ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದ ಗೂಡಾದ ‘ಸೇವಾಸಿಂಧು’ ಅರ್ಜಿ ಸಲ್ಲಿಕೆ

ಸಾಮಾನ್ಯ ಸೇವಾಕೇಂದ್ರ ಬಂದ್‌, ಪರಿಹಾರದಿಂದ ವಂಚಿತರಾಗುತ್ತಿರುವ ಕಲಾವಿದರು, ಕಾರ್ಮಿಕರು
Last Updated 4 ಜೂನ್ 2021, 3:01 IST
ಅಕ್ಷರ ಗಾತ್ರ

ಮಂಡ್ಯ: ಲಾಕ್‌ಡೌನ್‌ ಸಂಕಷ್ಟದಲ್ಲಿರುವ ಕಲಾವಿದರಿಗೆ, ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು ‘ಸೇವಾಸಿಂಧು’ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇಂಟರ್‌ನೆಟ್‌ ಕೇಂದ್ರಗಳು, ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿ) ಬಂದ್‌ ಆಗಿದ್ದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕುರಿತು ಫಲಾನುಭವಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ.

ಪರಿಹಾರ ಪಡೆಯಲು ಕಾರ್ಮಿಕರು, ಕಲಾವಿದರು ಮೊಬೈಲ್‌ ಮೂಲಕವೂ ಅರ್ಜಿ ಸಲ್ಲಿಸಬಹುದು. ಆದರೆ ಸೇವಾಸಿಂಧು ಪೋರ್ಟಲ್‌ ತೆರೆದು, ಅಗತ್ಯ ದಾಖಲಾತಿ ಲಗತ್ತಿಸಿ ಅರ್ಜಿ ಸಲ್ಲಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಇಂಟರ್‌ನೆಟ್‌ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಗಳ ಮೇಲೆ ಅವಲಂಬಿತರಾಗಿದ್ದಾರೆ. ಕಲಾವಿದರ ಅರ್ಜಿ ಸಲ್ಲಿಸುವ ಅವಧಿ ಜೂನ್5ರವರೆಗೆ ಅವಕಾಶ ನೀಡಲಾಗಿದೆ. ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದ್ದು ಸೇವಾ ಕೇಂದ್ರಗಳ ಸಹಾಯವಿಲ್ಲದೇ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.

ಚಮ್ಮಾರರು, ಚರ್ಮ ಸಂಬಂಧಿತ ಕುಶಲಕರ್ಮಿಗಳು ಅರ್ಜಿ ಅಲ್ಲಿಸಲು ಮೇ 15ರವರೆಗೂ ಅವಕಾಶ ನೀಡಲಾಗಿದೆ. ಆದರೆ ಈಗ ಒಂದು ವಾರ ಲಾಕ್‌ಡೌನ್‌ ವಿಸ್ತರಣೆಯಾಗಿದ್ದು ಅವರಿಗೂ ಅರ್ಜಿ ಸಲ್ಲಿಸಲು ಸಮಸ್ಯೆಯಾಗಲಿದೆ. ಸೇವಾ ಕೇಂದ್ರಗಳು ಬಂದ್‌ ಆಗಿರುವ ಕಾರಣ ಕಲಾವಿದರು, ಕಾರ್ಮಿಕರು ಪರಿಚಯವಿರುವ ಸೇವಾಕೇಂದ್ರಗಳ ಮಾಲೀಕರ ಮನೆ ಬಾಗಿಲು ಬಡಿಯುತ್ತಿದ್ದಾರೆ. ಮಾಲೀಕರು ಗೊತ್ತಿಲ್ಲದವರು ಅರ್ಜಿ ಸಲ್ಲಿಸುವುದರಿಂದಲೇ ಹಿಂದೆ ಸರಿಯುತ್ತಿದ್ದಾರೆ.

‘ಸೇವಾ ಸಿಂಧು’ ಪ್ರಕ್ರಿಯೆ ಗೊಂದಲದ ಗೂಡಾಗಿದ್ದು ಅರ್ಹರು ಪರಿಹಾರ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ಒಂದು ಕೈಯಲ್ಲಿ ಪರಿಹಾರ ನೀಡಿ ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಕಲಾವಿದರು ಆರೋಪಿಸುತ್ತಾರೆ.

‘ನನಗೆ ಆ್ಯಂಡ್ರಾಯ್ಡ್‌ ಮೊಬೈಲ್‌ ಫೋನ್‌ ಬಳಕೆ ಮಾಡಲು ಬರುವುದಿಲ್ಲ, ಕೀ ಫೋನ್‌ ಬಳಸುತ್ತೇನೆ. ನಾನು 30 ವರ್ಷದಿಂದ ರಂಗಭೂಮಿಯಲ್ಲಿ ಇದ್ದರೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಹೊರಗೆ ಲಾಕ್‌ಡೌನ್‌ ಇರುವ ಕಾರಣ ಯಾರೂ ಅರ್ಜಿ ಸಲ್ಲಿಸಿಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ರಂಗಭೂಮಿಯ ಹಿರಿಯ ನಟಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಕಾರ್ಮಿಕರು ವಂಚಿತ: ಕಾರ್ಮಿಕ ಇಲಾಖೆಯಲ್ಲಿ ಗುರುತಿನ ಚೀಟಿ ಪಡೆಯಲು ಜಿಲ್ಲೆಯಲ್ಲಿ ನೂರಾರು ಜನರು ಅರ್ಜಿ ಸಲ್ಲಿಕೆ ಮಾಡಿ ವರ್ಷ ಕಳೆದಿದೆ. ಇಲ್ಲಿಯವರೆಗೂ ಗುರುತಿನ ಚೀಟಿ ಬಾರದ ಕಾರಣ ಅವರೆಲ್ಲರೂ ಕೋವಿಡ್‌ ಸಂಕಷ್ಟ ಸಮಯದಲ್ಲಿ ಪರಿಹಾರದಿಂದ ವಂಚಿತರಾಗಿದ್ದಾರೆ. ಗುರುತಿನ ಚೀಟಿ ಇರುವವರು ಮಾತ್ರ ಅರ್ಜಿ ಸಲ್ಲಿಸಬೇಕು ಎಂಬ ನಿಯಮ ಇರುವ ಕಾರಣ ಸಂಕಷ್ಟದಲ್ಲಿರುವ ನಿಜವಾದ ಕಾರ್ಮಿಕರು ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ.

‘ಸೇವಾಸಿಂಧು ಪೋರ್ಟಲ್‌ನಲ್ಲಿ ಹಲವು ದೋಷಗಳಿವೆ. ಅಸಂಘಟಿತ ವಲಯದ ಚಮ್ಮಾರರು, ಆಟೊ, ಟ್ಯಾಕ್ಸಿ, ಚಾಲಕರು, ಕಲಾವಿದ ಕಾಲಂ ತೆರೆದುಕೊಳ್ಳುತ್ತಿದೆ. ಬೇರೆ ಯಾವುದೇ ಕಾರ್ಮಿಕರು ಅರ್ಜಿ ಸಲ್ಲಿಕೆಗೆ ಮುಂದಾದರೂ ಪೋರ್ಟಲ್‌ ತೆರೆದುಕೊಳ್ಳುತ್ತಿಲ್ಲ. ಸಮಯ ಮುಗಿಯುತ್ತಿದ್ದು ಸರ್ಕಾರ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಬೇಕು’ ಎಂದು ಟೇಲರ್‌ ವೃತ್ತಿ ಮಾಡುವ ಕಾರ್ಮಿಕರೊಬ್ಬರು ಒತ್ತಾಯಿಸಿದರು.

‘ಗ್ರಾಮ ಪಂಚಾಯಿತಿ ಕಚೇರಿಗಳಲ್ಲೂ ಸೇವಾ ಕೇಂದ್ರ ತೆರೆಯಲಾಗಿದೆ. ಕಲಾವಿದರು ಖಾಸಗಿ ಸೇವಾ ಕೇಂದ್ರಗಳ ಮೇಲೆ ಅವಲಂಬಿತರಾಗಬಾರದು. ಗ್ರಾ.ಪಂ ಕಚೇರಿಗಳಲ್ಲಿರುವ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಬಹುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಉದಯ್‌ಕುಮಾರ್‌ ತಿಳಿಸಿದರು.

ಮೈಸೂರು; ಒಂದು ದಿನ ಅವಕಾಶ
ಸೇವಾಸಿಂಧು ಮೂಲಕ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಮೈಸೂರು ಜಿಲ್ಲಾಧಿಕಾರಿ ಗುರುವಾರ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆವರೆಗೆ ಲಾಕ್‌ಡೌನ್‌ ನಡುವೆಯೂ ಸೇವಾ ಕೇಂದ್ರ ತೆರೆಯಲು ಅವಕಾಶ ನೀಡಿದ್ದರು. ಇದರಿಂದ ಮೈಸೂರು ಜಿಲ್ಲೆಯಾದ್ಯಂತ ಸಾವಿರಾರು ಕಲಾವಿದರು, ಕಾರ್ಮಿಕರು ಅರ್ಜಿ ಸಲ್ಲಿಸಲು ಸಾಧ್ಯವಾಗಿದೆ. ಅದೇ ರೀತಿ ಇತರ ಜಿಲ್ಲೆಯಲ್ಲಿಯೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕು ಎಂದು ಖಾಸಗಿ ಸೇವಾ ಕೇಂದ್ರಗಳ ಮಾಲೀಕರ ಸಂಘ ಒತ್ತಾಯಿಸಿದೆ.

***

ವಿವಿಧ ಇಲಾಖೆಗಳಿಂದ ಮಾಹಿತಿ ಪಡೆದು ಸೇವಾಸಿಂಧು ಕೇಂದ್ರಗಳಿಗೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು.
–ಎಸ್‌.ಅಶ್ವಥಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT