ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.5 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ

ಪ್ರತಿ ಗ್ರಾಮದಲ್ಲೂ ಲಸಿಕೆ ಅಭಿಯಾನ ಇಂದು, ವಾರ್ಡ್‌ ಸದಸ್ಯರಿಗೆ ಜವಾಬ್ದಾರಿ, ಸಿಬ್ಬಂದಿ ನಿಯೋಜನೆ
Last Updated 16 ಸೆಪ್ಟೆಂಬರ್ 2021, 13:43 IST
ಅಕ್ಷರ ಗಾತ್ರ

ಅಂಕಿ ಅಂಶ

ಲಸಿಕೆ; ಈವರೆಗಿನ ಗುರಿ ಸಾಧನೆ

* ಇಲ್ಲಿಯವರೆಗಿನ ಸಾಧನೆ: 13,85,931
* ಮೊದಲ ಡೋಸ್‌: 10,48,988
* 2ನೇ ಡೋಸ್‌: 3,36,943
* ಮಹಿಳೆಯರು: 7,51,309
* ಪುರುಷರು: 6,34,382

ಮಂಡ್ಯ: ಜಿಲ್ಲೆಯಾದ್ಯಂತ ಶುಕ್ರವಾರ ಇನ್ನೊಂದು ಸುತ್ತಿನ ಲಸಿಕಾ ಅಭಿಯಾನ ನಡೆಯಲಿದ್ದು 1.5 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಇಟ್ಟುಕೊಳ್ಳಲಾಗಿದೆ. ಅಭಿಯಾನ ಸಮರೋಪಾದಿಯಲ್ಲಿ ನಡೆಯಲಿದ್ದು ವಿವಿಧ ಇಲಾಖೆಗಳ ಅಧಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದಾರೆ.

ಪ್ರತಿ ತಾಲ್ಲೂಕಿಗೂ 20 ಸಾವಿರ ಡೋಸ್‌ ಲಸಿಕೆ ಹಂಚಿಕೆ ಮಾಡಲಾಗಿದ್ದು ಮಂಡ್ಯ ನಗರವೊಂದಕ್ಕೇ 10 ಸಾವಿರ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ. ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಲಸಿಕೆ ಹಾಕುವ ಸಂಬಂಧ ಸಮಗ್ರ ಯೋಜನೆ ರೂಪಿಸಿಕೊಳ್ಳಲಾಗಿದ್ದು ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ನಗರದಲ್ಲಿ ನಗರಸಭೆ ಸಿಬ್ಬಂದಿಗೆ ಲಸಿಕೆಯ ಜವಾಬ್ದಾರಿ ವಹಿಸಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಯ ಜೊತೆಗೆ ಖಾಸಗಿ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳನ್ನೂ ಸೇವೆಗೆ ನಿಯೋಜಿಸಲಾಗಿದೆ.

ನಗರದ ಪ್ರತಿ ವಾರ್ಡ್‌ನಲ್ಲೂ ಅಭಿಯಾನ ನಡೆಯಲಿದ್ದು ಆಯಾ ವಾರ್ಡ್‌ ಸದಸ್ಯರು ಜವಾಬ್ದಾರಿ ವಹಿಸಿಕೊಂಡು ಲಸಿಕೆ ಹಾಕುವಂತೆ ಸೂಚನೆ ನೀಡಲಾಗಿದೆ. ಪುರಸಭೆ, ಪಟ್ಟಣ ಪಂಚಾಯಿತಿ ಮಟ್ಟದಲ್ಲೂ ಪ್ರತಿ ವಾರ್ಡ್‌ನಲ್ಲಿ ಅಭಿಯಾನ ನಡೆಯಲಿದ್ದು ಅಲ್ಲಿಯ ವಾರ್ಡ್‌ ಸದಸ್ಯರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಗ್ರಾಮ ಪಂಚಾಯಿತಿವಾರು ಲಸಿಕೆ ನೀಡಲಾಗುತ್ತಿದ್ದು ಪ್ರತಿ ಗ್ರಾಮಕ್ಕೂ ಒಂದೊಂದು ತಂಡ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಗ್ರಾಮ ಪಂಚಾಯಿತಿ ಸದಸ್ಯರು ಜವಾಬ್ದಾರಿ ವಹಿಸಿಕೊಂಡಿದ್ದು ಹಳ್ಳಿಗಳ ಜನರಲ್ಲಿ ಅರಿವು ಮೂಡಿಸಿ ಲಸಿಕೆ ಹಾಕಿಸಿಕೊಳ್ಳಲು ಪ್ರೇರಣೆ ನೀಡಲಿದ್ಧಾರೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ದೊರೆಯಲಿದ್ದು ‘ಲಸಿಕಾ ಕೇಂದ್ರಕ್ಕೆ ಬನ್ನಿ’ ಎಂಬ ಘೋಷಣೆಯೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾ.ಪಂ ಕಾರ್ಯದರ್ಶಿಗಳು, ಡೇಟಾ ಆಪರೇಟರ್‌ಗಳನ್ನು ಸೇವೆಗೆ ನಿಯೋಜನೆ ಮಾಡಲಾಗಿದೆ.

ಪ್ರತಿ ಗ್ರಾಮ, ವಾರ್ಡ್‌ಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಅಭಿಯಾನ ಆರಂಭವಾಗಲಿದ್ದು ಸಂಜೆಯವರೆಗೂ ನಡೆಯಲಿದೆ. ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ಸೇವೆಗೆ ನಿಯೋಜನೆಗೊಂಡಿದ್ದಾರೆ. ‘ಜಿಲ್ಲೆಗೆ ಹೆಚ್ಚಿನ ಪ್ರಮಾಣದ ಲಸಿಕೆ ಸರಬರಾಜಾಗುತ್ತಿವೆ. ಇದನ್ನು ಸದುಪಯೋಗ ಮಾಡಿಕೊಂಡು 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರಿಗೂ ಲಸಿಕೆ ಹಾಕಬೇಕು’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ಸೂಚಿಸಿದ್ದಾರೆ.

14 ಲಕ್ಷ ಮಂದಿಗೆ ಲಸಿಕೆ: ಇಲ್ಲಿಯವರೆಗೂ ಜಿಲ್ಲೆಯಾದ್ಯಂತ 13,85,931 ಮಂದಿಗೆ ಲಸಿಕೆ ಹಾಕಲಾಗಿದೆ. 10,48,988 ಮಂದಿ ಪ್ರಥಮ ಡೋಸ್‌ ಲಸಿಕೆ ಪಡೆದಿದ್ದರೆ 3,36,943 ಮಂದಿ 2ನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಶುಕ್ರವಾರ ಒಂದೂವರೆ ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ ಪೂರ್ಣಗೊಂಡರೆ ಜಿಲ್ಲೆಯ ಸಾಧನೆ 15 ಲಕ್ಷದ ಗಡಿ ದಾಟಲಿದೆ.

‘ಮೈಸೂರು ಜಿಲ್ಲೆಗಿಂತ ಹೆಚ್ಚು ಲಸಿಕೆ ಡೋಸ್‌ ಮಂಡ್ಯ ಜಿಲ್ಲೆಗೆ ದೊರೆಯುತ್ತಿದೆ. ಪ್ರತಿ ಬಾರಿ ಲಸಿಕಾ ಮೇಳ ನಡೆದಾಗ ಜಿಲ್ಲೆಯ ಸಾಧನೆ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಬಾರಿಯೂ ಪೂರ್ತಿ ಒಂದೂವರೆ ಲಕ್ಷ ಮಂದಿಗೆ ಲಸಿಕೆ ಗುರಿ ಸಾಧಿಸುವ ಸಂಪೂರ್ಣ ವಿಶ್ವಾಸವಿದೆ. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ, ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಸೇವೆಗೆ ನಿಯೋಜನೆ ಮಾಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್‌.ಧನಂಜಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT