ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ದತ್ತು ಪಡೆದು ಮಕ್ಕಳಿಂದಲೇ ಸ್ವಚ್ಛತೆ

ಮೈಸೂರಿನ ವಿದ್ಯಾವರ್ಧಕ ಸಂಘದ ಶಾಲೆಯ ವಿನೂತನ ಕಾರ್ಯ
Last Updated 2 ಅಕ್ಟೋಬರ್ 2019, 5:27 IST
ಅಕ್ಷರ ಗಾತ್ರ

ಮೈಸೂರು: ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿಂದ, ವಿದ್ಯಾರ್ಥಿಗಳೇ ಮೂರು ರಸ್ತೆಗಳನ್ನು ದತ್ತು ಪಡೆದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.

ಇಲ್ಲಿನ ಕುವೆಂಪುನಗರದ ವಿದ್ಯಾವರ್ಧಕ ಸಂಘದ ಬಿಎಂಶ್ರೀ ಶಿಕ್ಷಣ ಸಂಸ್ಥೆ ಶಾಲೆಯ ಮಕ್ಕಳು ಲಲಿತಾದ್ರಿ ರಸ್ತೆ, ಲಲಿತಾದ್ರಿ ಮೂರನೇ ಕ್ರಾಸ್‌ ಹಾಗೂ ಗಂಗೆ ರಸ್ತೆಯನ್ನು ದತ್ತು ಪಡೆದುಕೊಂಡಿದ್ದಾರೆ. ಶಾಲೆಯ ಸುತ್ತಮುತ್ತ ಇರುವ ಈ ರಸ್ತೆಗಳಲ್ಲಿ ವರ್ಷವಿಡೀ ಸ್ವಚ್ಛತೆ ಕಾಪಾಡಿಕೊಳ್ಳುವ ಪಣ ತೊಟ್ಟಿದ್ದಾರೆ.

ಏಳರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ತಲಾ 40 ಮಂದಿಯ ತಂಡವಾಗಿ ಕೆಲಸ ಹಂಚಿಕೊಳ್ಳುತ್ತಾರೆ. ಪ್ರತಿ ಶನಿವಾರ ಈ ರಸ್ತೆಗಳನ್ನು ಸ್ವಚ್ಛಗೊಳಿಸುತ್ತಾರೆ. ಗಿಡ ನೆಟ್ಟು ಪೋಷಿಸುತ್ತಿದ್ದಾರೆ. ಜೊತೆಗೆ ರಸ್ತೆಗಳಿಗೆ ಕಸ ಹಾಕದಿರುವಂತೆ, ಸರಿಯಾಗಿ ತ್ಯಾಜ್ಯ ವಿಂಗಡಣೆ ಮಾಡಿ ಕೊಡುವಂತೆ ನಿವಾಸಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಕಾರ್ಯಕ್ಕೆ ಶಾಲಾ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಬೆನ್ನೆಲುಬಾಗಿ ನಿಂತಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಮಕ್ಕಳಿಗೆ ಕೈಗವಸು, ಮುಖಗವಸು, ಉಪಕರಣ ನೀಡಿದೆ.

‘ಪಾಲಿಕೆ ವತಿಯಿಂದ ಆರಂಭವಾದ ಸ್ವಚ್ಛ ಭಾರತ ಅಭಿಯಾನಕ್ಕೆ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ನಮ್ಮ ಶಾಲೆಯಲ್ಲೇ ಚಾಲನೆ ನೀಡಿದ್ದರು. ಇದರಿಂದ ಪ್ರೇರಣೆ ಪಡೆದ ಮಕ್ಕಳು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಇದಲ್ಲದೇ, ಬೀದಿ ನಾಟಕದ ಮೂಲಕ ಪರಿಸರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಪ್ರಾಚಾರ್ಯ ಎನ್‌.ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಶಾಲಾ ಪರಿಸರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ಶಾಲೆಯಲ್ಲಿ ಪರಿಸರ ಸ್ನೇಹಿ ಕ್ಲಬ್‌ ಸ್ಥಾಪಿಸಿದ್ದೇವೆ. ಗಣೇಶ ಚತುರ್ಥಿ ವೇಳೆ ಬಣ್ಣ ರಹಿತ ಮಣ್ಣಿನ ಗಣಪತಿ ಮೂರ್ತಿ ನಿರ್ಮಿಸಿ ಜಾಗೃತಿ ಮೂಡಿಸಲಾಗಿತ್ತು. ಪೋಷಕರು ಹಾಗೂ ಇತರ ನಾಗರಿಕರೂ ಕೈಜೋಡಿಸುತ್ತಿದ್ದಾರೆ. ಬೇರೆ ಶಾಲೆಗಳು ಕೂಡ ಸುತ್ತಮುತ್ತಲಿನ ರಸ್ತೆಗಳನ್ನು ದತ್ತು ಪಡೆಯಲು ಉತ್ಸುಕತೆ ತೋರಿವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT