ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರಿನಲ್ಲಿ ತಪ್ಪದ ಟ್ರಾಫಿಕ್ ಕಿರಿಕಿರಿ

ಕಿರಿದಾದ ಪ್ರಮುಖ ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನದಟ್ಟಣೆ: ಪರಿಹಾರವೇ ಇಲ್ಲ– ದೂರು
Published 10 ಜೂನ್ 2024, 8:27 IST
Last Updated 10 ಜೂನ್ 2024, 8:27 IST
ಅಕ್ಷರ ಗಾತ್ರ

ಮದ್ದೂರು: ಪಟ್ಟಣದ ಪೇಟೆ ಬೀದಿ ಸೇರಿದಂತೆ ಹಲವು ಪ್ರಮುಖ ರಸ್ತೆಗಳು ದಶಕಗಳಿಂದ  ಕಿರಿಯದಾಗಿರುವ ಸಾರ್ವಜನಿಕರು ಪ್ರತಿನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಐಬಿ ವೃತ್ತದಿಂದ ಕೊಲ್ಲಿ ಸರ್ಕಲ್ ಅನ್ನು ಸಂಪರ್ಕಿಸುವ ಪೇಟೆ ಬೀದಿಯು ಪಟ್ಟಣದ ಮಟ್ಟಿಗೆ ಅತ್ಯಂತ ಪ್ರಮುಖ ಬೀದಿಯಾಗಿದ್ದು, ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಈ ರಸ್ತೆಯ ಹಲವು ಕಡೆ ವಾಹನ ಚಾಲನೆ ಮಾಡುವುದು ಹರಸಾಹಸ ಮಾಡಿದಂತಾಗುತ್ತಿದೆ.

ಮೊದಲೇ ಕಿರಿಯದಾಗಿರುವ ರಸ್ತೆಯ ಇಕ್ಕೆಲಗಳ ಪಾದಚಾರಿ ಮಾರ್ಗದಲ್ಲಿಯೇ ತರಕಾರಿ, ಚಹಾ ಅಂಗಡಿ, ಹಾಲಿನ ಪಾರ್ಲರ್, ಹಲವು ಬಗೆಯ ಹೋಟೆಲ್‌ಗಳು, ಮೀನು ಮಾರಾಟ, ಜಿಲೇಬಿ ಅಂಗಡಿ ಸೇರಿದಂತೆ ಪಾನಿಪುರಿ, ಗೋಬಿ ಮಂಚೂರಿ ಸೇರಿದಂತೆ ಹಲವು ಫಾಸ್ಟ್ ಫುಡ್ ಅಂಗಡಿಗಳು ನಿತ್ಯ ತಲೆ ಎತ್ತುತ್ತಿವೆ.

ಗ್ರಾಹಕರು ಅಂಗಡಿಗಳ ಮುಂದೆ ತಮ್ಮ ವಾಹನಗಳು ಬೇಕಾಬಿಟ್ಟಿಯಾಗಿ ವಾಹನಗಳು ನಿಲ್ಲಿಸುವುದರಿಂದ ಪಾದಚಾರಿಗಳಿಗೆ ನಡೆದುಕೊಂಡು ಹೋಗಲೂ ಜಾಗವಿಲ್ಲದಂತಾಗಿದೆ, ಅದರಲ್ಲೂ ತರಕಾರಿ ಅಂಗಡಿಗಳು ಪೂರ್ತಿ ಫುಟ್‌ಪಾತ್‌ಗಳನ್ನು ಆವರಿಸಿಕೊಂಡಿದ್ದು, ಪುರಸಭೆಯ ಅಧಿಕಾರಿಗಳು ಹಾಗೂ ಸದಸ್ಯರು ಇದನ್ನೆಲ್ಲಾ ನೋಡಿಯೂ ನೋಡಿದಂತಿದ್ದಾರೆ.

ಅಷ್ಟೇ ಅಲ್ಲದೇ ಪೇಟೆಬೀದಿಯ ಸಂಪರ್ಕ ರಸ್ತೆಗಳಾದ ಎಸ್‌ಬಿಎಂ ರಸ್ತೆಯಲ್ಲಿ ಸಾಕಷ್ಟು ಅಂಗಡಿಗಳು ರಸ್ತೆಗೆ ಬಂದಿದ್ದು, ಸರ್ಕಾರಿ ಆಸ್ಪತ್ರೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿರುವ ಜಾಮೀಯಾ ಶಾದಿ ಮಹಲ್ ಬಳಿಯಿರುವ ಅಂಗಡಿಗಳ ನಾಮಫಲಕಗಳನ್ನು ರಸ್ತೆಯಲ್ಲಿಯೇ ಇಡುವುದರಿಂದ ಹಾಗೂ ಶಾದಿ ಮಹಲ್‌ಗೆ ಬರುವವರು ವಾಹನಗಳನ್ನು ರಸ್ತೆಯ ಎರಡೂ ಕಡೆಗಳಲ್ಲಿಯೇ ಪಾರ್ಕಿಂಗ್ ಮಾಡಿ ಹೋಗುವುದರಿಂದ ಸಂಚಾರ ಸಮಸ್ಯೆಗಳು ಹೆಚ್ಚಾಗುತ್ತಿವೆ.

ಇಷ್ಟಾದರೂ ಸಂಚಾರ ಪೊಲೀಸರು ಕೇವಲ ಹೆದ್ದಾರಿಯಲ್ಲಿ ನಿಂತುಕೊಂಡು ದಂಡ ವಿಧಿಸುವುದನ್ನೇ ಕಾಯಕ ಮಾಡಿಕೊಂಡಂತಿದ್ದು, ಪೇಟೆ ಬೀದಿಯಲ್ಲಿ ಒಂದಿಬ್ಬರು ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸಂಚಾರ ದಟ್ಟನೆಯನ್ನಾಗಲೀ, ಸುರಕ್ಷತೆಯ ಬಗೆಯಾಗಲೀ ಗಮನಹರಿಸದೇ ಇರುವುದು ಮಾತ್ರ ವಿಪರ್ಯಾಸವಾಗಿದೆ.

ಹಿಂದಿನ ಶಾಸಕರು ಯಾರೂ ಕೂಡಾ ಈ ಬಗ್ಗೆ ಗಮನಹರಿಸಲೇ ಇಲ್ಲ, ಪೇಟೆಬೀದಿಯ ವಿಸ್ತರಣೆ ಮಾಡುವುದಾಗಿ ಸುಮಾರು ಒಂದು ವರ್ಷದಿಂದ ಹಲವಾರು ಬಾರಿ ಕೇವಲ ಮಾತಿನಲ್ಲಿ ಹೇಳುತ್ತಲೇ ಇರುವ ಶಾಸಕ ಕದಲೂರು ಉದಯ್ ಅವರು ಈ ವಿಷಯವನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ನಾಗರಿಕರ ಅಭಿಪ್ರಾಯ.

ಮದ್ದೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿಯ ರಸ್ತೆಯಲ್ಲಿ ಜಾಮೀಯಾ ಶಾದಿ ಮಹಲ್ ಬಳಿ ರಸ್ತೆಯಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡಿರುವುದು
ಮದ್ದೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿಯ ರಸ್ತೆಯಲ್ಲಿ ಜಾಮೀಯಾ ಶಾದಿ ಮಹಲ್ ಬಳಿ ರಸ್ತೆಯಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡಿರುವುದು
ಶಾಂತ ಕುಮಾರ್
ಶಾಂತ ಕುಮಾರ್
ಮದ್ದೂರಿನ ಪೇಟೆ ಬೀದಿಯು ಕಿರಿದಾಗಿರುವ ಕಾರಣ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಹಬ್ಬದ ದಿನಗಳಲ್ಲಂತೂ ಮತ್ತಷ್ಟು ಸಮಸ್ಯೆ ಬಿಗಡಾಯಿಸುತ್ತದೆ.
ಶಾಂತಕುಮಾರ್ ಪಟ್ಟಣದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT