ಶನಿವಾರ, ಮೇ 21, 2022
27 °C
ಇಂದು ಅಂಗಮಣಿ ಉತ್ಸವ

ಮೇಲುಕೋಟೆ: ವೈಭವದ ಮಕರ ಸಂಕ್ರಾಂತಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೇಲುಕೋಟೆ: ಮಕರ ಸಂಕ್ರಾಂತಿ ನಿಮಿತ್ತ ಬುಧವಾರ ರಾತ್ರಿ ಚೆಲುವನಾರಾಯಣಸ್ವಾಮಿ  ಉತ್ಸವ ವೈಭವದಿಂದ ನೆರವೇರಿತು.

4ನೇ ಸ್ವಾಮ್ಯದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಕುಟುಂಬ ಚೆಲುವನಾರಾಯಣಸ್ವಾಮಿ, ರಾಮಾನುಜಾಚಾರ್ಯರಿಗೆ ಅನೂಚಾನ ಸಂಪ್ರದಾಯದಂತೆ ಪುಷ್ಪ ಕೈಂಕರ್ಯ ನೆರವೇರಿಸಿದ ನಂತರ ಕೊಠಾರ ಮಂಟಪದಲ್ಲಿ ಸಂಕ್ರಾಂತಿ ಫಲಪಠಣ, ದೇವಾಲಯದಲ್ಲಿ ಅರೆಯರ್ ತಾಲಾಟ್ಟಿನೊಂದಿಗೆ ವಸಂಗರಾಗ ಕಾರ್ಯಕ್ರಮ ಸಹ ವೈಭವದಿಂದ ನೆರವೇರಿತು.

ಮಕರ ಸಂಕ್ರಮಣದ ವೇಳೆ ಸ್ವಾಮಿಗೆ ವೈವಿಧ್ಯಮಯ ಪುಷ್ಪಗಳಿಂದ ಅಲಂಕಾರ ಮಾಡಿ ಉತ್ಸವ ನಡೆಸಲಾಯಿತು. ವಿವಿಧ ಹಣ್ಣುಗಳ ತಟ್ಟೆಗಳನ್ನು ಬದರೀನಾರಾಯಣನ ಸನ್ನಿಧಿಯಲ್ಲಿ ಜೋಡಿಸಿ ಚೆಲುವನಿಗೆ ಉತ್ಸವ ವೇಳೆ ನೈವೇದ್ಯ ಅರ್ಪಿಸಲಾಯಿತು. ಬೆಳಿಗ್ಗೆ ಅಭಿಷೇಕ ಸಹ ನೆರವೇರಿತು.

ಅಂಗಮಣಿ ಉತ್ಸವ ಇಂದು: ಜ. 16ರಂದು (ಗುರುವಾರ) ದೇವಾಲಯದಲ್ಲಿ ಶ್ರೀದೇವಿ ಮತ್ತು ಭೂದೇವಿಯರಿಗೆ ಪ್ರಖ್ಯಾತ ಅಂಗಮಣಿ ಉತ್ಸವ ನಡೆಯಲಿದೆ. ಸಜ್ಜೆಹಟ್ಟಿ ಮಂಟಪದಲ್ಲಿ ರಾತ್ರಿ 8ಗಂಟೆಗೆ ದೇವಿಯರಿಗೆ ಮಡಿಲು ತುಂಬುವ ಕೈಂಕರ್ಯ ನಡೆಯಲಿದೆ.

3ನೇ ಸ್ಥಾನೀಕ ತಿರುನಾರಾಯಣ ಅಯ್ಯಂಗಾರ್ ಮನೆಯಲ್ಲಿ ನೂರಾರು ತಟ್ಟೆಗಳಲ್ಲಿ ಹಣ್ಣು ಹೂಗಳನ್ನು ಜೋಡಿಸಲಾಗುತ್ತದೆ. ಇದೇ ಮಾದರಿಯಲ್ಲಿ ಒಂದನೇ ಸ್ಥಾನೀಕರ ಮನೆಯಲ್ಲೂ ಹಣ್ಣುಗಳನ್ನು ಜೋಡಿಸಿ, ದೇವಿಯರಿಗೆ ಅರ್ಪಿಸಿ ಶುಕ್ರವಾರ ಕದಂಬ ಪ್ರಸಾದ ತಯಾರಿಸಿ ಭಕ್ತರಿಗೆ ವಿತರಣೆ ಮಾಡಲಾಗುತ್ತದೆ. ಸ್ಥಾನೀಕ ಸಂಪತ್‌ಕುಮಾರನ್ ನೇತೃತ್ವದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು ಅಂಗಮಣಿ ಮಂಟಪ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಇದಕ್ಕೂ ಮುನ್ನ ದೇವಾಲಯದಲ್ಲಿ ದೇವಿಯರಿಗೆ ಅಭಿಷೇಕ ಮತ್ತು ಕಲ್ಯಾಣಿಗೆ ಉತ್ಸವ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು