ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಅಪಘಾತ: ಉದ್ರಿಕ್ತ ಗುಂಪಿನಿಂದ ಪೊಲೀಸರ ಮೇಲೆ ಹಲ್ಲೆ

ವಾಹನ ತಪಾಸಣೆಗೆ ಹೆದರಿ ವಾಪಸ್ ತೆರಳುವಾಗ ಅಪಘಾತ; ವ್ಯಕ್ತಿ ಸಾವು
Last Updated 22 ಮಾರ್ಚ್ 2021, 16:57 IST
ಅಕ್ಷರ ಗಾತ್ರ

ಮೈಸೂರು: ಹಿನಕಲ್‌ ಸಮೀಪ ಸೋಮವಾರ ಸಂಜೆ ವಾಹನ ತಪಾಸಣೆ ನಡೆಸುತ್ತಿದ್ದ ಸಂಚಾರ ಪೊಲೀಸರನ್ನು ನೋಡಿ, ಬೈಕ್ ಸವಾರರೊಬ್ಬರು ಹಿಂದಕ್ಕೆ ಹೋಗಲು ವಾಹನವನ್ನು ತಿರುಗಿಸುತ್ತಿದ್ದಾಗ ಲಾರಿಯೊಂದು ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಂಚಾರ ಪೊಲೀಸರು ತಪಾಸಣೆ ನಡೆಸುತ್ತಿದ್ದುದೇ ಘಟನೆಗೆ ಕಾರಣ ಎಂದು ಆರೋಪಿಸಿದ ಸ್ಥಳೀಯರು, ಇಬ್ಬರು ಪೊಲೀಸರ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಗುಂಪನ್ನು ಚದುರಿಸಲು ಸ್ಥಳಕ್ಕೆ ಬಂದ ಗರುಡ ವಾಹನವನ್ನು ಜಖಂಗೊಳಿಸಿದ್ದಾರೆ.

‘ವಾಹನ ಸವಾರ ಹೆಲ್ಮೆಟ್‌ ಧರಿಸಿದ್ದರೂ ಪೊಲೀಸರು ತಡೆಯಲು ಮುಂದಾದರು. ಹೀಗಾಗಿ, ಅಪಘಾತ ಸಂಭವಿಸಿದೆ’ ಎಂದು ಸ್ಥಳೀಯರು ದೂರಿದ್ದಾರೆ.

ಹಲ್ಲೆಗೊಳಗಾದ ವಿ.ವಿ.ಪುರಂ ಸಂಚಾರ ಠಾಣೆಯ ಎಎಸ್‌ಐ ಮಾದೇಗೌಡ ಹಾಗೂ ಇತರೆ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಸಂಚಾರ ಪೊಲೀಸರು ಘಟನೆ ನಡೆದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿದ್ದರು. ಇವರನ್ನು ನೋಡಿ ಗಾಬರಿಗೊಂಡ ಸವಾರ, ತಮ್ಮ ವಾಹನವನ್ನು ‘ಯುಟರ್ನ್’ ಮಾಡುವ ವೇಳೆ ಲಾರಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಗುರುತು ಪತ್ತೆಯಾಗಿಲ್ಲ. ಉದ್ರಿಕ್ತರು ಹಲ್ಲೆ ನಡೆಸಿದ್ದರಿಂದ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ‘ಗರುಡ’ ವಾಹನ ನಜ್ಜುಗುಜ್ಜಾಗಿದೆ’ ಎಂದು ಡಿಸಿಪಿ ಗೀತಾ ಪ್ರಸನ್ನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT