ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Teachers' Day | ಉಚಿತವಾಗಿ ಪಾಠ ಮಾಡುವ ‘ಹಳ್ಳಿಮೇಷ್ಟ್ರು’

‘ಜ್ಞಾನ ದಾಸೋಹ ಕೇಂದ್ರ’ ತೆರೆದ ವಿಜ್ಞಾನ ಶಿಕ್ಷಕ ಕರಿಯಪ್ಪ ಲೇಬಗೇರಿ
Published 5 ಸೆಪ್ಟೆಂಬರ್ 2024, 6:38 IST
Last Updated 5 ಸೆಪ್ಟೆಂಬರ್ 2024, 6:38 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಶಿಕ್ಷಕರು ತರಗತಿಗಳಲ್ಲಿ ಪಾಠ ಮಾಡುವುದು ಸಹಜ. ಆದರೆ ಇಲ್ಲೊಬ್ಬ ಶಿಕ್ಷಕ ಎಸ್‌.ಎಸ್‌.ಎಲ್‌.ಸಿ ಮತ್ತು ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ (ಎನ್‌.ಎಂ.ಎಂ.ಎಸ್‌) ಎದುರಿಸುವ ವಿದ್ಯಾರ್ಥಿಗಳಿಗಾಗಿ ಹಳ್ಳಿಗಳ ಪಡಸಾಲೆಯಲ್ಲಿ, ದೇಗುಲಗಳ ಮಂಟಪಗಳಲ್ಲಿ, ಮರಗಳ ನೆರಳಿನಲ್ಲಿ ಉಚಿತವಾಗಿ ಪಾಠ ಮಾಡುತ್ತಿದ್ದಾರೆ.

ತಾಲ್ಲೂಕಿನ ಪಾಲಹಳ್ಳಿ ಗ್ರಾಮದ ಅನುದಾನಿತ ವಾಹಿನಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕರಿಯಪ್ಪ ಲೇಬಗೇರಿ ಐದು ವರ್ಷಗಳಿಂದ ತಾಲ್ಲೂಕಿನ ವಿವಿಧೆಡೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ತಾಲ್ಲೂಕಿನ ಬೆಳಗೊಳದಲ್ಲಿ ತಮ್ಮ ಸ್ನೇಹಿತರ ಜತೆಗೂಡಿ 2018ರಿಂದ ‘ಜ್ಞಾನ ದಾಸೋಹ ಕೇಂದ್ರ’ ತೆರೆದು ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದಾರೆ.

ತಾಲ್ಲೂಕಿನ ಬಲ್ಲೇನಹಳ್ಳಿ ಡಿಜಿಟಲ್‌ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಸಹಯೋಗದಲ್ಲಿ ನಡೆಯುವ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ (ಎನ್‌.ಎಂ.ಎಂ.ಎಸ್‌) ತರಬೇತಿ ಕೇಂದ್ರಕ್ಕೆ ಕರಿಯಪ್ಪ ಲೇಬಗೇರಿ ಅವರೇ ಬೆನ್ನೆಲುಬು. ಪರೀಕ್ಷೆ ತೆಗೆದುಕೊಳ್ಳುವ 8ನೇ ತರಗತಿ ಮಕ್ಕಳಿಗೆ ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.

‘ಒಂದು ನಿಮಿಷ– ಒಂದು ಚಿತ್ರ’, ಮತ್ತು ‘ಕೋಡ್‌ ವರ್ಡ್‌ ಬಳಸು; ವಿಜ್ಞಾನ ಮಾದರಿಯ ಭಾಗಗಳನ್ನು ಗುರುತಿಸು’ ಎಂಬ ವಿಶಿಷ್ಟ ತಂತ್ರಗಳನ್ನು ಪರಿಚಯಿಸಿದ ಹೆಗ್ಗಳಿಕೆ ಕರಿಯಪ್ಪ ಅವರದ್ದು. ‘ಒಂದು ನಿಮಿಷ– ಒಂದು ಚಿತ್ರ’ ಪರಿಕಲ್ಪನೆಗೆ ಸಂಬಂಧಿಸಿದ ಕಿರು ಹೊತ್ತಿಗೆಯನ್ನೂ ಪ್ರಕಟಿಸಿರುವ ಕರಿಯಪ್ಪ ಉಚಿತವಾಗಿ ಕೈಪಿಡಿ ಹಂಚುತ್ತಿದ್ದಾರೆ. ವಿದ್ಯಾರ್ಥಿ ತಾನು ಕಲಿತ ವಿಷಯವನ್ನು ದೀರ್ಘ ಕಾಲ ಜ್ಞಾಪಕದಲ್ಲಿ ಇಟ್ಟುಕೊಳ್ಳಲು ಈ ತಂತ್ರಗಳು ಬಹಳ ಪ್ರಯೋಜನಕಾರಿಯಾಗಿವೆ.

ಹಾವೇರಿಯಿಂದ ಕಾವೇರಿ ತೀರಕ್ಕೆ:

ಎಂ.ಎಸ್ಸಿ, ಬಿ.ಇಡಿ, ಪಿಜಿಡಿಸಿ, ಟಿಇಟಿ ಪದವೀಧರ ಕರಿಯಪ್ಪ ಲೇಬಗೇರಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಬುಡಪನಹಳ್ಳಿಯವರು. ಶಿಕ್ಷಕ ತರಬೇತಿ ಮುಗಿಸಿ ಧಾರವಾಡದ ‘ಅಕ್ಕಮಹಾದೇವಿ ಮಠ ಅನಾಥಾಶ್ರಮ’ದ ಮಕ್ಕಳಿಗೆ ಎರಡು ವರ್ಷ ಉಚಿತ ಶಿಕ್ಷಣ ನೀಡಿದ್ದಾರೆ. ಕಳೆದ 6 ವರ್ಷಗಳಿಂದ ಪಾಲಹಳ್ಳಿಯ ವಾಹಿನಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದು, ಶಾಲೆಯ ಹೊರಗೂ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ.

‘ಕರಿಯಪ್ಪ ಲೇಬಗೇರಿ ಅವರು ನೀಡಿದ ತರಬೇತಿಯಿಂದ ನಮ್ಮ ತಾಲ್ಲೂಕಿನ 30ಕ್ಕೂ ಹೆಚ್ಚು ಮಕ್ಕಳು ಎನ್‌.ಎಂ.ಎಂ.ಎಸ್‌ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಇವರಿಂದ ಪಾಠ ಕೇಳಿದ ನೂರಾರು ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದಾರೆ. ಯಾರಿಂದಲೂ ಏನನ್ನೂ ಬಯಸದ ಇಂತಹ ಮೇಷ್ಟ್ರು ಸಿಗುವುದು ಅಪರೂಪ’ ಎಂದು ಬಲ್ಲೇನಹಳ್ಳಿ ಡಿಜಿಟಲ್‌ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕ ಕೂಡಲಕುಪ್ಪೆ ಸೋಮಶೇಖರ್‌ ಮೆಚ್ಚುಗೆಯ ಮಾತುಗಳಾಡುತ್ತಾರೆ.

ಎಸ್‌.ಎಸ್‌.ಎಲ್‌.ಸಿ ಮತ್ತು ಎನ್‌.ಎಂ.ಎಂ.ಎಸ್‌ ಪರೀಕ್ಷೆ ತೆಗೆದುಕೊಳ್ಳುವ ಮಕ್ಕಳ ಒಳಿತಿಗಾಗಿ ಮತ್ತು ನನ್ನ ಆತ್ಮತೃಪ್ತಿಗಾಗಿ ಉಚಿತವಾಗಿ ಪಾಠ ಮಾಡುತ್ತಿದ್ದೇನೆ. ನಾನು ಕಲಿತದ್ದನ್ನು ಇತರರಿಗೆ ತಿಳಿಸುವ ಕಾಯಕ ಮಾಡುತ್ತಿದ್ದೇನೆ – ಕರಿಯಪ್ಪ ಲೇಬಗೇರಿ ವಿಜ್ಞಾನ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT