ಬುಧವಾರ, ಆಗಸ್ಟ್ 17, 2022
25 °C
ಬಾಲಕಿ ಅತ್ಯಾಚಾರ ಯತ್ನ, ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ

ವಲಸೆ ಕಾರ್ಮಿಕರಿಗೆ ರಕ್ಷಣೆ ಕೊಡಿ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮದ್ದೂರು ತಾಲ್ಲೂಕು, ಉರುಗಲವಾಡಿ ಗ್ರಾಮದಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ವಲಸೆ ಕಾರ್ಮಿಕ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ಒಕ್ಕೂಟ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಮಹಿಳಾ ಮುನ್ನಡೆ, ಸಿಐಟಿಯು, ದಸಂಸ, ಕೆಪಿಆರ್‌ಎಸ್ ಸೇರಿ ವಿವಿಧ ಸಂಘಟನೆಗಳ ಸದಸ್ಯರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದೆ. ನಿರ್ಭಯ ನಿಧಿ ಸದ್ಬಳಕೆಯಾಗಬೇಕು, ದೂರದ ಊರುಗಳಿಂದ ಬಂದಿರುವ ಕಾರ್ಮಿಕರಿಗೆ ಸುರಕ್ಷತೆಯನ್ನು ಖಾತ್ರಿಗೊಳಿಸಬೇಕು, ಅತ್ಯಾಚಾರ ಮುಕ್ತ ಆರೋಗ್ಯಕರ ಸಮಾಜ ನಿರ್ಮಿಸಬೇಕು. ಕಬ್ಬು ಕಡಿಯಲು ಬಂದ ಕಾರ್ಮಿಕರು ಯಾವುದೇ ಸೌಲಭ್ಯಗಳಿಲ್ಲದೇ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಅವರಿಗೆ ಸುರಕ್ಷತೆ ಎಂಬುದು ಮರೀಚಿಕೆಯಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಕಬ್ಬು ಕಟಾವು ಮಾಡಲು ಬಂದಿರುವ ವಲಸೆ ಕಾರ್ಮಿಕರಿಗೆ ಸೂಕ್ತ ವಸತಿ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಬೇಕು. ಅವರಿಗೆ ಶೌಚಾಲಯ ಸೌಲಭ್ಯ ನೀಡಬೇಕು. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಅವರ ಬದುಕು, ಪ್ರಾಣವನ್ನು ಉಳಿಸಬೇಕು ಎಂದು ಆಗ್ರಹಿಸಿದರು.

ಬಾಲಕಿಯ ಜೀವ ಹಾನಿ ಹೊಣೆಯನ್ನು ಆ ಕಬ್ಬಿನಗದ್ದೆಯ ವ್ಯಾಪ್ತಿಯ ಸಕ್ಕರೆ ಕಾರ್ಖಾನೆಯೇ ಹೊರಬೇಕು. ಪೊಲೀಸ್‌ ಇಲಾಖೆಯು ಕಾರ್ಖಾನೆಯ ಆಡಳಿತ ಮಂಡಳಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕೂಡಲೇ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ತ್ವರಿತ ನ್ಯಾಯಾಲಯ ತೆರೆದು ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.

ವಿವಿಧ ಜಿಲ್ಲೆಗಳಿಂದ ಕಾರ್ಮಿಕರನ್ನು ಕರೆತಂದು ಅವರಿಗೆ ಸೂಕ್ತ ವ್ಯವಸ್ಥೆ ಮಾಡದ ಕಾರಣ ಕಾರ್ಖಾನೆಯ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಟೆಂಟ್‌ಗಳಲ್ಲಿ ವಾಸ ಮಾಡುತ್ತಿದ್ದಾರೆ. ಬಹಿರ್ದೆಸೆಗೆ ತೆರಳುವ ಸಂದರ್ಭದಲ್ಲಿ ಹಿಂಸೆಗೆ ಒಳಗಾಗಿ ಈ ರೀತಿ ಘಟನೆಗಳು ಮರುಕಳಿಸುತ್ತಿವೆ. ವಲಸೆ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಇಲ್ಲದಿರುವುದು ಘಟನೆಯಿಂದ ಸಾಬೀತಾಗಿದೆ ಎಂದು ದೂರಿದರು.

ದಸಂಸ ಮುಖಂಡರಾದ ಕೆರಗೋಡು ಗುರುಪ್ರಸಾದ್, ಎಂ.ಬಿ.ಶ್ರೀನಿವಾಸ್‌, ರೈತ ಮುಖಂಡರಾದ ಸುನಂದಾ ಜಯರಾಂ, ಲತಾ ಶಂಕರ್‌, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್‌, ಸಿಐಟಿಯುನ ಸಿ.ಕುಮಾರಿ, ವಕೀಲ ಬಿ.ಟಿ.ವಿಶ್ವನಾಥ್‌, ಕರ್ನಾಟಕ ಜನಶಕ್ತಿ ಸಂಘಟನೆಯ ಪೂರ್ಣಿಮಾ, ಕಮಲಾ, ವಿಮೋಚನಾ ಮಹಿಳಾ ಸಂಘಟನೆಯ ಜನಾರ್ಧನ್‌, ಜನವಾದಿ ಮಹಿಳಾ ಸಂಘಟನೆಯ ಶೋಭಾ, ದೇವರಾಜು, ಎಂ.ಪಿ. ಭಾರತಿ, ಜಯಶೀಲಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.