ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು

15 ದಿನಗಳ ಕಾಲ ನೀರು
Published 11 ಜುಲೈ 2024, 0:02 IST
Last Updated 11 ಜುಲೈ 2024, 0:02 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಯಿಂದ ಬುಧವಾರ ಬೆಳಿಗ್ಗೆಯಿಂದ ನಾಲೆಗಳಿಗೆ ನೀರು ಹರಿಸಲಾಯಿತು.

ಅಣೆಕಟ್ಟೆಯ ಮುಖ್ಯ ನಾಲೆಯಾದ ವಿಶ್ವೇಶ್ವರಯ್ಯ ನಾಲೆಗೆ ಬೆಳಿಗ್ಗೆ 10ರ ವೇಳೆಗೆ ನೀರು ಬಿಡುವ ಪ್ರಕ್ರಿಯೆ ಆರಂಭವಾಯಿತು. ಜಲಾಶಯದ ಒಂದು ಗೇಟ್‌ ತೆರೆದು ನಾಲೆಗೆ 500 ಕ್ಯುಸೆಕ್‌ ನೀರು ಹರಿಸಲಾಯಿತು. ನಾಲೆಗೆ ನೀರು ಹರಿಸುವ ಮುನ್ನ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ರಘುರಾಂ, ಕಾರ್ಯಪಾಲಕ ಎಂಜಿನಿಯರ್‌ ಜಯಂತ್‌ ಇತರರ ತಂಡ ಗೇಟ್‌ ಮತ್ತು ನಾಲೆಗೆ ಪೂಜೆ ಸಲ್ಲಿಸಿತು.

ನಾಲೆಗೆ ಹರಿಸುವ ನೀರಿನ ಪ್ರಮಾಣವನ್ನು ಮಧ್ಯಾಹ್ನ 2 ಗಂಟೆ ವೇಳೆಗೆ 1500 ಕ್ಯುಸೆಕ್‌ ಮತ್ತು ಸಂಜೆ 5 ಗಂಟೆ ವೇಳೆಗೆ 2,500 ಕ್ಯುಸೆಕ್‌ಗೆ ಹೆಚ್ಚಿಸಲಾಯಿತು. ಗುರುವಾರ ಮುಂಜಾನೆ ವೇಳೆಗೆ ನಾಲೆಗೆ ಹರಿಯುವ ನೀರಿನ ಪ್ರಮಾಣ 3,000 ಕ್ಯುಸೆಕ್‌ಗೆ ಹೆಚ್ಚಲಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದರು.

ಅಣೆಕಟ್ಟೆಯಿಂದ ಏಟ್ರಿಯಾ ಪವರ್‌ ಹೌಸ್‌ ಮೂಲಕ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಯುತ್ತದೆ. ಸಾಂಕೇತಿಕವಾಗಿ, ಅಣೆಕಟ್ಟೆಯಿಂದ ನೇರವಾಗಿ ಬುಧವಾರ ಮೂರು ಗೇಟ್‌ಗಳ ಪೈಕಿ ಒಂದು ಗೇಟ್‌ ತೆರೆದು ನೀರು ಬಿಡಲಾಗಿತ್ತು. ಸಂಜೆ ವೇಳೆಗೆ ಅಣೆಕಟ್ಟೆಯ ಗೇಟ್‌ ಬಂದ್‌ ಮಾಡಲಾಗಿದೆ. ಅಷ್ಟೂ ನೀರನ್ನೂ ಪವರ್‌ಹೌಸ್‌ ಮೂಲಕವೇ ನಾಲೆಗೆ ಹರಿಸಲಾಗುತ್ತಿದೆ.

‘ಅಣೆಕಟ್ಟೆಯಲ್ಲಿ 100 ಅಡಿಗಳಿಗಿಂತ ಕಡಿಮೆ ನೀರಿನ ಸಂಗ್ರಹ ಇದ್ದರೆ ಗೇಟ್‌ಗಳ ಮೂಲಕವೇ ನಾಲೆಗೆ ನೀರು ಹರಿಸಬೇಕು. ಸದ್ಯ ಜಲಾಶಯದಲ್ಲಿ 104 ಅಡಿ ನೀರು ಇರುವುದರಿಂದ ಪವರ್‌ ಹೌಸ್‌ ಮೂಲಕ ನೀರು ಹರಿಸಿದರೆ ವಿದ್ಯುತ್‌ ಉತ್ಪಾದನೆಗೂ ಅನುಕೂಲ ಆಗುತ್ತದೆ. ನೀರು ಹರಿಸಿದ 5 ಗಂಟೆಗಳಲ್ಲಿ 10 ಕಿ.ಮೀ.ವರೆಗೆ ನೀರು ತಲುಪಿದೆ. ಬುಧವಾರದಿಂದ 15 ದಿನಗಳ ಕಾಲ ನಾಲೆಯಲ್ಲಿ ನೀರು ಹರಿಯಲಿದ್ದು, ಕೆರೆ, ಕಟ್ಟೆಗಳನ್ನು ತುಂಬಿಸಲು ಮತ್ತು ಜಾನುವಾರು ಅನುಕೂಲಕ್ಕೆ ನೀರು ಬಿಡಲಾಗಿದೆ’ ಎಂದು ನಿಗಮದ ಎಇಇ ಕೆ. ಕಿಶೋರಕುಮಾರ್‌ ತಿಳಿಸಿದರು.

ಅಣೆಕಟ್ಟೆಯಿಂದ ಎಡದಂಡೆ ನಾಲೆ, ಬಲದಂಡೆ ನಾಲೆ ಹಾಗೂ ನದಿ ಒಡ್ಡಿನ ನಾಲೆಗಳಾದ ವಿರಿಜಾ, ಚಿಕ್ಕದೇವರಾಯಸಾಗರ, ಬಂಗಾರದೊಡ್ಡಿ, ರಾಮಸ್ವಾಮಿ, ಮತ್ತು ರಾಜಪರಮೇಶ್ವರಿ ನಾಲೆಗಳಿಗೂ ನೀರು ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.

ಎಇಇಗಳಾದ ಜಯರಾಂ, ಫಾರೂಕ್‌ ಅಬು ಈ ಸಂದರ್ಭದಲ್ಲಿ ಹಾಜರಿದ್ದರು.

ವಿಶ್ವೇಶ್ವರಯ್ಯ ನಾಲೆಗೆ ಬುಧವಾರ ಸಂಜೆ ವೇಳೆ 1500ಕ್ಯುಸೆಕ್‌ ನೀರು ಬಿಟ್ಟಾಗ ಕಂಡ ದೃಶ್ಯ
ವಿಶ್ವೇಶ್ವರಯ್ಯ ನಾಲೆಗೆ ಬುಧವಾರ ಸಂಜೆ ವೇಳೆ 1500ಕ್ಯುಸೆಕ್‌ ನೀರು ಬಿಟ್ಟಾಗ ಕಂಡ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT