ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಕಾಲದ ಕಲ್ಯಾಣಿ ಸ್ವಚ್ಛತೆಗೆ ಆಗ್ರಹ

ಶ್ರೀರಂಗಪಟ್ಟಣ: ಉದುರುತ್ತಿರುವ ಮಿನಾರಿನ ಗಾರೆ; ಪ್ರವಾಸಿಗರಿಗೆ ಕಿರಿಕಿರಿ
Last Updated 9 ನವೆಂಬರ್ 2020, 4:58 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಟಿಪ್ಪು ಸುಲ್ತಾನ್‌ ಆಡಳಿತ ಕಾಲದಲ್ಲಿ (1784) ನಿರ್ಮಾಣಗೊಂಡಿರುವ ಜಾಮಿಯಾ ಮಸೀದಿ (ದೊಡ್ಡ ಮಸೀದಿ)ಯ ಕಲ್ಯಾಣಿಯ ನೀರು ಪಾಚಿ ಕಟ್ಟಿದ್ದು, ನಿರ್ವಹಣೆ ಇಲ್ಲವಾಗಿದೆ.

ಕಲ್ಯಾಣಿ ಹತ್ತಿರಕ್ಕೆ ಹೋದರೆ ಗಬ್ಬು ವಾಸನೆ ಬರುತ್ತದೆ. ನೀರಿನಲ್ಲಿ ಹುಳುಗಳಾಗಿವೆ, ಅಲ್ಲಲ್ಲಿ ಪ್ಲಾಸ್ಟಿಕ್‌ ಬಾಟಲಿಗಳು, ಚೀಲಗಳು, ಡಬ್ಬಿಗಳು ತೇಲುತ್ತಿವೆ. ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಈ ಅವ್ಯವಸ್ಥೆಯಿಂದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವವರು, ಪಾಠ ಕಲಿಯುವ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಮುಜುಗರ ಅನುಭವಿಸುತ್ತಿದ್ದಾರೆ.

‘ಮಸೀದಿ ಬಲ ಭಾಗದ ಮಿನಾರಿನ ಮೇಲಿಂದ ಚುರುಕಿ ಗಾರೆ ಉದುರುತ್ತಿದೆ. ಕೆಳಗೆ ಓಡಾಡುವವರ ಮೇಲೆ ಗಾರೆ ತುಣುಕುಗಳು ಬಿದ್ದಿವೆ. ಮಿನಾರಿನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಒಂದು ವರ್ಷದಿಂದ ಹಾಗೇ ಇದೆ. ಆದರೂ ಅದನ್ನು ದುರಸ್ತಿ‍ಪಡಿಸಲು ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣ ಇಲಾಖೆ ಆಸಕ್ತಿ ತೋರುತ್ತಿಲ್ಲ’ ಎಂದು ಮಸೀದಿಯಲ್ಲಿ ಪಾಠ ಮಾಡುವ ಸಯ್ಯದ್‌ ಗೌಸ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಮಿನಾರುಗಳ ಮೇಲೆ ಗಿಡ ಬೆಳೆದಿವೆ, ಮಸೀದಿಯ ಪ್ರಾರ್ಥನಾ ಸಭಾಂಗಣದ ನೆಲ ಕಿತ್ತು ಬಂದಿದೆ. ಎರಡು, ಮೂರು ಇಂಚುಗಳಷ್ಟು ಗುಂಡಿಗಳು ನಿರ್ಮಾಣವಾಗಿದ್ದು, ಮಂಡಿಯೂರಿ ಪ್ರಾರ್ಥನೆ ಸಲ್ಲಿಸಲು ಆಗುತ್ತಿಲ್ಲ. ವಕ್ಫ್‌ ಮಂಡಳಿ ಹಾಗೂಪುರಾತತ್ವ ಮತ್ತು ಸರ್ವೇಕ್ಷಣ ಇಲಾಖೆಗೆ ಸಮಸ್ಯೆ ಕುರಿತು ಲಿಖಿತ ಮತ್ತು ಮೌಖಿಕವಾಗಿ ಮಾಹಿತಿ ನೀಡಿದ್ದರೂ ಕ್ರಮ ವಹಿಸಿಲ್ಲ’ ಎಂದು ಗುಲ್ಜಾರ್‌ ಖಾನ್‌ ದೂರುತ್ತಾರೆ.

‘ಟಿಪ್ಪು ಮಸೀದಿಯ ಕೊಳದಲ್ಲಿ ಪಾಚಿಯಾಗಿರುವುದು ಮತ್ತು ಮಿನಾರಿನ ತುದಿಯಲ್ಲಿ ಬಿರುಕು ಕಾಣಿಸಿಕೊಂಡಿರುವ ಕುರಿತು ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣ (ಎಸ್‌ಐ)ಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ವಕ್ಫ್‌ ಎಸ್ಟೇಟ್ ಕಾರ್ಯದರ್ಶಿ ಮಹಮದ್‌ ಇರ್ಫಾನ್‌ ಹೇಳಿದರು.

‘ಟಿಪ್ಪು ಮಸೀದಿ ಮತ್ತು ಅದರ ಒಳಗಿರುವ ಕಲ್ಯಾಣಿಯ ಅಶುಚಿತ್ವ ಸಮಸ್ಯೆಯ ಬಗ್ಗೆ ಮಾಹಿತಿ ಇದೆ. ಆದರೆ ಈ ವರ್ಷ ಇಲಾಖೆಗೆ ಹಣ ಬಿಡುಗಡೆ ಆಗಿಲ್ಲ. ಅನುದಾನ ಬಂದ ಕೂಡಲೇ ಎರಡೂ ಕೆಲಸಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಆರ್ಕಿಯಾಲಜಿಕಲ್‌ ಸರ್ವೆ ಆಫ್‌ ಇಂಡಿಯಾದ ಸಹಾಯಕ ಸಂರಕ್ಷಣಾಧಿಕಾರಿ ಸುನಿಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT