ಬುಧವಾರ, ಆಗಸ್ಟ್ 4, 2021
22 °C
ಸಂಕಷ್ಟದಲ್ಲಿ ಕಂಚುಗಹಳ್ಳಿ ಗ್ರಾಮದ ರೈತರು, ಟಿ.ಸಿ ಅಳವಡಿಕೆಗೆ ಆಗ್ರಹ

ಮಂಡ್ಯ | ಕೆಟ್ಟುನಿಂತ ವಿದ್ಯುತ್‌ ಪರಿವರ್ತಕಗಳು: ಒಣಗುತ್ತಿರುವ ಬೆಳೆ

ಟಿ.ಕೆ.ಲಿಂಗರಾಜು Updated:

ಅಕ್ಷರ ಗಾತ್ರ : | |

Prajavani

ಮಳವಳ್ಳಿ: ಕೊಳವೆಬಾವಿಗಳಲ್ಲಿ ನೀರಿದ್ದರೂ ಬೆಳೆಗೆ ಹರಿಸಲಾಗದ ಸ್ಥಿತಿ. ನೀರಿಲ್ಲದೆ ಒಣಗುತ್ತಿರುವ ಜೋಳ, ಪಪ್ಪಾಯಿ, ಭತ್ತ, ಬಾಳೆ ಬೆಳೆಗಳು...

ತಾಲ್ಲೂಕಿನ ಬಿ.ಜಿ.ಪುರ ಹೋಬಳಿಯ ಕಂಚುಗಹಳ್ಳಿ ಗ್ರಾಮದ ರೈತರ ಸ್ಥಿತಿ ಇದು. ಗ್ರಾಮದಲ್ಲಿರುವ ವಿದ್ಯುತ್‌ ಪರಿವರ್ತಕಗಳು ಕೆಟ್ಟಿದ್ದು, ಕಳೆದ ಒಂದು ತಿಂಗಳಿನಿಂದ ವಿದ್ಯುತ್‌ ಇಲ್ಲದೆ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್‌ ಪರಿವರ್ತಕಗಳನ್ನು ದುರಸ್ತಿಪಡಿಸಲು ಸೆಸ್ಕ್‌ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ರೈತರು ಆರೋಪಿಸುತ್ತಾರೆ.

ಗ್ರಾಮದಲ್ಲಿ ಬದನಗೆರೆಯ 100 ಕೆ.ವಿ ವಿದ್ಯುತ್ ಪರಿವರ್ತಕ ಒಂದೂವರೆ ತಿಂಗಳ ಹಿಂದೆಯೇ ಕೆಟ್ಟು ಹೋಗಿತ್ತು. ಸೆಸ್ಕ್‌ ಅಧಿಕಾರಿಗಳು ವಿದ್ಯುತ್‌ ಪರಿವರ್ತಕ ಅಳವಡಿಸಿದ 3–4 ದಿನಗಳಲ್ಲಿಯೇ ಕೆಟ್ಟು ಹೋಗಿದೆ. ಈ ವ್ಯಾಪ್ತಿಯಲ್ಲಿ 28 ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕೊರತೆಯುಂಟಾಗಿದೆ.

ವಿದ್ಯುತ್‌ ಪರಿವರ್ತಕಗಳ ಗುಣಮಟ್ಟ ಸರಿ ಇಲ್ಲದ ಕಾರಣ ಪದೇಪದೇ ಕೆಟ್ಟು ನಿಲ್ಲುತ್ತಿವೆ. ಇವು ಕೆಡುತ್ತಿರುವುದರಿಂದ ಜಮೀನಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಈಗ ಬೆಳೆಗಳು ಒಣಗುತ್ತಿವೆ. ಮಳೆಯೂ ಸರಿಯಾಗಿ ಬರುತ್ತಿಲ್ಲ. ಕೂಡಲೇ ಗುಣಮಟ್ಟದ ವಿದ್ಯುತ್‌ ಪರಿವರ್ತಕಗಳನ್ನು ಅಳವಡಿಸಬೇಕು. ವಿದ್ಯುತ್‌ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಸೆಸ್ಕ್‌ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕಂಚುಗಹಳ್ಳಿ ರೈತರಾದ ಎಂ.ಮಂಜು, ಮಹದೇವಪ್ಪ, ಮಹದೇವಸ್ವಾಮಿ, ನಾಗಪ್ಪ, ಸಂಪತ್ತು, ನಾಗರಾಜು ಎಚ್ಚರಿಕೆ ನೀಡಿದರು.

‘ನಾವು 8 ಕುಟುಂಬಗಳು ತೋಟಗಳಲ್ಲಿಯೇ ಮನೆ ಮಾಡಿಕೊಂಡು ವಾಸವಾಗಿದ್ದೇವೆ. ಒಂದೆಡೆ ಚಿರತೆಗಳ ಹಾವಳಿ. ಇನ್ನೊಂದೆಡೆ ಒಣಗುತ್ತಿರುವ ಬೆಳೆಗಳು. ವಿದ್ಯುತ್ ಇಲ್ಲದೇ ತೀವ್ರ ಸಂಕಷ್ಟ ಎದುರಿಸುವಂತಾಗಿದೆ’ ಎಂದು ಗ್ರಾಮದ ಪಾಪಣ್ಣ ಅಳಲು ತೋಡಿಕೊಂಡರು.

**

ಕಂಚುಗಹಳ್ಳಿಯಲ್ಲಿ 2 ಬಾರಿ ವಿದ್ಯುತ್‌ ಪರಿವರ್ತಕಗಳನ್ನು ಅಳವಡಿಸಲಾಗಿತ್ತು. ಆದರೆ, ವಿದ್ಯುತ್ ಲೋಡ್ ಹೆಚ್ಚಿದ್ದರಿಂದ ಮತ್ತೆ ಸುಟ್ಟು ಹೋಗಿವೆ. 4–5 ದಿನಗಳಲ್ಲಿ ಹೊಸ ಪರಿವರ್ತಕ ಅಳವಡಿಸಲಾಗುವುದು.
-ಎಂ.ಎಸ್.ಮಂಜುನಾಥ್, ಸೆಸ್ಕ್‌ ಎಇಇ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು