ಶುಕ್ರವಾರ, ಸೆಪ್ಟೆಂಬರ್ 30, 2022
26 °C
9 ವರ್ಷಗಳ ಕಾನೂನು ಹೋರಾಟ ಯಶಸ್ವಿ, ಪ್ರಭಾವಿ ಆರೋಪಿಗಳು ತಪ್ಪಿಸಿಕೊಂಡರೇ?

ಮುಡಾ; ಕೋಟಿ ವಂಚಕರಿಗೆ ಸಿಬಿಐ ಕುಣಿಕೆ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಅಕ್ರಮ ದಾಖಲಾತಿ ಸೃಷ್ಟಿಸಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ₹ 5 ಕೋಟಿ ಹಣ ವಂಚಿಸಿದ್ದ ಐವರು ಅಪರಾಧಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 9 ವರ್ಷಗಳ ಕಾನೂನು ಹೋರಾಟ ಯಶಸ್ವಿಯಾಗಿದ್ದು ವಂಚಕರು ಕಡೆಗೂ ಕಾನೂನು ಕುಣಿಕೆಯಲ್ಲಿ ಸಿಲುಕಿದ್ದಾರೆ.

ಕಾಂಗ್ರೆಸ್‌ ಮುಖಂಡ ಕೆಬ್ಬಳ್ಳಿ ಆನಂದ್‌, ಬೆಂಗಳೂರಿನಲ್ಲಿ ಫಾರ್ಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಳವಳ್ಳಿಯ ಎಚ್‌.ಬಿ.ನಾಗಲಿಂಗಸ್ವಾಮಿ, ಮದ್ದೂರು ತಾಲ್ಲೂಕು ಹೆಮ್ಮನಹಳ್ಳಿ ಚೌಡೇಶ್ವರಿ ದೇವಾಲಯದಲ್ಲಿ ಅರ್ಚಕರಾಗಿದ್ದ ಚಂದ್ರಶೇಖರ್‌, ಮುಡಾದಲ್ಲಿ ಎಫ್‌ಡಿಎಯಾಗಿದ್ದ ಎಚ್‌.ಕೆ.ನಗಾಗರಾಜ್‌, ಕೆಬ್ಬಳ್ಳಿ ಆನಂದ್‌ ಆಪ್ತ ಹರ್ಷನ್‌ ಅಪರಾಧಿಗಳು ಎಂದು ಘೋಷಣೆ ಮಾಡಲಾಗಿದ್ದು ತಲಾ 7 ವರ್ಷ ಜೈಲುಶಿಕ್ಷೆ ಹಾಗೂ ₹ 1 ಕೋಟಿ ದಂಡ ವಿಧಿಸಲಾಗಿದೆ.

2013ರಲ್ಲಿ ಕೂತೂಹಲ ಕೆರಳಿಸಿದ್ದ ಈ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು. ನೂರಡಿ ರಸ್ತೆಯ ಅಲಹಾಬಾದ್‌ ಬ್ಯಾಂಕ್‌ನಲ್ಲಿದ್ದ ಮುಡಾದ ₹ 5 ಕೋಟಿ ಹಣವನ್ನು ಇಂಡಿಯನ್‌ ಬ್ಯಾಂಕ್‌ನಲ್ಲಿಟ್ಟಂತೆ ಅಪರಾಧಿಗಳು ಅಕ್ರಮ ದಾಖಲಾತಿ ಸೃಷ್ಟಿಸಿದ್ದರು. ಅಲಹಾಬಾದ್‌ ಬ್ಯಾಂಕ್‌ನಲ್ಲಿದ್ದ ಹಣ ತೆಗೆದಿದ್ದ ಇವರು ಇಂಡಿಯನ್‌ ಬ್ಯಾಂಕ್‌ನಲ್ಲಿ ಇಡದೇ ವಂಚನೆ ಮಾಡಿದ್ದರು.

ಕೆರೆಯಂಗಳದ ವಿವೇಕಾನಂದ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ನಡೆಸಲು ಟೆಂಡರ್‌ ಆಹ್ವಾನ ಮಾಡಿದಾಗ ಹಣ ಪಡೆಯಲು ಮುಡಾ ಅಲಹಾಬಾದ್‌ ಬ್ಯಾಂಕ್‌ ಜೊತೆ ಪತ್ರ ವ್ಯವಹಾರ ನಡೆಸಿತ್ತು. ಆಗ ಅಲಹಾಬಾದ್‌ ಬ್ಯಾಂಕ್‌ನಲ್ಲಿ ಹಣ ಇಲ್ಲ ಎಂಬುದು ಬೆಳಕಿಗೆ ಬಂದಿತ್ತು. ದಾಖಲಾತಿ ಪ್ರಕಾರ ಇಂಡಿಯನ್‌ ಬ್ಯಾಂಕ್‌ನಲ್ಲಿ ಹಣ ಇತ್ತು, ಆದರೆ ಅವು ಖೊಟ್ಟಿ ದಾಖಲಾತಿಗಳಾಗಿದ್ದು ವಾಸ್ತವವಾಗಿ ಇಂಡಿಯನ್‌ ಬ್ಯಾಂಕ್‌ನಲ್ಲೂ ಹಣ ಇರಲಿಲ್ಲ.

ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡಲು ಮಧ್ಯವರ್ತಿಗಳಾಗಿದ್ದ ಕೆಬ್ಬಹಳ್ಳಿ ಆನಂದ್‌ ಹಾಗೂ ಇತರ 11 ಮಂದಿ ವಿರುದ್ಧ ಮಂಡ್ಯ ಪಶ್ವಿಮ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮುಡಾ ಆಯುಕ್ತ ಶಿವರಾಮ ಕೂಡ ಬಂಧನಕ್ಕೆ ಒಳಗಾಗಿದ್ದರು. ಆರಂಭದಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ನಂತರ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆಗಿನ ಕಾಂಗ್ರೆಸ್‌ ಸರ್ಕಾರ ಸಿಬಿಐಗೆ ವಹಿಸಿತ್ತು.

ತಪ್ಪಿಸಿಕೊಂಡ ಪ್ರಭಾವಿಗಳು: ಆರಂಭದಲ್ಲಿ 11 ಮಂದಿ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿತ್ತು. ಮುಡಾ ಆಯುಕ್ತ ಸೇರಿ ಇಂಡಿಯನ್‌ ಬ್ಯಾಂಕ್‌ ಅಧಿಕಾರಿಗಳು ಕೂಡ ಆರೋಪಿ ಸ್ಥಾನದಲ್ಲಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ 6 ಮಂದಿ ಹೆಸರು ಕೈಬಿಡಲಾಯಿತು. ಅವರೆಲ್ಲರೂ ಪ್ರಭಾವಿಗಳ ಸಂಬಂಧಿಕರು ಎಂಬ ಕಾರಣಕ್ಕೆ ಆರೋಪದಿಂದ ತಪ್ಪಿಸಿಕೊಂಡರು ಎಂಬ ಆರೋಪ ಈಗಲೂ ಇದೆ.

‘ಜುಲೈ 7, 2015ರಂದು ಸಿಬಿಐ ಚಾರ್ಚ್‌ಶೀಟ್‌ ಸಲ್ಲಿಸಿತ್ತು, ಡಿವೈಎಸ್‌ಪಿ. ಕೆ.ವೈ.ಗುರುಪ್ರಸಾದ್‌ ನೇತೃತ್ವದಲ್ಲಿ ವಿಚಾರಣೆ ಆರಂಭಗೊಂಡಿತ್ತು. ಮೊದಲಿನಿಂದಲೂ ನಾವು ವಿಚಾರಣಾಧಿಕಾರಿಗಳಿಗೆ ಸಕಲ ಮಾಹಿತಿ ಒದಗಿಸಿದ್ದೆವು. ಅಪರಾಧಿಗಳು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಕಲ ಪ್ರಯತ್ನ ನಡೆಸಿದ್ದರು. ಆದರೆ ಅವರಿಗೆ ಶಿಕ್ಷೆಯಾಗಿರುವುದು ಕಾನೂನಿನ ಮೇಲಿನ ನಂಬಿಕೆ ಹೆಚ್ಚುವಂತೆ ಮಾಡಿದೆ’ ಎಂದು ಆರ್‌ಟಿಐ ಕಾರ್ಯಕರ್ತ ರವೀಂದ್ರ ಹೇಳಿದರು.

ಮುಡಾ ಅಕ್ರಮಕ್ಕೆ ಮಾತ್ರ ಶಿಕ್ಷೆ
ಸಿಬಿಐ ವಿಶೇಷ ನ್ಯಾಯಾಲಯವು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಹಗರಣದಲ್ಲಿ ಮಾತ್ರ ತೀರ್ಪು ಪ್ರಕಟಿಸಿದೆ. ಇದೇ ಆರೋಪಿಗಳು ರಾಮನಗರ– ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಸಿರುವ ₹ 16.50 ಕೋಟಿ ಅಕ್ರಮದ ತನಿಖೆ ಸಿಬಿಐನಲ್ಲಿ ಇನ್ನೂ ತನಿಖಾ ಹಂತದಲ್ಲಿದೆ. ಇದು ಬೃಹತ್‌ ಅಕ್ರಮವಾಗಿದ್ದು ಕಾನೂನು ಕುಣಿಕೆ ಇನ್ನಷ್ಟು ಬಿಗಿಯಾಗುವ ಸಾಧ್ಯತೆ ಇದೆ.

ಇಷ್ಟೇ ಅಲ್ಲದೇ ಇವರೇ ಆರೋಪಿಗಳು ಮಂಡ್ಯ ಡಿಸಿಸಿ ಬ್ಯಾಂಕ್‌ನಲ್ಲಿ ₹ 2 ಕೋಟಿ ಹಣ ಅವ್ಯವಹಾರ ನಡೆಸಿದ್ದರು. ಹಣವನ್ನು ಬ್ಯಾಂಕ್‌ಗೆ ವಾಪಸ್‌ ಕಟ್ಟಿದ ಕಾರಣ ಪ್ರಕರಣದ ತನಿಖೆಯನ್ನು ಕೈಬಿಡಲಾಯಿತು.

ಉಚ್ಚಾಟನೆಗೊಂಡಿದ್ದ ಆನಂದ್‌
‘ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆ ವೇಳೆ ಕೆಬ್ಬಹಳ್ಳಿ ಆನಂದ್‌ನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಹೊಳಲು ಕ್ಷೇತ್ರದಿಂದ ಪತ್ನಿಗೆ ಟಿಕೆಟ್‌ ಸಿಗದ ಕಾರಣ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಆಗ ಆತನನ್ನು ಉಚ್ಛಾಟಿಸಲಾಗಿತ್ತು. ಈಚೆಗೆ ನಡೆದ ಡಿಜಿಟಲ್‌ ನೋಂದಣಿ ಅಭಿಯಾನದಲ್ಲಿ ಆತ ಮತ್ತೆ ಪಕ್ಷಕ್ಕೆ ಸೇರಿದ್ದಾನೆ. ಆತನಿಗೆ ಪಕ್ಷದಿಂದ ಯಾವುದೇ ಸ್ಥಾನ ನೀಡಿಲ್ಲ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು