೃಷ್ಟಿ ಮತ್ತು ಲೋಹಿಯಾ ಅವರ ವೈಚಾರಿಕತೆಯಿಂದ ತೇಜಸ್ವಿ ಪ್ರಭಾವಿತರಾಗಿದ್ದರು. ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮ ಮತ್ತು ಭಾಷೆಯ ದುರ್ಬಳಕೆ ಬಗ್ಗೆಯೂ ಬರಹದ ಮೂಲಕ ಎಚ್ಚರಿಸಿದ್ದರು. ಕನ್ನಡ ಭಾಷೆಯ ಸೂಕ್ಷ್ಮತೆ ಮತ್ತು ಅದನ್ನು ಹೇಗೆ ಬಳಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಕೃಷಿಯೆಂದರೆ ಜೀವನ ವಿಧಾನ:
ಪ್ರಗತಿಪರ ಕೃಷಿಕ, ಲೇಖಕ ಎಂ.ವಿ.ಕೃಷ್ಣ ಮಾತನಾಡಿ, ಕೃಷಿಯ ಮೊದಲ ವಿಜ್ಞಾನಿ ಎಂದರೆ ರೈತ. ಇಂದಿನ ದಿನಗಳಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಸಿಂಪಡಿಸುವ ಮೂಲಕ ಭೂ ಫಲವತ್ತತೆ ಹಾಳಾಗುತ್ತಿದೆ. ಇದರಿಂದ ನಾವು ಕಲುಷಿತ ಆಹಾರ ತಿಂದು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಕೃಷಿ ಎಂದರೆ ಉತ್ಪಾದನಾ ವಿಧಾನವಲ್ಲ. ಅದೊಂದು ಜೀವನ ವಿಧಾನ ಎಂಬುದನ್ನು ತೇಜಸ್ವಿ ಅವರು ತಮ್ಮ ‘ಸಹಜ ಕೃಷಿ’ ಪುಸ್ತಕದಲ್ಲಿ ನಿರೂಪಿಸಿದ್ದಾರೆ ಎಂದು ಹೇಳಿದರು.
ವೈವಿಧ್ಯಮಯ ಸಂವಾದ:
‘ತೇಜಸ್ವಿ ಮತ್ತು ತಂತ್ರಾಂಶ’ದಲ್ಲಿ ಕನ್ನಡ ಕಟ್ಟುವ ಹೊಸ ಬಗೆ, ‘ಕೃಷಿ ಕ್ಷೇತ್ರದ ಇಂದಿನ ಸಂಘರ್ಷ ಮತ್ತು ನಾಳೆಯ ಭರವಸೆ’, ‘ಪರಿಸರದ ಕತೆ’ಯಲ್ಲಿ ಜೀವಸಂಕುಲದ ಉಳಿವಿಗೆ ಬೇಕು ವಿವೇಕ ಮಾರ್ಗ, ‘ತಬರನ ಕಥೆ ಅಂದು–ಇಂದು’ ಹಾಗೂ ‘ಪೂಚಂತೇ ನಾನು ಕಂಡಂತೆ’ ಹೆಸರಿನ ಐದು ಸಂವಾದಗಳಲ್ಲಿ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಆಸಕ್ತಿಕರ ವಿಷಯಗಳನ್ನು ಮಂಡಿಸಿದರು.
ಭಾಷಾ ವಿಜ್ಞಾನಿ ಡಾ.ಮಿಥುನ್ ಅವರು, ‘ಯುನಿಕೋಡ್ ಮತ್ತು ಕಂಪ್ಯೂಟರ್‌ನಲ್ಲಿ ಕನ್ನಡ ತಂತ್ರಾಂಶ ಬಳಕೆಗೆ ಒತ್ತು ನೀಡಿದ ತೇಜಸ್ವಿ ಅವರ ಬಗ್ಗೆ ಬೆಳಕು ಚೆಲ್ಲಿದರು.
ಪರಿಸರ ಲೇಖಕ ಟಿ.ಎಸ್.ವಿವೇಕಾನಂದ ಮಾತನಾಡಿ, ‘ಸರ್ಕಾರ ಅರಣ್ಯ ಪ್ರದೇಶವನ್ನು ಡಿನೋಟಿಫಿಕೇಶನ್ ಮಾಡುತ್ತಿರುವುದರಿಂದ ಕಾಡು ಕಣ್ಮರೆಯಾಗುತ್ತಿದೆ. ಬರೀ ಆನೆ ಓಡಿಸುವುದು ಮತ್ತು ಗಿಡ ನೆಡುವುದರಿಂದ ಪರಿಸರ ಸಂರಕ್ಷಣೆಯಾಗುವುದಿಲ್ಲ. ಮಾನವ–ವನ್ಯಜೀವಿ ಸಂಘರ್ಷಕ್ಕೆ ಸರಿಯಾದ ಮಾರ್ಗೋಪಾಯ ಕಂಡುಕೊಳ್ಳಬೇಕಿದೆ. ಅರಣ್ಯ ಸಂರಕ್ಷಣೆಗಾಗಿ ಸರ್ಕಾರದ ಮಟ್ಟದಲ್ಲಿ ನೀತಿ, ಯೋಜನೆಗಳು ಜಾರಿಯಾಗಬೇಕಿದೆ’ ಎಂದರು.
ಕೃತಿ ಬಿಡುಗಡೆ:
ಎಚ್.ಎಸ್.ರೋಹಿಣಿ ಅವರ ‘ವಿಸ್ಮಯ ತೇಜಸ್ವಿ’ ಕೃತಿಯನ್ನು ಎಲ್.ಎನ್.ಮುಕುಂದರಾಜು ಬಿಡುಗಡೆ ಮಾಡಿದರು. ಗಣ್ಯರಿಗೆ ಪುಸ್ತಕ ತಾಂಬೂಲವನ್ನು ಕೊಡಲಾಯಿತು. ಕೃಷಿ ಇಲಾಖೆಯಿಂದ ಅತಿಥಿಗಳಿಗೆ ‘ಶ್ರೀಗಂಧದ ಸಸಿ’ಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಂಕಣಕಾರ, ಬಿ.ಚಂದ್ರೇಗೌಡ, ಮಲ್ಲಿಕಾರ್ಜುನ ಮಹಾಮನೆ, ಭಗವಾನ್ ಚಕ್ರವರ್ತಿ, ಐಪಿಎಸ್ ಅಧಿಕಾರಿ ರವಿಕಾಂತೇಗೌಡ, ಚಲನಚಿತ್ರ ನಿರ್ದೇಶಕ ವಿನಯಕುಮಾರ್ ಎಂ.ಜಿ., ಶಿಕ್ಷಕಿ ಮೇಘನಾ ಸಿ.ಎಚ್., ಎಚ್.ಎಚ್.ಧನುಷ್, ಶಿಕ್ಷಕ ಶಿವಪ್ರಸಾದ್, ಹರವು ದೇವೇಗೌಡ, ಎಂ.ಪಿ.ಕುಮಾರಸ್ವಾಮಿ, ಕತ್ತರಘಟ್ಟ ವಾಸು, ಅಭಿರತ್ನ, ವೆಂಕಟೇಶ್, ಪರಿಸರ ರಮೇಶ್, ಬಿ.ಟಿ.ವಿಶ್ವನಾಥ್, ಪಿ.ಜೆ.ಚೈತನ್ಯಕುಮಾರ್, ಶಿವಕುಮಾರ ಆರಾಧ್ಯ, ಅರವಿಂದ ಪ್ರಭು, ಶಿವಕುಮಾರ ಆರಾಧ್ಯ ಪಾಲ್ಗೊಂಡಿದ್ದರು.
ಅಪರೂಪದ ತೇಜಸ್ವಿ ಫೋಟೊ ಪ್ರದರ್ಶನ
ಲೀಲಾ ಅಪ್ಪಾಜಿಯವರು ಸಂಗ್ರಹಿಸಿದ ತೇಜಸ್ವಿಯವರ ಅಪರೂಪದ ಫೋಟೊಗಳ ಪ್ರದರ್ಶನಕ್ಕೆ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಚಾಲನೆ ನೀಡಿದರು. ತೇಜಸ್ವಿಯವರ ಕುಟುಂಬ ಸ್ಕೂಟರ್ ಸವಾರಿ ಫೋಟೊಗ್ರಫಿ ವಿವಿಧ ಭಾವಭಂಗಿಗಳು ‘ಉದಯ ರವಿ’ ಅಂಗಳದಲ್ಲಿ ಕುವೆಂಪು ಅವರೊಂದಿಗೆ ತೇಜಸ್ವಿ ಕುಪ್ಪಳಿಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು ಚಳವಳಿ–ಪ್ರತಿಭಟನೆಯಲ್ಲಿ ತೇಜಸ್ವಿ ಮೀನು ಶಿಕಾರಿ ಅವರ ಕ್ಯಾಮೆರಾಗಳಲ್ಲಿ ಸೆರೆಯಾದ ಪಕ್ಷಿಗಳು ಸೇರಿದಂತೆ ಅಪರೂಪದ ಫೋಟೊಗಳನ್ನು ಪ್ರದರ್ಶಿಸಲಾಗಿತ್ತು. ತೇಜಸ್ವಿ ಅವರ ಬಾಲ್ಯದಿಂದ ಬದುಕಿನ ಅಂತಿಮ ಘಟ್ಟದವರೆಗಿನ ಚಿತ್ರಗಳು ನೋಡುಗರನ್ನು ಬೆರಗುಗೊಳಿಸಿದವು.
ಆಹಾರ ಭದ್ರತೆಯ ಜೊತೆಗೆ ರೈತನ ಆರ್ಥಿಕ ಭದ್ರತೆಯ ಬಗ್ಗೆಯೂ ಚಿಂತನೆ ನಡೆಯಬೇಕಿದೆ. ಆಹಾರ ಉತ್ಪಾದನೆಯ ಹೊಸ ವಿನ್ಯಾಸವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಳಿಸಬೇಕಿದೆ.ಪ್ರಶಾಂತ್ ಜಯರಾಂ, ಪ್ರಗತಿಪರ ರೈತ ಚಾಮರಾಜನಗರ
ನೀರಿನ ಅಪವ್ಯಯ ತಪ್ಪಿಸಬೇಕಿದೆ. ಕೃಷಿ ಚಟುವಟಿಕೆಯಲ್ಲಿ ನೀರು ನಿರ್ವಹಣೆಯ ಸುಧಾರಿತ ವಿಧಾನಗಳನ್ನು ರೈತರು ಅಳವಡಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ನೀರಿಗೆ ಆಹಾಕಾರ ಉಂಟಾಗಲಿದೆ.ಮಂಗಲ ಯೋಗೇಶ್, ಪರಿಸರ ಸಂರಕ್ಷಕ
ಪ್ಲಾಸ್ಟಿಕ್ ನಿಯಂತ್ರಿಸದಿದ್ದರೆ ಪರಿಸರ ವಿನಾಶವಾಗುತ್ತದೆ. ಮನೆಯಲ್ಲಿ ಪ್ಲಾಸ್ಟಿಕ್ ತುಂಬಿಕೊಂಡು ತೇಜಸ್ವಿ ಮತ್ತು ಪರಿಸರದ ಬಗ್ಗೆ ಭಾಷಣ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.ಸೋಮವರದ, ಚಿತ್ರಕಲಾವಿದ
ಮಂಡ್ಯ ನಗರದಲ್ಲಿ ಚಿತ್ರಕೂಟ ಸಂಸ್ಥೆ ಭಾನುವಾರ ಆಯೋಜಿಸಿದ್ದ ‘ಪೂರ್ಣಚಂದ್ರ ತೇಜಸ್ವಿ–86’ ಕಾರ್ಯಕ್ರಮದಲ್ಲಿ ಎಚ್.ಎಸ್.ರೋಹಿಣಿ ಅವರ ‘ವಿಸ್ಮಯ ತೇಜಸ್ವಿ’ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಬಿಡುಗಡೆ ಮಾಡಿದರು. ಶಿವಕುಮಾರ ಆರಾಧ್ಯ, ಭಗವಾನ್ ಚಕ್ರವರ್ತಿ, ಮಲ್ಲಿಕಾರ್ಜುನ ಮಹಾಮನೆ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಅಂಕಣಕಾರ ಬಿ.ಚಂದ್ರೇಗೌಡ, ಎಚ್.ಎಚ್.ರೋಹಿಣಿ ಇದ್ದಾರೆ
ಪ್ರಜಾವಾಣಿ ಚಿತ್ರ
ಪೂರ್ಣಚಂದ್ರ ತೇಜಸ್ವಿ–86 ಕಾರ್ಯಕ್ರಮದ ಅಂಗವಾಗಿ ಅಪರೂಪದ ಫೋಟೊಗಳ ಪ್ರದರ್ಶನ ನಡೆಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.