ಶನಿವಾರ, ಫೆಬ್ರವರಿ 27, 2021
30 °C
ಪ್ರಗತಿ ಪರಿಶೀಲನಾ ಸಭೆ; ₹ 29 ಕೋಟಿ ಬಾಕಿ ವಸೂಲಾತಿಗೆ ಸುಮಲತಾ ಸೂಚನೆ

ರಾಜಧನ ಮನ್ನಾ ಮಾಡುವ ಪ್ರಶ್ನೆಯೇ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಪಾಂಡವಪುರ ತಾಲ್ಲೂಕು ಚಿನಕುರಳಿ, ಹೊನಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ₹ 29 ಕೋಟಿ ಕಲ್ಲುಗಣಿ ರಾಜಧನ ಮನ್ನಾ ಮಾಡುವ ಪ್ರಶ್ನೆಯೇ ಇಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಶೀಘ್ರ ಈ ಹಣ ವಸೂಲಿ ಮಾಡಬೇಕು’ ಎಂದು ಸಂಸದೆ ಸುಮಲತಾ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (ದಿಶಾ) ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಬೇಬಿಬೆಟ್ಟ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ಹಲವು ಗೊಂದಲಗಳಿವೆ. ಕಲ್ಲು ಗಣಿ ಮಾಲೀಕರು ಪಾವತಿ ಮಾಡಬೇಕಾಗಿರುವ ರಾಜಧನ ಮನ್ನಾ ಮಾಡುವ ಕುರಿತು ಸರ್ಕಾರಕ್ಕೆ ಪತ್ರ ನೀಡಿರುವುದು ಅನುಮಾನಾಸ್ಪದವಾಗಿದೆ. ಕಲ್ಲು ಗಣಿಗಾರಿಕೆಯಲ್ಲಿ ಹಣ ತೊಡಗಿಸಿರುವ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ನೇರವಾಗಿ ಶಾಮೀಲಾಗಿರುವುದು ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ರಾಜಧನ ವಸೂಲಾತಿಯನ್ನು ಕೈಬಿಡಬಾರದು’ ಎಂದು ಹೇಳಿದರು.

‘ಗಣಿಗಾರಿಕೆ ವಿಷಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ನಿರ್ಣಯ ಕೈಗೊಳ್ಳಬೇಕು, ಅವರೇ ರಾಜಧನ ವಸೂಲಿ ಮಾಡಬೇಕು. ಆದರೆ ಇಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ರಾಜಧನ ವಸೂಲಾತಿ ಅಧಿಕಾರ ನೀಡಲಾಗಿದೆ. ನಿಯಮಗಳನ್ನು ಗಾಳಿಗೆ ತೂರಿ ಗ್ರಾ.ಪಂ ಅಧಿಕಾರಿಗಳು ಗಣಿ ಮಾಲೀಕರ ಪರವಾಗಿ ಕೆಲಸ ಮಾಡಿದ್ದಾರೆ. ಆ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದ್ದಾರೆ’ ಎಂದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಪುಷ್ಪಲತಾ ಉತ್ತರ ನೀಡಿ, ಗ್ರಾ.ಪಂ ಅಧಿಕಾರಿಗಳು 1 ಟನ್‌ ಕಲ್ಲು ಗಣಿಗಾರಿಕೆಗೆ ಕೇವಲ ₹ 30 ರಾಜಧನ ನಿಗದಿ ಮಾಡಿದ್ದಾರೆ. ಅತ್ಯಂತ ಕಡಿಮೆ ಹಣ ವಸೂಲಿ ಮಾಡಿದ್ದಾರೆ. ಇದನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಪತ್ತೆ ಮಾಡಿ 2008ರಿಂದ ಇಲ್ಲಿಯವರೆಗೂ ಬಾಕಿ ಉಳಿದಿರುವ ರಾಜಧನ ಪಾವತಿ ಮಾಡಲು ನೋಟಿಸ್‌ ನೀಡಲಾಗಿದೆ’ ಎಂದರು.

‘ಬೇಬಿಬೆಟ್ಟ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ. ಆದರೂ ರಾತ್ರಿಯ ವೇಳೆ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ದೂರುಗಳಿವೆ. ಅಂತಹ ಗಣಿ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಗಣಿ ಪರಿಕರಗಳನ್ನು ಜಪ್ತಿ ಮಾಡಲಾಗಿದೆ, ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ತಿಂಗಳು ಡ್ರೋಣ್‌ ಕ್ಯಾಮೆರಾ ಮೂಲಕ ಅಕ್ರಮ ಪರಿಶೀಲನೆ ಮಾಡಲಾಗುವುದು. ಪೊಲೀಸರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿದರೆ ಗಣಿಗಾರಿಕೆ ನಿಷೇಧ ಆದೇಶ ಪಾಲನೆ ಮಾಡಬಹುದು’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದಿಶಾ ಸಮಿತಿ ಸದಸ್ಯ ಅಂಕರಾಜು, ಪುಷ್ಪಲತಾ ಅವರು ನಿರ್ಲಕ್ಷ್ಯದಿಂದ ಹೇಳಿಕೆ ನೀಡುತ್ತಿದ್ದಾರೆ. ಗಣಿಗಾರಿಕೆ ನಿಷೇಧಿಸಲು ಪೊಲೀಸರ ಸಹಕಾರ ಪಡೆಯಲು ವಿಫಲರಾಗಿದ್ದಾರೆ. ಇಂತಹ ಅಧಿಕಾರಿಗಳಿಂದ ಗಣಿಗಾರಿಕೆ ನಿಷೇಧ ಸಾಧ್ಯವಿಲ್ಲ. ರಾಜಧನ ಮನ್ನಾ ಮಾಡುವಂತೆ ಉಪ ವಿಭಾಗಾಧಿಕಾರಿ ಹಾಗೂ ಜಿ.ಪಂ ಸಿಇಒ ಸರ್ಕಾರಕ್ಕೆ ಪತ್ರ ನೀಡಿದ್ದಾರೆ. ಇದರ ರದ್ದತಿ ಕೋರಿ ಸಂಸದರು ಪತ್ರ ಬರೆಯಬೇಕು. ರಾಜಧನ ಮನ್ನಾ ಮಾಡದಂತೆ ನಿರ್ಣಯ ಕೈಗೊಳ್ಳಬೇಕು ಎಂದು ಕೋರಿದರು.

ಗಾರ್ಮೆಂಟ್ಸ್‌ಗಳಲ್ಲಿ ಶಾಲೆ ಇರಲಿ: ‘ಜಿಲ್ಲೆಯ ವಿವಿಧೆಡೆ  ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಸಾವಿರಾರು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮೂಲ ಸೌಲಭ್ಯ ಒದಗಿಸುತ್ತಿರುವ ಬಗ್ಗೆ ಕಾರ್ಮಿಕ ಇಲಾಖೆ ಪರಿಶೀಲನೆ ನಡೆಸಬೇಕು. ಕಾರ್ಮಿಕರ ಮಕ್ಕಳಿಗೆ ಕಾರ್ಖಾನೆ ಆವರಣದಲ್ಲಿಯೇ ಶಿಕ್ಷಣ ಒದಗಿಸಬೇಕು. ಈ ಬಗ್ಗೆ ಪರಿಶೀಲನೆ ಮಾಡಿ ವರದಿ ನೀಡಬೇಕು’ ಎಂದು ಸುಮಲತಾ ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್‌.ಚಂದ್ರಶೇಖರ್‌ ಮಾಹಿತಿ ನೀಡಿ, ಕೃಷಿ ಸಂಜೀವಿನಿ ಯೋಜನೆಯಡಿ ಜಿಲ್ಲೆಗೆ 2 ವಾಹನಗಳು ಬಂದಿವೆ. ಕೃಷಿ ಸಂಬಂಧಿತ ಯಂತ್ರೋಪಕರಣಗಳನ್ನು ವಾಹನದಲ್ಲಿ ಅಳವಡಿಸಿ ಜಿಲ್ಲೆಯಾದ್ಯಂತ ಪ್ರದರ್ಶನ ಮಾಡಲಾಗುವುದು ಎಂದರು.

ಜಿ.ಪಂ ಸಿಇಒ ಜುಲ್ಫಿಕರ್‌ ಉಲ್ಲಾ, ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹಾಜರಿದ್ದರು.

ಅಧಿಕಾರಿಗಳ ನಡೆಯಿಂದ ಆಘಾತ

ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸುಮಲತಾ ‘ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಅಧಿಕಾರಿಗಳು ಬದ್ಧತೆ ತೋರುತ್ತಿಲ್ಲ. ಅವರ ನಡೆಯಿಂದ ನನಗೆ ಆಘಾತವಾಗಿದೆ. ರೆಕಾರ್ಡಿಂಗ್‌ ಯಂತ್ರದಂತೆ ಮಾಹಿತಿ ನೀಡುತ್ತಿದ್ದಾರೆ, ಆದರೆ ಕೆಲಸ ಮಾಡಿ ತೋರಿಸುತ್ತಿಲ್ಲ’ ಎಂದರು.

‘ಅಧಿಕಾರಿಗಳು ಸವಾಲುಗಳನ್ನು ಎದುರಿಸಿ ಒಳ್ಳೆಯ ಕೆಲಸ ಮಾಡಬೇಕು. ಕೇವಲ ಏಕಮುಖವಾಗಿ ಮಾತನಾಡುತ್ತಾರೆ. ಆದರ್ಶ ಗ್ರಾಮ ಯೋಜನೆ ಸಾಕಾರಗೊಳಿಸಿ ಗ್ರಾಮಕ್ಕೆ ಸೌಲಭ್ಯ ನೀಡಲು ಸಾಧ್ಯವಾಗುತ್ತಿಲ್ಲ. ಕೆಲಸಗಳು ನಿಂತಲ್ಲೇ ನಿಂತಿವೆ, ಪ್ರಗತಿ ಕಾಣುತ್ತಿಲ್ಲ. ಮುಂದೆ ಇದನ್ನು ಸಹಿಸುವುದಿಲ್ಲ’ ಎಂದರು.

ಮಾಲೀಕರ ಮಾಹಿತಿ ಕೊಡಿ

‘ಬೇಬಿಬೆಟ್ಟ ಹಾಗೂ ಜಿಲ್ಲೆಯ ವಿವಿಧೆಡೆ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಪ್ರಭಾವಿಗಳ ಮಾಹಿತಿ ಸಂಗ್ರಹ ಮಾಡಿ ಮುಂದಿನ ಸಭೆಯಲ್ಲಿ ವಿವರ ನೀಡಬೇಕು. ಅವರು ಯಾರೇ ಆಗಿರಲಿ ಅಕ್ರಮ ಗಣಿ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು