ಶನಿವಾರ, ಅಕ್ಟೋಬರ್ 31, 2020
26 °C
ಹಿರಿಯ ನಾಗರಿಕರ ದಿನಾಚರಣೆ; ಮಹಿಳೆ– ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್‌.ರಾಜಮೂರ್ತಿ ಅಭಿಮತ

ಹಿರಿಯ ಜೀವಗಳ ಪೋಷಣೆ ಸಮಾಜದ ಹೊಣೆ: ಎಸ್‌.ರಾಜ್‌ಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಹಿರಿಯ ನಾಗರಿಕರು ಸಮಾಜದ ಆಸ್ತಿ. ಮಕ್ಕಳೂ ಸೇರಿದಂತೆ ಇಡೀ ಸಮಾಜ, ಸರ್ಕಾರ ಅವರನ್ನು ನೋಡಿಕೊಳ್ಳಬೇಕು. ಹಿರಿಯರ ಪೋಷಣೆ ಸಮಾಜದ ಹೊಣೆಯಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್‌.ರಾಜ್‌ಮೂರ್ತಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಗರದ ಹರ್ಡೀಕರ್‌ ಭವನದಲ್ಲಿ ಗುರುವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಲ್ಲಿ ಅವರು ಮಾತನಾಡಿದರು.

‘ನಾವಿಂದು ಅತ್ಯಂತ ಸಂದಿಗ್ಧತೆಯ ಕಾಲಘಟ್ಟದಲ್ಲಿ ಇದ್ದೇವೆ. ಒತ್ತಡ, ಧಾವಂತದ ಬದುಕಿನಲ್ಲಿ ಹಿರಿಯ ಜೀವಗಳನ್ನು ನೋಡಿಕೊಳ್ಳುವುದಕ್ಕೂ ಸಮಯ ದೊರೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ನಮ್ಮನ್ನು ಪೋಷಣೆ ಮಾಡಿದ, ಸಾಕಿ, ಸಲುಹಿ, ವಿದ್ಯಾಭ್ಯಾಸ ನೀಡಿದ, ನಮ್ಮ ಜೀವನ ಕಟ್ಟಿಕೊಟ್ಟ ಹಿರಿಯ ನಾಗರಿಕರನ್ನು ಪೋಷಣೆ ಮಾಡಲು ಹಿಂದೇಟು ಹಾಕುವ ಸ್ಥಿತಿ ಇದೆ. ಈ ಕಾರಣದಿಂದಾಗಿಯೇ ಸಮಾಜದಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ’ ಎಂದು ಹೇಳಿದರು.

‘ದೇವಾಲಯಗಳಿಗೆ ತೆರಳುವುದರಿಂದ, ತೀರ್ಥಯಾತ್ರೆ ಮಾಡುವುದರಿಂದ ಮನುಷ್ಯನ ಜೀವನ ಸಾರ್ಥಕಗೊಳ್ಳುವುದಿಲ್ಲ. ಬದಲಾಗಿ ನಮ್ಮ ಮನೆಯಲ್ಲೇ ಇರುವ, ನಮ್ಮ ಕಣ್ಣಮುಂದೆಯೇ ಇರುವ ಹಿರಿಯ ನಾಗರಿಕರನ್ನು ಪ್ರೀತಿಯಿಂದ ನೋಡಿಕೊಂಡರೆ ಜೀವನ ಸಾರ್ಥಕಗೊಳ್ಳುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಹಿರಿಯರನ್ನು ಗೌರಿವಿಸುವ ಗುಣ ಬೆಳೆಸಬೇಕು. ಹಿರಿಯರ ಬಗ್ಗೆ ನಿರ್ಲಕ್ಷ್ಯ ತೋರದೆ ಪ್ರೀತಿ, ವಾತ್ಸಲ್ಯ ತೋರಿಸಬೇಕು’ ಎಂದರು.

‘ನಾಗರಿಕತೆ ಬೆಳೆದಂತೆ ನಮ್ಮನ್ನು ಸಾಕಿದ, ಸಮಾಜದಲ್ಲಿ ಮೇಲಕ್ಕೆ ಬರಲು ಶ್ರಮಿಸಿದ ಹಿರಿಯರನ್ನು ಬೀದಿಗೆ ತಂದು ನಿಲ್ಲಿಸುವ ಕೆಲಸ ಮಾಡುತ್ತಿದ್ದೇವೆ. ದೊಡ್ಡವರು, ವಿದ್ಯಾವಂತರು ಕೂಡ ತಂದೆ–ತಾಯಂದಿರನ್ನು ನಿರ್ಲಕ್ಷ್ಯ ಮಾಡುವುದನ್ನು ನಾವು ನೋಡಿದ್ದೇವೆ. ವೃದ್ಧಾಶ್ರಮಗಳಲ್ಲಿ ಹಿರಿಯ ನಾಗರಿಕರು ತುಂಬಿರುವುದೇ ಇದಕ್ಕೆ ಸಾಕ್ಷಿಯಾಗಿದೆ’ ಎಂದರು.

‘ಹಿರಿಯ ನಾಗರಿಕರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಮಕ್ಕಳು ಹಿರಿಯರನ್ನು ನಿರ್ಲಕ್ಷ್ಯ ಮಾಡಿದರೆ ಸರ್ಕಾರವೇ ಅವರನ್ನು ಪೋಷಣೆ ಮಾಡುತ್ತದೆ. ಅದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೆ ಮಕ್ಕಳು ಮಾನವೀಯತೆ ದೃಷ್ಟಿಯಿಂದ ಹಿರಿಯನ್ನು ನೋಡಿಕೊಳ್ಳಬೇಕು’ ಎಂದು ಹೇಳಿದರು.

ಸಿಡಿಪಿಒ ಚೇತನ್‌ ಕುಮಾರ್‌ ಮಾತನಾಡಿ ‘ಮಕ್ಕಳಲ್ಲಿ ಸಂಸ್ಕಾರ ಬೆಳೆಸಿದರೆ ಮುಂದೆ ಅವರು ತಮ್ಮ ತಂದೆತಾಯಂದಿರನ್ನು ಪ್ರೀತಿನಿಂದ ನೋಡಿಕೊಳ್ಳುತ್ತಾರೆ. ಮನೆಯಲ್ಲಿ ಸೊಸೆಯು ಅತ್ತೆಯನ್ನು ತಾಯಿಯಂತೆ ನೋಡಿಕೊಳ್ಳಬೇಕು. ಅತ್ತೆ ಕೂಡ ಸೊಸೆಯನ್ನು ಮಗಳಂತೆ ಕಾಣಬೇಕು. ಹೊಂದಾಣಿಕೆ ಇದ್ದರೆ ವ್ಯತ್ಯಾಸಗಳು ಕಂಡುಬರುವುದಿಲ್ಲ. ಪ್ರತಿಯೊಬ್ಬರೂ ಹಿರಿಯ ನಾಗರಿಕರು ಆಗುತ್ತಾರೆ. ಹೀಗಾಗಿ ವಾಸ್ತವ ಅರಿತು ಹಿರಿಯರಿಗೆ ಪ್ರೀತಿ ಕೊಡಬೇಕು’ ಎಂದು ಹೇಳಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ರೋಹಿತ್, ಸಿಡಿಪಿಒ ಕುಮಾರಸ್ವಾಮಿ, ಯೋಗೇಶ್, ಎಸಿಡಿಪಿಒ ನಂಜಮ್ಮಣ್ಣಿ, ಅಂಬಿಕಾ, ಸೂನಗನಹಳ್ಳಿ ಪುಟ್ಟಸ್ವಾಮಿ, ಜಿ.ಬಿ.ಉಮಾ, ಶಂಕರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು