ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ: ಅಪಾಯದಲ್ಲಿ ಲೋಕಪಾವನಿ ನದಿ ಸೇತುವೆ!

Published 23 ಮೇ 2024, 7:20 IST
Last Updated 23 ಮೇ 2024, 7:20 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ– 275ರಲ್ಲಿ ಬರುವ ಲೋಕಪಾವನಿ ನದಿ ಸೇತುವೆಯ ತಡೆಗೋಡೆಯ ಮೇಲೆ ಅಪಾರ ಪ್ರಮಾಣದ ಮರಗಳು ಬೆಳೆಯುತ್ತಿದ್ದು, ಸೇತುವೆಯ ಅಸ್ತಿತ್ವಕ್ಕೆ ಆತಂಕ ಎದುರಾಗಿದೆ.

ಸೇತುವೆ ಎಡ ಪಾರ್ಶ್ವದ ತಡೆ ಗೋಡೆಯ ಮೇಲೆ ಆಲ, ಅರಳಿ, ಗಸಗಸೆ ಇತರ ಮರಗಳು ಬೆಳೆಯುತ್ತಿವೆ. ಸೇತುವೆಯ ಪಿಲ್ಲರ್‌ಗಳ ಮೇಲೂ ಮರಗಳು ಬೆಳೆಯಲಾರಂಭಿಸಿವೆ. ಮರಗಳ ಬೇರುಗಳು ಸೇತುವೆಯ ತಡೆಗೋಡೆ ಮತ್ತು ಪಿಲ್ಲರ್‌ ದಾಟಿ ನದಿಯ ನೀರು ತಾಕುವಷ್ಟು ಇಳಿ ಬಿದ್ದಿವೆ. ಕೆಲವು ಬೇರುಗಳು ಸೇತುವೆ ಕೆಳಗೆ ರಸ್ತೆಗೆ ಹಾಕಿರುವ ಸಿಮೆಂಟ್‌ ಮತ್ತು ಕಲ್ಲು ಚಪ್ಪಡಿಗಳ ಒಳಕ್ಕೂ ಹಬ್ಬುತ್ತಿವೆ. ಇದರಿಂದಾಗಿ ಸೇತುವೆಯ ಉದ್ದಕ್ಕೂ ಅಲ್ಲಲ್ಲಿ ಸಣ್ಣ ಪ್ರಮಾಣದ ಬಿರುಕುಗಳು ಕಾಣಿಸಿಕೊಂಡಿವೆ.

ಸಣ್ಣ ಪ್ರಮಾಣದಲ್ಲಿ ಮಳೆ ಸುರಿದರೂ ಲೋಖಪಾವನಿ ನದಿ ಸೇತುವೆ ಮೇಲೆ ನೀರು ಮಡುಗಟ್ಟಿ ನಿಲ್ಲುತ್ತಿದೆ. ಸೇತುವೆ ತುಸು ತಗ್ಗಿನಲ್ಲಿದೆ. ರಸ್ತೆಯ ನೀರು ಸಲೀಸು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿ ಮಂಡಿಯುದ್ದ ನೀರು ನಿಲ್ಲುತ್ತದೆ. ಸೇತುವೆಯ ಮೇಲೆ ನಿಲ್ಲುವ ನೀರಿನಿಂದಲೂ ಸೇತುವೆ ಶಿಥಿಲಗೊಳ್ಳುತ್ತಿದೆ. ಲೋಕೋಪಯೋಗಿ ಇತರ ಇಲಾಖೆಗಳ ಎಂಜಿನಿಯರ್‌ಗಳು ಇದೇ ಮಾರ್ಗದಲ್ಲಿ ಹಾದು ಹೋದರೂ ದುಸ್ಥಿತಿಯಲ್ಲಿರುವ ಸೇತುವೆಯತ್ತ ಗಮನ ಹರಿಸದೇ ಇರುವುದು ಸಾರ್ವಜನಿಕರ ಟೀಕೆಗೆ ಗ್ರಾಸವಾಗಿದೆ.

‘ಲೋಕಪಾವನಿ ನದಿ ಮೇಲಿನ ಸೇತುವೆ ಬೆಂಗಳೂರು– ಮೈಸೂರು ಮತ್ತು ಶ್ರೀರಂಗಪಟ್ಟಣ– ಬನ್ನೂರು ಪಟ್ಟಣಗಳ ನಡುವೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಪ್ರತಿ ದಿನ ಸಹಸ್ರಾರು ವಾಹನಗಳು ಇದರ ಮೇಲೆ ಸಂಚರಿಸುತ್ತವೆ. ಇಂತಹ ಪ್ರಮುಖ ಸೇತುವೆಯ ಎರಡೂ ಕಡೆ ಗಿಡಗಳು ಬೆಳೆದು ಮರಗಳಾಗುತ್ತಿವೆ. ಮಳೆ ಬಿದ್ದರೆ ಈ ಸೇತುವೆ ಮೇಲೆ 100 ಅಡಿ ಉದ್ದಕ್ಕೂ ನೀರು ನಿಲ್ಲುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದರೆ ಸೇತುವೆ ಕುಸಿಯುವ ಅಪಾಯವಿದೆ’ ಎಂದು ಶ್ರೀನಿವಾಸ ಅಗ್ರಹಾರದ ಎಸ್‌. ಶ್ರೀನಾಥ್‌ ಕಳವಳ ವ್ಯಕ್ತಪಡಿಸಿದ್ದಾರೆ.

‘ಬೆಂಗಳೂರು– ಮೈಸೂರು ರಾಜ್ಯ ಹೆದ್ದಾರಿ–17 ಹಲವು ವರ್ಷಗಳ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ– 275 ಎಂದು ಬದಲಾಗಿದೆ. ಅದಾದ ಬಳಿಕ ಲೋಕಪಾವನಿ ನದಿ ಸೇತುವೆ ಕೂಡ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಸುಪರ್ದಿಗೆ ಸೇರಿದೆ. ಹಾಗಾಗಿ ಈ ಸೇತುವೆಯ ಬಗ್ಗೆ ಅವರೇ ಗಮನ ಹರಿಸಬೇಕು’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಜಸ್ವಂತ್‌ ಹೇಳಿದ್ದಾರೆ.

ಆದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್‌ಗಳು ಸಂಪರ್ಕಕ್ಕೆ ಸಿ‌ಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT