ಭಾನುವಾರ, ಸೆಪ್ಟೆಂಬರ್ 26, 2021
29 °C
ನಾರಾಯಣಗೌಡ, ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ ವಿರುದ್ಧ ವಾಹನ ಚಾಲಕರ ಆಕ್ರೋಶ

ಹದಗೆಟ್ಟ ಶ್ರೀರಂಗಪಟ್ಟಣ–ಚನ್ನರಾಯಪಟ್ಟಣ ರಸ್ತೆ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಶ್ರೀರಂಗಪಟ್ಟಣದಿಂದ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕು ಮಂಡ್ಯ ಜಿಲ್ಲಾ ಗಡಿವರೆಗೆ ರಾಜ್ಯ ಹೆದ್ದಾರಿ ತೀವ್ರ ಹದಗೆಟ್ಟಿದ್ದು ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರಸ್ತೆ ತುಂಬೆಲ್ಲಾ ದೊಡ್ಡದೊಡ್ಡ ಗುಂಡಿಗಳಿದ್ದು ಜನರು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

ಕೆ.ಆರ್‌.ಪೇಟೆ ತಾಲ್ಲೂಕು ಆನೆಗೊಳ ಗ್ರಾಮದವರೆಗೂ ಮಂಡ್ಯ ಜಿಲ್ಲೆಯ ವ್ಯಾಪ್ತಿ ಇದೆ. ಆನೆಗೊಳದಿಂದ ಚನ್ನರಾಯಪಟ್ಟಣ ತಾಲ್ಲೂಕು 8 ಕಿ.ಮೀ ದೂರವಿದೆ. ಮಂಡ್ಯ ಜಿಲ್ಲೆಯ ವ್ಯಾಪ್ತಿಯ ರಸ್ತೆ ತೀವ್ರ ಹಾಳಾಗಿದ್ದು ಸಚಿವ ನಾರಾಯಣಗೌಡ ಅವರ ಕ್ಷೇತ್ರ ಕೆ.ಆರ್‌.ಪೇಟೆ ವ್ಯಾಪ್ತಿಯಲ್ಲಿ ನಿತ್ಯ ಸಣ್ಣಪುಟ್ಟ ಅಗಘಾತಗಳು ಸಾಮಾನ್ಯ ಎಂಬಂತಾಗಿವೆ.

ಮೈಸೂರಿನಿಂದ ಬರುವ ವಾಹನಗಳು ತೆಂಡೇಕೆರೆ ದಾಟುತ್ತಿದ್ದಂತೆ ರಸ್ತೆಗಳಲ್ಲಿರುವ ಗುಂಡಿಗಳ ಕಾರುಬಾರು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತವೆ. ಸಾರಿಗೆ ಬಸ್‌ಗಳಲ್ಲಿ ಓಡಾಡುವವರೂ ತೊಂದರೆ ಅನುಭವಿಸುತ್ತಾರೆ. ಹಿರಿಯ ನಾಗರಿಕರು ವಾಹನಗಳಲ್ಲಿ ಓಡಾಡದಂತಾಗಿದೆ.

ಪಾಂಡವಪುರ ವ್ಯಾಪ್ತಿಯ ರಸ್ತೆಗಳಲ್ಲಿ ವಾಹನ ಓಡಿಸುವುದು ಸವಾಲಾಗಿದೆ. ವೇಗವಾಗಿ ವಾಹನ ಓಡಿಸಲೂ ಸಾಧ್ಯವಾಗದೇ ಸವಾರರು ಪರದಾಡುತ್ತಿದ್ದಾರೆ. ರಾತ್ರಿಯ ವೇಳೆ ವಾಹನ ಓಡಿಸುವುದು ಸಾಹಸವಾಗಿದೆ. ಶಾಸಕ ಸಿ.ಎಸ್‌.ಪುಟ್ಟರಾಜು ಅವರು ವಾಸಿಸುವ ಚಿನಕುರಳಿ ಪಟ್ಟಣ ವ್ಯಾಪ್ತಿಯಲ್ಲೇ ರಸ್ತೆಯು ಅವ್ಯವಸ್ಥೆಯಿಂದ ಕೂಡಿದೆ. ಚಿನಕುರಳಿ ಪೆಟ್ರೋಲ್‌ ಬಂಕ್‌ ಬಳಿ ರಸ್ತೆಯಲ್ಲಿ ಮಂಡಿಯುದ್ದ ಗುಂಡಿಗಳಿದ್ದು ಅಪಘಾತಗಳು ಸಾಮಾನ್ಯವಾಗಿವೆ.

‘ಚಿನಕುರಳಿ ಪಟ್ಟಣದಲ್ಲಿ ಗಣಿ ಲಾರಿ ಓಡಾಟ ತೀವ್ರವಾಗಿರುವ ಕಾರಣ ಹೆದ್ದಾರಿ ಹಾಳಾಗುತ್ತಿದೆ. ಗಣಿ ಲಾರಿಗಳು ಇಲ್ಲಿ ಓಡಾಡದಂತೆ ನಿರ್ಭಂಧ ಹೇರಬೇಕು. ಜೊತೆಗೆ ಕಳಪೆ ರಸ್ತೆ ಕಾಮಗಾರಿ ಮಾಡುತ್ತಿರುವ ಕಾರಣ ರಸ್ತೆ ತೀವ್ರ ಹಾಳಾಗುತ್ತಿದೆ’ ಎಂದ ಚಿನಕುರಳಿಯ ರಮೇಶ್‌ ಹೇಳಿದರು.

ಪಾಂಡವಪುರ ರೈಲು ನಿಲ್ದಾಣದಿಂದ ಎಲೆಕೆರೆ ಹ್ಯಾಂಡ್‌ಪೋಸ್ಟ್‌ ವರೆಗೆ ಗಾಡಿ ಓಡಿಸುವುದು ದುಸ್ತರದ ಸಂಗತಿಯಾಗಿದೆ. ಪಿಎಸ್‌ಎಸ್‌ಕೆ ಕಡೆಯಿಂದ ಎಡಕ್ಕೆ ತಿರುಗಿ ಮುಂದೆ ಸಾಗಿದರೆ ಅಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ ರಸ್ತೆಯಿಡೀ ಹಾಳಾಗಿದೆ. ಇನ್ನೂ ಸ್ಪಲ್ವ ಮುಂದೆ ಸಾಗಿದರೆ ಇನ್ನೊಂದು ಪೆಟ್ರೋಲ್‌ ಬಂಕ್‌ ಇದೆ. ಅಲ್ಲಿರುವ ದೊಡ್ಡ ಹಂಪ್‌ ಬಳಿ ದೊಡ್ಡ ಗುಂಡಿ ಬಿದ್ದಿದ್ದು ಕಾರು, ಬಕ್‌ಗಳಿಗೆ ಹಾನಿಯಾಗುತ್ತಿದೆ.

ಶ್ರೀರಂಗಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಕಿರಂಗೂರು, ದರಸಗುಪ್ಪೆ ಬಳಿ ರಸ್ತೆ ಹಾಳಾಗಿದ್ದು ವಾರದಲ್ಲಿ 2–3 ಅಪಘಾತಗಳು ನಡೆಯುತ್ತಿವೆ. ಕಿರಂಗೂರು ಬನ್ನಿಮಂಟಪ ಸರ್ಕಲ್‌ನಿಂದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆವರೆಗೆ ರಸ್ತೆ ಕಿರಿದಾಗಿದೆ. ಜೊತೆಗೆ ಗುಂಡಿಗಳೂ ಇರುವ ಕಾರಣ ವಾಹನ ಅಪಘಾತಗಳು ಹೆಚ್ಚಾಗಿವೆ. ಹೀಗಾಗಿ ವಾಹನ ಸವಾರರು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಮೈಸೂರಿನಿಂದ ಕೆ.ಆರ್‌.ಪೇಟೆಗೆ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್‌.ಪೇಟೆಗೆ ಬರುತ್ತಾರೆ. ರಸ್ತೆ ದುಸ್ಥಿತಿಯಿಂದ ಪ್ರಯಾಣ ಮಾಡುವುದು ಕಡುಕಷ್ಟವಾಗಿದೆ. ಆದಷ್ಟು ಬೇಗ ಈ ರಸ್ತೆ ದುರಸ್ತಿ ಮಾಡಿಸಬೇಕು’ ಎಂದು ಉಪನ್ಯಾಸಕ ಕೆ.ಎಸ್‌.ಧನಂಜಯ ಒತ್ತಾಯಿಸಿದರು.

ಈ ರಾಜ್ಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಎಂ.ಬಿ.ರಾಜು ಅವರನ್ನು ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

*******

ಫೇಸ್‌ಬುಕ್‌ನಲ್ಲಿ ಆಕ್ರೋಶ

ಶ್ರೀರಂಗಪಟ್ಟಣದಿಂದ– ಚನ್ನರಾಯಪಟ್ಟಣದವರೆಗೆ ರಸ್ತೆ ಹಾಳಾಗಿರುವ ಬಗ್ಗೆ ಸಾರ್ವಜನಿಕರು ಸಾಮಾಜಿಕ ಫೇಸ್‌ಬುಕ್‌ ಪುಟಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆ ಭಾಗದಲ್ಲಿ ಓಡಾಡುವ ವಿದ್ಯಾರ್ಥಿಗಳು, ನೌಕರರು ಸಂದೇಶ ಪ್ರಕಟಿಸಿದ್ದಾರೆ. ಅವು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಆ ಭಾಗದ ಶಾಸಕರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಕೆ.ಆರ್‌.ಪೇಟೆ ವ್ಯಾಪ್ತಿಯ ರಸ್ತೆ ಡಾಂಬರ್‌ ಕಂಡು 14 ವರ್ಷಗಳಾಗಿವೆ. ನಾರಾಯಣಗೌಡರು ಸಚಿವರಾದ ನಂತರವೂ ತಾಲ್ಲೂಕಿನ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಕೇವಲ ನೆಪ ಹೇಳಿಕೊಂಡೇ ಓಡಾಡುತ್ತಿದ್ದಾರೆ’ ಎಂಬ ಸಂದೇಶ ‘ಕೆ.ಆರ್‌.ಪೇಟೆ ಪಡೆ’ ಪೇಸ್‌ಬುಕ್‌ ಪುಟದಲ್ಲಿ ಹರಿದಾಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.