ಶನಿವಾರ, ಸೆಪ್ಟೆಂಬರ್ 26, 2020
26 °C

ಜನವಿರೋಧಿ ತಿದ್ದುಪಡಿ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೋವಿಡ್‌ ಸಂಕಷ್ಟ ಸಮಯದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕಾನೂನುಗಳಿಗೆ ಜನವಿರೋಧಿ ತಿದ್ದುಪಡಿ ತಂದಿದೆ. ಜೊತೆಗೆ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣ ಮಾಡಲು ಮುಂದಾಗಿದೆ ಎಂದು ಆರೋಪಿಸಿ ದಲಿತ, ಶೋಷಿತ ಸಮಾಜ ಸಂಘರ್ಷ ಸಮಿತಿ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ವಿರೋಧಿಯಾಗಿರುವ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳ ಪರವಾಗಿ ನಿಂತಿದೆ. ಭೂಸುಧಾರಣಾ ಕಾಯ್ದೆ ‘ಉಳುವವನೇ ಭೂಮಿಯ ಒಡೆಯ’ ಎಂಬ ತತ್ವದಡಿ ರಚನೆಯಾಗಿತ್ತು. ಆದರೆ ರಾಜ್ಯ ಸರ್ಕಾರ ಆ ಕಾಯ್ದೆಗೆ ತಿದ್ದುಪಡಿ ತಂದು ‘ಉಳ್ಳವನೇ ಭೂಮಿಯ ಒಡೆಯ’ ಎಂದು ಬದಲಾವಣೆ ಮಾಡಿದೆ. ಇದರಿಂದ ರಾಜ್ಯದ ರೈತರು ಭೂಮಿ ಕಳೆದುಕೊಂಡು ಕೃಷಿ ಕಾರ್ಮಿಕರಾಗುವ ಅಪಾಯ ಎದುರಾಗಿದೆ. ಈ ತಿದ್ದುಪಡಿಯನ್ನೂ ಕೂಡಲೇ ವಾಪಸ್‌ ಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬಹುಸಂಸ್ಕೃತಿ, ಬಹುಧರ್ಮ, ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸುವ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಸಾಧಕರ ಪಾಠಗಳನ್ನು ಪಠ್ಯಕ್ರಮದಿಂದ ತೆಗೆದುಹಾಕುವ ಮೂಲಕ ಕೋಮುವಾದಿ ನೀತಿ ಅನುಸರಿಸುತ್ತಿದೆ. ಈ ಜನವಿರೋಧಿ ನೀತಿಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ಸೋತಿವೆ. ವೈದ್ಯಕೀಯ ಪರಿಕರ ಖರೀದಿಯಲ್ಲಿ ಅಪಾರ ಹಣ ಅವ್ಯವಹಾರ ನಡೆಸಿರುವುದು ಅಮಾನವೀಯವಾಗಿದೆ. ಈ ಭ್ರಷ್ಟಾಚಾರ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಬೇಕು. ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುಸಜ್ಜಿತವಾದ ಆಸ್ಪತ್ರೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ವೆಂಕಟಗಿರಿಯಯ್ಯ, ಡಿ.ವೆಂಕಟೇಶ್‌, ಶಿವು, ನಾಗರಾಜ್‌ ಈಚಗೆರೆ, ರಾಮಕೃಷ್ಣ ಸಂಪಹಳ್ಳಿ, ಚನ್ನಕೇಶವ ಇತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು