ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ವಾಲ್ಮೀಕಿ ಹಗರಣ ಸಿಬಿಐಗೆ ವಹಿಸಿ: ಬಿಜೆಪಿ ಕಾರ್ಯಕರ್ತರ ಆಗ್ರಹ

Published 28 ಜೂನ್ 2024, 14:10 IST
Last Updated 28 ಜೂನ್ 2024, 14:10 IST
ಅಕ್ಷರ ಗಾತ್ರ

ಮಂಡ್ಯ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣವು ನಡೆದಿದ್ದು, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಹಾಗೂ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪ್ರವೇಶ ಗೇಟ್‌ನಲ್ಲಿಯೇ ಪೊಲೀಸರು ತಡೆದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತದ ಬಳಿ ಜಮಾಯಿಸಿದ ಕಾರ್ಯಕರ್ತರು ಹೆದ್ದಾರಿಯ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ದಕ್ಷ ಅಧಿಕಾರಿ ಸಾವಿಗೆ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.

ಪೊಲೀಸರು ಮೆರವಣಿಗೆಯನ್ನು ಜಿಲ್ಲಾಧಿಕಾರಿ ಕಚೇರಿ ಗೇಟ್‌ನಲ್ಲಿಯೇ ತಡೆದ ಸಂದರ್ಭ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಕಬ್ಬಿಣದ ಗೇಟಿನ ಕಂಬಿಯ ಮೇಲೆ ಏರಿದ ಕೆಲವು ಕಾರ್ಯಕರ್ತರು ಒಳ ನುಗ್ಗಲು ಯತ್ನಿಸಿದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ, ಕೆಲವು ಸಮಯ ಬಿಗುವಿನ ವಾತಾವರಣ ಉಂಟಾಗಿತ್ತು. ಜೊತೆಗೆ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಲೇಬೇಕು ಎಂದು ಪಟ್ಟು ಹಿಡಿದರು. ಆದರೂ ಸ್ಥಳಕ್ಕೆ ಜಿಲ್ಲಾಧಿಕಾರಿ ಬರಲೇ ಇಲ್ಲ.

ಬಹು ರಾಜ್ಯಗಳ ಹಗರಣವಾಗಿರುವುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಶರಣ ಪ್ರಕಾಶ್ ಪಾಟೀಲ್, ನಿಗಮದ ಅಧ್ಯಕ್ಷ ಬಸನಗೌಡ ದಡ್ಡಲ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್‌ ಮಾತನಾಡಿ, ಬಿಜೆಪಿ ಪಕ್ಷದ ಪ್ರತಿಭಟನೆ ನಡೆಸುವಾಗಲೇ ಪೊಲೀಸರನ್ನು ಬಿಟ್ಟು ತಡೆಯುವ ಕೆಲಸ ಮಾಡಲಾಗುತ್ತಿದೆ. ಇದು ಬಿಜೆಪಿಯನ್ನು ಹತ್ತಿಕ್ಕುವ ಕೆಲಸ. ಅವರ ಧ್ವನಿಯನ್ನು ನಿಲ್ಲಿಸುವ ತಂತ್ರವೇ? ಈ ಜಿಲ್ಲಾಡಳಿತದ ವರ್ತನೆ ಸರಿಯಲ್ಲ, ಕಾಂಗ್ರೆಸ್‌ ಏಜೆಂಟರಂತೆ ಯಾರೂ ವರ್ತಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಸಿದ್ದರಾಮಯ್ಯ, ಇಂಡುವಾಳು ಸಚ್ಚಿದಾನಂದ, ಕೆ.ಸಿ.ನಂಜುಂಡೇಗೌಡ, ಇಂದ್ರೇಶ್‌, ಅಶೋಕ್ ಜಯರಾಮ್, ವಿವೇಕ್, ಎಚ್.ಆರ್. ಅಶೋಕ್ ಕುಮಾರ್, ಸಿದ್ದರಾಜುಗೌಡ, ಅರವಿಂದ್, ಶಿವಕುಮಾರ್ ಆರಾಧ್ಯ, ಹನಿಯಂಬಾಡಿ ನಾಗರಾಜು, ಸಿದ್ದರಾಜು, ಎಂ.ವಸಂತ್ ಕುಮಾರ್, ಪೀಹಳ್ಳಿ ರಮೇಶ್ ಭಾಗವಹಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ  ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಒಡೆಯರ್‌ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಜಾಥಾ
187 ಕೋಟಿ ದುರ್ಬಳಕೆ: ಆರೋಪ
 ‘ಭ್ರಷ್ಟ ಮಾರ್ಗದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ದುರ್ಬಳಕೆ ಆಗಿದೆ. ₹89 ಕೋಟಿಯನ್ನು 700ಕ್ಕೂ ಹೆಚ್ಚು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಬಳ್ಳಾರಿ ದಾವಣಗೆರೆ ತೆಲಂಗಾಣ ರಾಜ್ಯದ ಹೈದರಾಬಾದ್ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಕೂಲಿ ಕಾರ್ಮಿಕರು ದನ ಎಮ್ಮೆ ಕಾಯುವ ಅಮಾಯಕ ವ್ಯಕ್ತಿಗಳಿಗೆ ₹2ಲಕ್ಷದಿಂದ ರಿಂದ 5 ಲಕ್ಷದವರೆಗೆ ಹಣ ಹಾಕಿ ವಿತ್‌ ಡ್ರಾ ಮಾಡಿಕೊಳ್ಳುವ ಮೂಲಕ ಲೋಕಸಭೆ ಚುನಾವಣೆ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಬಿಜೆಪಿ ಮುಖಂಡರು ಕಿಡಿಕಾರಿದರು. ಹಗರಣದಲ್ಲಿ ಹಣ ಮರುವರ್ಗಾವಣೆ ಮಾಡಿಸಿದ ವ್ಯಕ್ತಿಗಳು ಯಾರು ಅವರನ್ನು ಇದುವರೆಗೆ ಏಕೆ ಬಂಧಿಸಿಲ್ಲ? ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಸಹಿ ತಮ್ಮದಲ್ಲ ಎಂದು ಹೇಳಿದ್ದಾರೆ. ಆದರೆ ಅವರದೇ ಸಹಿ ಎಂದು ಬ್ಯಾಂಕ್‌ನವರು ತಿಳಿಸಿದ್ದಾರೆ. ಇದರಲ್ಲಿ ಯಾವುದು ಸತ್ಯ ಎಂಬುದು ಪತ್ತೆ ಹಚ್ಚಬೇಕು. ನಿಗಮದ ಹೆಸರಿನಲ್ಲಿ ಬೇರೆ ಬ್ಯಾಂಕಿನಲ್ಲಿ ಖಾತೆ ತೆರೆದಾಗ ಆರ್ಥಿಕ ಇಲಾಖೆ ಗಮನಕ್ಕೆ ಏಕೆ ಬಂದಿಲ್ಲ ಹಣಕಾಸು ಇಲಾಖೆ ಜವಾಬ್ದಾರಿ ನಿರ್ವಹಿಸುವ ಸಿದ್ದರಾಮಯ್ಯ ಹೊಣೆಗಾರರಲ್ಲವೇ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT