ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೀಬಿಬೆಟ್ಟ– ಕೆಆರ್‌ಎಸ್ ನಡುವೆ ಏಕ ಶಿಲಾರೇಖೆ: ಸ್ಫೋಟವಾದರೆ ಡ್ಯಾಂಗೆ ಅಪಾಯ’

ವಿಚಾರ ಸಂಕಿರಣ; ಕಲ್ಲು ಗಣಿ ಶಾಶ್ವತ ನಿಷೇಧಕ್ಕೆ ಭೂವಿಜ್ಞಾನ ತಜ್ಞ ಮಹಾದೇವಪ್ಪ ಅಭಿಮತ
Last Updated 8 ಆಗಸ್ಟ್ 2022, 12:56 IST
ಅಕ್ಷರ ಗಾತ್ರ

ಮಂಡ್ಯ: ‘ಪಾಂಡವಪುರ ತಾಲ್ಲೂಕು ಬೇಬಿಬೆಟ್ಟ ಹಾಗೂ ಕೆಆರ್‌ಎಸ್‌ ಜಲಾಶಯದ ನಡುವೆ ಏಕಶಿಲಾ ರೇಖೆಯನ್ನು ಗುರುತಿಸಲಾಗಿದೆ. ಈ ಶಿಲಾಪದರ 30 ಕಿ.ಮೀಗೂ ಹೆಚ್ಚು ದೂರ ಸಾಗಿದ್ದು ಈ ಭಾಗದಲ್ಲಿ ಸ್ಫೋಟ ನಡೆದರೆ ಅದರ ತರಂಗಗಳು ಕೆಆರ್‌ಎಸ್‌ ಜಲಾಶಯಕ್ಕೆ ಅಪಾಯ ಸೃಷ್ಟಿಸುತ್ತವೆ’ ಮೈಸೂರು ವಿವಿ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಎಚ್‌.ಪಿ.ಬಸವರಾಜಪ್ಪ ಅಭಿಪ್ರಾಯಪಟ್ಟರು.

ರಾಜ್ಯ ರೈತಸಂಘ ಹಾಗೂ ಇತರ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ನಗರದ ರೈತಸಭಾಂಗಣದಲ್ಲಿ ಸೋಮವಾರ ನಡೆದ ವಿಚಾರ ಸಂಕಿರಣದಲ್ಲಿ ಅವರು ವಿಷಯ ಮಂಡಿಸಿದರು.

‘ಲಕ್ಷಾಂತರ ವರ್ಷಗಳ ಹಿಂದೆಯೇ ಅಗ್ನಿಶಿಲೆ, ಜಲಜಶಿಲೆ, ರೂಪಾಂತರ ಶಿಲೆಗಳು ನಿರ್ಮಾಣವಾಗಿವೆ. ಶಿಲಾಪದರಗಳ ನಡುವೆ ನೂರಾರು ಬಿರುಕುಗಳಿದ್ದು ಅದಕ್ಕೆ ಅಡ್ಡಲಾಗಿ ಜಲಾಶಯಗಳನ್ನು ನಿರ್ಮಾಣ ಮಾಡಲಾಗಿದೆ. ಕರ್ನಾಟಕದಲ್ಲಿ ಪ್ರರಮುಖವಾಗಿ 48 ಬಿರುಕುಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 8 ಮಹಾಬಿರುಕುಗಳಿದ್ದು ಅಂತಹ ಒಂದು ಬಿರುಕಿನಲ್ಲಿ ಕೆಆರ್‌ಎಸ್‌ ಜಲಾಶಯ ನಿರ್ಮಾಣಗೊಂಡಿದೆ’ ಎಂದರು.

‘ಬೇಬಿಬೆಟ್ಟ– ಕೆಆರ್‌ಎಸ್‌ ಸಂಪರ್ಕಿಸುವ ಶಿಲಾರೇಖೆ ಜಲಾಶಯದ ತಟದಲ್ಲಿರುವ ಕಾವೇರಿ ಪ್ರತಿಮೆ ಸಮೀಪದಲ್ಲೇ ಹಾದು ಹೋಗಿದೆ. ಹೀಗಾಗಿ ಗಣಿ ಸ್ಫೋಟ ನಡೆಸಿದರೆ ಜಲಾಶಯಕ್ಕೆ ನೇರವಾಗಿ ಧಕ್ಕೆ ಉಂಟಾಗುತ್ತದೆ. ಇಂತಹ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವುದು ಅಕ್ಷ್ಯಮ್ಯ. ಈ ಪ್ರದೇಶದಲ್ಲಿ ಪರೀಕ್ಷಾರ್ಥ ಸ್ಫೋಟವನ್ನೂ ನಡೆಸಬಾರದು’ ಎಂದರು.

‘ಗಣಿಗಾರಿಕೆ ನಡೆಸಲು ಪರ್ಯಾಯ ಜಾಗ ಗುರುತಿಸುವುದು ಒಳಿತು, ಬೇಬಿಬೆಟ್ಟದಲ್ಲೇ ಗಣಿಗಾರಿಕೆ ನಡೆಸಬೇಕು ಎಂದು ಗಣಿ ಮಾಲೀಕರು ಹಠ ಮಾಡುವುದು ಏಕೆ? ಈಗಂತೂ ಗಣಿಗಾರಿಕೆ ನಿಂತಿದ್ದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಾಶ್ವತವಾಗಿ ಗಣಿಗಾರಿಕೆ ನಿಲ್ಲಬೇಕಾದ ಅವಶ್ಯಕತೆ ಇದೆ. ಕೈಕುಳಿ ಮಾಡುವವರಿಗೆ ಕೂಲಿ ನಿಗದಿ ಮಾಡಿ ಪರ್ಯಾಯ ವ್ಯವಸ್ಥೆ ಮಾಡಬಹುದು’ ಎಂದರು.

‘ಗಣಿಗಾರಿಕೆಯಿಂದ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಅರಣ್ಯ ಪ್ರದೇಶದಲ್ಲಿ ಜೀವಿಸುವ ಪ್ರಾಣಿ, ಪಕ್ಷಿಗಳಿಗೂ ತೊಂದರೆ ಉಂಟಾಗುತ್ತದೆ. ಶಬ್ದ ಮಾಲಿನ್ಯವೂ ಉಂಟಾಗುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಂದಾಗಿ ಯೂರೋಪ್‌ನ ಹಲವು ರಾಷ್ಟ್ರಗಳಲ್ಲಿ ಉಷ್ಣಾಂಶ ಏರಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ನಮ್ಮ ದೇಶದಲ್ಲೂ ಮಾರಕ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದರು.

‘ಉಷ್ಣಾಂಶ ಅಧಿಕಗೊಂಡರೆ ಸಸ್ಯಗಳೇ ಬೆಳೆಯದ ಪರಿಸ್ಥಿತಿ ನಿರ್ಮಾಣವಾಗಬಹುದು. ಸಸ್ಯಸಂಕುಲ ಇಲ್ಲವಾದರೆ ಅದರ ಪ್ರಭಾವ ಭೀಕರವಾಗಿರುತ್ತದೆ. ಹೀಗಾಗಿ ಕೆಆರ್‌ಎಸ್‌ ಜಲಾಶಯದ ಉಳಿವಿಗಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಂಘಟನೆಗಳು ಕೂಡ ಹೋರಾಟದ ಮೂಲಕ ಜಲಾಶಯ ಉಳಿಸಿಕೊಳ್ಳಬೇಕು’ ಎಂದರು.

ರೈತಸಂಘ ರಾಜ್ಯಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ವಿವಿಧ ಸಂಘಟನೆ ಮುಖಂಡರಾದ ಹುಲ್ಕೆರೆ ಮಹಾದೇವು, ಪ್ರಸನ್ನಗೌಡ, ಚಿಕ್ಕಾಡೆ ಹರೀಶ್‌, ಕೆ.ಆರ್‌.ರವೀಂದ್ರ, ಪೂರ್ಣಿಮಾ ಇದ್ದರು.

*****

ಮುಖ್ಯಮಂತ್ರಿಗೆ ವರದಿ ಸಲ್ಲಿಕೆ

‘ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಉಂಟಾಗುತ್ತಿರುವ ಪರಿಣಾಮಗಳ ಅಧ್ಯಯನ ವರದಿ ಸಿದ್ಧವಿದೆ. ಸರ್ಕಾರ ನನನ್ನು ವರದಿ ಕೇಳಿಲ್ಲ, ನಾನೇ ಸಲ್ಲಿಸಿದರೆ ಅದನ್ನು ಕಸದ ಬುಟ್ಟಿಗೆ ಬಿಸಾಡುತ್ತದೆ’ ಎಂದು ಬಸವರಾಜಪ್ಪ ಬೇಸರ ವ್ಯಕ್ತಪಡಿಸಿದರು.

ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಮಾತನಾಡಿ ‘ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಸವರಾಜಪ್ಪ ಅವರ ವರದಿ ಸಲ್ಲಿಸಲಾಗುವುದು’ ಎಂದರು.

******

ಗಣಿಧಣಿಗಳ ಎಂಜಲು ತಿನ್ನುವವರು...

ಸಾಹಿತಿ ಜಿ.ಟಿ.ವೀರಪ್ಪ ‘ಜಿಲ್ಲೆಯ ರಾಜಕಾರಣಿಗಳು, ಅಧಿಕಾರಿಗಳು ಗಣಿಧಣಿಗಳ ಎಂಜಲು ತಿನ್ನುತ್ತಿದ್ದಾರೆ. ಹೀಗಾಗಿ ಅವರು ಗಣಿಗಾರಿಕೆಯ ಪರವಾಗಿ ನಿಂತಿದ್ದಾರೆ’ ಎಂದರು.

ದಸಂಸ ಮುಖಂಡ ಗುರುಪ್ರಸಾದ್‌ ಕೆರಗೋಡು ‘15–20 ಮಂದಿ ಗಣಿ ಮಾಲೀಕರಿಗಾಗಿ ಕೋಟ್ಯಂತರ ಜನರ ಜೀವನಾಡಿಯಾಗಿರುವ ಕೆಆರ್‌ಎಸ್‌ ಜಲಾಶಯವನ್ನು ಬಲಿ ಕೊಡಲಾಗುತ್ತಿದೆ. ಚುನಾವಣೆಗೆ ಹಣ ಸಂಗ್ರಹಿಸುವುದಕ್ಕಾಗಿ ಭಂಡ ರಾಜಕಾರಣಿಗಳು ಗಣಿಗಾರಿಕೆ ಪರವಾಗಿದ್ದಾರೆ’ ಎಂದರು.

ರೈತಸಂಘ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಎಸ್‌.ಸಿ.ಮಧುಚಂದನ್‌ ‘ಸ್ವಾರ್ಥ ರಾಜಕಾರಣದಿಂದ ಜಿಲ್ಲೆಯು ಅವನತಿಯ ಹಾದಿ ಹಿಡಿದಿದೆ. ಶಾಸಕರೇ ನೇರವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ, ಜನರು ಗಣಿ ಮಾಲೀಕರನ್ನೇ ವೋಟು ಹಾಕಿ ಗೆಲ್ಲಿಸುತ್ತಿದ್ದಾರೆ’ ಎಂದರು.

*********

ಸುಮಲತಾ ಹೋರಾಟ ಏನಾಯ್ತು?

ರೈತ ನಾಯಕಿ ಅಕ್ಕಮಹಾದೇವಿ ಮಾತನಾಡಿ ‘ಸಂಸದೆ ಸುಮಲತಾ ಅವರು ಆರಂಭದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದರು. ಈ ಬಗ್ಗೆ ಸಂಸತ್‌ನಲ್ಲೂ ಮಾತನಾಡಿದ್ದರು. ಆದರೆ ಈಗ ಅವರ ಹೋರಾಟ ಕಾಣಿಸುತ್ತಿಲ್ಲ. ಸುಮಲತಾ ಅವರನ್ನು ನಮ್ಮ ಮನೆಯ ಮಗಳು ಎಂದು ಕಂಡಿದ್ದೇವೆ, ಅವರನ್ನು ಗೆಲ್ಲಿಸಿದ್ದೇವೆ. ಅವರ ರೈತರ ಜೊತೆಯಲ್ಲಿ ನಿಂತು ಗಣಿಗಾರಿಗೆ ವಿರುದ್ಧ ಹೋರಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT