ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡವಪುರ | ಪರಿಹಾರ ಹಣ ಪಡೆಯಲು ಪರದಾಟ

ಪಾಂಡವಪುರ ತಾಲ್ಲೂಕಿನ ಹೂ ಬೆಳೆಗಾರರ ಅಳಲು
Last Updated 23 ಮೇ 2020, 19:45 IST
ಅಕ್ಷರ ಗಾತ್ರ

ಪಾಂಡವಪುರ: ಕೊರೊನಾ ಲಾಕ್‌ಡೌನ್‌ನಿಂದ ನಷ್ಟಕ್ಕೊಳಗಾಗಿರುವ ಹೂ ಬೆಳೆಗಾರರಿಗೆ ಪರಿಹಾರ ನೀಡಲು ಸರ್ಕಾರ ಅರ್ಜಿ ಪಡೆಯುತ್ತಿದೆ. ಆದರೆ, ಪರಿಹಾರ ಹಣ ಸಾಲದಾಗಿದ್ದು, ಇದನ್ನು ಪಡೆಯಲು ಕೂಡ ಹರಸಾಹಸ ಪಡಬೇಕು ಎಂಬುದು ಬಹುತೇಕ ಬೆಳೆಗಾರರ ಆರೋಪವಾಗಿದೆ

ಸೇವಂತಿಗೆ, ಚೆಂಡು, ಗುಲಾಬಿ ಸೇರಿದಂತೆ ರೈತರು ಹಲವು ವಿಧದ ಹೂಗಳನ್ನು ಬೆಳೆದಿದ್ದರು. ಹೂ ಕಟಾವಿಗೆ ಬಂದು ಮಾರುಕಟ್ಟೆಗೆ ಸಾಗಣೆ ಮಾಡಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಆಯಿತು. ಬಹಳಷ್ಟು ರೈತರು ಹೂ ಕಿತ್ತೆಸೆದು ಹೊಲ ಉತ್ತಿದರು. ನಂತರ ಸರ್ಕಾರ ಎಕರೆಗೆ ₹ 10 ಸಾವಿರ (ಹೆಕ್ಟೇರ್‌ಗೆ ₹25 ಸಾವಿರ) ಹೂ ಬೆಳೆ ಪರಿಹಾರ ಘೋಷಿಸಿತು.

ತೋಟಗಾರಿಕೆ ಇಲಾಖೆಯು ತಾಲ್ಲೂಕಿನ ಬೆಳೆಗಾರರಿಂದ ದಾಖಲಾತಿಗಳೊಡನೆ ಅರ್ಜಿ ಪಡೆಯುತ್ತಿದೆ. ಜಮೀನುಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಬೆಳೆಗಾರರ ಖಾತೆಗೆ ಪರಿಹಾರದ ಹಣ ಹಾಕುತ್ತಾರೆ.

‘ಪಹಣಿಯಲ್ಲಿ (ಆರ್‌ಟಿಸಿ) ಹೂ ಬೆಳೆ ಎಂದು ನಮೂದಾಗಿರಬೇಕು. ಇಲ್ಲವೆಂದರೆ ಬೆಳೆಯ ಫೋಟೊವಾದರೂ ಇರಬೇಕು ಎಂಬುದು ಇಲಾಖೆ ನಿಬಂಧನೆಯಾಗಿದೆ. ಆದರೆ ಬಹಳಷ್ಟು ರೈತರು ಹೂ ಕಿತ್ತು, ಮುಂಗಾರು ಬೆಳೆಗೆ ಬಿತ್ತನೆ ಶುರುಮಾಡಿದ್ದಾರೆ. ವಾಸ್ತವ ಹೀಗಿರುವಾಗ ಹೂ ಬೆಳೆ ಪರಿಹಾರಕ್ಕೆ ಅಧಿಕಾರಿಗಳು ಯಾವ ಮಾನದಂಡ ಅನುಸರಿಸುತ್ತಾರೆ?, ನಷ್ಟ ಪರಿಹಾರ ಸಮರ್ಪಕವಾಗಿ ದೊರೆಯುತ್ತದೆಯೇ’ ಎಂದು ಹೂ ಬೆಳೆಗಾರ ಅಂತನಹಳ್ಳಿ ಗೋವಿಂದಯ್ಯ ಪ್ರಶ್ನಿಸುತ್ತಾರೆ.

ತಾಲ್ಲೂಕಿನ ವಿವಿಧೆಡೆ ಸುಮಾರು 20 ಹೆಕ್ಟೇರ್‌ ಪ್ರದೇಶದಲ್ಲಿ ಚೆಂಡು, ಎರಡು ಹೆಕ್ಟೇರ್ ಪ್ರದೇಶದಲ್ಲಿ ಗುಲಾಬಿ ಹಾಗೂ ಕೆಆರ್‌ಎಸ್‌ ಹಿನ್ನೀರಿನ ಪ್ರದೇಶದಲ್ಲಿಯೇ 180 ಹೆಕ್ಟೇರ್ ಪ್ರದೇಶದಲ್ಲಿ ಸೇವಂತಿಗೆ ಬೆಳೆಯಲಾಗಿದೆ.

‘ಸೇವಂತಿಗೆ ಬೆಳೆಗೆ ತುಂಬಾ ಖರ್ಚು ಬರುತ್ತದೆ. ಹೂ ಕೈಗೆ ಬಂದ ಮೇಲೆ ಕಟಾವು ಮಾಡಿ, ಮಾಲೆ ಕಟ್ಟಬೇಕು. ಬಳಿಕ ಮಾರುಕಟ್ಟೆಗೆ ಸಾಗಿಸಬೇಕು. ಎಕರೆಗೆ ಕನಿಷ್ಠ ₹30 ರಿಂದ 40 ಸಾವಿರ ಖರ್ಚು ಬರುತ್ತದೆ. ಆದರೆ ಸರ್ಕಾರ ನೀಡಲು ಮುಂದಾಗಿರುವುದು ಎಕರೆಗೆ ಕೇವಲ ₹10 ಸಾವಿರ ಮಾತ್ರ’ ಎಂದು ಹೂ ಬೆಳೆಗಾರ ಅಂತನಹಳ್ಳಿ ಗೋವಿಂದಯ್ಯ ಅಳಲು ತೋಡಿಕೊಂಡರು.

‘ಕೆಆರ್‌ಎಸ್‌ ಹಿನ್ನೀರು ಪ್ರದೇಶದಲ್ಲಿ ಹೆಚ್ಚು ಹೂ ಬೆಳೆಗಾರರಿದ್ದಾರೆ. ಸುಮಾರು 3,240 ಟನ್‌ ಸೇವಂತಿಗೆ ಬೆ‌ಳೆಯಲಾಗಿದೆ. ಮಾರ್ಚ್‌, ಏಪ್ರಿಲ್‌, ಮೇ ತಿಂಗಳು ಶುಭ ಸಮಾರಂಭಗಳು ಹೆಚ್ಚು. ಲಾಕ್‌ಡೌನ್‌ನಿಂದಾಗಿ ಹೂ ಮಾರುಕಟ್ಟೆಗೆ ಸಾಗಣೆ ಮಾಡಲಾಗಲಿಲ್ಲ’ ಎನ್ನುತ್ತಾರೆ ಬೆಳೆಗಾರ ಎ.ಜಿ.ಬಸವರಾಜು.

*
ಆರ್‌ಟಿಸಿ ದಾಖಲೆ ಜೊತೆಗೆ ಹೂ ಬೆಳೆಯಲಾಗಿತ್ತೇ ಎಂಬ ಬಗ್ಗೆ ಅಕ್ಕಪಕ್ಕದ ಜಮೀನಿನ ರೈತರ ಹೇಳಿಕೆ ಪಡೆಯಲಾಗುವುದು. ನಂತರ ಬೆಳೆಗಾರ ಅಕೌಂಟ್‌ಗೆ ಪರಿಹಾರ ಹಣ ಹಾಕಲಾಗುತ್ತದೆ.
-ಹಿರಿಯ ಸಹಾಯಕ ನಿರ್ದೇಶಕಿ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT