ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ವಿರೋಧಿ ಕಾಯ್ದೆಗಳ ರದ್ದತಿಗೆ ಒತ್ತಾಯ

ಬೆಂಗಳೂರಿಗೆ ತೆರಳಿದ ಕಾಂಗ್ರೆಸ್‌ ಮುಖಂಡರು, ಜ.26ಕ್ಕೆ ರೈತರ ರ‍್ಯಾಲಿ
Last Updated 20 ಜನವರಿ 2021, 13:05 IST
ಅಕ್ಷರ ಗಾತ್ರ

ಮಂಡ್ಯ: ಕೇಂದ್ರ, ರಾಜ್ಯ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ರಾಜ ಭವನಕ್ಕೆ ಮುತ್ತಿಗೆ ಹಾಕುವ ‘ರೈತರ ಅಧಿಕಾರ ದಿನ’ ಆಂದೋಲನದಲ್ಲಿ ಭಾಗವಹಿಸಲು ಬುಧವಾರ ನಗರದ ಕಾಂಗ್ರೆಸ್‌ ಮಹಿಳಾ ಘಟಕದ ಸದಸ್ಯರು ಬೆಂಗಳೂರಿಗೆ ತೆರಳಿದರು.

‘ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿ ಕಳೆದ 50 ದಿನಗಳಿಂದ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರ ಕಾಯ್ದೆಗಳನ್ನು ವಾಪಸ್‌ ಪಡೆಯದೆ ರೈತರ ಹೋರಾಟವನ್ನು ನಿರ್ಲಕ್ಷಿಸುತ್ತಿದ್ದಾರೆ. ಆದರೆ ಕಾಯ್ದೆಗಳನ್ನು ವಾಪಸ್‌ ಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲ' ಎಂದು ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌ ಆಕ್ರೋಶ ವ್ಯಕ್ತಪಡಿಸಿದರು.

‘ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು ಡಿ.8ರಂದು 'ಭಾರತ್ ಬಂದ್‌ ನಡೆಸಿದರು. ಡಿ. 12ರಂದು ರೈತರು ಪಂಜಾಬ್, ಹರಿಯಾಣ ಮತ್ತಿತರ ಕಡೆ ಟೋಲ್ ಪ್ಲಾಜಾಗಳನ್ನು ಬಂದ್ ಮಾಡಿ ಮುಷ್ಕರ ನಡೆಸಿದ್ದರು. ಆದರೂ ಕೇಂದ್ರ ಸರ್ಕಾರ ತನ್ನ ಕಾರ್ಪೊರೇಟ್‌ ಪರ ನಿಲುವನ್ನು ಬದಲಿಸದೆ ರೈತರಿಗೆ ಅನ್ಯಾಯವೆಸಗುತ್ತಿದೆ’ ಎಂದರು.

ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಬೇಕು. ರೈತರ ಎಲ್ಲಾ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ನೀಡಬೇಕು, ರೈತರಿಗೆ ಮಾರಕವಾಗಿರುವ ವಿದ್ಯುತ್ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಮಹಿಳಾ ಘಟಕದ ಪದಾಧಿಕಾರಿಗಳಾದ ಶಕುಂತಲಾ, ಮಮತಾ, ಕಮಲಾ ರಾಜ್ ಇದ್ದರು.

ಜ.26ಕ್ಕೆ ಸಮನಾಂತರ ಪರೇಡ್‌: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ–ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಜ. 26ರಂದು ದೆಹಲಿಯಲ್ಲಿ ನಡೆಯುವ ಟ್ರಾಕ್ಟರ್‌ ಪರೇಡ್‌ಗೆ ಸಮನಾಂತರ, ಪರ್ಯಾಯವಾಗಿ ಬೆಂಗಳೂರಿನಲ್ಲಿ ಜನ ಗಣರಾಜ್ಯೋತ್ಸವ ಪರೇಡ್‌ ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಂತ ಕೃಷಿ ಕೂಲಿಕಾರರ ಸಂಘದ ಟಿ.ಎಲ್‌.ಕೃಷ್ಣೇಗೌಡ ‘ ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ಕಳೆದ 50 ದಿನಗಳಿಂದಲೂ ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿದ್ದರೂ ವಾಪಸ್‌ ಪಡೆಯುವ ಮನಸ್ಸು ಮಾಡಿಲ್ಲ. ಕಾಯ್ದೆ ವಾಪಸ್‌ ಪಡೆಯುವವವರೆಗೂ ಹೋರಾಟ ನಿರಂತರವಾಗಿರುತ್ತದೆ. ಜ.26ರಂದು ಬೆಂಗಳೂರಿನಲ್ಲಿ ನಡೆಯುವ ಪರೇಡ್‌ನಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ’ ಎಂದರು.

ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ವಿಶ್ವನಾಥ್‌ ಮಾತನಾಡಿ ‘ಮೊದಲು ರೈತರಿಗೆ ಅಧಿಕ ಲಾಭದ ಆಸೆ ತೊರಿಸಿ ನಂತರ ಅವರನ್ನು ಅತಂತ್ರ ಸ್ಥಿತಿಗೆ ಸಿಲುಕಿಸುವ ಹುನ್ನಾರ ಕಾಯ್ದೆಯಲ್ಲಿ ಅಡಗಿದೆ’ ಎಂದರು ಆರೋಪಿಸಿದರು.

‘ಇತ್ತೀಚೆಗೆ ಖಾಸಗಿ ಹಾಲು ಕಂಪನಿಯೊಂದು ರೈತರಿಂದ ₹36 ಕೊಟ್ಟು ಒಂದು ಲೀಟರ್‌ ಹಾಲು ಖರೀದಿಸುತ್ತಿತ್ತು. ದಿಢೀರನೇ ಅದನ್ನು ₹30ಕ್ಕೆ ಇಳಿಸಲಾಯಿತು. ಇದನ್ನು ಪ್ರಶ್ನಿಸಿದ ರೈತರ ಹಾಲನ್ನು ಖರೀದಿಸುವುದನ್ನೇ ನಿಲ್ಲಿಸಿದರು. ಲಕ್ಷಾಂತರ ಬಂಡವಾಳ ಹಾಕಿದ ರೈತರು ಹಾಲನ್ನು ಚರಂಡಿಗೆ ಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲೂ ದಾವೆ ಹೂಡಲಾಗಿದೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಹೋರಾಟ ಮಾಡಲಾಗುತ್ತಿದ್ದು, ಎಲ್ಲರೂ ಸಹಕರಿಸಬೇಕು’ ಎಂದರು.

ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಘಟಕದ ಕಾರ್ಯದರ್ಶಿ ಪೂರ್ಣಿಮಾ, ಜಿಲ್ಲಾ ಘಟಕದ ಕಾರ್ಯದರ್ಶಿ ಸಿದ್ದರಾಜು, ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT