ಭಾನುವಾರ, ಆಗಸ್ಟ್ 1, 2021
21 °C

ಮೈಸೂರು: 1024 ಜನರು ಗುಣಮುಖ, ಎರಡು ಸಾವಿರ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದ ಸೂಚನೆಯಂತೆ ಮತ್ತೆ ಎರಡು ವಾರ ಲಾಕ್‌ಡೌನ್‌ ಮುಂದುವರೆದಿದೆ. ಇದರ ನಡುವೆ ಆಶಾದಾಯಕ ಬೆಳವಣಿಗೆಯಾಗಿ ಕೋವಿಡ್‌ನಿಂದ ಗುಣಮುಖರಾಗುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದಾಗಿ ಸಕ್ರಿಯ ಪ್ರಕರಣಗಳು ಇಳಿಮುಖವಾಗುತ್ತಿವೆ.

ಜಿಲ್ಲಾಡಳಿತದ ವರದಿಯಂತೆ ಭಾನುವಾರ 1,024 ಜನರು ಕೋವಿಡ್‌ ಪಿಡುಗಿನಿಂದ ಗುಣಮುಖರಾಗಿದ್ದಾರೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 7,529ಕ್ಕೆ ಇಳಿಕೆಯಾಗಿವೆ. 17 ಪೀಡಿತರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಇದುವರೆಗೂ ಕೋವಿಡ್‌ನಿಂದಲೇ ನಿಧನರಾದವರ ಸಂಖ್ಯೆ ಎರಡು ಸಾವಿರದ ಗಡಿ ದಾಟಿದೆ.

ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ, ಮೈಸೂರು ಜಿಲ್ಲೆಯಲ್ಲೇ ಕೋವಿಡ್‌ನಿಂದ ಹೆಚ್ಚು ಸಾವು ಸಂಭವಿಸಿದೆ ಎಂಬುದು ರಾಜ್ಯ ಸರ್ಕಾರ ನಿತ್ಯವೂ ಪ್ರಕಟಿಸುವ ಕೋವಿಡ್‌ ಅಂಕಿ–ಅಂಶದ ಪಟ್ಟಿಯಿಂದ ಗೊತ್ತಾಗಿದೆ. ಇದುವರೆಗೂ 2013 ಜನರು ಮೃತಪಟ್ಟಿದ್ದಾರೆ ಎಂಬುದು ನಮೂದಾಗಿದೆ.

ಭಾನುವಾರ ಹೊಸದಾಗಿ 545 ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. 487 ಜನರು ಪೀಡಿತರ ಪ್ರಾಥಮಿಕ ಸಂಪರ್ಕಿತರೇ ಆಗಿದ್ದಾರೆ. ಶೀತ, ಜ್ವರ ಲಕ್ಷಣ ಬಾಧಿಸಿದ್ದ 49 ಜನರಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿದೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 9 ಮಂದಿ ಸಹ ಪೀಡಿತರಾಗಿದ್ದಾರೆ.

ಮೈಸೂರು ನಗರದಲ್ಲಿ 323 ಜನರು ಸೋಂಕಿತರಾದರೆ, ತಾಲ್ಲೂಕಿನಲ್ಲಿ 55, ಎಚ್‌.ಡಿ.ಕೋಟೆಯಲ್ಲಿ 23, ಹುಣಸೂರು–37, ಕೆ.ಆರ್.ನಗರ–34, ನಂಜನಗೂಡು–38, ಪಿರಿಯಾಪಟ್ಟಣ–25, ತಿ.ನರಸೀಪುರ ತಾಲ್ಲೂಕಿನ 10 ಜನರಲ್ಲಿ ಕೋವಿಡ್‌ ದೃಢಪಟ್ಟಿದೆ.

ಮೈಸೂರು ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಕೋವಿಡ್‌ ಸೋಂಕು ದೃಢಪಡುವುದು ಈಚೆಗಿನ ದಿನಗಳಲ್ಲಿ ಗಣನೀಯವಾಗಿ ಇಳಿಮುಖವಾಗುತ್ತಿದೆ. ಜೂನ್‌ ಆರಂಭದಲ್ಲಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆಗೂ ಈಗಿನ ಸಂಖ್ಯೆಗೂ ಹೋಲಿಸಿದರೆ ಅರ್ಧಕ್ಕರ್ಧ ಪ್ರಕರಣಗಳು ಕಡಿಮೆಯಾಗಿವೆ.

4,275 ಜನರು ಮನೆಗಳಲ್ಲೇ ಐಸೋಲೇಷನ್‌ ಆಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ 473 ಮಂದಿ, ಖಾಸಗಿ ಆಸ್ಪತ್ರೆಗಳಲ್ಲಿ 1,502 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಹೆಲ್ತ್‌ ಕೇರ್‌ನಲ್ಲಿ 227 ಜನರಿದ್ದರೆ, ಖಾಸಗಿಯಲ್ಲಿ 213 ಜನರಿದ್ದಾರೆ. ಸರ್ಕಾರಿ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 839 ಮಂದಿಯಿದ್ದರೆ, ಖಾಸಗಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಯಾರೊಬ್ಬರೂ ದಾಖಲಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು