ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ಎಕ್ಸ್‌ಪ್ರೆಸ್‌ವೇಯಲ್ಲಿ ‘ಸ್ಪೀಡ್‌ ಹಂಟರ್‌’ ಕ್ಯಾಮೆರಾ ಕಣ್ಣು

ಹೆದ್ದಾರಿ ಪ್ರಾಧಿಕಾರದ ಕ್ಯಾಮೆರಾಗಳ ಜೊತೆಗೆ ಸ್ಥಳೀಯ ಪೊಲೀಸರಿಂದಲೂ ವೇಗ ಪತ್ತೆ
Published : 5 ಆಗಸ್ಟ್ 2023, 6:49 IST
Last Updated : 5 ಆಗಸ್ಟ್ 2023, 6:49 IST
ಫಾಲೋ ಮಾಡಿ
Comments

ಮಂಡ್ಯ: ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಳವಡಿಸಿರುವ ವೇಗ ಪತ್ತೆ ಕ್ಯಾಮೆರಾಗಳ ಜೊತೆಗೆ, ಸ್ಥಳೀಯ ಪೊಲೀಸರ ‘ಸ್ವೀಡ್‌ ಹಂಟರ್‌’ ಕ್ಯಾಮೆರಾ ಕೂಡ ಜಾಗೃತವಾಗಿವೆ. ಇದರಿಂದಾಗಿ ವಾಹನ ಚಾಲಕರು ವೇಗಮಿತಿ ಮೀರಿದರೆ ದಂಡ ಬೀಳುವುದು ನಿಶ್ಚಿತವಾಗಿದೆ.

ಜಿಲ್ಲಾ ವ್ಯಾಪ್ತಿಯ ಉಮ್ಮಡಹಳ್ಳಿ ಗೇಟ್‌ ಹಾಗೂ ಗಣಂಗೂರು ಟೋಲ್‌ ಪ್ಲಾಜಾ ಬಳಿ ಹೆದ್ದಾರಿ ಪ್ರಾಧಿಕಾರದ ವತಿಯಿಂದ ವೇಗ ಪತ್ತೆ ಕ್ಯಾಮೆರಾ ಅಳವಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕ್ಯಾಮೆರಾಗಳಿಗೆ ಚಾಲನೆ ನೀಡಿದ್ದರು. ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕ್ಯಾಮೆರಾಗಳು ನಿಯಮ ಉಲ್ಲಂಘನೆ ಮಾಹಿತಿಯನ್ನು ನಿಯಂತ್ರಣ ಘಟಕಕ್ಕೆ ರವಾನಿಸುತ್ತವೆ. ಅದರ ಆಧಾರದ ಮೇಲೆ ವಾಹನ ಚಾಲಕರಿಗೆ ದಂಡ ವಿಧಿಸಲಾಗುತ್ತದೆ.

ಈ ಎರಡು ಕ್ಯಾಮೆರಾ ಮಾತ್ರವಲ್ಲದೇ ಸ್ಥಳೀಯ ಪೊಲೀಸರ ಇಂಟರ್‌ಸೆಪ್ಟರ್‌ ವಾಹನ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದು ‘ಸ್ಪೀಡ್‌ ಹಂಟರ್‌’ ಕ್ಯಾಮೆರಾ ಮೂಲಕ ವೇಗ ಪತ್ತೆ ಮಾಡಲಾಗುತ್ತಿದೆ. ವಾಹನ ಸವಾರರು ಹೆಚ್ಚಾಗಿ ವಾಹನ ಓಡಿಸುವ ಭಾಗದಲ್ಲಿ ಕ್ಯಾಮೆರಾ ಇಟ್ಟು ವಾಹನಗಳ ವೇಗದ ಮೇಲೆ ನಿಗಾ ವಹಿಸಲಾಗುತ್ತಿದೆ.

ಈಚೆಗೆ ಹೆದ್ದಾರಿ ಪ್ರಾಧಿಕಾರದ ವೇಗ ಪತ್ತೆ ಕ್ಯಾಮೆರಾದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಾಗ ಪೊಲೀಸರ ಸ್ಪೀಡ್‌ ಹಂಟರ್‌ ಕ್ಯಾಮೆರಾ ಜಾಗೃತವಾಗಿತ್ತು. 10 ಕಿ.ಮೀಗೆ ಒಂದರಂತೆ ವೇಗಪತ್ತೆ ಕ್ಯಾಮೆರಾ ಹಾಕುವ ಯೋಜನೆ ಹೆದ್ದಾರಿ ಪ್ರಾಧಿಕಾರಕ್ಕಿದ್ದು ಅಲ್ಲಿಯವರೆಗೂ ‘ಸ್ಪೀಡ್‌ ಹಂಟರ್‌’ ರಸ್ತೆಯಲ್ಲಿ ಸಂಚಾರ ಮಾಡಿ ವೇಗ ಪತ್ತೆ ಮಾಡಲಿದೆ.

125 ಪ್ರಕರಣ ದಾಖಲು: ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ಟ್ರ್ಯಾಕ್ಟರ್‌ ನಿಷೇಧಿಸಿದ ನಂತರ ಜಿಲ್ಲಾ ವ್ಯಾಪ್ತಿಯಲ್ಲಿ 125 ಪ್ರಕರಣ ದಾಖಲು ಮಾಡಲಾಗಿದೆ. ನಿಯಮ ಉಲ್ಲಂಘಿಸಿದ 110 ಬೈಕ್‌ ಸವಾರರಿಗೆ ದಂಡ ವಿಧಿಸಲಾಗಿದೆ. 10 ಆಟೊ, 5 ಟ್ರ್ಯಾಕ್ಟರ್‌ ಚಾಲಕರಿಂದ ದಂಡ ವಸೂಲಿ ಮಾಡಲಾಗಿದೆ. ಚಾಲಕರಿಂದ ತಲಾ ₹ 500 ದಂಡ ವಸೂಲಿ ಮಾಡಲಾಗುತ್ತಿದ್ದು ಇಲ್ಲಿಯವರೆಗೆ ₹ 62 ಸಾವಿರ ದಂಡ ವಸೂಲಿ ಮಾಡಲಾಗಿದೆ.

‘ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳ ವೇಗದ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ವೇಗ ಮಿತಿ ಮೀರಿದರೆ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ವಾಹನ ಸವಾರರು ಎಚ್ಚರವಹಿಸಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಎಚ್ಚರಿಕೆ ನೀಡಿದರು.

ಅತಿವೇಗ; ₹ 3.5 ಲಕ್ಷ ದಂಡ
ವಸೂಲಿ ಅತಿವೇಗ ಚಾಲನೆಯಿಂದಲೇ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಸಂಭವಿಸುತ್ತಿವೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಮಿತಿ ಮೀರಿದ ಚಾಲನೆಗೆ ಕಡಿವಾಣ ಹಾಕಲಾಗಿದೆ. ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಗೆ ಅತೀ ಹೆಚ್ಚು ದಂಡ ವಿಧಿಸಲಾಗುತ್ತಿದೆ. ಕಳೆದೊಂದು ತಿಂಗಳಿಂದ ಇಲ್ಲಿಯವರೆಗೆ ₹ 3.5 ಲಕ್ಷ ದಂಡ ವಿಧಿಸಲಾಗಿದೆ. ಹೆದ್ದಾರಿಯ ಎಡ ಬದಿಯ ಲೇನ್‌ನಲ್ಲಿ 60 ಕಿ.ಮೀ ಮಧ್ಯದ ರಸ್ತೆಯಲ್ಲಿ 90 ಕಿ.ಮೀ ಬಲತುದಿಯ ಲೇನ್‌ನಲ್ಲಿ 100 ಕಿ.ಮೀ ವೇಗ ನಿಗದಿ ಮಾಡಲಾಗಿದೆ. ಈ ವೇಗದ ಮಿತಿ ಮೀರಿದರೆ ಚಾಲಕರ ವಿರುದ್ಧ ಪ್ರಕರಣ ದಾಖಲು ಮಾಡಿ ದಂಡ ವಸೂಲಿ ಮಾಡಲಾಗುತ್ತಿದೆ. ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗ ಕಟ್ಟನಿಟ್ಟಿನ ಕ್ರಮ ವಹಿಸಿದ ನಂತರ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT