ಬುಧವಾರ, ಮಾರ್ಚ್ 3, 2021
21 °C
ಆಲೆಮನೆಗಳಲ್ಲಿ ಕಬ್ಬು ಅರೆದು ಬೆಲ್ಲ ತಯಾರಿಕೆ, ರೇಷ್ಮೆ ಬೆಳೆಯುವ ವಿಧಾನ ಪರಿಚಯ, ಮಜ್ಜಿಗೆ ಕಡಿದ ಜಿಲ್ಲಾಧಿಕಾರಿ

ಶ್ರೀನಿವಾಸ ಅಗ್ರಹಾರ: ದೇಸಿ ಸಂಸ್ಕೃತಿ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ದಸರಾ ಉತ್ಸವ ನಿಮಿತ್ತ ತಾಲ್ಲೂಕಿನ ಕರಿಘಟ್ಟದ ತಪ್ಪಲಿನ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ ಇದೇ ಮೊದಲ ಬಾರಿ ಆಯೋಜಿಸಿದ್ದ ಪರಂಪರಾ ದಸರಾದಲ್ಲಿ ಅಪ್ಪಟ ಹಳ್ಳಿ ಸಂಸ್ಕೃತಿ ಅನಾವರಣಗೊಂಡಿತು.

ಊರಿನ ಪ್ರವೇಶ ದ್ವಾರದಲ್ಲಿ ಎದುರಾದ ಆಲೆಮನೆಗಳಲ್ಲಿ ಕಬ್ಬು ಅರೆಯುವುದು, ಬೆಲ್ಲ ತಯಾರಿಸುವುದು ಹಾಗೂ ಮಾರಾಟ ಮಾಡುವ ಕ್ರಮವನ್ನು ಪರಿಚಯಿಸಲಾಯಿತು. ರೇಷ್ಮೆ ಬೆಳೆಯುವ ವಿಧಾನ ತಿಳಿಸುವ ಮಳಿಗೆ ಗಮನ ಸೆಳೆಯಿತು. ತುಸು ದೂರದಲ್ಲಿ ರಾಸುಗಳ ಪ್ರದರ್ಶನ, ಪ್ರವಾಸೋದ್ಯಮ ಇಲಾಖೆಯ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು.

ಪಶುಪಾಲನಾ ಇಲಾಖೆಯಿಂದ ಹಳ್ಳಿಕಾರ್‌, ಅಮೃತ ಮಹಲ್‌, ಗಿರ್‌, ಮಲ್ನಾಡ್‌ ಗಿಡ್ಡ ತಳಿಯ ಹಸು ಹಾಗೂ ಎತ್ತುಗಳು, ಬೀಟಲ್‌ ಮತ್ತು ಜಮುನಾಪರಿ ತಳಿಯ ಮೇಕೆಗಳು ಹಾಗೂ ಬಂಡೂರು ಕುರಿಗಳನ್ನು ಪ್ರದರ್ಶಿಸಲಾಯಿತು. 40 ವರ್ಷಗಳಿಂದ ಇರುವ ಶೆಡ್‌ ಹೋಟೆಲ್‌ಗೆ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಅಶೋಕ್‌ ಹಾಗೂ ಅಧಿಕಾರಿಗಳ ತಂಡ ಪ್ರವೇಶಿಸಿ ಗಮನ ಸೆಳೆದರು.

50 ವರ್ಷಗಳ ಹಿಂದೆ ಗ್ರಾಮದಲ್ಲಿ ನಡೆಯುತ್ತಿದ್ದ ಊರೊಟ್ಟಿನ ‘ಮುನೇಶ್ವರ’ನ ಹಬ್ಬವನ್ನು ಹಿರಿಯರಾದ ಮರೀಗೌಡ ಮತ್ತು ಕುಮಾರ್‌ ಮರು ಸೃಷ್ಟಿಸಿದ್ದರು. ಡಾ.ಸಿ. ಬಂದೀಗೌಡ ಅವರ 3 ತಲೆಮಾರುಗಳ ಹಿಂದಿನ ತೊಟ್ಟಿ ಮನೆಯಲ್ಲಿ ಜಾನಪದ ಲೋಕವೇ ಮೈದಳೆದಿತ್ತು. ರಾಗಿ ಬೀಸುವುದು, ಮಜ್ಜಿಗೆ ಕಡೆದು ಬೆಣ್ಣೆ ತೆಗೆಯುವುದು, ಅಳಿಗುಳಿ ಮನೆ ಆಟ, ಅಣ್ಣೆ ಕಲ್ಲು, ಗೋಲಿ, ಬುಗುರಿ, ಹುಲಿಕುರಿ ಆಟ, ಲಗೋರಿ, ಧಾನ್ಯದ ರಾಶಿ ಪೂಜೆಗಳನ್ನು ಏರ್ಪಡಿಸಲಾಗಿತ್ತು. ಸಚಿವ ಅಶೋಕ್‌ ಬುಗುರಿ ಬಿಟ್ಟರೆ, ನಿರ್ಮಲಾನಂದನಾಥ ಸ್ವಾಮೀಜಿ ಬಾವಿಯಲ್ಲಿ ನೀರು ಸೇದಿದರು.

ಅಳತೆ ಮಾಪನಗಳಾದ ಕೊಳಗೆ, ಸೇರು, ಪಾವು, ಅಚ್ಚೇರು, ಅರಪಾವು, ಚಟಾಕು, ಬೆಣ್ಣೆ ತೂಗುವ ತಕ್ಕಡಿಗಳಿದ್ದವು. ಕೋಳಿ ಪಂಜರ, ರೇಡಿಯೊ, ಬಿಚ್ಚಣಿಗೆ, ಮಡಕೆ, ಗುಡಾಣ, ಗಂಧ ತೇಯುವ ಕೊರಡು, ಮರದ ನೇಗಿಲು, ಕುಂಟೆ, ಕೂರಿಗೆ ಹಲುವೆ, ಗುದ್ದಲಿ, ಏಕಾಸಿ, ಪಿಕಾಸಿಗಳನ್ನು ಜನರು ಕಣ್ತುಂಬಿಕೊಂಡರು.

ರಾಮಕೃಷ್ಣ ಎಂಬುವರ ಮತ್ತೊಂದು ತೊಟ್ಟಿ ಮನೆಯಲ್ಲಿ ಗುಡಿ ಕೈಗಾರಿಕೆಯ ಸಮುಚ್ಚಯವೇ ಇದ್ದಂತೆ ಭಾಸವಾಯಿತು. ಕೊಡಿಯಾಲದ ಕೈ ಮಗ್ಗದಲ್ಲಿ ಬಸವರಾಜು ಬಟ್ಟೆ ನೇಯ್ಗೆ ಮಾಡಿ ತೋರಿಸಿದರು. ಹೊಳಲು ಗ್ರಾಮದ ರಘು ಚನ್ನಪಟ್ಟಣದ ಬಣ್ಣದ ಬೊಂಬೆಗಳನ್ನು ಸ್ಥಳದಲ್ಲೇ ಸಿದ್ಧಪಡಿಸಿದರು. ಭಾಗ್ಯಾ ಮತ್ತು ದೊಡ್ಡ ಬೋರಮ್ಮ ಈಚಲು ಗರಿಯಿಂದ ಚಾಪೆ ಎಣೆದರು. ಚಿಕ್ಕಮುಲಗೂಡು ಗ್ರಾಮದ ನಾಗರಾಜು ಜೇಡಿಮಣ್ಣಿನಿಂದ ವಿವಿಧ ವಸ್ತುಗಳನ್ನು ತಯಾರಿಸಿದರು. ಮಂಡ್ಯ ಹೊಸಹಳ್ಳಿಯ ಶಿಲ್ಪಿ ಅಣ್ಣಯ್ಯಾಚಾರ್‌ ಅವರು ಕಲ್ಲು, ಸಿಮೆಂಟ್‌ ಹಾಗೂ ಪಿಒಪಿಯಿಂದ ತಯಾರಿಸಿದ ವಿವಿಧ ಮೂರ್ತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ನಾಗಮಂಗಲದವರು ತೆಂಗಿನ ನಾರಿನ ಉತ್ಪನ್ನವನ್ನು ಸ್ಥಳದಲ್ಲಿ ತಯಾರಿಸಿ ಮಾರಾಟ ಮಾಡಿದರು. ಕಿರಂಗೂರಿನ ಮೇದರು ಬಿದಿರಿನಿಂದ ಬುಟ್ಟಿ ಎಣೆದು ತೋರಿಸಿದರು.

ಗಮನ ಸೆಳೆದ ಜಾನಪದ ಮೇಳ
ಪರಂಪರಾ ದಸರಾ ಉತ್ಸವಕ್ಕೂ ಮುನ್ನ ಬೆಂಗಳೂರು– ಮೈಸೂರು ಹೆದ್ದಾರಿಯಿಂದ ಶ್ರೀನಿವಾಸ ಅಗ್ರಹಾರದವರೆಗೆ ಜನಪದ ಕಲಾತಂಡಗಳ ಮೆರವಣಿಗೆ ನಡೆಯಿತು. ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ಎತ್ತಿನಗಾಡಿಗಳ ಮೆರವಣಿಗೆ, ಡೊಳ್ಳು ಕುಣಿತ, ನಂದಿ ಕಂಬ, ವೀರಗಾಸೆ, ಚರ್ಮವಾದ್ಯ, ಕಂಸಾಳೆ, ಬೆದರು ಬೊಂಬೆ, ಪಟದ ಕುಣಿತ, ಕೋಲಾಟ, ದೊಣ್ಣೆ ವರಸೆ ಇತರ ಕಲಾ ಪ್ರಕಾರಗಳು ಪ್ರದರ್ಶನ ಗಮನ ಸೆಳೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು