ಬುಧವಾರ, ಜೂನ್ 16, 2021
23 °C
238 ಜನರಿಗೆ ಸೋಂಕು, 101 ಜನರು ಗುಣಮುಖ: 10 ಸಾವು

ಮೈಸೂರು: 3 ಸಾವಿರದ ಸನಿಹ ಸಕ್ರಿಯ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲೆಯ ವ್ಯಾಪ್ತಿಯಲ್ಲಿ ಕೋವಿಡ್‌–19 ಸಕ್ರಿಯ ಪ್ರಕರಣಗಳ ಸಂಖ್ಯೆ 3 ಸಾವಿರದ ಸಮೀಪವಿದೆ. ಗುಣಮುಖರಾಗುವವರ ಸಂಖ್ಯೆಗಿಂತ ಪೀಡಿತರಾಗುವವರೇ ಹೆಚ್ಚಾಗಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಗಗನಮುಖಿಯಾಗಿದೆ.

ಭಾನುವಾರ ಹೊಸದಾಗಿ 238 ಜನರಿಗೆ ಸೋಂಕು ತಗುಲಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2967ಕ್ಕೆ ಏರಿದೆ. 101 ಮಂದಿ ಗುಣಮುಖರಾಗಿದ್ದಾರೆ. ಗುಣಮುಖರ ಸಂಖ್ಯೆ 1692 ಇದೆ. ಸಾವಿನ ಸರಣಿ ನಿತ್ಯವೂ ಮುಂದುವರೆದಿದೆ. 10 ಜನರು ಮೃತರಾಗಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

9 ಪುರುಷರು ಸೇರಿದಂತೆ ವೃದ್ಧ ಮಹಿಳೆಯೊಬ್ಬರು ಮೃತಪಟ್ಟಿದ್ದು, ಈ ಎಲ್ಲರೂ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಇದರಲ್ಲಿ ಆಸ್ಪತ್ರೆಗೆ ಸೇರಿದ ದಿನವೇ ಮೃತಪಟ್ಟವರು ಇದ್ದಾರೆ. 22 ದಿನ ಚಿಕಿತ್ಸೆ ಪಡೆದರೂ, ಸ್ಪಂದಿಸದೆ ಮೃತಪಟ್ಟವರು ಇದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ಮಾಹಿತಿ ನೀಡಿದೆ.

ಜಿಲ್ಲೆಯಲ್ಲಿ ಇದೂವರೆಗೂ ಚಿಕಿತ್ಸೆಗೆ ಸ್ಪಂದಿಸದೆ ಒಟ್ಟು 161 ಜನರು ಮೃತಪಟ್ಟಿದ್ದಾರೆ.

ಹೊಸದಾಗಿ ಸೋಂಕು ತಗುಲಿದ 238 ಜನರಲ್ಲಿ 96 ಮಂದಿ ರೋಗಿಗಳ ಸಂಪರ್ಕಿತರೇ ಆಗಿದ್ದಾರೆ. ಶೀತ ಜ್ವರದ (ಐಎಲ್‌ಐ) ಲಕ್ಷಣಗಳಿಂದ 58 ಜನರು ಬಳಲುತ್ತಿದ್ದಾರೆ. ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದ 44 ಮಂದಿಯಲ್ಲೂ ಸೋಂಕು ಪತ್ತೆಯಾಗಿದೆ. 17 ಜನರಲ್ಲಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಸೋಂಕಿನ ಲಕ್ಷಣ ಇಲ್ಲದ 23 ಮಂದಿಯೂ ಕೋವಿಡ್‌ ಪೀಡಿತರಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಸದ್ಯ ಚಿಕಿತ್ಸೆ ಪಡೆಯುತ್ತಿರುವ 2,967 ಮಂದಿಯಲ್ಲಿ, 231 ಜನರು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೋವಿಡ್‌ ಹೆಲ್ತ್‌ಕೇರ್‌ಗಳಲ್ಲಿ 85, ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ 694, ಖಾಸಗಿ ಆಸ್ಪತ್ರೆಯಲ್ಲಿ 226, ಖಾಸಗಿ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ 74 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,657 ಮಂದಿ ಮನೆಯಲ್ಲೇ ಐಸೋಲೇಷನ್‌ ಆಗಿದ್ದಾರೆ.

ಹೊಸದಾಗಿ ನಗರ ಮತ್ತು ವಿವಿಧೆಡೆ 75 ಪ್ರದೇಶಗಳನ್ನು ನಿಯಂತ್ರಿತ ವಲಯ ಎಂದು ಘೋಷಿಸಲಾಗಿದೆ.

ಆಯುಷ್ ವೈದ್ಯಾಧಿಕಾರಿ ಸಾವು‌
ಮೈಸೂರಿನ ಉದಯಗಿರಿ ನಿವಾಸಿ, ಆಯುಷ್‌ ವೈದ್ಯಾಧಿಕಾರಿಯಾಗಿದ್ದ ಡಾ.ರಾಚಯ್ಯ ಕೋವಿಡ್‌–19ನಿಂದ ಭಾನುವಾರ ಮೃತಪಟ್ಟಿದ್ದಾರೆ.

ಮಧುಮೇಹದಿಂದ ಬಳಲುತ್ತಿದ್ದ ರಾಚಯ್ಯ ಅವರ ಸೇವಾ ಅವಧಿ ಎರಡು ದಿನಗಳ ಹಿಂದಷ್ಟೇ ಪೂರ್ಣಗೊಂಡಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು